Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಆದಿಕಾಂಡ 6 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಮನುಷ್ಯರ ಕೆಟ್ಟತನ

1 ಭೂಮಿಯ ಮೇಲೆ ಮನುಷ್ಯರ ಸಂಖ್ಯೆ ಹೆಚ್ಚಾಯಿತು. ಇವರಿಗೆ ಹುಟ್ಟಿದ ಹೆಣ್ಣುಮಕ್ಕಳು

2 ಸೌಂದರ್ಯವುಳ್ಳವರಾಗಿರುವುದನ್ನು ನೋಡಿ ದೇವಪುತ್ರರು ತಮಗೆ ಇಷ್ಟವಾದವರನ್ನು ಹೆಂಡತಿಯರನ್ನಾಗಿ ಮಾಡಿಕೊಂಡರು.

3 ಆಗ ಯೆಹೋವನು, “ನನ್ನ ಆತ್ಮವು ಮನುಷ್ಯರಲ್ಲಿ ಶಾಶ್ವತವಾಗಿ ಹೆಣಗಲು ಸಾಧ್ಯವಿಲ್ಲ; ಏಕೆಂದರೆ ಅವರು ರಕ್ತಮಾಂಸ ಹೊಂದಿರುವ ಮರ್ತ್ಯರೇ. ಅವರು ನೂರ ಇಪ್ಪತ್ತು ವರ್ಷ ಬದುಕುವರು” ಅಂದನು.

4 ಅನಂತರ ದೇವಪುತ್ರರು ಮನುಷ್ಯ ಪುತ್ರಿಯರೊಂದಿಗೆ ಸಂಗಮಿಸಿದಾಗ ಮಕ್ಕಳು ಹುಟ್ಟಿದರು. ಆ ಕಾಲದಿಂದಲೂ ಅದಾದ ನಂತರವೂ ಜಗದಲ್ಲಿ ನೆಫೀಲಿಯರು ಇದ್ದರು. ಇವರೇ ಪೂರ್ವಕಾಲದಲ್ಲಿ ಪ್ರಸಿದ್ಧರಾಗಿದ್ದ ಪರಾಕ್ರಮಶಾಲಿಗಳು ಎಂದು ಹೆಸರಾದವರು.

5 ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವುದನ್ನೂ, ಅವರು ತಮ್ಮ ಹೃದಯದಲ್ಲಿ ಯೋಚಿಸುವುದೆಲ್ಲವು ಯಾವಾಗಲೂ ಕೆಟ್ಟ ಆಲೋಚನೆಗಳನ್ನೇ ಮಾಡುತ್ತಿರುವುದನ್ನು ಯೆಹೋವನು ನೋಡಿದನು.

6 ಯೆಹೋವನು ಭೂಮಿಯ ಮೇಲೆ ಮನುಷ್ಯರನ್ನು ಉಂಟುಮಾಡಿದ್ದಕ್ಕೆ ವ್ಯಥೆಪಟ್ಟು, ತನ್ನ ಹೃದಯದಲ್ಲಿ ನೊಂದುಕೊಂಡನು.

7 ಇದಲ್ಲದೆ ಯೆಹೋವನು, “ನಾನು ಸೃಷ್ಟಿಸಿದ ಮನುಷ್ಯ ಜಾತಿಯನ್ನು ಭೂಮಿಯ ಮೇಲಿನಿಂದ ಅಳಿಸಿಬಿಡುವೆನು; ಮನುಷ್ಯರೊಂದಿಗೆ ಸಕಲ ಕಾಡುಮೃಗ, ಕ್ರಿಮಿ, ಕೀಟ, ಪಕ್ಷಿಗಳನ್ನೂ ನಾಶ ಮಾಡುವೆನು. ನಾನು ಅವರನ್ನು ಸೃಷ್ಟಿಮಾಡಿದ್ದಕ್ಕೆ ದುಃಖವಾಗುತ್ತಿದೆ” ಎಂದು ದುಃಖಿಸಿದನು.

8 ಆದರೆ ನೋಹನ ನಡವಳಿಕೆ ಯೆಹೋವನಿಗೆ ಮೆಚ್ಚುಗೆಯಾದುದರಿಂದ ನೋಹನಿಗೆ ಯೆಹೋವನ ದಯೆ ದೊರಕಿತು.


ನೋಹನ ಚರಿತ್ರೆ

9 ನೋಹನ ಚರಿತ್ರೆ: ನೋಹನು ಸತ್ಯವಂತನೂ ಎಲ್ಲಾ ಜನರಲ್ಲಿ ನೀತಿವಂತನು ಆಗಿದ್ದನು; ಅವನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು.

10 ನೋಹನು ಶೇಮ್, ಹಾಮ್, ಯೆಫೆತ್ ಎಂಬ ಮೂರು ಮಂದಿ ಮಕ್ಕಳನ್ನು ಪಡೆದನು.

11 ಭೂಲೋಕದವರು ದೇವರ ದೃಷ್ಟಿಯಲ್ಲಿ ಕೆಟ್ಟ ನಡತೆಯಿಂದ ದೋಷಿಗಳಾಗಿದ್ದರು. ಹಿಂಸೆ ಮತ್ತು ಅನ್ಯಾಯ ಭೂಮಿಯನ್ನು ತುಂಬಿಕೊಂಡಿತ್ತು.

12 ದೇವರು ಭೂಮಿಯನ್ನು ನೋಡಿದಾಗ ಅದು ಕೆಟ್ಟುಹೋಗಿ ಕಲುಷಿತಗೊಂಡಿತ್ತು. ಭೂನಿವಾಸಿಗಳೆಲ್ಲರೂ ತಮ್ಮ ನಡವಳಿಕೆಯನ್ನು ಕೆಡಿಸಿಕೊಂಡಿದ್ದರು.

13 ಆಗ ದೇವರು ನೋಹನಿಗೆ, “ಎಲ್ಲಾ ಮನುಷ್ಯರಿಗೆ ಅಂತ್ಯವನ್ನು ತೀರ್ಮಾನಿಸಿದ್ದೇನೆ; ಭೂಲೋಕವು ಅನ್ಯಾಯದಿಂದಲೂ ಹಿಂಸೆಯಿಂದಲೂ ತುಂಬಿದೆ; ನಾನು ಭೂಮಿಯೊಂದಿಗೆ ಅವರನ್ನೂ ಅಳಿಸಿ ಬಿಡುತ್ತೇನೆ.

14 ನೀನು ನಿನಗೋಸ್ಕರ ತುರಾಯಿ ಮರದಿಂದ ನಾವೆಯನ್ನು ಮಾಡಿಕೋ; ಅದರಲ್ಲಿ ತುಂಬ ಕೋಣೆಗಳು ಇರಬೇಕು; ಒಳಕ್ಕೂ ಹೊರಕ್ಕೂ ರಾಳವನ್ನು ಹಚ್ಚು.

15 ನೀನು ಅದನ್ನು ಮಾಡಬೇಕಾದ ವಿಧಾನ ಹೇಗೆಂದರೆ, ಅದು ಮುನ್ನೂರು ಮೊಳ ಉದ್ದವೂ, ಐವತ್ತು ಮೊಳ ಅಗಲವೂ, ಮೂವತ್ತು ಮೊಳ ಎತ್ತರವೂ ಉಳ್ಳದ್ದಾಗಿರಬೇಕು.

16 ಅದರ ಚಾವಣಿಯ ಕೆಳಗೆ ಸುತ್ತಲೂ ಒಂದು ಮೊಳ ಎತ್ತರದ ಕಿಟಕಿಯನ್ನು ಮಾಡಬೇಕು; ಪಕ್ಕದಲ್ಲಿ ಬಾಗಿಲನ್ನಿಡಬೇಕು. ನಾವೆಯಲ್ಲಿ ಒಂದರ ಮೇಲೆ ಒಂದಾಗಿ ಮೂರು ಅಂತಸ್ತುಗಳನ್ನು ಮಾಡಬೇಕು.

17 ನಾನಂತೂ ಭೂಮಿಯ ಮೇಲೆ ಜಲಪ್ರಳಯವನ್ನು ಬರಮಾಡಿ ಆಕಾಶದ ಕೆಳಗಿರುವ ಸಕಲಪ್ರಾಣಿಗಳನ್ನೂ ನಾಶಮಾಡುವೆನು; ಭೂಮಿಯಲ್ಲಿರುವ ಸಮಸ್ತವೂ ಲಯವಾಗುವುದು.

18 “ಆದರೆ ನಿನ್ನೊಂದಿಗೆ ನಾನು ಒಂದು ಒಡಂಬಡಿಕೆಯನ್ನು ಮಾಡುತ್ತೇನೆ. ನೀನೂ ನಿನ್ನ ಹೆಂಡತಿ, ಮಕ್ಕಳು, ಸೊಸೆಯರು ಸಹಿತವಾಗಿ ನಾವೆಯಲ್ಲಿ ಸೇರಬೇಕು.

19 ಇದಲ್ಲದೆ ಜೀವಿಗಳ ಪ್ರತಿ ಜಾತಿಯಲ್ಲಿಯೂ ಒಂದು ಗಂಡು ಒಂದು ಹೆಣ್ಣು ಹೀಗೆ ಎರಡೆರಡನ್ನು ನಾವೆಯಲ್ಲಿ ಸೇರಿಸಿ, ನಿನ್ನೊಂದಿಗೆ ಉಳಿಸಿ ಕಾಪಾಡಿಕೊಳ್ಳಬೇಕು.

20 ಪಶು, ಪಕ್ಷಿ, ಕಾಡುಮೃಗ, ಕ್ರಿಮಿ, ಕೀಟ ಇವುಗಳ ಸಕಲ ಜಾತಿಗಳಲ್ಲಿಯೂ ಎರಡೆರಡು ಬದುಕುವುದಕ್ಕಾಗಿ ನಿನ್ನ ಬಳಿಗೆ ಬರುವವು.

21 ನಿನಗೂ ಅವುಗಳಿಗೂ ಪೋಷಣೆಯಾಗುವಂತೆ ಸಕಲ ವಿಧವಾದ ಆಹಾರ ಪದಾರ್ಥಗಳನ್ನು ನಿನ್ನ ಬಳಿಯಲ್ಲಿ ಕೂಡಿಸಿಟ್ಟುಕೊಳ್ಳಬೇಕು” ಎಂದು ಹೇಳಿದನು.

22 ದೇವರು ಅಪ್ಪಣೆಕೊಟ್ಟ ಪ್ರಕಾರವೇ ನೋಹನು ಮಾಡಿದನು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು