ಅರಣ್ಯಕಾಂಡ 25 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಮೋವಾಬ್ ಸ್ತ್ರೀಯರು ಇಸ್ರಾಯೇಲರನ್ನು ದ್ರೋಹಿಗಳನ್ನಾಗಿ ಮಾಡಿದ್ದು 1 ಇಸ್ರಾಯೇಲರು ಶಿಟ್ಟೀಮಿನಲ್ಲಿ ವಾಸವಾಗಿದ್ದಾಗ ಅವರು ಮೋವಾಬ್ ಸ್ತ್ರೀಯರೊಡನೆ ಸಹವಾಸ ಮಾಡುವವರಾದರು. 2 ಆ ಸ್ತ್ರೀಯರು ತಮ್ಮ ದೇವತೆಗಳಿಗೆ ಮಾಡಿದ ಔತಣದ ಯಜ್ಞಗಳಿಗೆ ಇಸ್ರಾಯೇಲರನ್ನು ಆಹ್ವಾನಿಸಿದರು. ಇವರು ಆ ಭೋಜನವನ್ನು ಮಾಡಿ ಅವರ ದೇವತೆಗಳಿಗೆ ನಮಸ್ಕರಿಸುವವರಾದರು. 3 ಹೀಗೆ ಇಸ್ರಾಯೇಲರು ಪೆಗೋರದ ಬಾಳನ ಭಕ್ತರಾದರು. ಯೆಹೋವನ ಕೋಪವು ಅವರ ಮೇಲೆ ಹೆಚ್ಚಾಯಿತು. 4 ಆದುದರಿಂದ ಯೆಹೋವನು ಮೋಶೆಗೆ, “ನೀನು ಜನರ ಮುಖಂಡರೆಲ್ಲರನ್ನೂ ಹಿಡಿಸಿ ಅವರನ್ನು ಯೆಹೋವನಿಗೋಸ್ಕರ ಬಹಿರಂಗವಾಗಿ ಕೊಲ್ಲಿಸಬೇಕು. ಹೀಗೆ ಯೆಹೋವನ ಕೋಪಾಗ್ನಿಯನ್ನು ಇಸ್ರಾಯೇಲರಿಂದ ತೊಲಗಿಸಬೇಕು” ಎಂದು ಹೇಳಿದನು. 5 ಆದಕಾರಣ ಮೋಶೆ ಇಸ್ರಾಯೇಲರ ಮುಖಂಡರಿಗೆ, “ಪೆಗೋರದ ಬಾಳ್ ನನ್ನು ಪೂಜಿಸುವ ಜನರು ನಿಮ್ಮ ವಶದಲ್ಲಿದ್ದರೆ ಅಂಥವನಿಗೆ ಮರಣ ಶಿಕ್ಷೆಯನ್ನು ವಿಧಿಸಬೇಕು” ಎಂದು ಆಜ್ಞಾಪಿಸಿದನು. 6 ಇಸ್ರಾಯೇಲರಲ್ಲಿ ಒಬ್ಬನು ಮೋಶೆ ಮತ್ತು ಇಸ್ರಾಯೇಲರ ಸರ್ವಸಮೂಹದವರ ಎದುರಿನಲ್ಲಿಯೇ ತನ್ನ ಸಹೋದರರೊಳಗೆ ಒಬ್ಬ ಮಿದ್ಯಾನ್ ಸ್ತ್ರೀಯನ್ನು ತನ್ನ ಮನೆಯೊಳಗೆ ಕರೆದುಕೊಂಡು ಬಂದನು. 7 ಕೂಡಲೆ ಮಹಾಯಾಜಕನಾದ ಆರೋನನ ಮೊಮ್ಮಗನೂ, ಎಲ್ಲಾಜಾರನ ಮಗನಾದ ಫೀನೆಹಾಸನು ಸಭೆಯ ಮಧ್ಯದಲ್ಲಿ ಎದ್ದು ಈಟಿಯನ್ನು ಕೈಯಲ್ಲಿ ಹಿಡಿದುಕೊಂಡನು. 8 ಅವನು ಇಸ್ರಾಯೇಲನ ಹಿಂದೆ ಹೋಗಿ ಅವನು ಮಲಗುವ ಕೋಣೆಯನ್ನು ಪ್ರವೇಶಿಸಿ ಅವರಿಬ್ಬರನ್ನೂ ಅಂದರೆ ಆ ಇಸ್ರಾಯೇಲನನ್ನೂ ಮತ್ತು ಆ ಸ್ತ್ರೀಯನ್ನೂ ಒಂದೇ ಬಾರಿಗೆ ಹೊಟ್ಟೆಯನ್ನು ತಿವಿದು ಕೊಂದುಹಾಕಿದನು. ಆಗ ಇಸ್ರಾಯೇಲರಿಗೆ ಉಂಟಾಗಿದ್ದ ವ್ಯಾಧಿಯು ನಿಂತು ಹೋಯಿತು. 9 ಈಗಾಗಲೇ ಆ ವ್ಯಾಧಿಯಿಂದ ಇಪ್ಪತ್ತನಾಲ್ಕು ಸಾವಿರ ಮಂದಿ ಮರಣ ಹೊಂದಿದರು. 10 ಆಗ ಯೆಹೋವನು ಮೋಶೆಯ ಸಂಗಡ ಮಾತನಾಡಿ, 11 “ನಾನು ನನ್ನ ಗೌರವವನ್ನು ಕಾಪಾಡಿಕೊಳ್ಳುವ ಪ್ರಕಾರ ಮಹಾಯಾಜಕನಾದ ಆರೋನನ ಮೊಮ್ಮಗನೂ, ಎಲ್ಲಾಜಾರನ ಮಗನಾದ ಫೀನೆಹಾಸನು ನನ್ನ ಗೌರವವನ್ನು ಕಾಪಾಡಿದ್ದರಿಂದ ಇಸ್ರಾಯೇಲರ ಮೇಲಿದ್ದ ನನ್ನ ಕೋಪವನ್ನು ತೊಲಗಿಸಿದ್ದಾನೆ. ಹೀಗಿರುವುದರಿಂದ ನಾನು ನನ್ನ ಗೌರವವನ್ನು ಕಾಪಾಡಿಕೊಳ್ಳುವುದಕ್ಕಾಗಿ ಇಸ್ರಾಯೇಲರನ್ನು ನಿರ್ಮೂಲಮಾಡಬೇಕಾದ ಅಗತ್ಯವಿಲ್ಲ. 12 ಆದಕಾರಣ ನಾನು ಅವನ ಸಂಗಡ ಸ್ನೇಹದ ಒಡಂಬಡಿಕೆ ಮಾಡಿಕೊಳ್ಳುತ್ತೇನೆ ಎಂದು ಎಲ್ಲರಿಗೂ ತಿಳಿಸು. 13 ಅವನಿಗೂ, ಅವನ ತರುವಾಯ ಅವನ ಸಂತತಿಯವರಿಗೂ ಯಾಜಕತ್ವವು ಶಾಶ್ವತವಾಗಿಯೇ ಇರುವುದೆಂದು ಒಡಂಬಡಿಕೆ ಮಾಡುತ್ತೇನೆ. ಅವನು ತನ್ನ ದೇವರ ಗೌರವವನ್ನು ಹೆಚ್ಚಿಸಿ ಇಸ್ರಾಯೇಲರಿಗೋಸ್ಕರ ದೋಷಪರಿಹಾರವನ್ನು ಮಾಡಿದುದರಿಂದ ನಾನು ಅವನಿಗೆ ಈ ಮಾತನ್ನು ಕೊಟ್ಟಿದ್ದೇನೆ” ಎಂದು ಹೇಳಿದನು. 14 ಆ ಮಿದ್ಯಾನ್ ಸ್ತ್ರೀಯೊಡನೆ ಹತವಾದವನ ಆ ಇಸ್ರಾಯೇಲಿನವನ ಹೆಸರು ಜಿಮ್ರಿ, ಅವನು ಸಿಮೆಯೋನ್ಯ ಕುಲದವರಲ್ಲಿ ಗೋತ್ರ ಪ್ರಧಾನನಾದ ಸಾಲೂ ಎಂಬುವನ ಮಗನು. 15 ಹತವಾದ ಆ ಮಿದ್ಯಾನ್ ಸ್ತ್ರೀಯ ಹೆಸರು ಕೊಜ್ಬೀ, ಅವಳು ಮಿದ್ಯಾನ್ಯರಲ್ಲಿ ಗೋತ್ರ ಪ್ರಧಾನನಾದ ಚೂರ್ ಎಂಬುವನ ಮಗಳು. 16 ತರುವಾಯ ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನೆಂದರೆ, 17 “ನೀನು ಮಿದ್ಯಾನ್ಯರನ್ನು ವೈರಿಯೆಂದು ತಿಳಿದು ಸಂಹರಿಸಬೇಕು. 18 ಅವರು ಪೆಗೋರದ ವಿಷಯದಲ್ಲಿಯೂ, ಮಿದ್ಯಾನ್ಯರ ಅಧಿಪತಿಯ ಮಗಳಾದ ಕೊಜ್ಬೀ ಎಂಬ ಸ್ತ್ರೀಯ ವಿಷಯದಲ್ಲಿಯೂ ನಿಮ್ಮನ್ನು ಮೋಸಗೊಳಿಸಿ ಹಿಂಸಿಸಿದ್ದಾರೆ. ಆ ಸ್ತ್ರೀಯು ಪೆಗೋರದ ಘಟನೆಗಳ ನಿಮಿತ್ತ ಘೋರ ವ್ಯಾಧಿ ಉಂಟಾದಾಗ ಹತಳಾದವಳು.” |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.