Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 23 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಬಿಳಾಮನ ಮೊದಲನೆಯ ದೈವವಾಣಿ

1 ಆಗ ಬಿಳಾಮನು ಬಾಲಾಕನಿಗೆ, “ಇಲ್ಲಿ ಏಳು ಯಜ್ಞವೇದಿಗಳನ್ನು ಕಟ್ಟಿಸು ಮತ್ತು ಏಳು ಹೋರಿಗಳನ್ನು ಮತ್ತು ಏಳು ಟಗರುಗಳನ್ನು ಸಿದ್ಧಪಡಿಸಬೇಕು” ಎಂದು ಹೇಳಿದನು.

2 ಬಾಲಾಕನು ಹಾಗೆಯೇ ಮಾಡಿದನು. ಬಾಲಾಕನು ಮತ್ತು ಬಿಳಾಮನು ಪ್ರತಿ ಯಜ್ಞವೇದಿಯ ಮೇಲೆ ಒಂದು ಹೋರಿಯನ್ನು ಮತ್ತು ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದರು.

3 ಬಿಳಾಮನು ಬಾಲಾಕನಿಗೆ, “ನೀನು ಸರ್ವಾಂಗಹೋಮದ ಸ್ಥಳದಲ್ಲೇ ಇರು. ನಾನು ಸ್ವಲ್ಪ ದೂರ ಹೋಗಿ ಬರುತ್ತೇನೆ. ಯೆಹೋವನು ನನಗೆ ಎದುರಾಗಿ ಬಂದು, ಆತನು ನನಗೆ ಏನನ್ನು ಸೂಚಿಸುವನೋ ಅದನ್ನು ನಿನಗೆ ತಿಳಿಸುವೆನು” ಎಂದು ಹೇಳಿ ಮರವಿಲ್ಲದ ಒಂದು ಎತ್ತರವಾದ ಸ್ಥಳಕ್ಕೆ ಹೋದನು.

4 ದೇವರು ಬಿಳಾಮನಿಗೆ ಎದುರಾಗಿ ಬಂದಾಗ ಬಿಳಾಮನು ಆತನಿಗೆ, “ನಾನು ಆ ಏಳು ಯಜ್ಞವೇದಿಗಳನ್ನು ಕಟ್ಟಿಸಿ ಒಂದೊಂದು ಯಜ್ಞವೇದಿಯಲ್ಲಿ ಒಂದು ಹೋರಿಯನ್ನು, ಒಂದು ಟಗರನ್ನು ಸರ್ವಾಂಗಹೋಮವಾಗಿ ಸಮರ್ಪಿಸಿದ್ದೇನೆ” ಎಂದು ಹೇಳಿದನು.

5 ಯೆಹೋವನು ಬಿಳಾಮನಿಗೆ ಅವನು ಹೇಳಬೇಕಾದ ಮಾತನ್ನು ಕಲಿಸಿಕೊಟ್ಟು, “ನೀನು ಬಾಲಾಕನ ಬಳಿಗೆ ಹಿಂತಿರುಗಿ ಹೋಗಿ ಹೀಗೆ ಹೇಳಬೇಕು” ಎಂದು ಆಜ್ಞಾಪಿಸಿದನು.

6 ಬಿಳಾಮನು ಬಾಲಾಕನ ಬಳಿಗೆ ಹಿಂತಿರುಗಿ ಬಂದಾಗ ಬಾಲಾಕನು ತಾನು ಸರ್ವಾಂಗಹೋಮವನ್ನು ಸಮರ್ಪಿಸಿದ್ದ ಯಜ್ಞವೇದಿಯ ಹತ್ತಿರ ನಿಂತಿದ್ದನು. ಮೋವಾಬ್ಯರ ಪ್ರಧಾನರೆಲ್ಲರೂ ಅವನ ಬಳಿಯಲ್ಲಿದ್ದರು.

7 ಆಗ ಬಿಳಾಮನು ಪದ್ಯರೂಪವಾಗಿ ಪ್ರವಾದಿಸಿದ್ದೇನೆಂದರೆ, “ಬಾಲಾಕನು ನನ್ನನ್ನು ಆರಾಮಿನಿಂದ ಕರೆಯಿಸಿದನು, ಮೋವಾಬ್ಯರ ಅರಸನು ಪೂರ್ವ ಪರ್ವತಗಳಿಂದ ನನ್ನನ್ನು ಬರಮಾಡಿದನು, ‘ನೀನು ಬಂದು ಯಾಕೋಬ ವಂಶದವರನ್ನು ನನಗಾಗಿ ಶಪಿಸಬೇಕು.’ ‘ಇಸ್ರಾಯೇಲರನ್ನು ಎದುರಿಸುವುದಕ್ಕೆ ಬಾ.’

8 ದೇವರು ಶಪಿಸದವನನ್ನು ನಾನು ಹೇಗೆ ಶಪಿಸಲಿ? ಯೆಹೋವನು ಎದುರಿಸದವನನ್ನು ನಾನು ಹೇಗೆ ಎದುರಿಸಲಿ?

9 ಬಂಡೆಗಳ ಶಿಖರದಿಂದ ನಾನು ಅವರನ್ನು ನೋಡುತ್ತೇನೆ; ಗುಡ್ಡದಿಂದ ಅವರನ್ನು ದೃಷ್ಟಿಸುತ್ತೇನೆ. ಆ ಜನಾಂಗವು ಪ್ರತ್ಯೇಕವಾಗಿ ವಾಸಿಸುವುದು. ಆ ಜನಾಂಗವು ಇತರ ಜನಾಂಗಗಳಂತೆ ಸಾಧಾರಣ ಜನರೆಂದು ಎಣಿಸಲ್ಪಡುವುದಿಲ್ಲ.

10 ಯಾಕೋಬನ ಧೂಳನ್ನು ಲೆಕ್ಕಿಸುವುದಕ್ಕೆ ಯಾರಿಂದಾದಿತು? ಇಸ್ರಾಯೇಲಿನ ನಾಲ್ಕನೆಯ ಒಂದು ಭಾಗವನ್ನಾದರೂ ಲೆಕ್ಕಿಸುವುದಕ್ಕೆ ಯಾರಿಂದಾದಿತು? ನೀತಿವಂತನು ಸಾಯುವಂತೆ ನಾನು ಸಾಯಬೇಕು. ಅವರಿಗುಂಟಾಗುವ ಅವಸಾನವು ನನಗೂ ಆಗಬೇಕು!” ಎಂದನು.

11 ಬಾಲಾಕನು ಬಿಳಾಮನಿಗೆ, “ನೀನು ನನಗೆ ಮಾಡಿದ್ದೇನು? ನನ್ನ ಶತ್ರುಗಳನ್ನು ಶಪಿಸುವುದಕ್ಕೆ ಕರೆಯಿಸಿದೆನು. ನೀನು ಅವರನ್ನು ಶಪಿಸದೆ ಆಶೀರ್ವಾದವನ್ನೇ ಮಾಡಿದೆ” ಎಂದು ಹೇಳಿದನು.

12 ಅದಕ್ಕೆ ಬಿಳಾಮನು, “ಯೆಹೋವನು ಹೇಳುವ ಮಾತನ್ನೇ ನಾನು ಹೇಳಬೇಕಾಗಿದೆಯಲ್ಲವೇ?” ಎಂದನು.


ಬಿಳಾಮನ ಎರಡನೆಯ ದೈವವಾಣಿ

13 ಆಗ ಬಾಲಾಕನು, “ದಯಮಾಡಿ ನನ್ನ ಕೂಡ ಇನ್ನೊಂದು ಸ್ಥಳಕ್ಕೆ ಬಾ. ಅಲ್ಲಿಂದ ಅವರನ್ನು ನೋಡಬಹುದು. ಆದರೆ ಅವರೆಲ್ಲರನ್ನು ನೋಡದೆ ಸಮೀಪದಲ್ಲಿ ಇರುವವರನ್ನು ಮಾತ್ರ ನೋಡುವಿ. ಅಲ್ಲಿ ನನಗಾಗಿ ಅವರನ್ನು ಶಪಿಸಬೇಕು” ಎಂದನು.

14 ಹೀಗೆ ಬಾಲಾಕನು ಬಿಳಾಮನನ್ನು ಪಿಸ್ಗಾ ಬೆಟ್ಟದ ತುದಿಯಲ್ಲಿರುವ ಚೋಫೀಮ್ ಬಯಲು ಎಂಬ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿಯೂ ಏಳು ಯಜ್ಞವೇದಿಗಳನ್ನು ಕಟ್ಟಿಸಿ ಪ್ರತಿಯೊಂದು ಯಜ್ಞವೇದಿಯಲ್ಲಿ ಒಂದು ಹೋರಿಯನ್ನೂ, ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದನು.

15 ಬಿಳಾಮನು ಬಾಲಾಕನಿಗೆ, “ನೀನು ಇಲ್ಲೇ ಸರ್ವಾಂಗಹೋಮ ಮಾಡಿರುವ ಸ್ಥಳದಲ್ಲಿ ನಿಂತುಕೋ. ನಾನು ಆ ಕಡೆಗೆ ಹೋಗಿ ಯೆಹೋವನನ್ನು ಎದುರುಗೊಳ್ಳುವೆನು” ಎಂದು ಹೇಳಿದನು.

16 ಯೆಹೋವನು ಬಿಳಾಮನಿಗೆ ಎದುರಾಗಿ ಬಂದು ಅವನು ಹೇಳಬೇಕಾದ ಮಾತನ್ನು ಕಲಿಸಿಕೊಟ್ಟನು. ಆಗ ಅವನು ಹೇಳಿದ್ದೇನೆಂದರೆ, “ನೀನು ಬಾಲಾಕನ ಬಳಿಗೆ ತಿರುಗಿ ಹೋಗಿ ಹೀಗೆ ಹೇಳಬೇಕು” ಎಂದನು.

17 ಬಿಳಾಮನು ಬಾಲಾಕನ ಬಳಿಗೆ ಬಂದಾಗ ಬಾಲಾಕನು ತಾನು ಸರ್ವಾಂಗಹೋಮವನ್ನು ಸಮರ್ಪಿಸಿದ ವೇದಿಯ ಹತ್ತಿರ ನಿಂತಿದ್ದನು. ಮೋವಾಬ್ಯರ ಪ್ರಧಾನರು ಅವನ ಸಂಗಡ ಇದ್ದರು. ಬಾಲಾಕನು, “ಯೆಹೋವನು ಏನು ಹೇಳಿದ್ದಾನೆ?” ಎಂದನು.

18 ಬಿಳಾಮನು ಪದ್ಯರೂಪವಾಗಿ ಪ್ರವಾದಿಸಿದ್ದೇನೆಂದರೆ, “ಬಾಲಾಕನೇ, ಎದ್ದು ಕಿವಿಗೊಟ್ಟು ಕೇಳು. ಚಿಪ್ಪೋರನ ಮಗನೇ, ನನ್ನ ಮಾತನ್ನು ಲಾಲಿಸು.

19 ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ. ಮಾನವನಂತೆ ಮನಸ್ಸನ್ನು ಬದಲಾಯಿಸುವವನಲ್ಲ. ತಾನು ಹೇಳಿದ ಪ್ರಕಾರ ನಡೆಯದಿರುತ್ತಾನೆಯೇ? ಮಾತುಕೊಟ್ಟ ನಂತರ ನೆರವೇರಿಸುವುದಿಲ್ಲವೋ?

20 ಅವರನ್ನು ಆಶೀರ್ವದಿಸುವುದಕ್ಕೆ ನನಗೆ ಅಪ್ಪಣೆಯಾಯಿತು. ಆತನು ಆಶೀರ್ವದಿಸಿದ ನಂತರ ನಾನು ಬದಲಾಯಿಸಲಾರೆನು.

21 ಈ ಯಾಕೋಬನಲ್ಲಿ ಯಾವ ಆಪತ್ತಿನ ಸೂಚನೆಯೂ ಕಾಣುವುದಿಲ್ಲ ಅಥವಾ ಇಸ್ರಾಯೇಲರಿಗೆ ಯಾವ ವಿಪತ್ತಿನ ಸೂಚನೆಯೂ ತೋರುವುದಿಲ್ಲ. ಅವರಿಗೆ ದೇವರಾಗಿರುವ ಯೆಹೋವನು ಅವರ ಸಂಗಡ ಇದ್ದಾನೆ, ಅವರು ತಮ್ಮ ಅರಸನಿಗಾಗಿ ಮಾಡುವ ಜಯ ಘೋಷವು ಕೇಳಿಸುತ್ತ ಇದೆ.

22 ಅವರನ್ನು ಐಗುಪ್ತ ದೇಶದಿಂದ ಕರೆದುಕೊಂಡು ಬಂದವನು ದೇವರೇ, ಅವರು ಕಾಡುಕೋಣದಷ್ಟು ಬಲವುಳ್ಳವರು.

23 ಯಾಕೋಬರಿಗೆ ವಿರುದ್ಧವಾದ ಶಕುನವಿಲ್ಲ, ಇಸ್ರಾಯೇಲರಲ್ಲಿ ಕಣಿ ಕೇಳುವುದಿಲ್ಲ. ಬದಲಾಗಿ, ಯಾಕೋಬ ಮತ್ತು ಇಸ್ರಾಯೇಲರ ವಿಷಯದಲ್ಲಿ ಹೀಗೆ ಹೇಳುವರು. ‘ದೇವರು ಮಾಡುವ ಕೆಲಸವನ್ನು ನೋಡಿರಿ!’

24 ಇಗೋ, ಜನಾಂಗದವರು ಎದ್ದು ಪ್ರಾಯದ ಸಿಂಹದಂತೆ ನಿಂತಿದ್ದಾರೆ; ಸಿಂಹವು ಮೃಗವನ್ನು ಕೊಂದು ಮಾಂಸವನ್ನು ತಿಂದು ತೃಪ್ತಿಹೊಂದದ ಹೊರತು ಮಲಗುವುದಿಲ್ಲ ತಾನು ಬೇಟೆಯಾಡಿದ ರಕ್ತವನ್ನು ಕುಡಿದು ಮಲಗುವುದು.”

25 ಆಗ ಬಾಲಾಕನು ಬಿಳಾಮನಿಗೆ, “ನೀನು ಅವರನ್ನು ಶಪಿಸಲೂ ಬೇಡ; ಆಶೀರ್ವದಿಸಲೂ ಬೇಡ” ಎಂದು ಹೇಳಿದನು.

26 ಅದಕ್ಕೆ ಬಿಳಾಮನು ಬಾಲಾಕನಿಗೆ ಉತ್ತರವಾಗಿ, “ಯೆಹೋವನು ಆಜ್ಞಾಪಿಸುವುದನ್ನೆಲ್ಲಾ ನಾನು ಹೇಳಬೇಕೆಂದು ನಿನಗೆ ಹೇಳಲಿಲ್ಲವೇ?” ಎಂದನು.


ಬಿಳಾಮನ ಮೂರನೆಯ ದೈವವಾಣಿ

27 ತರುವಾಯ ಬಾಲಾಕನು ಬಿಳಾಮನಿಗೆ, “ಬೇರೊಂದು ಸ್ಥಳಕ್ಕೆ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ ಬಾ; ಅಲ್ಲಿಯಾದರೂ ನೀನು ಅವರನ್ನು ಶಪಿಸುವುದಕ್ಕೆ ದೇವರು ಅನುಮತಿ ಕೊಡಬಹುದು” ಎಂದು ಹೇಳಿದನು.

28 ಆದಕಾರಣ ಬಾಲಾಕನು ಬಿಳಾಮನನ್ನು ಪೆಗೋರ್ ಎಂಬ ಬೆಟ್ಟದ ತುದಿಗೆ ಕರೆದುಕೊಂಡು ಹೋದನು. ಆ ಬೆಟ್ಟದ ಮೇಲಿನಿಂದ ಕೆಳಗಿರುವ ಯೆಷೀಮೋನ್ ಎಂಬ ಅರಣ್ಯಪ್ರದೇಶವು ಕಾಣಿಸುತ್ತದೆ.

29 ಆಗ ಬಿಳಾಮನು ಬಾಲಾಕನಿಗೆ, “ಇಲ್ಲಿಯೂ ಏಳು ಯಜ್ಞವೇದಿಗಳನ್ನು ಕಟ್ಟಿಸಿ ಏಳು ಹೋರಿಗಳನ್ನೂ, ಏಳು ಟಗರುಗಳನ್ನೂ ಸಿದ್ಧಮಾಡು” ಎಂದು ಹೇಳಿದನು

30 ಬಿಳಾಮನ ಅಪ್ಪಣೆಯ ಪ್ರಕಾರ ಬಾಲಾಕನು ಪ್ರತಿಯೊಂದು ಯಜ್ಞ ವೇದಿಯಲ್ಲಿ ಒಂದು ಹೋರಿಯನ್ನೂ. ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದನು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು