Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಇಬ್ರಿಯರಿಗೆ 1 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ದೇವರು ತನ್ನ ಮಗನ ಮೂಲಕ ಮಾತನಾಡಿದ್ದು

1 ದೇವರು ಪುರಾತನ ಕಾಲದಲ್ಲಿ ನಮ್ಮ ಪೂರ್ವಿಕರ ಸಂಗಡ ಪ್ರವಾದಿಗಳ ಮುಖಾಂತರ ಹಲವಾರು ವಿಧದಲ್ಲಿ, ಅನೇಕಸಾರಿ ಮಾತನಾಡಿದ್ದಾನೆ.

2 ಆದರೆ ಈ ಅಂತ್ಯ ದಿನಗಳಲ್ಲಿ ನಮ್ಮ ಸಂಗಡ ಮಗನ ಮುಖಾಂತರ ಮಾತನಾಡಿದ್ದಾನೆ. ಆತನನ್ನು ಎಲ್ಲದಕ್ಕೂ ಬಾಧ್ಯಸ್ಥನನ್ನಾಗಿ ನೇಮಿಸಿದನು ಮತ್ತು ಆತನ ಮೂಲಕವೇ ಇಡೀ ವಿಶ್ವವನ್ನು ಉಂಟುಮಾಡಿದನು.

3 ಈತನು ದೇವರ ಮಹಿಮೆಯ ಪ್ರಕಾಶವೂ, ಆತನ ವ್ಯಕ್ತಿತ್ವದ ಪ್ರತಿರೂಪವೂ, ತನ್ನ ಶಕ್ತಿಯುಳ್ಳ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ತಾನೇ ನಮ್ಮ ಪಾಪಗಳನ್ನು ಶುದ್ಧಿಮಾಡಿ, ಉನ್ನತದಲ್ಲಿರುವ ಮಹೋನ್ನತನಾದ ದೇವರ ಬಲಗಡೆಯಲ್ಲಿ ಕುಳಿತುಕೊಂಡನು.


ಯೇಸು ದೇವರ ಮಗನಾಗಿದ್ದು ದೇವದೂತರಿಗಿಂತಲೂ ಶ್ರೇಷ್ಠನು

4 ಈತನು ದೇವದೂತರಿಗಿಂತಲೂ ಉನ್ನತನಾಗಿದ್ದು. ಅವರಿಗಿಂತ ಅತಿ ಶ್ರೇಷ್ಠವಾದ ಹೆಸರನ್ನು ಬಾಧ್ಯವಾಗಿ ಹೊಂದಿದನು.

5 ಹೇಗೆಂದರೆ, ದೇವರು ತನ್ನ ದೇವದೂತರೊಳಗೆ ಯಾರಿಗಾದರೂ ಎಂದಾದರೂ ಈ ರೀತಿಯಾಗಿ ಹೇಳಿದ್ದುಂಟೋ?, “ನೀನು ನನ್ನ ಮಗನು, ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ.” “ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು.”

6 ಇದಲ್ಲದೆ ದೇವರು ತನ್ನ ಚೊಚ್ಚಲು ಮಗನನ್ನು ಭೂಲೋಕಕ್ಕೆ ತಿರುಗಿ ಬರಮಾಡುವಾಗ “ದೇವದೂತರೆಲ್ಲರೂ ಆತನನ್ನು ಆರಾಧಿಸಬೇಕು” ಎಂದು ಆಜ್ಞಾಪಿಸಿದ್ದಾನೆ.

7 ದೇವದೂತರ ವಿಷಯದಲ್ಲಿ, “ದೇವರು ತನ್ನ ದೂತರನ್ನು ಗಾಳಿಯನ್ನಾಗಿಯೂ, ತನ್ನ ಸೇವಕರನ್ನು ಅಗ್ನಿಜ್ವಾಲೆಯನ್ನಾಗಿಯೂ ಮಾಡುತ್ತಾನೆ” ಎಂದು ಹೇಳಿದ್ದಾನೆ.

8 ಆದರೆ ಮಗನ ವಿಷಯದಲ್ಲಿಯಾದರೋ, “ದೇವರೇ ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು. ನೀತಿದಂಡವೇ ನಿನ್ನ ರಾಜದಂಡವಾಗಿದೆ.

9 ನೀನು ನೀತಿಯನ್ನು ಪ್ರೀತಿಸಿದ್ದೀ ಮತ್ತು ಅನ್ಯಾಯವನ್ನು ದ್ವೇಷಿಸಿದ್ದೀ. ಆದುದರಿಂದ ದೇವರು, ನಿನ್ನ ದೇವರೇ, ನಿನ್ನನ್ನು ನಿನ್ನ ಜೊತೆಗಾರರಿಗಿಂತ ಅಧಿಕವಾಗಿ ಪರಮಾನಂದ ತೈಲದಿಂದ ಅಭಿಷೇಕಿಸಿದ್ದಾನೆ” ಎಂದು ಹೇಳಿದ್ದಾನೆ.

10 “ಕರ್ತನೇ ಆದಿಯಲ್ಲಿ ನೀನು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀ. ಆಕಾಶವು ನಿನ್ನ ಕೈಕೆಲಸವಾಗಿದೆ,

11 ಅವು ನಾಶವಾಗುವವು. ಆದರೆ ನೀನು ಶಾಶ್ವತವಾಗಿರುತ್ತೀ. ಅವೆಲ್ಲವೂ ವಸ್ತ್ರದಂತೆ ಹಳೆಯದಾಗುವವು.

12 ಅವುಗಳನ್ನು ಮೇಲಂಗಿಯಂತೆ ಮಡಿಸುತ್ತೀ ಮತ್ತು ಅವು ವಸ್ತ್ರದಂತೆ ಬದಲಾಗುವವು. ನೀನಾದರೂ ಅನನ್ಯನು. ನಿನ್ನ ವರ್ಷಗಳಿಗೆ ಅಂತ್ಯವೇ ಇಲ್ಲ” ಎಂತಲೂ ಹೇಳುತ್ತಾನೆ.

13 ಆದರೆ ಯಾವ ದೇವದೂತನಿಗಾದರೂ ದೇವರು, “ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು” ಎಂಬುದಾಗಿ ಎಂದಾದರೂ ಹೇಳಿದ್ದಾನೋ?

14 ಈ ಎಲ್ಲಾ ದೇವದೂತರು ರಕ್ಷಣೆಯನ್ನು ಬಾಧ್ಯವಾಗಿ ಹೊಂದಬೇಕಾಗಿರುವವರ ಸೇವೆಗೋಸ್ಕರ ಕಳುಹಿಸಲ್ಪಟ್ಟ ಸೇವಕಾತ್ಮಗಳಲ್ಲವೋ?

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು