ಆಮೋಸ 8 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಮಾಗಿದ ಹಣ್ಣಿನ ದರ್ಶನ 1 ಕರ್ತನಾದ ಯೆಹೋವನು ಇದನ್ನು ನನಗೆ ತೋರಿಸಿದನು. ಇಗೋ, ಮಾಗಿದ ಹಣ್ಣಿನ ಪುಟ್ಟಿಯನ್ನು ಕಂಡೆನು! 2 ಆತನು ನನಗೆ, “ಆಮೋಸನೇ, ನಿನ್ನ ಕಣ್ಣಿಗೆ ಕಾಣಿಸುವುದೇನು?” ಎಂದು ಕೇಳಲು, ನಾನು ಅದಕ್ಕೆ, “ಮಾಗಿದ ಹಣ್ಣಿನ ಪುಟ್ಟಿ” ಎಂದೆನು. ಆಗ ಯೆಹೋವನು ನನಗೆ ಹೀಗೆ ಹೇಳಿದನು, “ಇಸ್ರಾಯೇಲೆಂಬ ನನ್ನ ಜನರಿಗೆ ಕಡೆಗಾಲವು ಮಾಗುತ್ತಾ ಬಂದಿದೆ. ಇನ್ನು ಮೇಲೆ ನಾನು ಅವರನ್ನು ಉಳಿಸುವುದಿಲ್ಲ. 3 ಆ ದಿನದಲ್ಲಿ ದೇವಾಲಯದ ಹಾಡುಗಳು ಕಿರಿಚಾಟವಾಗುವವು” ಕರ್ತನಾದ ಯೆಹೋವನು ಹೀಗೆ ನುಡಿಯುತ್ತಾನೆ, “ಆಗ ಹೆಣಗಳು ಹೆಚ್ಚುವವು, ಅವುಗಳನ್ನು ಎಲ್ಲಾ ಸ್ಥಳಗಳಲ್ಲಿ ಸದ್ದುಗದ್ದಲವಿಲ್ಲದೆ ಬಿಸಾಡಿಬಿಡುವರು!” ಧನವಂತರ ಹಣದಾಸೆ ಮುಂದಿನ ದೌರ್ಭಾಗ್ಯ 4 “ಎಷ್ಟು ಹೊತ್ತಿಗೆ ಅಮಾವಾಸ್ಯೆಯು ತೀರುವುದು? ಧಾನ್ಯವನ್ನು ಮಾರಬೇಕಲ್ಲಾ; ಸಬ್ಬತ್ತು ಇನ್ನೆಷ್ಟು ಹೊತ್ತು ಇರುವುದು? ಗೋದಿಯನ್ನು ಅಂಗಡಿಯಲ್ಲಿ ಇಡಬೇಕಲ್ಲಾ; ಕೊಳಗವನ್ನು ಕಿರಿದುಮಾಡೋಣ; ಬಡವರನ್ನು ನುಂಗುವವರೇ, ತೊಲವನ್ನು ಹೆಚ್ಚಿಸೋಣ; ಸುಳ್ಳು ತಕ್ಕಡಿಯಿಂದ ಮೋಸಮಾಡೋಣ; ದೇಶದ ಬಡವರನ್ನು ಮುಗಿಸಬೇಕೆಂದಿರುವವರೇ ಇದನ್ನು ಕೇಳಿರಿ. 5 ಬಡವರನ್ನು ಬೆಳ್ಳಿಗೂ, ದಿಕ್ಕಿಲ್ಲದವರನ್ನು ಒಂದು ಜೊತೆ ಕೆರಗಳ ಜೋಡಿಗೂ ಕೊಂಡುಕೊಳ್ಳೋಣ; ಗೋದಿಯ ನುಚ್ಚುನ್ನು ಮಾರಿಬಿಡೋಣ” ಎಂದು ಹೇಳುತ್ತೀರಿ ಅಲ್ಲವೇ? 6 ದಿಕ್ಕಿಲ್ಲದವರನ್ನು ತುಳಿದು ಬಿಡುವವರೇ, ದೇಶದ ಬಡವರನ್ನು ಮುಗಿಸಬೇಕೆಂದಿರುವವರೇ, ಇದನ್ನು ಕೇಳಿರಿ! 7 ಯೆಹೋವನು ಯಾಕೋಬಿನ ಮಹಿಮೆಯ ಮೇಲೆ ಹೀಗೆ ಆಣೆಯಿಟ್ಟಿದ್ದಾನೆ, “ಖಂಡಿತವಾಗಿ ಅವರ ಕೃತ್ಯಗಳಲ್ಲಿ ಯಾವುದನ್ನೂ ಎಂದಿಗೂ ಮರೆತುಬಿಡುವುದಿಲ್ಲ” 8 ಆ ಕೃತ್ಯಗಳಿಗೆ ದೇಶವು ನಡುಗಬೇಕಾಗುವುದಲ್ಲವೇ, ಅದರ ನಿವಾಸಿಗಳೆಲ್ಲರೂ ದುಃಖಿಸುವರಲ್ಲವೇ? ದೇಶವೆಲ್ಲಾ ನೈಲ್ ನದಿಯಂತೆ ಉಬ್ಬಿ ಅಲ್ಲಕಲ್ಲೋಲವಾಗುವುದು, ಐಗುಪ್ತದ ನದಿಯ ಹಾಗೆಯೇ, ಇಳಿದು ಹೋಗುವುದು. 9 ಆ ದಿನದಲ್ಲಿ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಆ ದಿನದಲ್ಲಿ ಸೂರ್ಯನನ್ನು ಮಧ್ಯಾಹ್ನಕ್ಕೆ ಮುಣುಗಿಸುವೆನು, ಭೂಮಿಯನ್ನು ಹಗಲಿನಲ್ಲೇ ಕತ್ತಲು ಮಾಡುವೆನು. 10 ನಿಮ್ಮ ಉತ್ಸವಗಳನ್ನು ದುಃಖಕ್ಕೆ ಮಾರ್ಪಡಿಸುವೆನು ಮತ್ತು ನಿಮ್ಮ ಹರ್ಷಗೀತೆಗಳನ್ನೆಲ್ಲಾ ಶೋಕಗೀತೆಗೆ ತಿರುಗಿಸುವೆನು. ಎಲ್ಲರೂ ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಂಡು, ತಲೆಬೋಳಿಸಿಕೊಳ್ಳುವಂತೆ ಮಾಡುವೆನು. ನಿಮ್ಮ ಪ್ರಲಾಪವು ಏಕಪುತ್ರಶೋಕಕ್ಕೆ ಸಮಾನವಾಗುವುದು, ಅದು ಆದ ಮೇಲೆಯೂ ಶೋಕವು ಇದ್ದೇ ಇರುವುದು. 11 ಇಗೋ, ಆ ದಿನಗಳು ಬರುವವು.” ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ದೇಶಕ್ಕೆ ಕ್ಷಾಮವನ್ನು ಉಂಟುಮಾಡುವ ದಿನಗಳು ಬರುತ್ತವೆ, ಅದು ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವಲ್ಲ, ಯೆಹೋವನ ವಾಕ್ಯಗಳ ಕ್ಷಾಮವೇ. 12 ಸಮುದ್ರದಿಂದ ಸಮುದ್ರಕ್ಕೆ; ಉತ್ತರದಿಂದ ಪೂರ್ವಕ್ಕೂ ಬಳಲುತ್ತಾ ಹೋಗುವರು ಯೆಹೋವನ ವಾಕ್ಯವನ್ನು ಹುಡುಕುತ್ತಾ ಓಡಾಡುವರು, ಆದರೂ ಅದು ಸಿಕ್ಕುವುದಿಲ್ಲ. 13 ಆ ದಿನದಲ್ಲಿ ಸುಂದರವಾದ ಯುವತಿಯರೂ ಮತ್ತು ಯೌವನಸ್ಥರು ಸಹ ಬಾಯಾರಿಕೆಯಿಂದ ಮೂರ್ಛೆ ಹೋಗುವರು. 14 ‘ದಾನೇ, ನಿನ್ನ ದೇವರ ಜೀವದಾಣೆ’ ಎಂದೂ ‘ಮತ್ತು ಬೇರ್ಷೆಬದ ಮಾರ್ಗದ ಜೀವದಾಣೆ’” ಎಂದೂ ಹೇಳುವರು. ಅವರು ಸಮಾರ್ಯದ ಪಾಪದ ಮೇಲೆ ಪ್ರಮಾಣಮಾಡಿಕೊಂಡು, ಅವರು ಬಿದ್ದು ಮತ್ತೆ ಮೇಲೆ ಏಳಲಾರರು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.