ಎಫೆಸದವರಿಗೆ 1 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಪೀಠಿಕೆ 1 ದೇವರ ಚಿತ್ತಾನುಸಾರವಾಗಿ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನು ಎಫೆಸದಲ್ಲಿರುವ ದೇವಜನರಿಗೂ ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಟ್ಟಿರುವವರಿಗೂ ಬರೆಯುವುದೇನಂದರೆ, 2 ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯು ಶಾಂತಿಯೂ ಉಂಟಾಗಲಿ. ಕ್ರಿಸ್ತನಲ್ಲಿರುವ ಆತ್ಮೀಕ ಆಶೀರ್ವಾದಗಳು 3 ನಮ್ಮ ಕರ್ತನಾದ ಯೇಸುಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ, ಆತನು ಪರಲೋಕದಲ್ಲಿನ ಸಕಲ ಆತ್ಮೀಕ ಆಶೀರ್ವಾದಗಳನ್ನು ನಮಗೆ ಕ್ರಿಸ್ತನಲ್ಲಿ ಅನುಗ್ರಹಿಸಿದ್ದಾನೆ. 4 ನಾವು ಆತನ ಸನ್ನಿಧಿಯಲ್ಲಿ ಪರಿಶುದ್ಧರೂ ದೋಷವಿಲ್ಲದವರೂ ಆಗಿರಬೇಕೆಂದು, ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ದೇವರು ಕ್ರಿಸ್ತನಲ್ಲಿ ನಮ್ಮನ್ನು ಆರಿಸಿಕೊಂಡನು. 5 ದೇವರು ತನ್ನ ದಯಾಪೂರ್ವಕವಾದ ಚಿತ್ತಕ್ಕನುಸಾರವಾಗಿ ಯೇಸು ಕ್ರಿಸ್ತನ ಮೂಲಕ ನಮ್ಮನ್ನು ತನ್ನ ಮಕ್ಕಳನ್ನಾಗಿ ಅಂಗೀಕರಿಸಲು ಪ್ರೀತಿಯಿಂದ ಮೊದಲೇ ಸಂಕಲ್ಪಮಾಡಿದ್ದನು. 6 ತನ್ನ ಪ್ರಿಯನಲ್ಲಿಯೇ ನಮಗೆ ಉಚಿತವಾಗಿ ಅನುಗ್ರಹಿಸಿರುವ ತನ್ನ ಮಹಿಮೆಯುಳ್ಳ ಕೃಪೆಯ ಸ್ತುತಿಗಾಗಿ ಇದೆಲ್ಲಾವನ್ನು ಮಾಡಿದನು. 7 ಯೇಸುಕ್ರಿಸ್ತನು ನಮಗೋಸ್ಕರ ಸುರಿಸಿದ ರಕ್ತದ ಮೂಲಕ ನಮಗೆ ಆತನ ಕೃಪೆಯ ಐಶ್ವರ್ಯಕ್ಕನುಸಾರವಾಗಿ ಪಾಪ ಕ್ಷಮಾಪಣೆಯೆಂಬ ವಿಮೋಚನೆಯು ಉಂಟಾಯಿತು. 8 ಈ ಕೃಪೆಯನ್ನು ಆತನು ಎಲ್ಲಾ ಜ್ಞಾನ ವಿವೇಕಗಳೊಂದಿಗೆ ನಮಗೆ ಹೇರಳವಾಗಿ ಸುರಿಸಿದ್ದಾನೆ. 9 ದೇವರು ಆತನಲ್ಲಿ ಮೊದಲೇ ನಿರ್ಣಯಿಸಿಕೊಂಡಿದ್ದ ಕೃಪೆಯುಳ್ಳ ಸಂಕಲ್ಪದ ಪ್ರಕಾರ ತನ್ನ ಚಿತ್ತದ ರಹಸ್ಯವನ್ನು ನಮಗೆ ತಿಳಿಯಪಡಿಸಿದ್ದಾನೆ. 10 ಕಾಲವು ಪರಿಪೂರ್ಣವಾದಾಗ, ಆತನು ಭೂಪರಲೋಕಗಳಲ್ಲಿರುವ ಸಮಸ್ತವನ್ನು ಕ್ರಿಸ್ತನಲ್ಲಿ ಒಂದುಗೂಡಿಸುವುದೇ ಆ ಸಂಕಲ್ಪವಾಗಿತ್ತು. 11 ಇದಲ್ಲದೆ ತನ್ನ ಚಿತ್ತದ ಉದ್ದೇಶಕ್ಕನುಸಾರವಾಗಿ ಎಲ್ಲಾ ಕಾರ್ಯಗಳನ್ನು ನಡೆಸುವಾತನು ತನ್ನ ಸಂಕಲ್ಪದ ಪ್ರಕಾರ ಮೊದಲೇ ನೇಮಿಸಲ್ಪಟ್ಟವರಾದ ನಮ್ಮನ್ನು ಕ್ರಿಸ್ತನಲ್ಲಿ ತನ್ನ ಸ್ವಕೀಯ ಜನರನ್ನಾಗಿ ಅರಿಸಿಕೊಂಡನು. 12 ಕ್ರಿಸ್ತನಲ್ಲಿ ಮೊಟ್ಟ ಮೊದಲು ನಿರೀಕ್ಷೆಯನ್ನಿಟ್ಟ ನಾವು ಆತನ ಮಹಿಮೆಯನ್ನು ಸ್ತುತಿಸುವವರಾಗಿರಬೇಕೆಂದು ಹೀಗೆ ಮಾಡಿದನು. 13 ನೀವು ಸಹ ನಿಮ್ಮ ರಕ್ಷಣಾ ಸುವಾರ್ತೆಯ ಸತ್ಯವಾಕ್ಯವನ್ನು ಕೇಳಿ, ಕ್ರಿಸ್ತನಲ್ಲಿ ನಂಬಿಕೆಯಿಟ್ಟು, ವಾಗ್ದಾನಮಾಡಲ್ಪಟ್ಟ ಪವಿತ್ರಾತ್ಮನಿಂದ ಮುದ್ರೆಯನ್ನು ಹೊಂದಿದ್ದೀರಿ. 14 ದೇವರು ತನ್ನ ಸ್ವಕೀಯ ಜನರಿಗೆ ವಿಮೋಚನೆಯುಂಟಾಗುತ್ತದೆ ಎಂಬುದಕ್ಕೆ ಪವಿತ್ರಾತ್ಮನು ನಮ್ಮ ಬಾಧ್ಯತೆಗೆ ಸಂಚಕಾರವಾಗಿದ್ದಾನೆ. ಈ ಕಾರಣ ದೇವರಿಗೆ ಮಹಿಮೆಯನ್ನು ಸಲ್ಲಿಸೋಣ. ಕೃತಜ್ಞತೆಯೂ ಪ್ರಾರ್ಥನೆಯೂ 15 ಹೀಗಿರಲಾಗಿ ಕರ್ತನಾದ ಯೇಸುವಿನಲ್ಲಿ ನೀವು ಇಟ್ಟಿರುವ ನಂಬಿಕೆಯನ್ನು ಮತ್ತು ದೇವಜನರೆಲ್ಲರಿಗೆ ನೀವು ತೋರಿಸುವ ಪ್ರೀತಿಯ ವಿಷಯವನ್ನು ಕೇಳಿ, 16 ನಾನು ನಿಮಗೋಸ್ಕರ ನನ್ನ ಪ್ರಾರ್ಥನೆಗಳಲ್ಲಿ ವಿಜ್ಞಾಪನೆ ಮಾಡುವಾಗ ದೇವರಿಗೆ ಎಡೆಬಿಡದೆ ಸ್ತೋತ್ರ ಮಾಡುತ್ತೇನೆ. 17 ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ಮಹಿಮಾಸ್ವರೂಪನಾದ ತಂದೆಯೂ ಆಗಿರುವಾತನು ತನ್ನ ವಿಷಯವಾಗಿ ಪೂರ್ಣವಾದ ತಿಳಿವಳಿಕೆಯನ್ನು ಕೊಟ್ಟು, ಜ್ಞಾನ ಮತ್ತು ಪ್ರಕಟಣೆಗಳ ಆತ್ಮವನ್ನು ನಿಮಗೆ ದಯಪಾಲಿಸಬೇಕೆಂದು ಪ್ರಾರ್ಥಿಸುತ್ತೇನೆ. 18 ಆತನೇ ನಿಮ್ಮ ಮನೋನೇತ್ರಗಳನ್ನು ಬೆಳಗಿಸಿ, ಆತನ ಕರೆಯ ನಿರೀಕ್ಷೆಯು ಎಂಥದೆಂಬುದನ್ನೂ ಮತ್ತು ದೇವಜನರಲ್ಲಿರುವ ಆತನ ಸ್ವತ್ತಿನ ಮಹಿಮಾತಿಶಯವು ಎಂಥದೆಂಬುದನ್ನೂ, 19 ಮತ್ತು ನಂಬುವವರಾದ ನಮ್ಮಲ್ಲಿ ಕಾರ್ಯ ಸಾಧಿಸುವ ಆತನ ಪರಾಕ್ರಮ ಶಕ್ತಿಯ ಅಪಾರವಾದ ಮಹತ್ವವು ಎಂಥದೆಂಬುದನ್ನೂ ನೀವು ತಿಳಿಯುವಂತೆ ದೇವರು ನಿಮಗೆ ಅನುಗ್ರಹಿಸಲಿ. 20 ಈ ಪರಾಕ್ರಮ ಶಕ್ತಿಯಿಂದಲೇ ದೇವರು ಕ್ರಿಸ್ತನನ್ನು ಮರಣದಿಂದ ಎಬ್ಬಿಸಿ, ಸಕಲ ರಾಜತ್ವ, ಅಧಿಕಾರ, ಅಧಿಪತ್ಯ ಮತ್ತು ಪ್ರಭುತ್ವಗಳ ಮೇಲೆಯೂ 21 ಈ ಲೋಕದಲ್ಲಿ ಮಾತ್ರವಲ್ಲದೆ ಮುಂಬರುವ ಲೋಕದಲ್ಲಿಯೂ ಹೆಸರುಗೊಂಡವರೆಲ್ಲರ ಎಲ್ಲಾ ನಾಮಗಳ ಮೇಲೆಯೂ ಪರಲೋಕದಲ್ಲಿ ಆತನನ್ನು ತನ್ನ ಬಲಗಡೆಯಲ್ಲಿ ಕುಳ್ಳಿರಿಸಿಕೊಂಡನು. 22 ಇದಲ್ಲದೆ ದೇವರು ಸಮಸ್ತವನ್ನೂ ಯೇಸುಕ್ರಿಸ್ತನ ಪಾದದ ಕೆಳಗೆ ಅಧೀನಮಾಡಿ, ಸಭೆಗಾಗಿ ಎಲ್ಲಾದರ ಮೇಲೆ ಆತನನ್ನು ಶಿರಸ್ಸಾಗಿ ನೇಮಿಸಿದನು. 23 ಸಭೆಯು ಕ್ರಿಸ್ತನ ದೇಹವಾಗಿದೆ, ಎಲ್ಲವನ್ನೂ ಎಲ್ಲಾ ವಿಧದಲ್ಲೂ ಪೂರೈಸುವಾತನಿಂದ ಅದು ಸಂಪೂರ್ಣತೆಯುಳ್ಳದ್ದಾಗಿದೆ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.