Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಇಬ್ರಿಯರಿಗೆ 9 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಭೂಲೋಕದ ಮತ್ತು ಪರಲೋಕದ ಆಲಯ

1 ಹೀಗಿದ್ದರೂ ಮೊದಲನೆಯ ಒಡಂಬಡಿಕೆಗೂ ದೇವಾರಾಧನೆಯ ವಿಧಿವಿಧಾನಗಳಿದ್ದವು ಮತ್ತು ಇಹಲೋಕ ಸಂಬಂಧವಾದ ದೇವಾಲಯವಿತ್ತು.

2 ಒಂದು ದೇವದರ್ಶನ ಗುಡಾರವು ಕಟ್ಟಲ್ಪಟ್ಟು, ಅದರ ಮೊದಲನೆಯ ಭಾಗದಲ್ಲಿ ದೀಪಸ್ತಂಭ, ಮೇಜು, ಮತ್ತು ಸಮರ್ಪಿಸಿದ ರೊಟ್ಟಿ ಇವುಗಳಿದ್ದವು. ಅದನ್ನು ಪವಿತ್ರಸ್ಥಳ ಎಂದು ಕರೆಯಲಾಗುತ್ತಿತು.

3 ಮತ್ತು ಎರಡನೆಯ ಪರದೆಯ ಹಿಂದೆ ಇನ್ನೊಂದು ಕೋಣೆಗೆ, ಅತಿ ಪವಿತ್ರ ಸ್ಥಳ ಎಂದು ಕರೆಯಲಾಗುತ್ತಿತು.

4 ಅದರಲ್ಲಿ ಚಿನ್ನದ ಧೂಪಾರತಿಯು ಮತ್ತು ಚಿನ್ನದ ತಗಡಿನಿಂದ ಹೊದಿಸಿದ ಒಡಂಬಡಿಕೆಯ ಮಂಜೂಷಗಳಿದ್ದವು. ಆ ಮಂಜೂಷದೊಳಗೆ ಮನ್ನ ಇಟ್ಟಿದ್ದ ಚಿನ್ನದ ಪಾತ್ರೆಯೂ, ಆರೋನನ ಚಿಗುರಿದ ಕೋಲೂ, ಒಡಂಬಡಿಕೆಯ ಕಲ್ಲಿನ ಹಲಿಗೆಗಳೂ ಇದ್ದವು.

5 ಅದರ ಮೇಲೆ ಕೃಪಾಸನವನ್ನು ಮುಚ್ಚುವ ತೇಜಸ್ಸಿನ ಕೆರೂಬಿಗಳೂ ಇದ್ದವು. ಅದನ್ನು ಈಗ ಒಂದೊಂದಾಗಿ ವಿವರಿಸಲು ಸಾಧ್ಯವಿಲ್ಲ.

6 ಹೀಗೆ ಇವುಗಳನ್ನು ಸಿದ್ಧಮಾಡಿದ ನಂತರ ಯಾಜಕರು ನಿತ್ಯವೂ ದೇವದರ್ಶನ ಗುಡಾರದ ಮೊದಲನೆಯ ಭಾಗದೊಳಗೆ ಮಾತ್ರ ಪ್ರವೇಶಿಸಿ, ಅಲ್ಲಿ ದೇವರ ಸೇವೆಯ ವಿಧಿಗಳನ್ನು ನಿರಂತರವಾಗಿ ಮಾಡುತ್ತಿದ್ದರು.

7 ಆದರೆ ಎರಡನೆಯ ಕೋಣೆಯೊಳಗೆ ಮಹಾಯಾಜಕನೊಬ್ಬನೇ ವರ್ಷಕ್ಕೊಮ್ಮೆ ಪ್ರವೇಶಿಸುತ್ತಿದ್ದನು. ತನ್ನೊಡನೆ ಬಲಿರಕ್ತವನ್ನು ತೆಗೆದುಕೊಳ್ಳದೆ ಹೋಗುತ್ತಿರಲಿಲ್ಲ. ಆ ರಕ್ತವನ್ನು ತನ್ನಗಾಗಿಯೂ ಮತ್ತು ಜನರ ಉದ್ದೇಶಪೂರ್ವಕವಲ್ಲದ ಅಪರಾಧಗಳಿಗೋಸ್ಕರವೂ ಸಮರ್ಪಿಸಬೇಕಾಗಿತ್ತು.

8 ಈ ಗುಡಾರದ ಮೊದಲನೆಯ ಭಾಗವು ಇನ್ನೂ ಇರುವ ತನಕ ಅತಿ ಪರಿಶುದ್ಧ ಸ್ಥಳಕ್ಕೆ ಹೋಗುವ ಮಾರ್ಗವು ಇದುವರೆಗೂ ಪ್ರಕಟವಾಗಲಿಲ್ಲ ಎಂಬುದನ್ನು ಪವಿತ್ರಾತ್ಮನು ವ್ಯಕ್ತಪಡಿಸುತ್ತಾನೆ.

9 ಇದು ಈಗಿನ ಕಾಲಕ್ಕೆ ಒಂದು ನಿದರ್ಶನವಾಗಿದೆ. ಅದೇನೆಂದರೆ ಅದರ ಕ್ರಮದ ಮೇರೆಗೆ ಸಮರ್ಪಣೆಯಾಗುವ ಕಾಣಿಕೆಗಳೂ ಮತ್ತು ಯಜ್ಞಗಳೂ ಆರಾಧನೆ ಮಾಡುವವರ ಮನಸ್ಸಾಕ್ಷಿಯನ್ನು ಪರಿಪೂರ್ಣಗೊಳಿಸಲು ಆಗಲಿಲ್ಲ.

10 ಅವು ಅನ್ನಪಾನಗಳೂ ಮತ್ತು ವಿವಿಧ ಆಚರಣೆಗಳಿಗೂ ಒಳಪಟ್ಟಿರುವ ಸ್ನಾನಗಳು ಸಹಿತವಾಗಿ ದೇಹಕ್ಕೆ ಮಾತ್ರ ಸಂಬಂಧಪಟ್ಟ ನಿಯಮಗಳಾಗಿದ್ದು. ಇವು ಸುಧಾರಣೆಯ ಕಾಲದವರೆಗೆ ಮಾತ್ರ ನೇಮಕವಾಗಿದ್ದವು.

11 ಕ್ರಿಸ್ತನಾದರೋ ಈಗ ದೊರೆತಿರುವ ಶುಭಗಳ ಮಹಾಯಾಜಕನಾಗಿ ಬಂದು, ಮನುಷ್ಯರ ಕೈಯಿಂದ ಕಟ್ಟಲ್ಪಡದಂಥದೂ, ಇಹಲೋಕದ ಸೃಷ್ಟಿಗೆ ಸಂಬಂಧಪಡದಂಥದೂ, ಶ್ರೇಷ್ಠವಾದುದೂ, ಬಹು ಪರಿಪೂರ್ಣವಾದುದೂ ಆಗಿರುವ ಗುಡಾರದಲ್ಲಿ ಸೇವೆ ಮಾಡುವವನಾಗಿ,

12 ಹೋತಗಳ ಮತ್ತು ಹೋರಿಕರುಗಳ ರಕ್ತದ ಮೂಲಕವಲ್ಲ ತನ್ನ ಸ್ವಂತ ರಕ್ತದ ಮೂಲಕ ಒಂದೇ ಸಾರಿ ಎಲ್ಲರಿಗೋಸ್ಕರ ಪರಿಶುದ್ಧ ಸ್ಥಳದೊಳಗೆ ಪ್ರವೇಶಿಸಿ ನಿತ್ಯ ವಿಮೋಚನೆಯನ್ನು ಸಾಧಿಸಿದನು.

13 ಹೋತ ಹೋರಿಗಳ ರಕ್ತವೂ ಅಶುದ್ಧರಾದವರ ಮೇಲೆ ಚಿಮುಕಿಸುವ ಕಡಸಿನ ಬೂದಿಯೂ ಶರೀರವನ್ನು ಶುದ್ಧೀಕರಿಸುವುದಾದರೆ,

14 ನಿತ್ಯಾತ್ಮನಿಂದ ತನ್ನನ್ನು ತಾನೇ ನಿರ್ದೋಷಿಯನ್ನಾಗಿ, ದೇವರಿಗೆ ಸಮರ್ಪಿಸಿಕೊಂಡ ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ, ನಮ್ಮನ್ನು ನಿರ್ಜೀವ ಕ್ರಿಯೆಗಳಿಂದ ಬಿಡಿಸಿ, ನಾವು ಜೀವವುಳ್ಳ ದೇವರನ್ನು ಆರಾಧಿಸುವಂತೆ ನಮ್ಮ ಮನಸ್ಸಾಕ್ಷಿಯನ್ನು ಶುದ್ಧೀಕರಿಸುತ್ತದಲ್ಲವೇ?

15 ದೇವರಿಂದ ಕರೆಯಲ್ಪಟ್ಟ ಜನರು, ದೇವರ ವಾಗ್ದಾನವಾದ ನಿತ್ಯಬಾಧ್ಯತೆಯನ್ನು ಹೊಂದಿಕೊಳ್ಳಲೆಂದು ಕ್ರಿಸ್ತನು ಈ ಹೊಸ ಒಡಂಬಡಿಕೆಗೆ ಮಧ್ಯಸ್ಥನಾದನು. ಏಕೆಂದರೆ ಮೊದಲನೆ ಒಡಂಬಡಿಕೆಯ ಕಾಲದಲ್ಲಿ ಮಾಡಿದ ಪಾಪಗಳಿಂದ ಅವರನ್ನು ಬಿಡುಗಡೆಗೊಳಿಸುವುದಕ್ಕಾಗಿ ಕ್ರಿಸ್ತನು ಮರಣ ಹೊಂದಿದನು.

16 ಮರಣ ಶಾಸನವು ಇರುವಲ್ಲಿ ಆದನ್ನು ಬರೆಸಿದ ವ್ಯಕ್ತಿಯ ಸಾವನ್ನು ಸಾಬೀತಪಡಿಸುವುದು ಅಗತ್ಯ.

17 ಮರಣ ಶಾಸನವು ವ್ಯಕ್ತಿಯ ಮರಣವಾದ ಮೇಲೆ ಕಾರ್ಯರೂಪಕ್ಕೆ ಬರುತ್ತದೆಯೇ ಹೊರತು ಬರೆದವನು ಜೀವದಿಂದಿರುವಾಗ ಎಂದಿಗೂ ಜಾರಿಗೆ ಬರುವುದಿಲ್ಲ.

18 ಹೀಗಿರಲಾಗಿ ಮೊದಲನೆಯ ಒಡಂಬಡಿಕೆಯು ಸಹ ರಕ್ತವಿಲ್ಲದೆ ಸ್ಥಾಪಿತವಾಗಲಿಲ್ಲ.

19 ಮೋಶೆಯು ದೇವರ ಪ್ರತಿಯೊಂದು ಆಜ್ಞೆಯನ್ನು ಧರ್ಮಶಾಸ್ತ್ರದ ಪ್ರಕಾರ ಜನರೆಲ್ಲರಿಗೆ ತಿಳಿಸಿದ ಮೇಲೆ, ಅವನು ನೀರು, ಕೆಂಪು ಉಣ್ಣೆ, ಹಿಸ್ಸೋಪುಕಡ್ಡಿ ಇವುಗಳೊಂದಿಗೆ ಹೋರಿಕರುಗಳ ಮತ್ತು ಹೋತಗಳ ರಕ್ತವನ್ನು ತೆಗೆದುಕೊಂಡು ಸುರುಳಿಗಳ ಮೇಲೆಯೂ ಎಲ್ಲಾ ಜನರ ಮೇಲೆಯೂ ಪ್ರೋಕ್ಷಿಸಿದನು.

20 “ಇದು ದೇವರು ನಿಮಗೋಸ್ಕರ ಆಜ್ಞಾಪಿಸಿದ ಒಡಂಬಡಿಕೆಯ ರಕ್ತವಾಗಿದೆ” ಎಂದು ಹೇಳಿದನು.

21 ಇದಲ್ಲದೆ ಗುಡಾರದ ಮೇಲೆಯೂ ದೇವರ ಸೇವೆಗೆ ಬೇಕಾಗಿರುವ ಎಲ್ಲಾ ಪಾತ್ರೆಗಳ ಮೇಲೆಯೂ ಅದೇ ರೀತಿಯಾಗಿ ರಕ್ತವನ್ನು ಪ್ರೋಕ್ಷಿಸಿದನು.

22 ಧರ್ಮಶಾಸ್ತ್ರದ ಪ್ರಕಾರ ಹೆಚ್ಚು ಕಡಿಮೆ ಎಲ್ಲಾ ವಸ್ತುಗಳು ರಕ್ತದಿಂದಲೇ ಶುದ್ಧೀಕರಿಸಲ್ಪಡುವವು. ರಕ್ತಧಾರೆ ಇಲ್ಲದೆ ಪಾಪ ಕ್ಷಮಾಪಣೆಯು ಉಂಟಾಗುವುದಿಲ್ಲ.


ಯೇಸುವಿನ ಯಜ್ಞ ಪಾಪವನ್ನು ನಿವಾರಿಸುತ್ತದೆ

23 ಆದ್ದರಿಂದ ಪರಲೋಕದಲ್ಲಿರುವ ವಸ್ತುಗಳ ಛಾಯೆಯಂತಿರುವ ವಸ್ತುಗಳ ಶುದ್ಧೀಕರಣಕ್ಕಾಗಿ ಇಂಥಾ ಯಜ್ಞಗಳು ಅವಶ್ಯವಾದರೂ, ಪರಲೋಕದವುಗಳನ್ನು ಶುದ್ಧೀಕರಿಸಲು ಇವುಗಳಿಗಿಂತ ಉತ್ತಮವಾದ ಯಜ್ಞಗಳು ಅವಶ್ಯ.

24 ಯಾಕೆಂದರೆ ಕ್ರಿಸ್ತನು ನಿಜವಾದ ದೇವಾಲಯಕ್ಕೆ ಪ್ರತಿಬಿಂಬವಾಗಿ ಕೈಯಿಂದ ಕಟ್ಟಲ್ಪಟ್ಟ ಪವಿತ್ರ ಸ್ಥಳವನ್ನು ಪ್ರವೇಶಿಸದೆ, ದೇವರ ಸನ್ನಿಧಿಯಲ್ಲಿ ನಮಗೋಸ್ಕರ ಈಗ ಪ್ರತ್ಯಕ್ಷನಾಗಲು ಪರಲೋಕದೊಳಗೆ ಪ್ರವೇಶಿಸಿದನು.

25 ಇದಲ್ಲದೆ, ಮಹಾಯಾಜಕನು ವರ್ಷ ವರ್ಷವೂ ಪ್ರಾಣಿಗಳ ರಕ್ತವನ್ನು ತೆಗೆದುಕೊಂಡು ಅತಿ ಪರಿಶುದ್ಧ ಸ್ಥಳದಲ್ಲಿ ಪ್ರವೇಶಿಸುವ ಪ್ರಕಾರ, ಕ್ರಿಸ್ತನು ತನ್ನನ್ನು ಅನೇಕ ಸಾರಿ ಸಮರ್ಪಿಸುವುದಕ್ಕೆ ಅಲ್ಲಿಗೆ ಪ್ರವೇಶಿಸಲಿಲ್ಲ.

26 ಹಾಗೆ ಸಮರ್ಪಿಸಬೇಕಾಗಿದ್ದ ಪಕ್ಷದಲ್ಲಿ ಆತನು ಲೋಕಾದಿಯಿಂದ ಎಷ್ಟೋ ಸಾರಿ ಬಾಧೆಪಡಬೇಕಾಗಿತ್ತು. ಆದರೆ ಒಂದೇ ಸಾರಿ, ಯುಗಗಳ ಸಮಾಪ್ತಿಯವರೆಗೂ, ಆತನು ಪಾಪ ನಿವಾರಣೆ ಮಾಡುವ ಉದ್ದೇಶದಿಂದ ತನ್ನನ್ನು ತಾನೇ ಯಜ್ಞಮಾಡಿಕೊಳ್ಳುವವನಾಗಿ ಪ್ರತ್ಯಕ್ಷನಾದನು.

27 ಒಂದೇ ಸಾರಿ ಸಾಯುವುದೂ ಆ ಮೇಲೆ ನ್ಯಾಯತೀರ್ಪು ಮನುಷ್ಯರಿಗೆ ಹೇಗೆ ನೇಮಕವಾಗಿದೆಯೋ,

28 ಹಾಗೆಯೇ ಕ್ರಿಸ್ತನು ಸಹ ಬಹು ಜನರ ಪಾಪಗಳನ್ನು ಹೊತ್ತು ಕೊಳ್ಳುವುದಕ್ಕೊಸ್ಕರ ಒಂದೇ ಸಾರಿ ಸಮರ್ಪಿತನಾದನು. ಆತನು ಎರಡನೆಯ ಸಾರಿ ಪ್ರತ್ಯಕ್ಷನಾಗುವಂಥದ್ದು ಪಾಪವನ್ನು ಪರಿಹರಿಸುವುದಕ್ಕಾಗಿಯಲ್ಲ ತನ್ನನ್ನು ನಿರೀಕ್ಷಿಸಿಕೊಂಡಿರುವವರಿಗೆ ರಕ್ಷಣೆಯನ್ನು ಉಂಟುಮಾಡುವುದಕ್ಕಾಗಿಯೇ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು