ಇಬ್ರಿಯರಿಗೆ 4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಹೀಗಿರಲಾಗಿ, ದೇವರ ವಿಶ್ರಾಂತಿಯಲ್ಲಿ ಸೇರಬಹುದೆಂಬ ವಾಗ್ದಾನ ಇನ್ನೂ ಇರುವುದರಿಂದ ನಿಮ್ಮಲ್ಲಿ ಯಾವನಾದರೂ ಅದರಿಂದ ತಪ್ಪಿಹೋಗದಂತೆ ನಾವು ಭಯಭಕ್ತಿಯಿಂದ ಇರೋಣ. 2 ಇಸ್ರಾಯೇಲ್ಯರಿಗೆ ದೇವರ ವಿಶ್ರಾಂತಿಯ ಶುಭವರ್ತಮಾನವು ಸಾರೋಣವಾದಂತೆಯೇ ನಮಗೂ ಸಾರೋಣವಾಯಿತು. ಆದರೆ ಆ ಕಾಲದಲ್ಲಿ ಕೇಳಿದವರ ನಂಬಿಕೆಯೊಂದಿಗೆ ಇವರು ಪಾಲುಗಾರರಾಗದ ಕಾರಣ ಆ ಸಂದೇಶದಿಂದ ಅವರಿಗೆ ಪ್ರಯೋಜನವಾಗಲಿಲ್ಲ. 3 ಈಗ ನಂಬುವವರಾದ ನಾವುಗಳೇ ಆ ವಿಶ್ರಾಂತಿಯಲ್ಲಿ ಸೇರುವವರು. ಏಕೆಂದರೆ ಲೋಕಾದಿಯಿಂದ ತನ್ನ ಸೃಷ್ಟಿಯ ಕಾರ್ಯಗಳು ಮುಗಿದುಹೋದಾಗ್ಯೂ “ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ ಎಂದು ನಾನು ಕೋಪದಿಂದ ಪ್ರಮಾಣ ಮಾಡಿದೆನು” ಎಂದು ಹೇಳಿದೆಯಲ್ಲಾ. 4 ಎಲ್ಲಿಯೋ ಒಂದು ಕಡೆ ಏಳನೆಯ ದಿನವನ್ನು ಕುರಿತಾಗಿ, “ದೇವರು ತನ್ನ ಕಾರ್ಯಗಳನ್ನೆಲ್ಲಾ ಮುಗಿಸಿಬಿಟ್ಟು, ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನೆಂದು” ಬರೆದದೆ. 5 “ಇವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲವೆಂದು” ಎಂದು ಭಾಗದಲ್ಲಿ ಆತನು ಪುನಃ ಹೇಳಿದ್ದಾನೆ. 6 ಆದ್ದರಿಂದ, ಕೆಲವರು ದೇವರ ವಿಶ್ರಾಂತಿಯಲ್ಲಿ ಸೇರುವುದಕ್ಕೆ ದೇವರು ಇನ್ನೂ ಅನುಮತಿಸುವವನಾಗಿದ್ದಾನೆ. ಮೊದಲು ಶುಭವರ್ತಮಾನವನ್ನು ಕೇಳಿದವರು ಅವಿಧೇಯರಾದ ಕಾರಣ ಅದರಲ್ಲಿ ಸೇರದೆಹೋದರು. 7 ಪುನಃ ಬಹುಕಾಲದ ನಂತರ ಆತನು ದಾವೀದನ ಮೂಲಕ ‘ಈ ಹೊತ್ತೇ’ ಎಂದು ಬೇರೊಂದು ದಿನವನ್ನು ಗೊತ್ತುಮಾಡಿದ್ದಾನೆ. ಹೇಗೆಂದರೆ, “ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಡುವುದಾದರೆ, ನಿಮ್ಮ ಹೃದಯಗಳನ್ನು ಕಠಿಣ ಮಾಡಿಕೊಳ್ಳಬೇಡಿರಿ!” ಎಂದು ಹೇಳುತ್ತಾನಷ್ಟೆ. 8 ಯೆಹೋಶುವನು ಅವರನ್ನು ಆ ವಿಶ್ರಾಂತಿಯಲ್ಲಿ ಸೇರಿಸಿದ್ದಾದರೆ, ಬೇರೊಂದು ದಿನವನ್ನು ಕುರಿತು ದೇವರು ಹೇಳುತ್ತಿರಲಿಲ್ಲವಲ್ಲಾ. 9 ಆದಕಾರಣ ದೇವರ ಜನರಿಗೆ ಸಬ್ಬತೆಂಬ ವಿಶ್ರಾಂತಿಯು ಇನ್ನೂ ಉಂಟು. 10 ಹೇಗೆಂದರೆ ದೇವರು ತನ್ನ ಕೆಲಸಗಳನ್ನು ಮುಗಿಸಿ ಹೇಗೆ ವಿಶ್ರಮಿಸಿಕೊಂಡನೋ ಹಾಗೆಯೇ ಆತನ ವಿಶ್ರಾಂತಿಯಲ್ಲಿ ಸೇರಿರುವವನು ಸಹ ತನ್ನ ಕೆಲಸಗಳನ್ನು ಮುಗಿಸಿ ವಿಶ್ರಮಿಸಿಕೊಂಡಿದ್ದಾನೆ. 11 ಆದ್ದರಿಂದ ನಾವು ಈ ವಿಶ್ರಾಂತಿಯಲ್ಲಿ ಸೇರುವುದಕ್ಕೆ ಪ್ರಯತ್ನಿಸೋಣ. ನಮ್ಮಲ್ಲಿ ಒಬ್ಬರಾದರೂ ಅವರಂತೆ ಅವಿಧೇಯರಾಗಿ ಬಿದ್ದುಹೋಗದೆ ಇರೋಣ. 12 ಏಕೆಂದರೆ ದೇವರ ವಾಕ್ಯವು ಸಜೀವವಾದದ್ದು, ಸಕ್ರಿಯವಾದದ್ದು ಮತ್ತು ಯಾವ ಇಬ್ಬಾಯಿ ಕತ್ತಿಗಿಂತಲೂ ಹರಿತವಾದದ್ದು ಆಗಿದ್ದು, ಪ್ರಾಣ ಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದಾಗಿದ್ದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದೂ ಆಗಿದೆ. 13 ಆತನ ದೃಷ್ಟಿಗೆ ಮರೆಯಾಗಿರುವ ಒಂದು ಸೃಷ್ಟಿಯೂ ಇಲ್ಲ. ಆತನ ಕಣ್ಣಿಗೆ ಮರೆಯಾದದ್ದು ಒಂದೂ ಇಲ್ಲ ಎಲ್ಲವೂ ನಗ್ನವಾಗಿಯೂ ಬಟ್ಟಬಯಲಾಗಿಯೂ ಇದೆ. ಅಂಥವನಿಗೆ ನಾವು ಲೆಕ್ಕಕೊಡಬೇಕಾಗಿದೆ. ಯೇಸು ಶ್ರೇಷ್ಠನಾದ ಮಹಾಯಾಜಕನು 14 ಆಕಾಶಗಳನ್ನು ದಾಟಿಹೋದ ದೇವಕುಮಾರನಾದ ಯೇಸುವೆಂಬ ಶ್ರೇಷ್ಠ ಮಹಾಯಾಜಕನು ನಮಗಿದ್ದಾನೆ. ಆದುದರಿಂದ ನಮಗಿರುವ ನಂಬಿಕೆಯನ್ನು ದೃಢವಾಗಿ ಹಿಡಿಯೋಣ. 15 ಏಕೆಂದರೆ ನಮಗಿರುವ ಮಹಾಯಾಜಕನು ನಮ್ಮ ಬಲಹೀನತೆಗಳಲ್ಲಿ ಅನುಕಂಪ ತೋರಿಸುವವನಾಗಿದ್ದಾನೆ. ಆತನು ಸರ್ವ ವಿಷಯಗಳಲ್ಲಿಯೂ ನಮ್ಮ ಹಾಗೆ ಶೋಧನೆಗೆ ಗುರಿಯಾದವನು, ಪಾಪ ಮಾತ್ರ ಮಾಡಲಿಲ್ಲವಷ್ಟೇ. 16 ಆದುದರಿಂದ ನಾವು ತಕ್ಕ ಸಮಯದಲ್ಲಿ ಕರುಣೆಯನ್ನು ಹೊಂದುವಂತೆಯೂ ಆತನ ಕೃಪೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಆತನ ಕೃಪಾಸನದ ಮುಂದೆ ಬರೋಣ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.