ಅರಣ್ಯಕಾಂಡ 24 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಇಸ್ರಾಯೇಲರಿಗೆ ಶುಭವಾಗಬೇಕೆಂಬುದು ಯೆಹೋವನ ಚಿತ್ತವೆಂದು ಬಿಳಾಮನು ತಿಳಿದು ಮೊದಲಿನಂತೆ ಶಕುನ ನೋಡುವುದಕ್ಕೆ ಹೋಗದೆ ಅರಣ್ಯದ ಕಡೆಗೆ ಮುಖವನ್ನು ತಿರುಗಿಸಿಕೊಂಡನು. 2 ಬಿಳಾಮನು ಕಣ್ಣೆತ್ತಿ ನೋಡಲಾಗಿ ಕುಲಗಳ ಪ್ರಕಾರ ಡೇರೆಗಳನ್ನು ಹಾಕಿಕೊಂಡಿದ್ದ ಇಸ್ರಾಯೇಲರು ಅವನಿಗೆ ಕಾಣಿಸಿದರು. ಆಗ ಅವನು ದೇವರಾತ್ಮಪ್ರೇರಿತನಾಗಿ, 3 ಹೀಗೆ ಪ್ರವಾದಿಸಿದನು, “ಬೆಯೋರನ ಮಗನಾದ ಬಿಳಾಮನು ಹೇಳಿದ್ದು, ಮನೋದೃಷ್ಟಿಯಿಂದ ನೋಡುವ ಪುರುಷನು ನುಡಿದದ್ದು. 4 ದೇವರ ಮಾತುಗಳನ್ನು ಕೇಳುವವನಾಗಿಯೂ, ಸರ್ವಶಕ್ತನ ದರ್ಶನವನ್ನು ಹೊಂದುವವನಾಗಿಯೂ ಪರವಶವಾಗಿ ತೆರೆದ ಕಣ್ಣುಳ್ಳವನೂ ಹೇಳಿದ್ದು. 5 ಯಾಕೋಬೇ, ನಿಮ್ಮ ಡೇರೆಗಳು ಎಷ್ಟೋ ಚೆಲುವಾಗಿವೆ, ಇಸ್ರಾಯೇಲರೇ, ನಿಮ್ಮ ನಿವಾಸಗಳು ಎಷ್ಟೋ ರಮ್ಯವಾಗಿವೆ. 6 ಅವು ಕಣಿವೆಗಳ ಹಾಗೆಯೇ ವಿಸ್ತರಿಸಿದೆ. ನದಿಯ ಬಳಿಯಲ್ಲಿರುವ ತೋಟಗಳಂತೆಯೂ, ಯೆಹೋವನು ನೆಟ್ಟ ಅಗರು ಮರಗಳ ಹಾಗೆಯೂ ನೀರಿನ ಬಳಿಯಲ್ಲಿರುವ ದೇವದಾರುವೃಕ್ಷಗಳಿಗೂ ಸಮಾನವಾಗಿವೆ. 7 ತನ್ನ ತೊಟ್ಟಿಗಳಿಂದ ನೀರು ಹರಿಯುತ್ತಲೇ ಇದೆ, ಅವರ ಬಿತ್ತನೆಗೆ ಬೇಕಾದಷ್ಟು ನೀರು ಇರುವುದು. ಅವರ ಅರಸನು ಅಗಾಗ್ ರಾಜನಿಗಿಂತಲೂ ದೊಡ್ಡವನಾಗಿರುವನು. ಅವರ ರಾಜ್ಯವು ಅಭಿವೃದ್ಧಿಯಲ್ಲಿರುವುದು. 8 ದೇವರು ಅವನನ್ನು ಐಗುಪ್ತ ದೇಶದಿಂದ ಕರೆದುಕೊಂಡು ಬಂದನು. ಅವರು ಕಾಡುಕೋಣದಷ್ಟು ಬಲವುಳ್ಳವರು. ಅವರು ಶತ್ರುಜನರನ್ನು ನಿರ್ಮೂಲಮಾಡುವರು. ವೈರಿಗಳ ಎಲುಬುಗಳನ್ನು ಮುರಿದುಹಾಕುವರು. ಅವರನ್ನು ಬಾಣಗಳಿಂದ ಗಾಯಪಡಿಸುವರು. 9 ಆ ಜನಾಂಗವು ಸಿಂಹದಂತೆ ಕಾಲುಮುದುರಿ ಹೊಂಚುಹಾಕಿಕೊಂಡಿದೆ, ಮೃಗೇಂದ್ರನಿಗೆ ಸಮನಾದ ಆ ಜನರನ್ನು ಕೆಣಕುವುದು ಯಾರಿಂದಾದೀತು? ಇಸ್ರಾಯೇಲರೇ, ನಿಮ್ಮನ್ನು ಆಶೀರ್ವದಿಸುವವನಿಗೆ ಆಶೀರ್ವಾದವೂ, ಶಪಿಸುವವನಿಗೆ ಶಾಪವೂ ಉಂಟಾಗುವುದು” ಎಂದನು. 10 ಆಗ ಬಾಲಾಕನು ಬಿಳಾಮನ ಮೇಲೆ ಕೋಪಗೊಂಡು ಚಪ್ಪಾಳೆಹೊಡೆದು ಅವನಿಗೆ, “ನನ್ನ ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆದೆನು. ಆದರೆ ಇಗೋ, ನೀನು ಅವರನ್ನು ಮೂರು ಸಾರಿಯೂ ಆಶೀರ್ವದಿಸಿದೆ. 11 ಆದಕಾರಣ ನನ್ನನ್ನು ಬಿಟ್ಟು ನಿನ್ನ ಊರಿಗೆ ಹೋಗಿಬಿಡು. ನಿನ್ನನ್ನು ಬಹಳವಾಗಿ ಸನ್ಮಾನಿಸಿ ಘನಪಡಿಸುವೆನೆಂದು ಹೇಳಿಕೊಂಡೆನು. ಆದರೆ ನಿನಗೆ ಸನ್ಮಾನಮಾಡದಂತೆ ಯೆಹೋವನು ಅಡ್ಡಿಮಾಡಿದ್ದಾನೆ” ಎಂದು ಹೇಳಿದನು. 12 ಅದಕ್ಕೆ ಬಿಳಾಮನು ಬಾಲಾಕನಿಗೆ, “ನೀನು ನನ್ನ ಬಳಿ ಕಳುಹಿಸಿದ ಸೇವಕನಿಗೆ, 13 ‘ಬಾಲಾಕನು ನನಗೆ ತನ್ನ ಮನೇ ತುಂಬುವಷ್ಟು ಬೆಳ್ಳಿಬಂಗಾರವನ್ನು ದಾನಮಾಡಿದರೂ ನಾನು ಯೆಹೋವನ ಆಜ್ಞೆಯನ್ನು ಮೀರಿ ನನ್ನ ಇಷ್ಟದಂತೆ ಒಳ್ಳೇಯದನ್ನಾದರೂ, ಕೆಟ್ಟದ್ದನ್ನಾದರೂ ಮಾಡಲಾರೆ. ಯೆಹೋವನು ಏನು ಹೇಳುತ್ತಾನೋ ಅದನ್ನೇ ಮಾತನಾಡುವೆನು ಎಂದು ಹೇಳಲಿಲ್ಲವೋ?’ 14 ಈಗ ನಾನು ನನ್ನ ಜನರ ಬಳಿಗೆ ಹೋಗುತ್ತೇನೆ. ಆದರೆ ಕಡೆಗೆ ಆ ಜನರು ನಿನ್ನ ಜನರಿಗೆ ಮುಂದಿನ ದಿನಗಳಲ್ಲಿ ಏನು ಮಾಡುವರೋ ಅದನ್ನು ನಿನಗೆ ತಿಳಿಸುತ್ತೇನೆ” ಎಂದನು. ಬಿಳಾಮನ ನಾಲ್ಕನೆಯ ದೈವವಾಣಿ 15 ಬಿಳಾಮನು ಪದ್ಯರೂಪವಾಗಿ ಪ್ರವಾದಿಸಿದನು, “ಬೆಯೋರನ ಮಗನಾದ ಬಿಳಾಮನಿಗುಂಟಾದ ದೈವೋಕ್ತಿ, ಮನೋದೃಷ್ಟಿಯಿಂದ ನೋಡುವ ಪುರುಷನು ನುಡಿದದ್ದು. 16 ದೇವರ ಮಾತುಗಳನ್ನು ಕೇಳುವವನೂ, ಪರಾತ್ಪರನಾದ ದೇವರ ಜ್ಞಾನವನ್ನು ಪಡೆದವನೂ, ಪರವಶವಾಗಿ ಕಣ್ಣುತೆರೆದು, ಸರ್ವಶಕ್ತನ ದರ್ಶನವನ್ನು ಹೊಂದುವವನೂ ಆಗಿರುವ ಪುರುಷನು ನುಡಿದದ್ದು. 17 ನಾನು ಅವನನ್ನು ನೋಡುವೆನು, ಈಗಲ್ಲ. ಆತನನ್ನು ದೃಷ್ಟಿಸುವೆನು, ಆದರೆ ಸಮೀಪದಲ್ಲಿ ಅಲ್ಲ. ಯಾಕೋಬ ವಂಶದವರಲ್ಲಿ ನಕ್ಷತ್ರವು ಉದಯಿಸುವುದು. ಇಸ್ರಾಯೇಲರಲ್ಲಿ ರಾಜದಂಡವು ಏಳುವುದು. ಅದು ಮೋವಾಬ್ಯರ ತಲೆಯನ್ನು ಸೀಳಿಹಾಕುವುದು ಸೇತನ ಎಲ್ಲಾ ಮಕ್ಕಳನ್ನು ಸಂಹರಿಸಿವುದು. 18 ಅದಲ್ಲದೆ ಇಸ್ರಾಯೇಲರು ಎದೋಮ್ಯರ ದೇಶವನ್ನೂ ಸ್ವಾಧೀನಪಡಿಸಿಕೊಂಡಿದ್ದಾರೆ, ಹಗೆಗಳಾದ ಸೇಯೀರಿನವರು ಅವನಿಗೆ ಅಧೀನರಾದರು. 19 ಇಸ್ರಾಯೇಲರೋ ಬಲಗೊಂಡವರು, ಯಾಕೋಬ್ಯರಿಗೇ ದೊರೆತನವಾಯಿತು, ಪಟ್ಟಣಗಳಿಂದ ತಪ್ಪಿಸಿಕೊಂಡವರೂ ನಾಶವಾದರು” ಎಂದನು. ಬಿಳಾಮನ ಅಂತಿಮ ದೈವವಾಣಿ 20 ತರುವಾಯ ಅಮಾಲೇಕ್ಯರನ್ನು ನೋಡಿ ಅವರ ವಿಷಯದಲ್ಲಿ ಪ್ರವಾದಿಸಿದ್ದೇನೆಂದರೆ, “ಅಮಾಲೇಕ್ಯರು ಜನಾಂಗಗಳಲ್ಲಿ ಪ್ರಮುಖರಲ್ಲವೇ, ಆದರೂ ನಾಶನವೇ ಅವರ ಗತಿ.” 21 ಬಳಿಕ ಅವನು ಕೇನ್ಯರನ್ನು ನೋಡಿ ಅವರ ವಿಷಯದಲ್ಲಿ ಪ್ರವಾದಿಸಿದ್ದೇನೆಂದರೆ, “ನಿಮ್ಮ ನಿವಾಸ ಸ್ಥಳವು ಶಾಶ್ವತವಾಗಿಯೇ ತೋರುತ್ತದೆ, ಬೆಟ್ಟದ ತುದಿಯಲ್ಲಿ ಗೂಡನ್ನು ಮಾಡಿಕೊಂಡಿದ್ದೀರಿ. 22 ಆದರೂ ಕೇನ್ಯರೂ ನಾಶವಾಗುವರು. ಅದು ಎಷ್ಟು ದೂರ ಅನ್ನುತ್ತೀರೋ? ಅಶ್ಶೂರ್ಯರೇ ನಿಮ್ಮನ್ನು ಸೆರೆಹಿಡಿದುಕೊಂಡು ಹೋಗುವರು.” 23 ಅವನು ಮತ್ತೂ ಕಡೆಯದಾಗಿ ಪ್ರವಾದಿಸಿದ್ದೇನೆಂದರೆ, “ಅಯ್ಯೋ! ದೇವರು ಹೀಗೆ ಮಾಡುವಾಗ ಯಾರು ಉಳಿಯುವರು? 24 ಕಿತ್ತೀಮೆಂಬ ಸ್ಥಳದಿಂದ ಜನರು ಹಡಗುಗಳಲ್ಲಿ ಬಂದು ಅಶ್ಶೂರ್ಯರನ್ನೂ ಏಬೆರ್ ಜನರನ್ನೂ ಸೋಲಿಸುವರು; ಅವರಿಗೂ ನಾಶನವುಂಟಾಗುವುದು” ಎಂದನು. 25 ತರುವಾಯ ಬಿಳಾಮನು ಸ್ವದೇಶಕ್ಕೆ ತಿರುಗಿ ಹೋದನು, ಬಾಲಾಕನೂ ಹೊರಟುಹೋದನು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.