Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಎಜ್ರ 8 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಎಜ್ರನೊಂದಿಗೆ ಬಾಬಿಲೋನಿನಿಂದ ಹಿಂದಿರುಗಿದವರ ಪಟ್ಟಿ

1 ಅರ್ತಷಸ್ತ ರಾಜನ ಆಳ್ವಿಕೆಯಲ್ಲಿ ನನ್ನೊಂದಿಗೆ ಬಾಬಿಲೋನಿನಿಂದ ಹೊರಟ ಗೋತ್ರಪ್ರಧಾನರ ಮತ್ತು ಅವರ ಸಂತಾನದವರ ವಿವರಣೆ.

2 ಫೀನೆಹಾಸನ ಸಂತಾನದವರಲ್ಲಿ ಗೇರ್ಷೋಮ್; ಈತಾಮಾರನ ಸಂತಾನದವರಲ್ಲಿ ದಾನಿಯೇಲ್; ದಾವೀದನ ಸಂತಾನದವರಲ್ಲಿ ಶೆಕನ್ಯನ ಮೊಮ್ಮಗನಾದ ಹಟ್ಟೂಷ್.

3 ಪರೋಷಿನವರಲ್ಲಿ ಜೆಕರ್ಯನೂ ಅವನೊಡನೆ ಶೆಕನ್ಯನ ವಂಶಕ್ಕೆ ಸೇರುವ 150 ಗಂಡಸರು.

4 ಪಹತ್ ಮೋವಾಬಿನವರಲ್ಲಿ ಜೆರಹ್ಯನ ಮಗನಾದ ಎಲ್ಯೆಹೋವೇನೈಯೂ ಮತ್ತು ಅವನೊಡನೆ 200 ಗಂಡಸರು.

5 ಜತ್ತೂವಿನವರಲ್ಲಿ ಯಹಜೀಯೇಲನ ಮಗನಾದ ಶೆಕನ್ಯನೂ ಹಾಗೂ ಅವನೊಡನೆ 300 ಗಂಡಸರು.

6 ಆದೀನನವರಲ್ಲಿ ಯೋನಾತಾನನ ಮಗನಾದ ಎಬೆದನೂ ಅವನೊಡನೆ 50 ಗಂಡಸರು.

7 ಏಲಾಮಿನವರಲ್ಲಿ ಅತಲ್ಯನ ಮಗನಾದ ಯೆಶಾಯನೂ ಅವನೊಡನೆ 70 ಗಂಡಸರು.

8 ಶೆಫಟ್ಯನವರಲ್ಲಿ ಮಿಕಾಯೇಲನ ಮಗನಾದ ಜೆಬದ್ಯನೂ ಅವನೊಡನೆ 80 ಗಂಡಸರು.

9 ಯೋವಾಬನವರಲ್ಲಿ ಯೆಹೀಯೇಲನ ಮಗನಾದ ಓಬದ್ಯನೂ ಅವನೊಡನೆ 218 ಗಂಡಸರು.

10 ಬಾನೀಯವರಲ್ಲಿ ಯೋಸಿಫ್ಯನ ಮಗನಾದ ಶಿಲೋಮೀತನೂ ಅವನೊಡನೆ 160 ಗಂಡಸರು.

11 ಬೇಬೈಯವರಲ್ಲಿ ಬೇಬೈಯ ಮಗನಾದ ಜೆಕರ್ಯನೂ ಅವನೊಡನೆ 28 ಗಂಡಸರು.

12 ಅಜ್ಗಾದನವರಲ್ಲಿ ಹಕ್ಕಾಟಾನನ ಮಗನಾದ ಯೋಹಾನಾನನೂ ಅವನೊಡನೆ 110 ಗಂಡಸರು.

13 ಅದೋನೀಕಾಮಿನವರಲ್ಲಿ ಕಡೆಯವರಾದ ಎಲೀಫೆಲೆಟ್, ಎಮೀಯೇಲ್, ಶೆಮಾಯ ಎಂಬ ಹೆಸರುಳ್ಳವರೂ ಅವರೊಡನೆ 60 ಗಂಡಸರು.

14 ಬಿಗ್ವೈಯವರಲ್ಲಿ ಜಕ್ಕೂರನ ಮಗನಾದ ಊತೈಯೂ ಅವನೊಡನೆ 70 ಗಂಡಸರು.

15 ಅಹವಾ ಪ್ರಾಂತ್ಯದ ಕಡೆಗೆ ಹರಿಯುವ ನದಿಯ ಬಳಿಯಲ್ಲಿ ನಾನು ಇವರನ್ನು ಕೂಡಿಸಿದೆನು. ಅಲ್ಲಿ ಮೂರು ದಿನ ಪಾಳೆಯಮಾಡಿಕೂಂಡ ಮೇಲೆ ಸಾಧಾರಣ ಜನರೂ, ಯಾಜಕರೂ ಬಂದಿದ್ದಾರೆ, ಲೇವಿಯರಲ್ಲಿ ಯಾರೂ ಬರಲಿಲ್ಲ ಎಂದು ಕಂಡುಬಂತು.

16 ಆದುದರಿಂದ ನಾನು ಪ್ರಧಾನರಾದ ಎಲೀಯೆಜೆರ್, ಅರೀಯೇಲ್, ಶೆಮಾಯ, ಎಲ್ನಾತಾನ್, ಯಾರೀಬ್, ಎಲ್ನಾತಾನ್, ನಾತಾನ್, ಜೆಕರ್ಯ, ಮೆಷುಲ್ಲಾಮ್ ಇವರನ್ನೂ, ಪಂಡಿತರಾದ ಯೋಯಾರೀಬ್ ಎಲ್ನಾತಾನ್ ಇವರನ್ನೂ ಕರೆಯಿಸಿದೆನು.

17 ಅವರ ತರುವಾಯ ನಾನು ಕಾಸಿಫ್ಯ ಊರಿನ ಮುಖ್ಯಸ್ಥನಾದ ಇದ್ದೋವಿನ ಬಳಿಗೆ ಹೋಗಬೇಕೆಂದು ಅಪ್ಪಣೆಮಾಡಿ, ನಮ್ಮ ಬಳಿಗೆ ದೇವಾಲಯ ಸೇವಕರನ್ನು ಕಳುಹಿಸುವ ಹಾಗೆ, ಅವರು ಇದ್ದೋವಿಗೂ ಕಾಸಿಫ್ಯ ಊರಿನಲ್ಲಿ ವಾಸಿಸುತ್ತಿದ್ದ ಅವನ ಸಹೋದರರಾದ ದೇವಸ್ಥಾನದ ಪರಿಚಾರಕರಿಗೂ ಹೇಳತಕ್ಕ ಮಾತುಗಳನ್ನು ಹೇಳಿಕೊಟ್ಟೆನು. ಆ ಊರಿನವರು ದೇವದಾಸವರ್ಗದವರಷ್ಟೆ.

18 ನಮ್ಮ ದೇವರ ಕೃಪಾಶೀರ್ವಾದ ನಮಗೆ ದೊರೆಕ್ಕಿದ್ದರಿಂದ ಅವರು ಇಸ್ರಾಯೇಲನ ಮಗನಾದ ಲೇವಿಯ ಕುಲದ ಮಹ್ಲೀ ಸಂತಾನದವರಲ್ಲಿ ಈಸ್ಸೆಕೆಲನನ್ನೂ, ಶೇರೇಬ್ಯನನ್ನೂ ಅವನ ಪುತ್ರಭ್ರಾತೃಗಳಲ್ಲಿ ಹದಿನೆಂಟು ಜನರನ್ನೂ,

19 ಮೆರಾರೀಯರಲ್ಲಿ ಹಷಬ್ಯನನ್ನೂ ಅವನೊಡನೆ ಯೆಶಾಯನನ್ನೂ, ಅವರ ಪುತ್ರ ಸಹೋದರರಲ್ಲಿ ಇಪ್ಪತ್ತು ಜನರು,

20 ದಾವೀದನೂ ಅವನ ಮುಖ್ಯಸ್ಥರನ್ನು ಲೇವಿಯರೊಂದಿಗೆ ಸೇವೆಗಾಗಿ ಕೊಟ್ಟು ದೇವಸ್ಥಾನ ಪರಿಚಾರಕರಲ್ಲಿ ಇನ್ನೂರಿಪ್ಪತ್ತು ಜನರನ್ನೂ ನಮ್ಮ ಬಳಿಗೆ ಕರೆದುಕೊಂಡು ಬಂದರು. ಇವರೆಲ್ಲರ ಹೆಸರುಗಳು ಪಟ್ಟಿಯಲ್ಲಿದ್ದವು.

21 ಆ ಮೇಲೆ ಆ ಅಹವಾ ನದಿಯ ಬಳಿಯಲ್ಲಿ ನಾವು ಉಪವಾಸದಿಂದಿದ್ದು, ನಮ್ಮ ದೇವರ ಮುಂದೆ ನಮ್ಮನ್ನು ತಗ್ಗಿಸಿಕೊಂಡು, ನಮಗೂ ನಮ್ಮ ಮನೆಯವರಿಗೂ ನಮ್ಮ ಎಲ್ಲಾ ಆಸ್ತಿಗೂ ಪ್ರಯಾಣದಲ್ಲಿ ಶುಭವನ್ನು ಬೇಡಿಕೊಳ್ಳಬೇಕೆಂದು ಉಪವಾಸವನ್ನು ಪ್ರಕಟಿಸಿದನು.

22 ನಮ್ಮ ದೇವರ ಹಸ್ತವು ಆತನ ಎಲ್ಲಾ ಶರಣಾರ್ಥಿಗಳನ್ನೂ ಪಾಲಿಸುವುದು; ಆತನನ್ನು ತೊರೆದುಬಿಟ್ಟವರೆಲ್ಲರೂ ಆತನ ಉಗ್ರವಾದ ಕೋಪಕ್ಕೆ ಗುರಿಯಾಗುವರು. ದಾರಿಯಲ್ಲಿ ನಮ್ಮನ್ನು ಶತ್ರುಗಳಿಂದ ರಕ್ಷಿಸುವುದಕ್ಕೋಸ್ಕರ ಸೈನ್ಯವನ್ನೂ, ಅಶ್ವಬಲವನ್ನೂ ಕೊಡಲು ಅರಸನಿಂದ ಸಹಾಯ ಕೇಳಲು ನಾಚಿಕೊಂಡಿದ್ದೆನು.

23 ಆದುದರಿಂದ ನಾವು ಉಪವಾಸಮಾಡಿ ದೇವರನ್ನು ಪ್ರಾರ್ಥಿಸಲು ಆತನು ನಮಗೆ ಪ್ರಸನ್ನನಾದನು.


ದೇವಾಲಯಕ್ಕೆ ಸಲ್ಲಿಸಿದ ಕಾಣಿಕೆಗಳು

24 ಅನಂತರ ನಾನು ಯಾಜಕರ ಮುಖ್ಯಸ್ಥರಲ್ಲಿ ಶೇರೇಬ್ಯ, ಹಷಬ್ಯ ಇವರ ಸಹೋದರರಲ್ಲಿ ಹತ್ತು ಜನರನ್ನೂ ಆರಿಸಿಕೊಂಡು ಅರಸನಿಂದಲೂ, ಅವನ ಮಂತ್ರಿಗಳಿಂದಲೂ, ಸರದಾರರಿಂದಲೂ ಮತ್ತು

25 ಇಸ್ರಾಯೇಲರಿಂದಲೂ ನಮ್ಮ ದೇವರ ಆಲಯಕ್ಕೋಸ್ಕರ ಕಾಣಿಕೆಯಾಗಿ ಕೊಡಲ್ಪಟ್ಟ ಬೆಳ್ಳಿ ಬಂಗಾರವನ್ನೂ, ಸಾಮಾನುಗಳನ್ನೂ ತೂಕಮಾಡಿ ಅವರಿಗೆ ಒಪ್ಪಿಸಿದೆನು.

26 ಅವರ ಕೈಯಲ್ಲಿ ಕೊಟ್ಟ ಬೆಲೆಬಾಳುವ ಸಾಮಾನುಗಳ ತೂಕ: ಬೆಳ್ಳಿಯು ಆರುನೂರೈವತ್ತು ತಲಾಂತು, ಬಂಗಾರವು ನೂರು ತಲಾಂತು,

27 ಬಂಗಾರದ ಇಪ್ಪತ್ತು ಬಟ್ಟಲುಗಳು ಪ್ರತಿಯೊಂದೂ ಸಾವಿರ ಪವನು; ಇವುಗಳಲ್ಲದೆ ಶ್ರೇಷ್ಠವಾದ ಶುಭ್ರತಾಮ್ರದ ಎರಡು ಪಾತ್ರೆಗಳಿದ್ದವು. ಅವು ಬಂಗಾರದಷ್ಟು ಬೆಲೆಯುಳ್ಳವುಗಳು.

28 ನಾನು ಅವರಿಗೆ, “ನೀವು ಯೆಹೋವನ ಸ್ವಕೀಯರು; ಆ ಪಾತ್ರೆಗಳೂ, ದೇವರ ವಸ್ತುಗಳು; ಆ ಬೆಳ್ಳಿಬಂಗಾರವೂ ನಿಮ್ಮ ಪೂರ್ವಿಕರ ದೇವರಾದ ಯೆಹೋವನಿಗೋಸ್ಕರ ಸಮರ್ಪಿತವಾದ ಕಾಣಿಕೆಯು.

29 ಆದುದರಿಂದ ನೀವು ಜಾಗರೂಕರಾಗಿದ್ದು ಯೆರೂಸಲೇಮಿನಲ್ಲಿರುವ ಯಾಜಕರ ಮತ್ತು ಲೇವಿಯರ ಪ್ರಧಾನರ ಮುಂದೆಯೂ ಇವುಗಳನ್ನು ತೂಕಮಾಡಿ ಯೆಹೋವನ ಆಲಯದ ಕೊಠಡಿಗಳಲ್ಲಿ ಇಡುವವರೆಗೂ ಕಾಯಿರಿ” ಎಂದು ಹೇಳಿದನು.

30 ಆ ಯಾಜಕರೂ ಮತ್ತು ಲೇವಿಯರೂ, ಯೆರೂಸಲೇಮಿನ ದೇವಾಲಯಕ್ಕೆ ತಲುಪಿಸುವುದಕ್ಕೋಸ್ಕರ ಬೆಳ್ಳಿಬಂಗಾರವನ್ನೂ, ಉಪಕರಣಗಳನ್ನೂ ತೂಕಮಾಡಿಸಿ ತಮ್ಮ ವಶದಲ್ಲಿಟ್ಟುಕೊಂಡರು.

31 ನಾವು ಮೊದಲನೆಯ ತಿಂಗಳಿನ ಹನ್ನೆರಡನೆಯ ದಿನದಲ್ಲಿ ಅಹವಾ ನದಿಯನ್ನು ಬಿಟ್ಟು ಯೆರೂಸಲೇಮಿಗೆ ಹೊರಟೆವು. ನಮ್ಮ ದೇವರ ಹಸ್ತವು ನಮ್ಮನ್ನು ಪಾಲಿಸುತ್ತಾ ಇತ್ತು. ಆತನು ಶತ್ರುಗಳ ಮತ್ತು ದಾರಿಯಲ್ಲಿ ಹೊಂಚುಹಾಕುವವರ ಕೈಗೆ ಸಿಕ್ಕದಂತೆ ನಮ್ಮನ್ನು ತಪ್ಪಿಸಿದನು.

32 ನಾವು ಯೆರೂಸಲೇಮನ್ನು ಸೇರಿ ಮೂರು ದಿನ ವಿಶ್ರಮಿಸಿಕೊಂಡೆವು.

33 ನಾಲ್ಕನೆಯ ದಿನ ನಮ್ಮ ದೇವರ ಆಲಯದಲ್ಲಿ ಊರೀಯನ ಮಗನಾದ ಮೆರೇಮೋತ್ ಎಂಬ ಯಾಜಕನಿಗೆ ಬೆಳ್ಳಿಬಂಗಾರವನ್ನೂ ಉಪಕರಣಗಳನ್ನೂ ತೂಕಮಾಡಿ ಒಂದೊಂದಾಗಿ ಎಣಿಸಿಕೊಟ್ಟೆವು. ಫೀನೆಹಾಸನ ವಂಶದವನಾದ ಎಲ್ಲಾಜಾರ್, ಯೇಷೂವನ ಮಗನಾದ ಯೋಜಾಬಾದ್, ಬಿನ್ನೂಯನ ಮಗನಾದ ನೋವದ್ಯ ಎಂಬ ಲೇವಿಯರು ಅವನ ಜೊತೆಯಲ್ಲಿದ್ದರು.

34 ಆಗಲೇ ಎಲ್ಲವುಗಳ ತೂಕವು ಲಿಖಿತವಾಯಿತು.

35 ದೇಶಾಂತರದ ಸೆರೆಯಿಂದ ಹಿಂತಿರುಗಿ ಬಂದವರು ಇಸ್ರಾಯೇಲರ ದೇವರಿಗೆ ತೊಂಭತ್ತಾರು ಟಗರುಗಳನ್ನೂ, ಎಪ್ಪತ್ತೇಳು ಕುರಿಮರಿಗಳನ್ನೂ, ಸಮಸ್ತ ಇಸ್ರಾಯೇಲರ ನಿಮಿತ್ತವಾಗಿ ಹನ್ನೆರಡು ಹೋತಗಳನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದರು. ಇವೆಲ್ಲಾ ಯೆಹೋವನಿಗೆ ಸರ್ವಾಂಗಹೋಮವೇ.

36 ಆ ಮೇಲೆ ಅವರು ರಾಜಶಾಸನವನ್ನು ರಾಜೋದ್ಯೋಗಸ್ಥರಿಗೂ, ಹೊಳೆಯಾಚೆಯ ಪ್ರದೇಶಾಧಿಪತಿಗಳಿಗೂ ಒಪ್ಪಿಸಿದರು. ಇವರು ಜನರಿಗೂ ಮತ್ತು ದೇವಾಲಯಕ್ಕೂ ಸಹಾಯಮಾಡಿದರು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು