ಅರಣ್ಯಕಾಂಡ 27 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಚಲ್ಪಹಾದನ ಹೆಣ್ಣುಮಕ್ಕಳ ವಿನಂತಿ 1 ಯೋಸೇಫನ ಕುಮಾರ ಮನಸ್ಸೆಯ ವಂಶದವರೊಳಗೆ ಮನಸ್ಸೆಗೆ ಹುಟ್ಟಿದ ಮಾಕೀರನ ಮರಿಮಗನೂ, ಗಿಲ್ಯಾದನ ಮೊಮ್ಮಗನೂ ಹೇಫೆರನ ಮಗನಾದ ಚಲ್ಪಹಾದನ ಹೆಣ್ಣುಮಕ್ಕಳಾದ ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ ಎಂಬುವವರು ಮೋಶೆಯ ಬಳಿ ಒಂದು ವಿಜ್ಞಾಪನೆಯನ್ನು ಮಾಡಿಕೊಳ್ಳುವುದಕ್ಕೆ ಬಂದರು. 2 ಅವರು ದೇವದರ್ಶನದ ಗುಡಾರದ ಬಾಗಿಲಿನ ಬಳಿಯಲ್ಲಿ ಮೋಶೆ, ಮಹಾಯಾಜಕನಾದ ಎಲ್ಲಾಜಾರ್, ಕುಲಾಧಿಪತಿಗಳು, ಸರ್ವಸಮೂಹದವರೆಲ್ಲರ ಮುಂದೆ ನಿಂತು ಅವರಿಗೆ, 3 “ನಮ್ಮ ತಂದೆ ಮರುಭೂಮಿಯಲ್ಲಿ ಸತ್ತುಹೋದನು. ಅವನು ಕೋರಹನ ಸಮೂಹದವರು ಯೆಹೋವನಿಗೆ ವಿರುದ್ಧವಾಗಿ ತಿರುಗಿಬಿದ್ದವರೊಳಗೆ ಸೇರಿದವನಲ್ಲ. ಅವನು ಸತ್ತದ್ದು ಸ್ವಂತ ಕರ್ಮಫಲವೇ. ಅವನಿಗೆ ಗಂಡು ಮಕ್ಕಳಿಲ್ಲ. 4 ನಮ್ಮ ತಂದೆಗೆ ಗಂಡು ಮಗನಿಲ್ಲದ ಕಾರಣದಿಂದ ಅವನ ಹೆಸರು ಕುಲದಿಂದ ತೆಗೆದು ಹಾಕುವುದು ನ್ಯಾಯವೋ? ತಂದೆಯ ಕುಲದವರೊಂದಿಗೆ ನಮಗೂ ಸ್ವತ್ತನ್ನು ಕೊಡಬೇಕು” ಎಂದು ಕೇಳಿಕೊಂಡರು. 5 ಮೋಶೆಯು ಅವರ ವಿಜ್ಞಾಪನೆಯನ್ನು ಯೆಹೋವನ ಸಮ್ಮುಖದಲ್ಲಿ ವಿಚಾರಿಸಿದನು. 6 ಯೆಹೋವನು ಮೋಶೆಯ ಸಂಗಡ ಮಾತನಾಡಿ ಆಜ್ಞಾಪಿಸಿದ್ದೇನೆಂದರೆ, 7 “ಚಲ್ಪಹಾದನ ಹೆಣ್ಣು ಮಕ್ಕಳು ಹೇಳುವುದು ನ್ಯಾಯವಾಗಿದೆ. ಅವರ ತಂದೆಯ ಕುಲದವರೊಂದಿಗೆ ಅವರಿಗೂ ನೀನು ಸ್ವತ್ತನ್ನು ಕೊಡಬೇಕು. ತಂದೆಯ ಸ್ವತ್ತು ಅವರಿಗೆ ಬರಲಿ. 8 “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ಯಾವನಾದರೂ ಮಗನಿಲ್ಲದೆ ಸತ್ತರೆ ಅವನ ಸ್ವತ್ತು ಅವನ ಮಗಳಿಗೆ ಆಗಬೇಕು. 9 ಮಗಳೂ ಇಲ್ಲದ ಪಕ್ಷಕ್ಕೆ ಅವನ ಸ್ವತ್ತನ್ನು ಅವನ ಅಣ್ಣತಮ್ಮಂದಿರಿಗೆ ಕೊಡಬೇಕು. 10 ಅಣ್ಣತಮ್ಮಂದಿರಿಲ್ಲದ ಪಕ್ಷಕ್ಕೆ ಅವನ ಸ್ವತ್ತನ್ನು ತಂದೆಯ ಅಣ್ಣತಮ್ಮಂದಿರಿಗೆ ಕೊಡಬೇಕು. 11 ಇವರೂ ಇಲ್ಲದಿದ್ದರೆ ಕುಲದವರಲ್ಲಿ ಸಮೀಪಬಂಧುವಿಗೆ ಕೊಡಬೇಕು. ಇವನೇ ಆ ಸ್ವತ್ತನ್ನು ಅನುಭವಿಸಲಿ. ಯೆಹೋವನು ಮೋಶೆಗೆ ಅಪ್ಪಣೆಮಾಡಿದ ಈ ತೀರ್ಮಾನವು ಇಸ್ರಾಯೇಲರಿಗೆ ನ್ಯಾಯನಿಯಮಗಳಾಗಿರಬೇಕು.’” ಮೋಶೆಯ ತರುವಾಯ ಯೆಹೋವನು ಯೆಹೋಶುವನನ್ನು ನೇಮಿಸಿದ್ದು 12 ಯೆಹೋವನು ಮೋಶೆಗೆ, “ನೀನು ಈ ಅಬಾರೀಮ್ ಬೆಟ್ಟವನ್ನು ಹತ್ತಿ ನಾನು ಇಸ್ರಾಯೇಲರಿಗೆ ವಾಗ್ದಾನಮಾಡಿದ ದೇಶವನ್ನು ನೋಡು. 13 ನಿನ್ನ ಅಣ್ಣನಾದ ಆರೋನನು ಪೂರ್ವಿಕರ ಬಳಿಗೆ ಸೇರಿದಂತೆಯೇ ನೀನೂ ಆ ದೇಶವನ್ನು ನೋಡಿದ ಮೇಲೆ ಸೇರಬೇಕು. 14 ಚಿನ್ ಅರಣ್ಯದಲ್ಲಿ ಇಸ್ರಾಯೇಲರ ಸಮೂಹದವರು ನನ್ನೊಡನೆ ವಿವಾದಿಸಿದಾಗ ನೀವಿಬ್ಬರೂ ನನ್ನ ಗೌರವವನ್ನು ಅವರ ಎದುರಿನಲ್ಲಿ ಕಾಪಾಡದೆ ನನ್ನ ಆಜ್ಞೆಯನ್ನು ಉಲ್ಲಂಘಿಸಿದ್ದರಿಂದ ಆ ದೇಶವನ್ನು ಸೇರಬಾರದು” ಎಂದು ಹೇಳಿದೆನು. ಚಿನ್ ಅರಣ್ಯದಲ್ಲಿನ ಮೆರೀಬಾ ಕಾದೇಶಿನ ಪ್ರವಾಹದ ಹತ್ತಿರ ನಡೆದ ಸಂಗತಿಯನ್ನು ಸೂಚಿಸಿ ಇದನ್ನು ಹೇಳಿದನು. 15 ಆಗ ಮೋಶೆಯು ಯೆಹೋವನ ಸಂಗಡ ಮಾತನಾಡಿ, 16 “ಎಲ್ಲಾ ಮನುಷ್ಯರ ಆತ್ಮಗಳ ದೇವರಾದ ಯೆಹೋವನು ಈ ಜನ ಸಮೂಹದ ಮೇಲೆ ಒಬ್ಬ ಮನುಷ್ಯನನ್ನು ಇಡಲಿ. 17 ಯೆಹೋವನು ಅವರ ಮುಂದಾಗಿ ಹೋಗಲಿ ಅಥವಾ ಅವರನ್ನು ಮುನ್ನಡೆಸಲು, ಮುಂದಾಗಿ ಬರಲಿ ಅವರನ್ನು ಹಿಂದಕ್ಕೆ ಕರೆದುಕೊಂಡು ಬರಲು, ಒಬ್ಬ ನಾಯಕನನ್ನು ನೇಮಿಸು ನಿನ್ನವರಾದ ಈ ಜನ ಸಮೂಹವು ಕುರುಬನಿಲ್ಲದ ಕುರಿಗಳಂತೆ ಆಗಬಾರದು” ಎಂದು ಬೇಡಿದನು. 18 ಅದಕ್ಕೆ ಯೆಹೋವನು ಮೋಶೆಗೆ, “ನೂನನ ಮಗನಾದ ಯೆಹೋಶುವನಲ್ಲಿ ನನ್ನ ಆತ್ಮವು ವಾಸಿಸುತ್ತಿದೆ, 19 ಅವನನ್ನು ಮಹಾಯಾಜಕನಾದ ಎಲ್ಲಾಜಾರನ ಮತ್ತು ಸಮೂಹದವರೆಲ್ಲರ ಮುಂದೆ ನಿಲ್ಲಿಸಿ ಅವನ ಮೇಲೆ ಕೈಯಿಟ್ಟು ಅವರ ಎದುರಿನಲ್ಲೇ ಅಧಿಕಾರವನ್ನು ಕೊಡಬೇಕು. 20 ಇಸ್ರಾಯೇಲರ ಸಮೂಹದವರೆಲ್ಲರೂ ಅವನಿಗೆ ವಿಧೇಯರಾಗಿರುವಂತೆ ನಿನ್ನ ಬಗ್ಗೆ ಇರುವ ಗೌರವವನ್ನು ಅವನಿಗೆ ಕೊಡಬೇಕು. 21 ಯೆಹೋವನ ಚಿತ್ತವನ್ನು ತಿಳಿದುಕೊಳ್ಳುವುದಕ್ಕೆ ಅವನು ಮಹಾಯಾಜಕನಾದ ಎಲ್ಲಾಜಾರನ ಹತ್ತಿರ ಬರಬೇಕು. ಎಲ್ಲಾಜಾರನು ಯೆಹೋವನ ಸನ್ನಿಧಿಯಲ್ಲಿ ಊರೀಮಿನ ನ್ಯಾಯದ ಪ್ರಕಾರ ಅವನಿಗೋಸ್ಕರ ವಿಚಾರಣೆಯನ್ನು ಮಾಡಬೇಕು. ಯೆಹೋಶುವನೂ ಮತ್ತು ಇಸ್ರಾಯೇಲರ ಸರ್ವಸಮೂಹದವರೂ ಅವನ ಮಾತಿನಂತೆ ಹೊರಡಬೇಕು, ಹಿಂತಿರುಗಬೇಕು, ಅವನ ಮಾತಿನಂತೆ ನಡೆಯಬೇಕು.” ಎಂದು ಆಜ್ಞಾಪಿಸಿದನು. 22 ಯೆಹೋವನ ಅಪ್ಪಣೆಯ ಪ್ರಕಾರ ಮೋಶೆಯು ಯೆಹೋಶುವನನ್ನು ಮಹಾಯಾಜಕನಾದ ಎಲ್ಲಾಜಾರನ ಮತ್ತು ಸರ್ವಸಮೂಹದವರ ಮುಂದೆ ನಿಲ್ಲಿಸಿದನು. 23 ಅವನ ಮೇಲೆ ತನ್ನ ಕೈಗಳನ್ನಿಟ್ಟು ಯೆಹೋವನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವನಿಗೆ ಅಧಿಕಾರವನ್ನು ಕೊಟ್ಟನು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.