ಎಜ್ರ 10 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಪಾಪನಿವೇದನೆ 1 ಎಜ್ರನು ದೇವಾಲಯದ ಮುಂದೆ ಅಡ್ಡಬಿದ್ದು ಅಳುತ್ತಾ ವಿಜ್ಞಾಪನೆಯನ್ನೂ, ಪಾಪನಿವೇದನೆಯನ್ನೂ ಮಾಡುತ್ತಿರುವಷ್ಟರಲ್ಲಿ ಇಸ್ರಾಯೇಲರ ಗಂಡಸರು, ಹೆಂಗಸರೂ ಮತ್ತು ಮಕ್ಕಳೂ ಮಹಾಸಮೂಹವಾಗಿ ಅವನ ಬಳಿಗೆ ಕೂಡಿಬಂದರು. ಅಲ್ಲಿನ ಜನರು ಬಹಳವಾಗಿ ದುಃಖಿಸುತ್ತಿದ್ದರು. 2 ಆಗ ಏಲಾಮ್ ಸಂತಾನದ ಯೆಹೀಯೇಲನ ಮಗನಾದ ಶೆಕನ್ಯನು ಎಜ್ರನಿಗೆ, “ಇಸ್ರಾಯೇಲರಾದ ನಾವು ಅನ್ಯಜನರಾದ ಈ ದೇಶನಿವಾಸಿಗಳಿಂದ ಹೆಣ್ಣನ್ನು ತೆಗೆದುಕೊಂಡು ನಮ್ಮ ದೇವರಿಗೆ ವಿರುದ್ಧವಾಗಿ ದ್ರೋಹಮಾಡಿದರೂ ನಮ್ಮನ್ನು ನಾವು ತಿದ್ದಿಕೊಳ್ಳುವ ನಿರೀಕ್ಷೆಯು ಇನ್ನೂ ಉಂಟು. 3 ಸ್ವಾಮಿಯಾದ ನೀನೂ ನಮ್ಮ ದೇವರ ಆಜ್ಞೆಯನ್ನು ಗೌರವಿಸುವವನೂ. ನೀನು ಹೇಳಿಕೊಟ್ಟ ಬುದ್ಧಿವಾದಕ್ಕೆ ಅನುಸಾರವಾಗಿ ಎಲ್ಲಾ ಹೆಂಡತಿಯರನ್ನೂ, ಅವರ ಮಕ್ಕಳನ್ನೂ ಕಳುಹಿಸಿಬಿಡುವುದಾಗಿ ಈಗಲೇ ನಮ್ಮ ದೇವರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡು ಧರ್ಮಶಾಸ್ತ್ರಕ್ಕೆ ಅನುಸಾರವಾಗಿ ನಡೆಯೋಣ. 4 ಎದ್ದೇಳು, ಈ ಕಾರ್ಯವನ್ನು ವಹಿಸತಕ್ಕವನು ನೀನು; ನಾವಾದರೋ ನಿನ್ನ ಸಹಾಯಕರು. ಧೈರ್ಯದಿಂದ ಕೈಹಾಕು” ಎಂದು ಹೇಳಿದನು. 5 ಆಗ ಎಜ್ರನು ಎದ್ದು ಯಾಜಕರ ಮತ್ತು ಲೇವಿಯರ ಮುಖ್ಯಸ್ಥರಿಗೂ, ಎಲ್ಲಾ ಇಸ್ರಾಯೇಲರಿಗೂ ಈ ಪ್ರಕಾರ ನಡೆಯುವುದಾಗಿ ಪ್ರಮಾಣಮಾಡಬೇಕೆಂದು ಹೇಳಲು ಅವರು ಹಾಗೆಯೇ ಪ್ರಮಾಣಮಾಡಿದರು. 6 ಆ ಮೇಲೆ ಎಜ್ರನು ದೇವಾಲಯದ ಮುಂದಣ ಸ್ಥಳವನ್ನು ಬಿಟ್ಟು ಎದ್ದು ಎಲ್ಯಾಷೀಬನ ಮಗನಾದ ಯೆಹೋಹಾನಾನನ ಕೊಠಡಿಗೆ ಹೋಗಿ ಅಲ್ಲಿ ಸೆರೆಯಿಂದ ಬಂದವರ ನಿಮಿತ್ತ ದುಃಖಿಸುತ್ತಾ, ಅನ್ನಪಾನಗಳನ್ನು ತೆಗೆದುಕೊಳ್ಳದೆ ರಾತ್ರಿಯನ್ನು ಕಳೆದನು. 7 ತರುವಾಯ ಯೆಹೂದದಲ್ಲಿಯೂ ಯೆರೂಸಲೇಮಿನಲ್ಲಿಯೂ, “ಸೆರೆಯಿಂದ ಬಂದವರೆಲ್ಲರೂ ಯೆರೂಸಲೇಮಿನಲ್ಲಿ ಬಂದು ಸೇರಬೇಕು. 8 ಎಲ್ಲಾ ಮುಖ್ಯಸ್ಥರ ಮತ್ತು ಹಿರಿಯರ ನಿರ್ಣಯದ ಪ್ರಕಾರ ಮೂರು ದಿನಗಳೊಳಗೆ ಬಾರದವನು ತನ್ನ ಎಲ್ಲಾ ಆಸ್ತಿಯನ್ನೂ ಕಳೆದುಕೊಂಡು ಸೆರೆಯಿಂದ ಬಂದವರ ಸಭೆಯಿಂದ ಬಹಿಷ್ಕೃತನಾಗುವನು” ಎಂದು ಪ್ರಕಟಿಸಿದರು. 9 ಆಗ ಮೂರನೆಯ ದಿನದಲ್ಲಿ ಅಂದರೆ ಒಂಭತ್ತನೆಯ ತಿಂಗಳಿನ ಇಪ್ಪತ್ತನೆಯ ದಿನದಲ್ಲಿ ಯೆಹೂದ್ಯರ ಮತ್ತು ಬೆನ್ಯಾಮೀನ್ಯರ ಎಲ್ಲಾ ಪುರುಷರೂ ಯೆರೂಸಲೇಮಿನಲ್ಲಿ ಕೂಡಿಬಂದರು. ಆ ಸಂಗತಿಯ ನಿಮಿತ್ತವಾಗಿಯೂ, ದೊಡ್ಡ ಮಳೆಯ ದೆಸೆಯಿಂದಲೂ ನಡುಗುತ್ತಾ ದೇವಾಲಯದ ಅಂಗಳದಲ್ಲಿ ಕುಳಿತುಕೊಂಡರು. 10 ಯಾಜಕನಾದ ಎಜ್ರನು ಎದ್ದು ನಿಂತು ಅವರಿಗೆ, “ನೀವು ಅನ್ಯಜನರ ಹೆಣ್ಣುಗಳನ್ನು ಮದುವೆಮಾಡಿಕೊಂಡು ಇಸ್ರಾಯೇಲರ ಅಪರಾಧಗಳನ್ನು ಹೆಚ್ಚಿಸಿದ್ದೀರಿ. 11 ಈಗ ನಿಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಸ್ತೋತ್ರಮಾಡಿ, ನಿಮ್ಮ ಪಾಪಗಳನ್ನು ಅರಿಕೆಮಾಡಿ, ಆತನ ಚಿತ್ತಕ್ಕನುಸಾರವಾಗಿ ದೇಶನಿವಾಸಿಗಳನ್ನೂ ಮತ್ತು ಅನ್ಯಜನರಿಂದ ತಂದ ಹೆಂಡತಿಯರನ್ನೂ ಬಿಟ್ಟು ಬೇರೆಯಾಗಿರಿ” ಎಂದನು. 12 ಆಗ ಕೂಡಿಬಂದವರೆಲ್ಲರೂ ಗಟ್ಟಿಯಾಗಿ, “ನೀನು ಹೇಳಿದಂತೆಯೇ ಮಾಡುವುದು ನಮ್ಮ ಕರ್ತವ್ಯ. 13 ಆದರೆ ಕೂಡಿಬಂದವರು ಬಹು ಜನರು, ಈಗ ಮಳೆಗಾಲ; ಹೊರಗೆ ನಿಲ್ಲುವುದು ಅಸಾಧ್ಯ. ಈ ಕೆಲಸವು ಒಂದೆರಡು ದಿನಗಳಲ್ಲಿ ತೀರುವಂಥದಲ್ಲ; ಈ ವಿಷಯದಲ್ಲಿ ನಮ್ಮ ಅಪರಾಧವು ದೊಡ್ಡದು. 14 ಆದುದರಿಂದ ನಮ್ಮ ಹಿರಿಯರು, ನಾಯಕರು ಸರ್ವಸಮೂಹಕ್ಕೋಸ್ಕರ ಕಾರ್ಯವನ್ನು ವಹಿಸಿಕೊಳ್ಳಲಿ; ನಮ್ಮ ನಮ್ಮ ಊರುಗಳಲ್ಲಿ ಅನ್ಯಜನರ ಸ್ತ್ರೀಯರನ್ನು ಮದುವೆಮಾಡಿಕೊಂಡವರೆಲ್ಲರೂ ನೇಮಿತವಾದ ದಿನದಲ್ಲಿ ತಮ್ಮ ಊರಿನ ಹಿರಿಯರೊಡನೆಯೂ ಮತ್ತು ನ್ಯಾಯಾಧಿಪತಿಗಳೊಡನೆಯೂ ಇಲ್ಲಿಗೆ ಸೇರಿ ಬರಲಿ. ನಮ್ಮ ದೇವರು ಈ ವಿಷಯದಲ್ಲಿ ನಮ್ಮ ಮೇಲೆ ಮಾಡಿಕೊಂಡಿರುವ ಉಗ್ರಕೋಪವು ಹೀಗೆ ಪರಿಹಾರವಾಗಲಿ” ಎಂದು ಉತ್ತರಕೊಟ್ಟರು. 15 ಅಸಾಹೇಲನ ಮಗನಾದ ಯೋನಾತಾನ್, ತಿಕ್ವನ ಮಗನಾದ ಯಹ್ಜೆಯ ಎಂಬವರು ಮಾತ್ರ ಈ ಅಭಿಪ್ರಾಯವನ್ನು ವಿರೋಧಿಸಿದರು; ಲೇವಿಯರಾದ ಮೆಷುಲ್ಲಾಮ್, ಶಬ್ಬೆತೈ ಎಂಬವರೂ ಇವರ ಪಕ್ಷವನ್ನು ಹಿಡಿದರು. 16 ಆದರೆ ಸೆರೆಯಿಂದ ಬಂದವರು ಮೇಲೆ ಹೇಳಿರುವುದನ್ನೇ ಒಪ್ಪಿಕೊಂಡರು. ಈ ವಿಚಾರಣೆಯನ್ನು ನಡೆಸುವುದಕ್ಕೆ ಯಾಜಕನಾದ ಎಜ್ರನೂ ಆಯಾ ಗೋತ್ರಗಳ ಪ್ರಧಾನಪುರುಷರನ್ನು ಹೆಸರುಹೆಸರಾಗಿ ನೇಮಿಸಿದನು. ಹತ್ತನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಇವರ ಮೊದಲನೆಯ ಸಭೆ ನಡೆಯಿತು. 17 ಅವರು ಅನ್ಯಜನರ ಸ್ತ್ರೀಯರನ್ನು ಮದುವೆಮಾಡಿಕೊಂಡವರ ಸಂಗತಿಯನ್ನು ಮೊದಲನೆಯ ತಿಂಗಳಿನ ಮೊದಲನೆಯ ದಿನದೊಳಗಾಗಿ ಪೂರ್ಣವಾಗಿ ವಿಚಾರಿಸಿ ನಿರ್ಧರಿಸಿದರು. ಅನ್ಯಜನರ ಸ್ತ್ರೀಯರನ್ನು ಮದುವೆಮಾಡಿಕೊಂಡವರ ಪಟ್ಟಿ 18 ಅನ್ಯಜನರ ಸ್ತ್ರೀಯರನ್ನು ಮದುವೆಮಾಡಿಕೊಂಡವರು ಯಾರೆಂದರೆ: ಯಾಜಕರಲ್ಲಿ: ಯೋಚಾದಾಕನ ಮಗ ಯೇಷೂವ ಮತ್ತು ಅವನ ಸಹೋದರರ ಸಂತಾನದವರಾದ ಮಾಸೇಯ, ಎಲೀಯೆಜೆರ್, ಯಾರೀಬ್ ಮತ್ತು ಗೆದಲ್ಯ ಎಂಬುವವರು. 19 ಇವರು ತಮ್ಮ ಹೆಂಡತಿಯರನ್ನು ಕಳುಹಿಸಿಬಿಡುವುದಾಗಿ ಕೈ ಮುಟ್ಟಿ ಪ್ರಮಾಣಮಾಡಿ ತಾವು ಅಪರಾಧಿಗಳೆಂದು ಒಪ್ಪಿಕೊಂಡು ಪ್ರಾಯಶ್ಚಿತ್ತವಾಗಿ ಒಂದು ಟಗರನ್ನು ಸಮರ್ಪಿಸಿದರು. 20 ಇಮ್ಮೇರನ ಸಂತಾನದವರಾದ ಹನಾನೀ ಮತ್ತು ಜೆಬದ್ಯ. 21 ಹಾರೀಮನ ಸಂತಾನದವರಾದ ಮಾಸೇಯ, ಎಲೀಯ, ಶೆಮಾಯ, ಯೆಹೀಯೇಲ್ ಮತ್ತು ಉಜ್ಜೀಯ. 22 ಪಷ್ಹೂರನ ಸಂತಾನದವರಾದ ಎಲ್ಯೋವೇನೈ, ಮಾಸೇಯ, ಇಷ್ಮಾಯೇಲ್, ನೆತನೇಲ್, ಯೋಜಾಬಾದ್ ಮತ್ತು ಎಲ್ಲಾಸ. 23 ಲೇವಿಯರಲ್ಲಿ: ಯೋಜಾಬಾದ್, ಶಿಮ್ಮೀ, ಕೆಲೀಟ ಅನ್ನಿಸಿಕೊಳ್ಳುವವ ಕೇಲಾಯ, ಪೆತಹ್ಯ, ಯೆಹೂದ ಮತ್ತು ಎಲೀಯೆಜೆರ್. 24 ಗಾಯಕರಲ್ಲಿ: ಎಲ್ಯಾಷೀಬ್. ದ್ವಾರಪಾಲಕರಲ್ಲಿ: ಶಲ್ಲೂಮ್, ಟೆಲೆಮ್ ಮತ್ತು ಊರೀ. 25 ಬೇರೆ ಇಸ್ರಾಯೇಲರಲ್ಲಿ: ಪರೋಷ್ ಸಂತಾನದವರಾದ ರಮ್ಯಾಹ, ಇಜ್ಜೀಯ ಎಲ್ಲಾಜಾರ್, ಮಿಯ್ಯಾಮಿನ್, ಮಲ್ಕೀಯ, ಬೆನಾಯ; 26 ಏಲಾಮ್ ಸಂತಾನದವರಾದ ಮತ್ತನ್ಯ, ಜೆಕರ್ಯ, ಯೆಹೀಯೇಲ್, ಅಬ್ದೀ, ಯೆರೇಮೋತ್ ಮತ್ತು ಏಲೀಯ. 27 ಜತ್ತೂ ಸಂತಾನದವರಾದ ಎಲ್ಯೋವೇನೈ, ಎಲ್ಯಾಷೀಬ್, ಮತ್ತನ್ಯ, ಯೆರೇಮೋತ್, ಜಾಬಾದ ಮತ್ತು ಅಜೀಜಾ. 28 ಬೇಬೈ ಸಂತಾನದವರಾದ ಯೆಹೋಹಾನಾನ್, ಹನನ್ಯ, ಜಬ್ಬೈ ಮತ್ತು ಅತ್ಲೈ. 29 ಬಾನೀ ಸಂತಾನದವರಾದ ಮೆಷುಲ್ಲಾಮ್, ಮಲ್ಲೂಕ್, ಅದಾಯ, ಯಾಷೂಬ್, ಶೆಯಾಲ್ ಮತ್ತು ರಾಮೋತ್. 30 ಪಹತ್ ಮೋವಾಬ್, ಸಂತಾನದವರಾದ ಅದ್ನ ಕೆಲಾಲ್, ಬೆನಾಯ, ಮಾಸೇಯ ಮತ್ತನ್ಯ, ಬೆಚಲೇಲ್, ಬಿನ್ನೂಯ್ ಮತ್ತು ಮನಸ್ಸೆ. 31 ಹಾರೀಮ್ ಸಂತಾನದವರಾದ ಎಲೀಯೆಜೆರ್, ಇಷ್ಷೀಯ, ಮಲ್ಕೀಯ, ಶೆಮಾಯ, ಸಿಮೆಯೋನ್, 32 ಬೆನ್ಯಾಮೀನ್, ಮಲ್ಲೂಕ್ ಮತ್ತು ಶೆಮರ್ಯ. 33 ಹಾಷುಮ್, ಸಂತಾನದವರಾದ ಮತ್ತೆನೈ, ಮತ್ತತ್ತ, ಜಾಬಾದ, ಎಲೀಫೆಲೆಟ್, ಯೆರೇಮೈ, ಮನಸ್ಸೆ ಮತ್ತು ಶಿಮ್ಮೀ. 34 ಬಾನೀ ಸಂತಾನದರಾದ ಮಾದೈ, ಅಮ್ರಾಮ್, ಊವೇಲ್ 35 ಬೆನಾಯ, ಬೇದೆಯ, ಕೆಲೂಹು, 36 ವನ್ಯಾಹ, ಮೆರೇಮೋತ್, ಎಲ್ಯಾಷೀಬ್, 37 ಮತ್ತನ್ಯ, ಮತ್ತೆನೈ, ಯಾಸೈ, 38 ಬಾನೀ, ಬಿನ್ನೂಯ್, ಶಿಮ್ಮೀ, 39 ಶೆಲೆಮ್ಯ, ನಾತಾನ್, ಅದಾಯ, 40 ಮಕ್ನದೆಬೈ, ಶಾಷೈ, ಶಾರೈ, 41 ಅಜರೇಲ್, ಶೆಲೆಮ್ಯ, ಶೆಮರ್ಯ, 42 ಶಲ್ಲೂಮ್, ಅಮರ್ಯ ಮತ್ತು ಯೋಸೇಫ್. 43 ನೆಬೋ ಸಂತಾನದವರಾದ ಯೆಗೀಯೇಲ್, ಮತ್ತಿತ್ಯ, ಜಾಬಾದ, ಜೆಬೀನ, ಯದ್ದೈ, ಯೋವೇಲ್ ಮತ್ತು ಬೆನಾಯ. 44 ಇವರೆಲ್ಲರೂ ಅನ್ಯಕುಲದ ಸ್ತ್ರೀಯರನ್ನು ಮದುವೆ ಮಾಡಿಕೊಂಡವರು. ಕೆಲವರಿಗೆ ಆ ಸ್ತ್ರೀಯರಲ್ಲಿ ಮಕ್ಕಳು ಹುಟ್ಟಿದ್ದರು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.