Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಆಮೋಸ 4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಸಮಾರ್ಯದ ಸ್ತ್ರೀಯರ ಖಂಡನೆ

1 ಸಮಾರ್ಯ ಬೆಟ್ಟದಲ್ಲಿನ, ಬಾಷಾನಿನ ಕೊಬ್ಬಿದ ಹಸುಗಳಂತಿರುವ ಸ್ತ್ರೀಯರೇ, ಬಡವರನ್ನು ಹಿಂಸಿಸಿ, ದಿಕ್ಕಿಲ್ಲದವರನ್ನು ಜಜ್ಜಿ, ನೀವು ನಿಮ್ಮ ಪತಿಗಳಿಗೆ, “ಪಾನಗಳನ್ನು ತರಿಸಿ, ಕುಡಿಯೋಣ” ಎಂದು ಹೇಳುವವರೇ, ಈ ಮಾತನ್ನು ಕೇಳಿರಿ.

2 ಕರ್ತನಾದ ಯೆಹೋವನು ತನ್ನ ಪರಿಶುದ್ಧತ್ವದ ಮೇಲೆ ಆಣೆಯಿಟ್ಟು: “ಇಗೋ ನಿಮ್ಮನ್ನು ಕೊಂಡಿಗಳಿಂದಲೂ, ನಿಮ್ಮಲ್ಲಿ ಉಳಿದವರನ್ನು ಮೀನುಗಾಳಗಳಿಂದಲೂ, ಎಳೆದುಕೊಂಡು ಹೋಗುವ ದಿನಗಳು ನಿಮಗೆ ಬರುತ್ತವೆ ಎಂದು ಪ್ರಮಾಣ ಮಾಡಿದ್ದಾನೆ.

3 ಗೋಡೆಯಲ್ಲಿಯ ಬಿರುಕುಗಳ ಮೂಲಕ, ಪ್ರತಿಯೊಬ್ಬ ಸ್ತ್ರೀಯೂ ನೇರವಾಗಿ ತನ್ನ ಮುಂದೆಯೇ ಹೊರಟು ಹೋಗುವಳು, ಹರ್ಮೋನಿನ ದಿಕ್ಕಿನ ಕಡೆಗೆ ತಳ್ಳಲ್ಪಡುವಿರಿ” ಇದು ಯೆಹೋವನ ನುಡಿ.


ಕೇವಲ ಆಚಾರಗಳು ವ್ಯರ್ಥ

4 “ಬೇತೇಲಿಗೆ ಹೋಗಿ ದ್ರೋಹ ಮಾಡಿರಿ, ಗಿಲ್ಗಾಲಿನಲ್ಲಿ ಸೇರಿ ದ್ರೋಹವನ್ನು ಇನ್ನೂ ಹೆಚ್ಚಿಸಿರಿ. ಪ್ರತಿದಿನ ಬೆಳಿಗ್ಗೆ ನಿಮ್ಮ ಬಲಿಗಳನ್ನು ಅರ್ಪಿಸಿರಿ, ಮೂರು ದಿನಕ್ಕೆ ಒಂದು ಸಲ ದಶಮಾಂಶವನ್ನು ಸಲ್ಲಿಸಿರಿ.

5 ಹುಳಿಹಿಟ್ಟನ್ನು ಕೃತಜ್ಞತಾರ್ಪಣವಾಗಿ ಹೋಮ ಮಾಡಿರಿ; ಕೊಟ್ಟ ಕಾಣಿಕೆಯನ್ನು ಪ್ರಕಟಿಸಿರಿ; ಸಾರಿಹೇಳಿರಿ, ಇಸ್ರಾಯೇಲರೇ ಹೀಗೆ ಮಾಡುವುದು ನಿಮಗೆ ಇಷ್ಟ” ಇದು ಕರ್ತನಾದ ಯೆಹೋವನ ನುಡಿ.


ಸನ್ಮಾರ್ಗಕ್ಕೆ ಬಾರದವರಿಗೆ ಹೆಚ್ಚು ದಂಡನೆಯು ಅವಶ್ಯ

6 “ನಿಮ್ಮ ಪಟ್ಟಣಗಳಲ್ಲಿ ನಿಮ್ಮ ಹಲ್ಲಿಗೆ ಏನೂ ಸಿಕ್ಕದಂತೆಯೂ ಮತ್ತು ನಿಮ್ಮ ಸಕಲ ನಿವಾಸಗಳಲ್ಲಿ ಅನ್ನದ ಕೊರತೆಯಾಗುವ ಹಾಗೆಯೂ ಮಾಡಿದೆನು. ಆದರೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ” ಇದು ಯೆಹೋವನ ನುಡಿ.

7 “ಸುಗ್ಗಿಗೆ ಮೂರು ತಿಂಗಳು ಕಳೆಯಬೇಕಾದಾಗಲೂ, ನಿಮಗೆ ಮಳೆಯನ್ನು ತಡೆದೆನು. ಒಂದು ಪಟ್ಟಣದ ಮೇಲೆ ಮಳೆಯಾಗುವಂತೆಯೂ, ಇನ್ನೊಂದು ಪಟ್ಟಣದ ಮೇಲೆ ಮಳೆಯಾಗದಂತೆಯೂ ಮಾಡಿದೆನು. ಒಂದು ಭಾಗದ ಹೊಲದಲ್ಲಿ ಮಳೆಯಾಯಿತು. ಮಳೆಯಾಗದ ಹೊಲದ ಭಾಗವು ಬಾಡಿಹೋಯಿತು.

8 ಎರಡು ಅಥವಾ ಮೂರು ಪಟ್ಟಣದವರು ನೀರು ಕುಡಿಯುವುದಕ್ಕೆ ಮತ್ತೊಂದು ಪಟ್ಟಣಕ್ಕೆ ಬಳಲುತ್ತಾ ಹೋಗುತ್ತಿದ್ದರು, ಬಾಯಾರಿಕೆ ತೀರಲಿಲ್ಲ. ಆದರೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ.” ಇದು ಯೆಹೋವನ ನುಡಿ.

9 “ನಿಮ್ಮನ್ನು ಬೂದಿಯಿಂದಲೂ, ಬಿಸಿಗಾಳಿಯಿಂದಲೂ ಬಾಧಿಸಿದೆನು. ನಿಮ್ಮ ಲೆಕ್ಕವಿಲ್ಲದ ವನ, ದ್ರಾಕ್ಷಿತೋಟಗಳನ್ನು, ಅಂಜೂರದ ಗಿಡಗಳನ್ನು, ನಿಮ್ಮ ಎಣ್ಣೆಯ ಮರಗಳನ್ನು ಮಿಡತೆಯು ತಿಂದುಬಿಟ್ಟಿತು. ಆದರೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ” ಇದು ಯೆಹೋವನು ನುಡಿ.

10 “ಐಗುಪ್ತದ ವ್ಯಾಧಿಗಳಂತಹ ವ್ಯಾಧಿಯನ್ನು ನಿಮ್ಮ ಮೇಲೆ ಕಳುಹಿಸಿದೆನು. ನಿಮ್ಮ ಯುವಕರನ್ನು ಖಡ್ಗದಿಂದ ಹತಿಸಿದೆನು, ನಿಮ್ಮ ಕುದರೆಗಳನ್ನು ಸೂರೆಮಾಡಿಸಿದೆನು, ನಿಮ್ಮ ದಂಡುಗಳ ದುರ್ವಾಸನೆ ನಿಮ್ಮ ಮೂಗಿಗೆ ಬಡಿಯುವಂತೆ ಮಾಡಿದೆನು. ಆದರೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ” ಇದು ಯೆಹೋವನ ನುಡಿ.

11 “ಸೊದೋಮ್ ಮತ್ತು ಗೊಮೋರಗಳನ್ನು ಕೆಡವಿದಂತೆ, ನಾನು ನಿಮ್ಮ ಪಟ್ಟಣಗಳನ್ನು ಕೆಡವಿಬಿಟ್ಟಿದ್ದೇನೆ. ಬೆಂಕಿ ಉರಿಯಿಂದ ಎಳೆದ ಕೊಳ್ಳೆಯ ಹಾಗೆ ಇದ್ದೀರಿ. ಆದರೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ” ಇದು ಯೆಹೋವನು ನುಡಿ.

12 “ಆದಕಾರಣ ಇಸ್ರಾಯೇಲೇ, ನಾನು ನಿನಗೆ ಮಾಡುತ್ತೇನೆ; ನಾನು ಮಾಡಬೇಕೆಂದಿರುವುದರಿಂದ, ಇಸ್ರಾಯೇಲೇ, ನಿನ್ನ ದೇವರ ಬರುವಿಕೆಗೆ ನಿನ್ನನ್ನು ಸಿದ್ಧಮಾಡಿಕೋ!

13 ಇಗೋ, ಪರ್ವತಗಳನ್ನು ರೂಪಿಸಿ, ಗಾಳಿಯನ್ನು ನಿರ್ಮಿಸಿ, ತನ್ನ ಸಂಕಲ್ಪವನ್ನು ಮನುಷ್ಯರಿಗೆ ವ್ಯಕ್ತಗೊಳಿಸಿ, ಉದಯವನ್ನು ಅಂಧಕಾರವನ್ನಾಗಿ ಮಾಡಿ ಮತ್ತು ಭೂಮಿಯ ಉನ್ನತ ಪ್ರದೇಶಗಳನ್ನು ತುಳಿದುಬಿಡುವಾತನು” ಸೇನಾಧೀಶ್ವರ ದೇವರಾದ ಯೆಹೋವನೆಂಬುದೇ ನನ್ನ ನಾಮಧೇಯ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು