ಎಫೆಸದವರಿಗೆ 3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಅನ್ಯಜನರ ಬೋಧಕನಾದ ಪೌಲನು 1 ಹೀಗಿರುವುದರಿಂದ ಪೌಲನೆಂಬ ನಾನು ಅನ್ಯಜನರಾಗಿರುವ ನಿಮ್ಮ ನಿಮಿತ್ತ ಕ್ರಿಸ್ತ ಯೇಸುವಿನ ಸೆರೆಯಾಳಾಗಿದ್ದಾನೆ. 2 ನಿಮಗೋಸ್ಕರ ನಿರ್ವಹಿಸುವುದಕ್ಕಾಗಿ ದೇವರು ನನಗೆ ಕೃಪೆಯಾಗಿ ಕೊಟ್ಟ ಕಾರ್ಯಭಾರವನ್ನು ನೀವು ಕೇಳಿದ್ದೀರಿ, 3 ಆತನು ಮರ್ಮವನ್ನು ಪ್ರಕಟಣೆಯಿಂದ ನನಗೆ ತಿಳಿಯಪಡಿಸಿದನೆಂದು ಅದನ್ನು ಕುರಿತು ನಾನು ಮೊದಲೇ ನಿಮಗೆ ಸಂಕ್ಷಿಪ್ತವಾಗಿ ಬರೆದಿದ್ದೇನೆ. 4 ಬರೆದದ್ದನ್ನು ನೀವು ಓದಿ ನೋಡಿದರೆ ಕ್ರಿಸ್ತನ ವಿಷಯವಾದ ಮರ್ಮವನ್ನು ಕುರಿತು ನನಗಿರುವ ಗ್ರಹಿಕೆಯನ್ನು ನೀವು ತಿಳಿದುಕೊಳ್ಳಬಹುದು. 5 ಆ ಮರ್ಮವು ಈ ಕಾಲದಲ್ಲಿ ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ಪವಿತ್ರಾತ್ಮನಿಂದ ತಿಳಿಸಲ್ಪಟ್ಟಂತೆ ಬೇರೆ ಕಾಲಗಳಲ್ಲಿದ್ದ ಜನರಿಗೆ ತಿಳಿಸಲ್ಪಡಲಿಲ್ಲ. 6 ಅದು ಯಾವುದೆಂದರೆ, ಅನ್ಯಜನರು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ದೇವಜನರೊಂದಿಗೆ ಸಹಬಾಧ್ಯರೂ ಒಂದೇ ದೇಹದ ಅಂಗಗಳೂ, ವಾಗ್ದಾನದಲ್ಲಿ ಪಾಲುಗಾರರೂ ಆಗಿದ್ದಾರೆಂಬುದೇ. 7 ದೇವರು ತನ್ನ ಶಕ್ತಿಯ ಪ್ರಯೋಗದ ಮೂಲಕ ನನಗೆ ಕೊಡಲ್ಪಟ್ಟ ಆತನ ಕೃಪಾದಾನಕ್ಕನುಸಾರವಾಗಿ ನಾನು ಈ ಸುವಾರ್ತೆಗೆ ಸೇವಕನಾದೆನು. 8 ಕ್ರಿಸ್ತನ ಅಗಮ್ಯವಾದ ಐಶ್ವರ್ಯದ ಸುವಾರ್ತೆಯನ್ನು ಅನ್ಯಜನರಿಗೆ ಸಾರುವ ಹಾಗೆಯೂ 9 ಹಾಗೂ ಸಮಸ್ತವನ್ನು ಸೃಷ್ಟಿಸಿದ ದೇವರಲ್ಲಿ ಆದಿಯಿಂದ ಗುಪ್ತವಾಗಿದ ಮರ್ಮದ ಯೋಜನೆಯನ್ನು ಎಲ್ಲಾರಿಗೂ ತಿಳಿಸುವಂತಹ ಕೃಪೆಯು ದೇವಜನರೊಳಗೆ ಅತ್ಯಲ್ಪನಾದ ನನಗೆ ಕೊಡಲ್ಪಟ್ಟಿತು. 10-11 ದೇವರು ನಮ್ಮ ಕರ್ತನಾದ ಕ್ರಿಸ್ತಯೇಸುವಿನಲ್ಲಿ ಮಾಡಿದ ನಿತ್ಯಸಂಕಲ್ಪದ ಮೇರೆಗೆ ತನ್ನ ನಾನಾ ವಿಧವಾದ ಜ್ಞಾನವು, ಪರಲೋಕದಲ್ಲಿ ರಾಜತ್ವಗಳಿಗೂ, ಅಧಿಕಾರಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂದು ಉದ್ದೇಶಿಸಿದನು. 12 ದೇವರ ಸನ್ನಿಧಿಯಲ್ಲಿ ಸೇರುವುದಕ್ಕೆ ನಮಗಿರುವ ಭರವಸೆಯೂ ಧೈರ್ಯವೂ ಕ್ರಿಸ್ತನಲ್ಲಿ ಇಟ್ಟಿರುವ ನಂಬಿಕೆಯ ಮೂಲಕ ಆತನಲ್ಲಿಯೇ ನಮಗಿದೆ. 13 ಆದ್ದರಿಂದ ನಿಮ್ಮ ನಿಮಿತ್ತ ನನಗೆ ಉಂಟಾದ ಕಷ್ಟಗಳನ್ನು ನೋಡಿ ನೀವು ಧೈರ್ಯಗೆಡಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಈ ಕಷ್ಟಗಳು ನಿಮಗೆ ಘನತೆಯನ್ನು ಉಂಟುಮಾಡುತ್ತವೆ. ಎಫೆಸದವರಿಗಾಗಿ ಪ್ರಾರ್ಥನೆ 14-15 ಹೀಗಿರಲಾಗಿ ಯಾವ ತಂದೆಯಿಂದ ಭೂಪರಲೋಕಗಳಲ್ಲಿರುವ ಪ್ರತಿ ಜನವೂ ಹೆಸರುಗೊಂಡಿರುವುದೋ ಆ ತಂದೆಯ ಮುಂದೆ ನಾನು ಮೊಣಕಾಲೂರಿಕೊಂಡು, 16 ನೀವು ದೇವರಾತ್ಮನ ಮೂಲಕ ಆಂತರ್ಯದಲ್ಲಿ ವಿಶೇಷಬಲವನ್ನು ಹೊಂದುವಂತೆಯೂ, 17 ಕ್ರಿಸ್ತನು ನಿಮ್ಮ ನಂಬಿಕೆಯ ಮೂಲಕ ನಿಮ್ಮ ಹೃದಯಗಳಲ್ಲಿ ವಾಸಮಾಡುವಂತೆಯೂ, ಆತನು ತನ್ನ ಮಹಿಮಾತಿಶಯದ ಪ್ರಕಾರ ಅನುಗ್ರಹಿಸಲಿ. 18 ನೀವು ದೇವರ ಪ್ರೀತಿಯಲ್ಲಿ ನೆಲೆಯಾಗಿ ನಿಂತು, ದೇವಜನರೆಲ್ಲರೊಂದಿಗೆ ಅದರ ಅಗಲ, ಉದ್ದ, ಎತ್ತರ, ಆಳ ಎಷ್ಟೆಂಬುದನ್ನು ಗ್ರಹಿಸುವುದಕ್ಕೆ ಶಕ್ತರಾಗುವಂತೆಯೂ, 19 ಬುದ್ಧಿಗಿಂತಲೂ ಮಿಗಿಲಾಗಿರುವ ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಂಡು, ದೇವರ ಸಂಪೂರ್ಣತೆಯ ಮಟ್ಟಿಗೂ ಪರಿಪೂರ್ಣರಾಗುವ ಹಾಗೆ ದೇವರು ನಿಮಗೆ ದಯಪಾಲಿಸಲಿ ಎಂದು ಆತನನ್ನು ಬೇಡಿಕೊಳ್ಳುತ್ತೇನೆ. 20 ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಈ ಶಕ್ತಿಯ ಪ್ರಕಾರ ನಾವು ಬೇಡುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದ ದೇವರಿಗೆ 21 ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಮಹಿಮೆಯಾಗಲಿ. ಆಮೆನ್. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.