Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಆದಿಕಾಂಡ 38 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಯೆಹೂದನು ಮತ್ತು ತಾಮಾರಳು

1 ಆ ಕಾಲದಲ್ಲಿ ಯೆಹೂದನು ತನ್ನ ಅಣ್ಣತಮ್ಮಂದಿರನ್ನು ಬಿಟ್ಟು ಗಟ್ಟಾ ಇಳಿದು ಅದುಲ್ಲಾಮಿನ ಊರಿನವನಾದ ಹೀರಾ ಎಂಬುವವನ ಹತ್ತಿರ ಉಳಿದುಕೊಂಡನು.

2 ಅಲ್ಲಿ ಯೆಹೂದನು ಕಾನಾನ್ಯನಾದ ಶೂಗನ ಮಗಳನ್ನು ಕಂಡು ಅವಳನ್ನು ಮದುವೆ ಮಾಡಿಕೊಂಡನು

3 ಅವಳು ಬಸುರಾಗಿ ಗಂಡುಮಗುವನ್ನು ಹೆತ್ತಳು ಅದಕ್ಕೆ ಯೆಹೂದನು “ಏರ್” ಎಂದು ಹೆಸರಿಟ್ಟನು.

4 ಅವಳು ಎರಡನೆಯ ಸಾರಿ ಬಸುರಾಗಿ ಗಂಡು ಮಗುವನ್ನು ಹೆತ್ತಾಗ ಅದಕ್ಕೆ “ಓನಾನ್” ಎಂದು ಹೆಸರಿಟ್ಟಳು.

5 ಅವಳು ಪುನಃ ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತಳು. ಅದಕ್ಕೆ “ಶೇಲಹ” ಎಂದು ಹೆಸರಿಟ್ಟಳು. ಅವಳು ಆ ಮಗುವನ್ನು ಹೆತ್ತಾಗ ಯೆಹೂದನು ಕಜೀಬೂರಿನಲ್ಲಿದ್ದನು.

6 ಯೆಹೂದನು ತನ್ನ ಚೊಚ್ಚಲು ಮಗನಾದ ಏರನಿಗೆ “ತಾಮಾರ್” ಎಂಬ ಹೆಣ್ಣನ್ನು ತಂದು ಮದುವೆ ಮಾಡಿಸಿದನು.

7 ಆದರೆ ಯೆಹೂದನ ಚೊಚ್ಚಲ ಮಗನಾದ ಏರನು ಯೆಹೋವನ ದೃಷ್ಟಿಯಲ್ಲಿ ಕೆಟ್ಟವನಾಗಿದ್ದುದರಿಂದ ಯೆಹೋವನು ಅವನನ್ನು ಸಾಯುವಂತೆ ಮಾಡಿದನು.

8 ಬಳಿಕ ಯೆಹೂದನು ಓನಾನನಿಗೆ, “ನೀನು ನಿನ್ನ ಅಣ್ಣನ ಹೆಂಡತಿಯನ್ನು ಮದುವೆಮಾಡಿಕೊಂಡು ಮೈದುನ ಧರ್ಮಕ್ಕೆ ಸರಿಯಾಗಿ ನಡೆದು ನಿನ್ನ ಅಣ್ಣನಿಗೆ ಸಂತತಿಯನ್ನು ಉಂಟು ಮಾಡು” ಎಂದನು.

9 ಆದರೆ ಓನಾನನು ಈ ರೀತಿ ಆಗುವ ಸಂತಾನವು ತನ್ನದಾಗುವುದಿಲ್ಲವೆಂದು ತಿಳಿದು ಅಣ್ಣನಿಗೆ ಸಂತತಿಯನ್ನು ಹುಟ್ಟಿಸಬಾರದೆಂದು ಯೋಚಿಸಿ ತನ್ನ ಅತ್ತಿಗೆಯೊಂದಿಗೆ ಸಂಗಮಿಸುವಾಗೆಲ್ಲಾ ಅವಳು ಗರ್ಭಧರಿಸದಂತೆ ತನ್ನ ವೀರ್ಯವನ್ನು ನೆಲದ ಮೇಲೆ ಸುರಿಸುತಿದ್ದನು.

10 ಈ ನಡತೆ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿದ್ದುದರಿಂದ ಆತನು ಅವನನ್ನೂ ಸಾಯಿಸಿದನು.

11 ಆ ಮೇಲೆ ಯೆಹೂದನು ಒಂದು ವೇಳೆ ಶೇಲಹನು ತನ್ನ ಅಣ್ಣಂದಿರಂತೆಯೇ ಸತ್ತಾನೆಂದು ಯೋಚಿಸಿ ತನ್ನ ಸೊಸೆಯಾದ ತಾಮಾರಳಿಗೆ, “ನನ್ನ ಮಗನಾದ ಶೇಲಹನು ಪ್ರಾಯಸ್ಥನಾಗುವ ತನಕ ನೀನು ವಿಧವೆಯಾಗಿದ್ದು ನಿನ್ನ ತಂದೆಯ ಮನೆಯಲ್ಲಿರು” ಎಂದು ಹೇಳಿದನು. ಅವಳು ತಂದೆಯ ಮನೆಗೆ ಹೋಗಿ ಅಲ್ಲೇ ವಾಸಮಾಡಿದಳು.

12 ಬಹಳ ದಿನಗಳಾದ ಮೇಲೆ ಯೆಹೂದನ ಹೆಂಡತಿಯಾಗಿದ್ದ ಶೂಗನ ಮಗಳು ತೀರಿಕೊಂಡಳು. ಯೆಹೂದನು ತನಗೆ ದುಃಖಶಮನವಾದ ಮೇಲೆ ತನ್ನ ಕುರಿಗಳ ಉಣ್ಣೆ ಕತ್ತರಿಸುವವರ ಬಳಿಗೆ ತನ್ನ ಸ್ನೇಹಿತನಾದ ಹೀರಾ ಎಂಬ ಅದುಲ್ಲಾಮ್ಯನ ಜೊತೆಯಲ್ಲಿ ಗಟ್ಟಾ ಹತ್ತಿ ತಿಮ್ನಾ ಊರಿಗೆ ಹೋದನು.

13 ಆಗ ತಾಮಾರಳಿಗೆ, “ಮಾವನು ತನ್ನ ಕುರಿಗಳ ಉಣ್ಣೇ ಕತ್ತರಿಸುವುದಕ್ಕೋಸ್ಕರ ತಿಮ್ನಾ ಊರಿಗೆ ಹೋಗುತ್ತಿದ್ದಾನೆ” ಎಂದು ತಿಳಿದು ಬಂದಿತು

14 ಆಗ ಆಕೆಯು ಶೇಲಹನು ಪ್ರಾಯಸ್ಥನಾದಾಗ್ಯೂ ನನ್ನನ್ನು ಅವನಿಗೆ ಮದುವೆ ಮಾಡಿಸಲಿಲ್ಲವಲ್ಲಾ ಅಂದುಕೊಂಡು ತನ್ನ ವಿಧವಾ ವಸ್ತ್ರವನ್ನು ತೆಗೆದಿಟ್ಟು ಮುಸುಕನ್ನು ಹಾಕಿಕೊಂಡು ವೇಶ್ಯಾಸ್ತ್ರೀಯಂತೆ ಅಲಂಕೃತಳಾಗಿ ತಿಮ್ನಾ ಊರಿನ ದಾರಿಯಲ್ಲಿರುವ ಏನಯಿಮ್ ಊರಿನ ಬಾಗಿಲ ಬಳಿಯಲ್ಲಿ ಕುಳಿತುಕೊಂಡಳು.

15 ಯೆಹೂದನು ಆಕೆಯನ್ನು ಕಂಡಾಗ ಮುಖದ ಮೇಲೆ ಮುಸುಕು ಇದ್ದದರಿಂದ ಸೊಸೆ ಎಂದು ತಿಳಿಯದೆ ವೇಶ್ಯಾಸ್ತ್ರೀಯೆಂದು ಭಾವಿಸಿದನು.

16 ಮಾರ್ಗದಿಂದ ಓರೆಯಾಗಿ ಆಕೆಯ ಬಳಿಗೆ ಹೋಗಿ, “ನಾನು ನಿನ್ನ ಬಳಿಗೆ ಬರಲೇ ಎಂದು ಕೇಳಿದನು” ಆಕೆ, “ನೀನು ನನ್ನಲ್ಲಿ ಬರಬೇಕಾದರೆ, ನನಗೆ ಏನು ಕೊಡುತ್ತೀ?” ಎಂದು ಕೇಳಿದಳು.

17 ಅವನು, “ಹಿಂಡಿನಿಂದ ಒಂದು ಹೋತಮರಿಯನ್ನು ಕಳುಹಿಸುತ್ತೇನೆ” ಅಂದಾಗ ಆಕೆ, “ನೀನು ಆದನ್ನು ಕೊಡುವ ತನಕ ನನ್ನಲ್ಲಿ ಏನಾದರೂ ಒತ್ತೆಯಿಡಬೇಕು” ಎಂದು ಹೇಳಿದ್ದಕ್ಕೆ,

18 ಅವನು, “ಏನು ಒತ್ತೇ ಇಡಲಿ” ಎಂದು ಕೇಳಿದನು. ಆಗ ಆಕೆಯು “ನಿನ್ನ ಮುದ್ರೆ, ನಿನ್ನ ದಾರ, ನಿನ್ನ ಕೈಕೋಲು ಈ ಮೂರನ್ನು ಒತ್ತೆಯಾಗಿ ಇಡು” ಅಂದಳು. ಅವನು ಅವುಗಳನ್ನು ಕೊಟ್ಟು ಆಕೆಯನ್ನು ಸಂಗಮಿಸಲು ಆಕೆಯು ಅವನಿಗೆ ಗರ್ಭಿಣಿಯಾದಳು.

19 ತರುವಾಯ ಆಕೆ ತಾನು ಹಾಕಿಕೊಂಡಿದ್ದ ಮುಸುಕನ್ನು ತೆಗೆದಿಟ್ಟು ತಿರುಗಿ ವಿಧವೆಯ ವಸ್ತ್ರಗಳನ್ನು ಉಟ್ಟುಕೊಂಡಳು.

20 ಯೆಹೂದನು ತಾನು ಇಟ್ಟಿದ್ದ ಒತ್ತೆಯನ್ನು ಆ ಹೆಂಗಸಿನ ಕೈಯಿಂದ ಬಿಡಿಸಿಕೊಳ್ಳುವುದಕ್ಕೊಸ್ಕರ ತನ್ನ ಸ್ನೇಹಿತನಾದ ಅದುಲ್ಲಾಮ್ಯನ ಕೈಯಲ್ಲಿ ಹೋತಮರಿಯನ್ನು ಕಳುಹಿಸಿದಾಗ ಆಕೆಯು ಅವನಿಗೆ ಸಿಗಲಿಲ್ಲ.

21 ಅವನು ಅವಳ ಊರಿನವರನ್ನು, “ಏನಯಿಮಿನ ದಾರಿಯ ಬಳಿಯಲ್ಲಿ ಕುಳಿತಿದ್ದ ವೇಶ್ಯಾಸ್ತ್ರೀ ಎಲ್ಲಿರುವಳು” ಎಂದು ಕೇಳಿದ್ದಕ್ಕೆ ಅವರು, “ಇಲ್ಲಿ ಯಾವ ವೇಶ್ಯಾಸ್ತ್ರೀಯೂ ಇಲ್ಲ” ಎಂದರು.

22 ಅವನು ಯೆಹೂದನ ಬಳಿಗೆ ಹಿಂದಿರುಗಿ ಬಂದು, “ನಾನು ಅವಳನ್ನು ಕಾಣಲಿಲ್ಲ ಮತ್ತು ಅಲ್ಲಿ ವಿಚಾರಿಸಿದಾಗ ಆ ಊರಿನವರು ಅಲ್ಲಿ ಯಾವ ವೇಶ್ಯಾಸ್ತ್ರೀಯೂ ಇಲ್ಲವೆಂದರು” ಎಂದು ತಿಳಿಸಿದನು.

23 ಅದಕ್ಕೆ ಯೆಹೂದನು, “ನಾವು ಅಪಹಾಸ್ಯಕ್ಕೆ ಒಳಗಾಗದ ಹಾಗೆ ಆ ವಸ್ತುಗಳನ್ನು ಅವಳೇ ಇಟ್ಟುಕೊಳ್ಳಲಿ. ನಾನಂತೂ ಹೋತಮರಿಯನ್ನು ಕಳುಹಿಸಿಕೊಟ್ಟೆನು. ಅವಳು ನಿನಗೆ ಸಿಕ್ಕಲಿಲ್ಲ” ಎಂದನು.

24 ಸುಮಾರು ಮೂರು ತಿಂಗಳಾದ ಮೇಲೆ ಯೆಹೂದನಿಗೆ, “ನಿನ್ನ ಸೊಸೆಯಾದ ತಾಮಾರಳು ವ್ಯಭಿಚಾರದಿಂದ ಬಸುರಾಗಿದ್ದಾಳೆ” ಎಂಬ ವರ್ತಮಾನವನ್ನು ತಿಳಿಸಿದರು. ಆಗ ಯೆಹೂದನು, “ಆಕೆಯನ್ನು ಹೊರಗೆ ಕರತನ್ನಿರಿ, ಆಕೆಯನ್ನು ಸುಡಬೇಕು” ಎಂದು ಹೇಳಿದನು.

25 ಆಕೆಯನ್ನು ಹೊರಕ್ಕೆ ತಂದಾಗ, ಆಕೆಯು ತನ್ನ ಮಾವನಿಗೆ, “ಈ ಸಾಮಾನುಗಳನ್ನು ಕಳುಹಿಸಿ, ಇವು ಯಾವ ಮನುಷ್ಯನದೋ, ಅವನಿಂದಲೇ ನಾನು ಗರ್ಭಿಣಿಯಾಗಿದ್ದೇನೆ. ಮುದ್ರೆ, ದಾರ, ಕೋಲು ಇವುಗಳ ಗುರುತನ್ನು ತಿಳಿಯಬಹುದು” ಎಂದು ಕೇಳಿಕೊಂಡಳು.

26 ಯೆಹೂದನು ಅವುಗಳ ಗುರುತನ್ನು ತಿಳಿದು, “ನಾನು, ನನ್ನ ಮಗನಾದ ಶೇಲಹನನ್ನು ಆಕೆಗೆ ಮದುವೆ ಮಾಡಿಸಲಿಲ್ಲ. ಆದುದರಿಂದ ಆಕೆಯು ನನಗಿಂತಲೂ ನೀತಿವಂತಳು” ಎಂದು ಹೇಳಿದನು. ಅವನು ಪುನಃ ಆಕೆಯ ಸಹವಾಸ ಮಾಡಲಿಲ್ಲ.

27 ತಾಮಾರಳಿಗೆ ಹೆರಿಗೆ ಕಾಲ ಬಂದಾಗ ಆಕೆಯ ಗರ್ಭದಲ್ಲಿ ಅವಳಿ ಮಕ್ಕಳಿರುವುದು ಕಂಡುಬಂದಿತು.

28 ಆಕೆಯು ಹೆರುವಾಗ ಒಂದು ಮಗುವು ಮುಂದಕ್ಕೆ ಕೈಚಾಚಲು ಸೂಲಗಿತ್ತಿಯು, “ಇದು ಮೊದಲು ಹೊರಗೆ ಬಂದದ್ದು” ಎಂದು ಹೇಳಿ ಅದರ ಕೈಗೆ ಕೆಂಪು ದಾರವನ್ನು ಕಟ್ಟಿದಳು.

29 ಅದು ಕೈಯನ್ನು ಹಿಂದಕ್ಕೆ ತೆಗೆಯಲು, ಅದರೊಡನೆ ಇದ್ದ ಮತ್ತೊಂದು ಶಿಶುವು ಹೊರಗೆ ಬಂದಿತು. ಸೂಲಗಿತ್ತಿಯು ಇದನ್ನು ಕಂಡು, “ನೀನು ಛೇದಿಸಿಕೊಂಡು ಬಂದೆಯಾ?” ಎಂದು ಹೇಳಿ, ಅದಕ್ಕೆ “ಪೆರೆಚ್” ಎಂದು ಹೆಸರಾಯಿತು.

30 ತರುವಾಯ ಕೈಗೆ ಕೆಂಪು ನೂಲು ಕಟ್ಟಿಸಿಕೊಂಡ ಶಿಶುವು ಹೊರಗೆ ಬಂದಿತು. ಅದಕ್ಕೆ “ಜೆರಹ” ಎಂದು ಹೆಸರಾಯಿತು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು