ಅರಣ್ಯಕಾಂಡ 28 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ದೈನಿಕ ಯಜ್ಞಸಮರ್ಪಣೆಗಳು 1 ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, 2 “ನೀನು ಇಸ್ರಾಯೇಲರಿಗೆ ಆಜ್ಞಾಪಿಸಿ ಅವರಿಗೆ, ‘ನನಗೆ ಸುಗಂಧಹೋಮಮಾಡುವುದಕ್ಕಾಗಿ ಇಸ್ರಾಯೇಲರು ನನಗೋಸ್ಕರ ತರುವ ಆಹಾರವನ್ನು ನೇಮಕವಾದ ಕಾಲಗಳಲ್ಲಿ ತಂದು ಎಚ್ಚರಿಕೆಯಿಂದ ಸಮರ್ಪಿಸಬೇಕೆಂದು ಅವರಿಗೆ ಆಜ್ಞಾಪಿಸು.’ 3 ಇದರ ವಿಷಯದಲ್ಲಿ ನೀನು ಹೇಳಬೇಕಾದುದೇನೆಂದರೆ, ‘ನೀವು ಪ್ರತಿದಿನವೂ ಯೆಹೋವನಿಗೆ ಸರ್ವಾಂಗಹೋಮಕ್ಕಾಗಿ ದೋಷವಿಲ್ಲದ ಒಂದು ವರ್ಷದ ಎರಡು ಕುರಿಮರಿಗಳನ್ನು ಸಮರ್ಪಿಸಬೇಕು. 4 ಹೊತ್ತಾರೆಯಲ್ಲಿ ಒಂದು ಕುರಿಯನ್ನು, ಸಾಯಂಕಾಲದಲ್ಲಿ ಒಂದು ಕುರಿಯನ್ನೂ ಸಮರ್ಪಿಸಬೇಕು. 5 ನೀವು ಧಾನ್ಯನೈವೇದ್ಯಕ್ಕಾಗಿ ಒಂದುವರೆ ಸೇರು ಶ್ರೇಷ್ಠವಾದ ಎಣ್ಣೆಯನ್ನೂ, ಮೂರು ಸೇರು ಹಿಟ್ಟನ್ನು ಬೆರೆಸಿ ಸಮರ್ಪಿಸಬೇಕು. 6 ನೀವು ಪ್ರತಿನಿತ್ಯವೂ ಯೆಹೋವನಿಗೆ ಸುಗಂಧಕರವಾದ ಈ ಸರ್ವಾಂಗಹೋಮವನ್ನು ಮಾಡಬೇಕೆಂಬುದಾಗಿ ಸೀನಾಯಿ ಬೆಟ್ಟದಲ್ಲಿ ನೇಮಕವಾಯಿತು. 7 ಒಂದು ಕುರಿಮರಿಯೊಂದಿಗೆ ಪರಿಶುದ್ಧ ಸ್ಥಳದಲ್ಲಿ ಒಂದುವರೆ ಸೇರು ಅಮಲೇರುವ ದ್ರಾಕ್ಷಾರಸದ ಪಾನದ್ರವ್ಯ ಅರ್ಪಣೆಗಾಗಿ, ಯೆಹೋವನಿಗೋಸ್ಕರ ಹೊಯ್ದುಬಿಡಬೇಕು. 8 ಸಾಯಂಕಾಲದಲ್ಲಿ ಇನ್ನೊಂದು ಕುರಿಯನ್ನು ಹೋಮಮಾಡುವಾಗ ಹೊತ್ತಾರೆಯಲ್ಲಿ ಮಾಡಿದ ಪ್ರಕಾರವೇ ಅದರೊಂದಿಗೆ ಧಾನ್ಯದ್ರವ್ಯ, ಪಾನದ್ರವ್ಯಗಳನ್ನೂ ಸಮರ್ಪಿಸಬೇಕು. ಅದು ಯೆಹೋವನಿಗೆ ಸುಗಂಧಕರ ಹೋಮವಾಗಿರುವುದು. ಸಬ್ಬತ್ ದಿನದ ಯಜ್ಞಸಮರ್ಪಣೆ 9 “‘ಸಬ್ಬತ್ ದಿನದಲ್ಲಿ ಧಾನ್ಯ ಸಮರ್ಪಣೆಗಾಗಿ ಎರಡು ಪೂರ್ಣಾಂಗವಾದ ದೋಷವಿಲ್ಲದ ಒಂದು ವರ್ಷದ ಕುರಿಮರಿಯನ್ನು, ಎಣ್ಣೆ ಬೆರಸಿದ ಆರು ಸೇರು ಹಿಟ್ಟನ್ನೂ, ಅದಕ್ಕೆ ತಕ್ಕ ಪಾನದ ಸಮರ್ಪಣೆಯನ್ನು ಮಾಡಬೇಕು. 10 ನಿತ್ಯ ಸರ್ವಾಂಗಹೋಮವು ಹೊರತು ಪ್ರತಿ ಸಬ್ಬತ್ತಿಗೆ ತಕ್ಕ ಸರ್ವಾಂಗಹೋಮವು, ಅದರ ಪಾನದ್ರವ್ಯದ ಅರ್ಪಣೆಯೂ ಆಗಬೇಕು. ಮಾಸಿಕ ಯಜ್ಞಸಮರ್ಪಣೆ 11 “‘ಪ್ರತಿ ತಿಂಗಳ ಆರಂಭದಲ್ಲಿ ನೀವು ಸರ್ವಾಂಗಹೋಮಕ್ಕಾಗಿ ಎರಡು ಟಗರು, ಏಳು ಪೂರ್ಣಾಂಗವಾದ ಒಂದು ವರ್ಷದ ದೋಷವಿಲ್ಲದ ಕುರಿಮರಿಗಳು ಇವುಗಳನ್ನು ಯೆಹೋವನಿಗೆ ಸಮರ್ಪಿಸಬೇಕು. 12 ಒಂದೊಂದು ಹೋರಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಒಂಭತ್ತು ಸೇರು ಹಿಟ್ಟನ್ನೂ, ಟಗರಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಬೆರಸಿದ ಆರು ಸೇರು ಹಿಟ್ಟನ್ನು ಸೇರಿಸಬೇಕು. 13 ಕುರಿಮರಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಬೆರಸಿದ ಮೂರು ಸೇರು ಹಿಟ್ಟನ್ನು ಯೆಹೋವನಿಗೆ ಸುಗಂಧವಾಸನೆಯ ಸರ್ವಾಂಗಹೋಮಕ್ಕಾಗಿ ಬೆಂಕಿಯಿಂದ ಮಾಡಿದ ಬಲಿಯೂ ಇದೇ. 14 ಇವುಗಳಿಗೆ ತಕ್ಕ ಪಾನದ್ರವ್ಯಾರ್ಪಣೆ ಯಾವುದೆಂದರೆ: ಒಂದೊಂದು ಹೋರಿಗೆ ಮೂರು ಸೇರು ದ್ರಾಕ್ಷಾರಸವನ್ನು, ಟಗರಿಗೆ ಎರಡು ಸೇರು ದ್ರಾಕ್ಷಾರಸವನ್ನು, ಕುರಿಗೆ ಒಂದುವರೆ ಸೇರು ದ್ರಾಕ್ಷಾರಸವನ್ನು, ವರ್ಷದ ಪ್ರತಿ ತಿಂಗಳಿನ ಆರಂಭದಲ್ಲಿ ಹೀಗೆ ಸರ್ವಾಂಗಹೋಮವನ್ನು ಮಾಡಬೇಕು. 15 ನಿತ್ಯ ಸರ್ವಾಂಗಹೋಮ ಹೊರತು ದೋಷಪರಿಹಾರ ಯಜ್ಞಕ್ಕಾಗಿ ಒಂದು ಹೋತವನ್ನು ಅದಕ್ಕೆ ತಕ್ಕ ಪಾನದ ಅರ್ಪಣೆಯನ್ನು ಯೆಹೋವನಿಗೆ ಸಮರ್ಪಿಸಬೇಕು. ಪಸ್ಕ ಹಬ್ಬದ ಯಜ್ಞಸಮರ್ಪಣೆ 16 “‘ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಯೆಹೋವನು ನೇಮಿಸಿದ ಹಬ್ಬವಾಗಬೇಕು. 17 ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಜಾತ್ರೆ ಪ್ರಾರಂಭವಾಗುವುದು; ಏಳು ದಿನಗಳವರೆಗೂ ಹುಳಿಯಿಲ್ಲದ ರೊಟ್ಟಿಗಳನ್ನು ಊಟಮಾಡಬೇಕು. 18 ಮೊದಲನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆಕೂಡಬೇಕು. ಆ ದಿನದಲ್ಲಿ ಯಾವ ಉದ್ಯೋಗವನ್ನು ನಡೆಸಬಾರದು. 19 ಯೆಹೋವನಿಗೆ ಸರ್ವಾಂಗಹೋಮಕ್ಕಾಗಿ ಎರಡು ಹೋರಿಗಳನ್ನೂ, ಒಂದು ಟಗರನ್ನೂ ಮತ್ತು ಒಂದು ವರ್ಷದ ಏಳು ಕುರಿಗಳನ್ನೂ ಸಮರ್ಪಿಸಬೇಕು. ಈ ಪಶುಗಳೂ ಪೂರ್ಣಾಂಗವಾಗಿ ದೋಷವಿಲ್ಲದೆಯೇ ಇರಬೇಕು. 20 ಇವುಗಳೊಂದಿಗೆ ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಹಿಟ್ಟನ್ನು ತಂದುಕೊಡಬೇಕು. ಹೋರಿಗೆ ಒಂಭತ್ತು ಸೇರು, ಟಗರಿಗೆ ಆರು ಸೇರು, 21 ಏಳು ಕುರಿಮರಿಯಲ್ಲಿ ಒಂದೊಂದಕ್ಕೆ ಎಣ್ಣೆ ಬೆರೆಸಿದ ಮೂರು ಸೇರನ್ನು, 22 ಅದಲ್ಲದೆ ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. 23 ಪ್ರತಿ ದಿನದ ಪ್ರಾತಃಕಾಲದಲ್ಲಿ ಸರ್ವಾಂಗಹೋಮವಲ್ಲದೆ ಇವುಗಳನ್ನು ಹೆಚ್ಚಾಗಿ ಸಮರ್ಪಿಸಬೇಕು. 24 ಆ ಏಳು ದಿನಗಳಲ್ಲಿಯೂ ನಿತ್ಯ ಸರ್ವಾಂಗಹೋಮವನ್ನು ಸಮರ್ಪಿಸುವುದಲ್ಲದೆ ಮೇಲೆ ಹೇಳಿದ ಕ್ರಮದ ಪ್ರಕಾರ ಪ್ರತಿದಿನವೂ ಹೋಮರೂಪವಾಗಿ ಯೆಹೋವನಿಗೆ ಆಹಾರವನ್ನು, ಪಾನದ್ರವ್ಯವನ್ನು ಸಹ ಸಮರ್ಪಿಸಿ ಆತನಿಗೋಸ್ಕರ ಸುವಾಸನೆಯನ್ನುಂಟುಮಾಡಬೇಕು. 25 ಏಳನೆಯ ದಿನದಲ್ಲೂ ಸಭೆಕೂಡಬೇಕು. ಆ ದಿನದಲ್ಲಿ ಯಾವ ಉದ್ಯೋಗವನ್ನು ನಡೆಸಬಾರದು. ಸುಗ್ಗಿ ಹಬ್ಬದ ಯಜ್ಞಸಮರ್ಪಣೆ 26 “‘ಪಸ್ಕವಾದ ಏಳು ವಾರಗಳ ಮೇಲೆ ನೀವು ಹೊಸ ಬೆಳೆಯ ಗೋದಿಯನ್ನು ಯೆಹೋವನಿಗೆ ನೈವೇದ್ಯಮಾಡುವಾಗ ಪ್ರಥಮಫಲಾರ್ಪಣೆಯ ದಿನದಲ್ಲಿ ನೀವು ಯಾವ ಉದ್ಯೋಗವನ್ನು ನಡೆಸದೆ ದೇವಾರಾಧನೆಗಾಗಿ ಸಭೆಕೂಡಬೇಕು. 27 ಆ ದಿನದಲ್ಲಿ ನೀವು ಯೆಹೋವನಿಗೆ ಸುವಾಸನೆಯನ್ನು ಉಂಟುಮಾಡುವುದಕ್ಕೋಸ್ಕರ ಸರ್ವಾಂಗಹೋಮಕ್ಕಾಗಿ ಎರಡು ಹೋರಿ, ಒಂದು ಟಗರು, ಒಂದು ವರ್ಷದ ಏಳು ಕುರಿಗಳು ಇವುಗಳನ್ನೂ, 28 ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಹಿಟ್ಟನ್ನು ಹಾಗೂ ಪ್ರತಿಯೊಂದು ಟಗರಿಗೆ ಒಂಭತ್ತು ಸೇರು, 29 ಹೋರಿಗೆ ಆರು ಸೇರು, ಕುರಿಗೆ ಮೂರು ಸೇರು ಹಿಟ್ಟನ್ನೂ, 30 ದೋಷಪರಿಹಾರ ಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. 31 ಈ ಪಶುಗಳೆಲ್ಲಾ ಪೂರ್ಣಾಂಗವಾಗಿ ಕುಂದುಕೊರತೆ ಇಲ್ಲದೆ ಇರಬೇಕು. ನಿತ್ಯ ಸರ್ವಾಂಗಹೋಮ ಮತ್ತು ಅದಕ್ಕೆ ಸೇರಿದ ಧಾನ್ಯದ್ರವ್ಯ, ನೈವೇದ್ಯ ಇವುಗಳನ್ನಲ್ಲದೆ ಮೇಲೆ ಕಂಡ ಯಜ್ಞಗಳನ್ನೂ ಅವುಗಳೊಡನೆ ಕೊಡಬೇಕಾದ ಪಾನದ್ರವ್ಯ, ನೈವೇದ್ಯಗಳನ್ನೂ ಹೆಚ್ಚಾಗಿ ಸಮರ್ಪಿಸಬೇಕು.’” |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.