ಅರಣ್ಯಕಾಂಡ 6 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ನಾಜೀರನ ವ್ರತ ನಿಯಮ 1 ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, 2 “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು: ಯಾವ ಪುರುಷನಾಗಲಿ ಸ್ತ್ರೀಯಾಗಲಿ ನಾಜೀರರ ಹರಕೆಯನ್ನು ಅಂದರೆ ಯೆಹೋವನಿಗೆ ತನ್ನನ್ನು ಪ್ರತಿಷ್ಠಿಸಿಕೊಳ್ಳುವ, 3 ವಿಶೇಷವಾದ ಹರಕೆಯನ್ನು ಮಾಡಿದಾಗ ದ್ರಾಕ್ಷಾರಸವನ್ನೂ ಮತ್ತು ಮದ್ಯಪಾನವನ್ನೂ ಮುಟ್ಟಬಾರದು. ದ್ರಾಕ್ಷಾರಸದ ಹುಳಿಯನ್ನಾಗಲಿ ಬೇರೆ ಮದ್ಯಪಾನದ ಹುಳಿಯನ್ನಾಗಲಿ ಕುಡಿಯಬಾರದು. ದ್ರಾಕ್ಷಿ ಹಣ್ಣಿನಿಂದ ಮಾಡಿದ ಯಾವ ಪಾನವನ್ನೂ ಕುಡಿಯಬಾರದು. ಹಸಿ ಅಥವಾ ಒಣಗಿದ ದ್ರಾಕ್ಷಿ ಹಣ್ಣನ್ನೂ ತಿನ್ನಬಾರದು. 4 ಅವನು ಹರಕೆಮಾಡಿ ಪ್ರತಿಷ್ಠಿಸಿಕೊಂಡ ದಿನಗಳಲ್ಲೆಲ್ಲಾ ದ್ರಾಕ್ಷಾಲತೆಯಿಂದ ಬೆಳೆದ ಬೀಜವನ್ನಾಗಲಿ, ಸಿಪ್ಪೆಯನ್ನಾಗಲಿ ತಿನ್ನಬಾರದು. 5 “ಅವನು ತನ್ನ ಹರಕೆಯ ದಿನಗಳಲ್ಲಿ ಕ್ಷೌರಮಾಡಿಸಿಕೊಳ್ಳಬಾರದು. ಅವನು ತನ್ನನ್ನು ಯೆಹೋವನಿಗೆ ಪ್ರತಿಷ್ಠಿಸಿಕೊಂಡ ದಿನಗಳು ಮುಗಿಯುವ ತನಕ ತಾನು ದೇವರಿಗೆ ಮೀಸಲಾಗಿದ್ದು ತನ್ನ ತಲೆಯ ಕೂದಲನ್ನು ಕತ್ತರಿಸದೆ ಬಿಡಬೇಕು. 6 ತನ್ನನ್ನು ಯೆಹೋವನಿಗೆ ಪ್ರತಿಷ್ಠಿಸಿಕೊಂಡ ದಿನಗಳಲ್ಲಿ ಯಾವ ಶವವನ್ನೂ ಮುಟ್ಟಬಾರದು. 7 ತಾಯಿ, ತಂದೆ, ಅಣ್ಣ, ತಮ್ಮ, ಅಕ್ಕ, ತಂಗಿ ಇವರಲ್ಲಿ ಯಾರು ಸತ್ತರೂ ಅವರ ನಿಮಿತ್ತ ಅವನು ತನ್ನನ್ನು ದೇವರಿಂದ ಪ್ರತ್ಯೇಕಿಸಿ ಅಪವಿತ್ರಮಾಡಿಕೊಳ್ಳಬಾರದು. ಏಕೆಂದರೆ ತಾನು ದೇವರಿಗೆ ಮೀಸಲಾಗಿ ಬಿಟ್ಟ ಕೂದಲು ತಲೆಯ ಮೇಲೆ ಇದೆಯಲ್ಲಾ. 8 ತಾನು ಪ್ರತಿಷ್ಠಿಸಿಕೊಂಡಿರುವ ದಿನಗಳೆಲ್ಲೆಲ್ಲಾ ಅವನು ಯೆಹೋವನಿಗೆ ಮೀಸಲಾಗಿಯೇ ಇರಬೇಕು. 9 ಯಾರಾದರೂ ಆಕಸ್ಮಾತ್ತಾಗಿ ಅವನ ಬಳಿಯಲ್ಲೇ ಸತ್ತರೆ, ತಾನು ಪ್ರತಿಷ್ಠಿಸಿಕೊಂಡ ತಲೆಯ ಕೂದಲು ಅಪವಿತ್ರವಾದರೆ ಏಳನೆಯ ದಿನದಲ್ಲಿ ಅಂದರೆ ಶುದ್ಧನಾಗುವ ದಿನದಲ್ಲಿ ತಲೆಯನ್ನು ಕ್ಷೌರಮಾಡಿಸಿಕೊಳ್ಳಬೇಕು. 10 ಎಂಟನೆಯ ದಿನದಲ್ಲಿ ಅವನು ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ದೇವದರ್ಶನದ ಗುಡಾರದ ಬಾಗಿಲಿಗೆ ಯಾಜಕನ ಬಳಿಗೆ ತರಬೇಕು. 11 ಯಾಜಕನು ಒಂದನ್ನು ದೋಷಪರಿಹಾರ ಯಜ್ಞವಾಗಿ, ಇನ್ನೊಂದನ್ನು ಸರ್ವಾಂಗಹೋಮವಾಗಿ ಸಮರ್ಪಿಸಿ ಶವಸೋಂಕಿದವನಿಗಾಗಿ ದೋಷಪರಿಹಾರ ಮಾಡಿ ಅವನ ತಲೆಯ ಕೂದಲನ್ನು ಆ ದಿನದಿಂದ ಪವಿತ್ರವೆಂದು ನಿರ್ಣಯಿಸಬೇಕು. 12 ಅವನು ಎಷ್ಟು ದಿನಗಳವರೆಗೆ ತನ್ನನ್ನು ಪ್ರತಿಷ್ಠಿಸಿಕೊಂಡಿದ್ದಾನೋ, ಅಷ್ಟು ದಿನಗಳವರೆಗೆ ಹೊಸದಾಗಿ ತನ್ನನ್ನು ಯೆಹೋವನಿಗೆ ಪ್ರತಿಷ್ಠಿಸಿಕೊಳ್ಳಬೇಕು ಮತ್ತು ಪ್ರಾಯಶ್ಚಿತ್ತಯಜ್ಞವಾಗಿ ಒಂದು ವರ್ಷದ ಕುರಿಮರಿಯನ್ನು ಸಮರ್ಪಿಸಬೇಕು. ಮೊದಲು ಮಾಡಿದ್ದ ಹರಕೆಗೆ ವಿಘ್ನಪ್ರಾಪ್ತವಾದುದರಿಂದ ಕಳೆದುಹೋದ ದಿನಗಳು ವ್ಯರ್ಥವಾದುದೆಂದು ಪರಿಗಣಿಸಬೇಕು. 13 ನಾಜೀರನು ತನ್ನ ವ್ರತದಿನಗಳು ಮುಗಿದಾಗ ತನ್ನನ್ನು ಸಮರ್ಪಿಸಬೇಕಾದ ಕ್ರಮವನ್ನು ಅನುಸರಿಸಬೇಕು. ಅವನು ದೇವದರ್ಶನದ ಗುಡಾರದ ಬಾಗಿಲಿಗೆ ಬರಬೇಕು. 14 ಯೆಹೋವನಿಗೆ ಸಮರ್ಪಿಸಬೇಕಾದ ಕಾಣಿಕೆಗಳು ಯಾವುವೆಂದರೆ: ಅವನು ಸರ್ವಾಂಗಹೋಮಕ್ಕಾಗಿ ದೋಷವಿಲ್ಲದ ಪೂರ್ಣಾಂಗವಾದ ಒಂದು ವರ್ಷದ ಟಗರಿನ ಮರಿಯನ್ನು, ದೋಷಪರಿಹಾರ ಯಜ್ಞಕ್ಕಾಗಿ ದೋಷವಿಲ್ಲದ ಪೂರ್ಣಾಂಗವಾದ ಒಂದು ವರ್ಷದ ಹೆಣ್ಣು ಕುರಿಮರಿಯನ್ನು, ಸಮಾಧಾನಯಜ್ಞಕ್ಕಾಗಿ ದೋಷವಿಲ್ಲದ ಪೂರ್ಣಾಂಗವಾದ ಟಗರನ್ನು ತರಬೇಕು. 15 ಇದಲ್ಲದೆ ಒಂದು ಪುಟ್ಟಿ ತುಂಬಾ ಎಣ್ಣೆ ಬೆರಸಿದ ಗೋದಿಹಿಟ್ಟಿನ ಹುಳಿಯಿಲ್ಲದ ರೊಟ್ಟಿಗಳು, ಎಣ್ಣೆ ಹಾಕಿದ ಹುಳಿಯಿಲ್ಲದ ಕಡಬುಗಳನ್ನು ಧಾನ್ಯದ್ರವ್ಯ, ಪಾನದ್ರವ್ಯಗಳೊಡನೆ ತರಬೇಕು. 16 ಯಾಜಕನು ಇವುಗಳನ್ನು ಯೆಹೋವನ ಸನ್ನಿಧಿಗೆ ತಂದು ನಾಜೀರನ ದೋಷಪರಿಹಾರಕ ಯಜ್ಞವನ್ನೂ ಮತ್ತು ಸರ್ವಾಂಗಹೋಮವನ್ನೂ ಸಮರ್ಪಿಸಬೇಕು. 17 ಆ ಟಗರನ್ನೂ, ಪುಟ್ಟಿ ತುಂಬಾ ಹುಳಿಯಿಲ್ಲದ ರೊಟ್ಟಿಗಳನ್ನೂ, ಯಾಜಕನು ಯೆಹೋವನಿಗೆ ಸಮಾಧಾನಯಜ್ಞವಾಗಿ ಸಮರ್ಪಿಸಬೇಕು. ಅವನು ತಂದ ಧಾನ್ಯದ್ರವ್ಯ ಪಾನದ್ರವ್ಯಗಳನ್ನೂ ನೈವೇದ್ಯಮಾಡಬೇಕು. 18 ಆಗ ನಾಜೀರನು ತನ್ನ ಸಮರ್ಪಣೆಯ ದೀಕ್ಷೆಯನ್ನು ಸೂಚಿಸುವ ತಲೆಯ ಕೂದಲನ್ನು ದೇವದರ್ಶನದ ಗುಡಾರದ ಬಾಗಿಲಿನ ಬಳಿಯಲ್ಲಿ ಕ್ಷೌರಮಾಡಿಸಿಕೊಂಡು, ಆ ಕೂದಲನ್ನು ಸಮಾಧಾನಯಜ್ಞದ್ರವ್ಯಗಳ ಕೆಳಗಿರುವ ಬೆಂಕಿಯಲ್ಲಿ ಹಾಕಬೇಕು. 19 ತರುವಾಯ ಯಾಜಕನು ಬೇಯಿಸಿದ ಆ ಟಗರಿನ ಮುಂದೊಡೆಯನ್ನೂ, ಪುಟ್ಟಿಯಲ್ಲಿನ ಹುಳಿಯಿಲ್ಲದ ಒಂದು ರೊಟ್ಟಿಯನ್ನು, ಹಾಗೂ ಹುಳಿಯಿಲ್ಲದ ಒಂದು ಕಡುಬನ್ನೂ ತೆಗೆದುಕೊಂಡು ನಾಜೀರನು ಕ್ಷೌರಮಾಡಿಸಿಕೊಂಡ ನಂತರ ಅವನ ಕೈಯಲ್ಲಿ ಅರ್ಪಿಸಬೇಕು. 20 ಯಾಜಕನು ಅವುಗಳನ್ನು ನೈವೇದ್ಯವಾಗಿ ನಿವಾಳಿಸಿ ಯೆಹೋವನ ಸನ್ನಿಧಿಯಲ್ಲಿ ಸಮರ್ಪಿಸಬೇಕು. ನೈವೇದ್ಯ ಮಾಡುವ ಎದೆಯ ಭಾಗದಂತೆ ಹಾಗೂ ಯಾಜಕರಿಗಾಗಿ ಪ್ರತ್ಯೇಕಿಸುವ ತೊಡೆಯಂತೆ ಯಾಜಕನಿಗೆ ಸಲ್ಲಿಸಬೇಕು. ಅನಂತರ ಆ ನಾಜೀರನು ದ್ರಾಕ್ಷಾರಸವನ್ನು ಪಾನಮಾಡಬೇಕು. 21 ಹರಕೆಮಾಡಿಕೊಂಡ ನಾಜೀರರ ವ್ರತ ನಿಯಮವು ಇದೇ. ಅವರು ತಮ್ಮ ವ್ರತಪೂರ್ತಿಗಾಗಿ ಯೆಹೋವನಿಗೆ ಸಮರ್ಪಿಸಬೇಕಾದ ಕಾಣಿಕೆ ಇದೇ. ಅವರು ತಮ್ಮ ಶಕ್ತಿಗನುಸಾರ ಹೆಚ್ಚಾಗಿಯೂ ಕೊಡಬಹುದು. ಆದರೆ ತಾವು ಕೊಡುತ್ತೆವೆಂದು ಹರಕೆಮಾಡಿದಷ್ಟು ವ್ರತವಿಧಿಗನುಸಾರವಾಗಿ ಕೊಡಲೇಬೇಕು.” ಆಶೀರ್ವಾದ ವಚನ 22 ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, 23 “ನೀನು ಆರೋನನಿಗೂ ಮತ್ತು ಅವನ ಮಕ್ಕಳಿಗೂ ಹೀಗೆ ಆಜ್ಞಾಪಿಸು, ‘ನೀವು ಇಸ್ರಾಯೇಲರನ್ನು ಹೀಗೆ ಆಶೀರ್ವದಿಸಬೇಕು. ಈ ಪ್ರಕಾರ ಅವರಿಗೆ ಹೇಳಬೇಕು, 24 ಯೆಹೋವನು ನಿಮ್ಮನ್ನು ಆಶೀರ್ವದಿಸಿ ಕಾಪಾಡಲಿ; 25 ಯೆಹೋವನು ಪ್ರಸನ್ನಮುಖದಿಂದ ನಿಮ್ಮನ್ನು ನೋಡಿ ನಿಮ್ಮ ಮೇಲೆ ದಯವಿಡಲಿ; 26 ಯೆಹೋವನು ನಿಮ್ಮ ಮೇಲೆ ಕೃಪಾಕಟಾಕ್ಷವಿಟ್ಟು ಶಾಂತಿಯನ್ನು ಅನುಗ್ರಹಿಸಲಿ’ ಎಂಬುದೇ. 27 ಹೀಗೆ ಅವರು ಇಸ್ರಾಯೇಲರನ್ನು ಕುರಿತು ನನ್ನ ಹೆಸರನ್ನು ಉಚ್ಚರಿಸುವಾಗ ನಾನು ಅವರನ್ನು ಆಶೀರ್ವದಿಸುವೆನು.” |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.