Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಎಜ್ರ 9 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ನಿಷಿದ್ಧ ವಿವಾಹ

1 ಇದಾದನಂತರ ಪ್ರಧಾನಪುರುಷರು ನನ್ನ ಬಳಿಗೆ ಬಂದು, “ಇಸ್ರಾಯೇಲರಲ್ಲಿ ಸಾಧಾರಣಜನರೂ, ಯಾಜಕರೂ, ಲೇವಿಯರೂ, ಕಾನಾನ್ಯರು, ಹಿತ್ತಿಯರು, ಪೆರಿಜ್ಜೀಯರು, ಯೆಬೂಸಿಯರು, ಅಮ್ಮೋನಿಯರು, ಮೋವಾಬ್ಯರು, ಐಗುಪ್ತ್ಯರು ಮತ್ತು ಅಮೋರಿಯರು ಎಂಬ ಅನ್ಯ ದೇಶಗಳವರ ಬಳಿಕೆಯನ್ನು ತೊರೆಯದೆ ಅವರ ಅಸಹ್ಯಕಾರ್ಯಗಳನ್ನು ಅನುಸರಿಸಿದ್ದಾರೆ.

2 ಅವರು ತಮಗೂ ತಮ್ಮ ಗಂಡುಮಕ್ಕಳಿಗೂ ಅವರಿಂದ ಹೆಣ್ಣುಮಕ್ಕಳನ್ನು ತೆಗೆದುಕೊಂಡದ್ದರಿಂದ ದೇವಕುಲವು ಅನ್ಯದೇಶಗಳವರೊಡನೆ ಮಿಶ್ರವಾಯಿತು. ಪ್ರಭುಗಳೂ ಮತ್ತು ಪ್ರಧಾನರೂ ಈ ದ್ರೋಹಕ್ಕೆ ಮುಂದಾಳುಗಳಾದರು” ಎಂದು ತಿಳಿಸಿದರು.


ಎಜ್ರನ ಪ್ರಲಾಪ ಮತ್ತು ಪ್ರಾರ್ಥನೆ

3 ಈ ವರ್ತಮಾನವನ್ನು ಕೇಳಿದೊಡನೆ ನಾನು ಬಟ್ಟೆಗಳನ್ನು ಮತ್ತು ಮೇಲಂಗಿಗಳನ್ನು ಹರಿದುಕೊಂಡು ತಲೆಯ ಮತ್ತು ಗಡ್ಡದ ಕೂದಲುಗಳನ್ನು ಕಿತ್ತುಕೊಂಡು, ಸ್ತಬ್ಧನಾಗಿ ಕುಳಿತುಕೊಂಡೆನು.

4 ಇಸ್ರಾಯೇಲ್ ದೇವರ ವಿಧಿಗಳನ್ನು ಗೌರವಿಸಿದವರೆಲ್ಲರೂ ಸೆರೆಯಿಂದ ಬಂದವರ ದ್ರೋಹದ ಸಲುವಾಗಿ ಕಳವಳಗೊಂಡು ನನ್ನನ್ನು ಕೂಡಿಕೊಂಡರು.

5 ನಾನು ಸಂಧ್ಯಾ ನೈವೇದ್ಯ ಸಮರ್ಪಣೆಯ ಹೊತ್ತಿನವರೆಗೂ ಸ್ತಬ್ಧನಾಗಿ ಕುಳಿತುಕೊಂಡಿದ್ದೆನು. ಆ ಮೇಲೆ ದೇಹದಂಡನೆಮಾಡುವುದನ್ನು ಬಿಟ್ಟು ಹರಿದ ಬಟ್ಟೆಮೇಲಂಗಿಗಳಿಂದ ಕೂಡಿದವನಾಗಿಯೇ ಮೊಣಕಾಲೂರಿ ನನ್ನ ದೇವರಾದ ಯೆಹೋವನ ಕಡೆಗೆ ಕೈಗಳನ್ನೆತ್ತಿ ಪ್ರಾರ್ಥಿಸಿದ್ದೇನೆಂದರೆ:

6 “ನನ್ನ ದೇವರೇ, ನಾನು ಮನಗುಂದಿದವನಾಗಿದ್ದೇನೆ, ನಿನ್ನ ಕಡೆಗೆ ತಿರುಗಿಕೊಳ್ಳಲು ನಾಚಿಕೊಳ್ಳುತ್ತೇನೆ. ನನ್ನ ದೇವರೇ, ನಮ್ಮ ಪಾಪಗಳು ನಮ್ಮ ತಲೆಮೀರಿ ಬೆಳೆದಿವೆ, ನಮ್ಮ ಅಪರಾಧವು ಆಕಾಶವನ್ನು ಮುಟ್ಟುವಷ್ಟು ದೊಡ್ಡದಾಗಿವೆ.

7 ನಾವು ನಮ್ಮ ಪೂರ್ವಿಕರ ಕಾಲದಿಂದ ಇಂದಿನ ವರೆಗೂ ಮಹಾಪರಾಧಿಗಳೇ. ನಮ್ಮ ಪಾಪಗಳ ದೆಸೆಯಿಂದ ನಾವೂ, ನಮ್ಮ ಅರಸರೂ ಮತ್ತು ಯಾಜಕರೂ ಅನ್ಯದೇಶಗಳ ರಾಜರ ಕೈಗೆ ಒಪ್ಪಿಸಲ್ಪಟ್ಟು ಈಗಿರುವಂತೆ ಕತ್ತಿಗೂ, ಸೆರೆಗೂ, ಸುಲಿಗೆಗೂ, ಅಪಮಾನಕ್ಕೂ ಗುರಿಯಾದೆವು.

8 ಆದರೂ ನಮ್ಮ ದೇವರಾದ ಯೆಹೋವನು ಒಂದು ಕ್ಷಣ ನಮಗೆ ಪ್ರಸನ್ನನಾಗಿ ನಮ್ಮಲ್ಲಿ ಸ್ವಲ್ಪ ಜನರನ್ನು ರಕ್ಷಣೆಗಾಗಿ ಉಳಿಸಿ ತನ್ನ ಪರಿಶುದ್ಧಸ್ಥಳದಲ್ಲಿ ಮೊಳೆಯಂತೆ ನಮ್ಮನ್ನು ನೆಲೆಗೊಳಿಸಿ, ನಮ್ಮ ಕಣ್ಣುಗಳನ್ನು ಕಳೆಗೊಳಿಸಿ ನಮ್ಮ ದಾಸತ್ವದಲ್ಲಿ ನಮಗೆ ಸ್ವಲ್ಪಮಟ್ಟಿಗೆ ಉಜ್ಜೀವನವನ್ನು ಅನುಗ್ರಹಿಸಿದ್ದಾನೆ.

9 ನಾವು ದಾಸರಾದರೂ ನಮ್ಮ ದೇವರು ನಮ್ಮ ದಾಸತ್ವದಲ್ಲಿ ನಮ್ಮನ್ನು ಕೈಬಿಡಲಿಲ್ಲ; ಹಾಳುಬಿದ್ದ ನಮ್ಮ ದೇವರ ಆಲಯವನ್ನು ಪುನಃ ಕಟ್ಟಿ ಭದ್ರಪಡಿಸುವುದಕ್ಕೋಸ್ಕರ ನಮಗೆ ಉಜ್ಜೀವನ ಪ್ರಾಪ್ತವಾಗುವಂತೆಯೂ, ಯೆಹೂದದಲ್ಲಿಯೂ ಮತ್ತು ಯೆರೂಸಲೇಮಿನಲ್ಲಿಯೂ ನಮಗೆ ಅಭಯಾಶ್ರಯ ಸಿಕ್ಕುವಂತೆಯೂ ಪರ್ಷಿಯ ರಾಜರ ಮುಂದೆ ನಮಗೆ ಕೃಪೆಯನ್ನು ಅನುಗ್ರಹಿಸಿದ್ದಾನೆ.

10 ಇಷ್ಟು ಉಪಕಾರವನ್ನು ಪಡೆದ ನಾವು ಏನು ಅರಿಕೆಮಾಡಿಕೊಳ್ಳಲು ಸಾಧ್ಯ? ನಮ್ಮ ದೇವರೇ, ನಿನ್ನ ಆಜ್ಞೆಗಳನ್ನು ಉಲ್ಲಂಘಿಸಿದ್ದೇವೆ.

11 ನೀನು ನಿನ್ನ ಸೇವಕರಾದ ಪ್ರವಾದಿಗಳ ಮುಖಾಂತರ ನಮಗೆ, ‘ನೀವು ಸ್ವತಂತ್ರಿಸಿಕೊಳ್ಳುವುದಕ್ಕೆ ಹೋಗುವ ದೇಶವು ಅನ್ಯದೇಶಗಳವರ ಅಶುದ್ಧತ್ವದಿಂದಲೂ, ಅವರ ವಿಗ್ರಹಗಳಿಂದಲೂ ಮಲಿನವಾಗಿದೆ. ಆ ದೇಶವು ಎಲ್ಲೆಲ್ಲೂ ಆ ವಿಗ್ರಹಗಳ ಅಸಹ್ಯತೆಯಿಂದ ತುಂಬಿರುತ್ತದೆ.

12 ಹೀಗಿರಲಾಗಿ ನೀವು ನಿಮ್ಮ ಹೆಣ್ಣುಮಕ್ಕಳನ್ನು ಅವರ ಗಂಡುಮಕ್ಕಳಿಗೆ ಕೊಡಲೂ ಬಾರದು, ನಿಮ್ಮ ಗಂಡುಮಕ್ಕಳಿಗೋಸ್ಕರ ಅವರ ಹೆಣ್ಣು ಮಕ್ಕಳನ್ನು ತೆಗೆದುಕೊಳ್ಳಲೂ ಬಾರದು, ಅವರಿಗೋಸ್ಕರ ಸುಖಕ್ಷೇಮಗಳನ್ನು ಎಂದಿಗೂ ಬಯಸಬಾರದು. ಈ ಪ್ರಕಾರ ನಡೆದರೆ ನೀವು ಬಲಗೊಂಡು ಆ ದೇಶದ ಸಮೃದ್ಧಿಯನ್ನು ಅನುಭವಿಸಿ, ಅದನ್ನು ನಿಮ್ಮ ಸಂತಾನದವರಿಗೆ ಶಾಶ್ವತಸ್ವಾಸ್ಥ್ಯವನ್ನಾಗಿ ಬಿಡುವಿರಿ’ ಎಂದು ಹೇಳಿದಿಯಲ್ಲಾ.

13 ನಮ್ಮ ದುಷ್ಕರ್ಮ ಮಹಾಪರಾಧಗಳ ನಿಮಿತ್ತವಾಗಿ ಇಷ್ಟೆಲ್ಲಾ ಕೇಡು ಬಂದರೂ ನಮ್ಮ ದೇವರಾದ ನೀನು ನಮ್ಮ ಪಾಪಗಳಿಗೆ ತಕ್ಕಂತೆ ನಮ್ಮನ್ನು ದಂಡಿಸದೆ, ನಮ್ಮಲ್ಲಿ ಇಷ್ಟು ಜನರನ್ನು ಉಳಿಸಿದಿ.

14 ಹೀಗಿರುವಲ್ಲಿ ನಾವು ತಿರುಗಿ ನಿನ್ನ ಆಜ್ಞೆಗಳನ್ನು ಮೀರಿ ವಿಗ್ರಹಾರಾಧಕರಾದ ಈ ಜನರ ಸಂಗಡ ಬೀಗತನ ಮಾಡುವುದು ಯೋಗ್ಯವೋ? ಹಾಗೆ ಮಾಡಿದರೆ ನೀನು ನಮ್ಮ ಮೇಲೆ ರೌದ್ರಾವೇಶವುಳ್ಳವನಾಗಿ ಯಾರೂ ತಪ್ಪಿಸಿಕೊಂಡು ಉಳಿಯದಂತೆ ನಮ್ಮನ್ನು ಮುಗಿಸಿಬಿಡುವಿಯಲ್ಲವೋ?

15 ಯೆಹೋವನೇ, ಇಸ್ರಾಯೇಲ್ ದೇವರೇ, ಈಗಿರುವಷ್ಟು ಜನರನ್ನು ನಮ್ಮಲ್ಲಿ ಉಳಿಸಿದ್ದರಿಂದ ನೀನು ಧರ್ಮಸ್ವರೂಪನೆಂದು ಪ್ರಕಟವಾಯಿತು. ನಾವಾದರೋ ನಿನ್ನ ದೃಷ್ಟಿಯಲ್ಲಿ ಅಪರಾಧಿಗಳು. ಈ ನಮ್ಮ ದುಷ್ಕೃತ್ಯದ ನಿಮಿತ್ತವಾಗಿ ನಿನ್ನೆದುರಿನಲ್ಲಿ ನಿಲ್ಲಲಾರೆವು” ಎಂದು ಬೇಡಿಕೊಂಡೆನು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು