Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 21 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಇಸ್ರಾಯೇಲರು ಅರಾದಿನ ಅರಸನನ್ನು ಜಯಿಸಿದ್ದು

1 ಕಾನಾನ್ ದೇಶದ ದಕ್ಷಿಣ ಪ್ರಾಂತ್ಯದಲ್ಲಿದ್ದ ಕಾನಾನ್ಯನಾದ ಅರಾದ್ ಪಟ್ಟಣದ ಅರಸನು, ಅತಾರೀಮ್ ಮಾರ್ಗವಾಗಿ ಇಸ್ರಾಯೇಲರು ಬರುತ್ತಾರೆಂಬ ವರ್ತಮಾನವನ್ನು ಕೇಳಿದಾಗ, ಅವನು ಅವರ ಮೇಲೆ ಯುದ್ಧಮಾಡಿ ಕೆಲವರನ್ನು ಸೆರೆಹಿಡಿದನು.

2 ಇಸ್ರಾಯೇಲರು ಯೆಹೋವನಿಗೆ ಪ್ರಮಾಣಮಾಡಿ, “ನಾವು ಈ ಜನರನ್ನು ಜಯಿಸುವಂತೆ ನೀನು ಅನುಗ್ರಹಿಸಿದರೆ ನಾವು ಅವರ ಗ್ರಾಮಗಳನ್ನು ಸಂಪೂರ್ಣವಾಗಿ ನಾಶಮಾಡುತ್ತೇವೆ” ಎಂದು ಹೇಳಿದರು.

3 ಯೆಹೋವನು ಇಸ್ರಾಯೇಲರ ಪ್ರಾರ್ಥನೆಯನ್ನು ಕೇಳಿ ಕಾನಾನ್ಯರನ್ನು ಜಯಿಸುವಂತೆ ಮಾಡಿದನು. ಅವರನ್ನು ಮತ್ತು ಅವರ ಪಟ್ಟಣಗಳನ್ನು ಇಸ್ರಾಯೇಲರು ಸಂಪೂರ್ಣವಾಗಿ ನಾಶಮಾಡಿದರು. ಆ ಸ್ಥಳಕ್ಕೆ ಹೊರ್ಮಾ ಎಂದು ಹೆಸರಾಯಿತು.


ಮೋಶೆ ತಾಮ್ರದ ಸರ್ಪವನ್ನು ಮಾಡಿಸಿದ್ದು

4 ಇಸ್ರಾಯೇಲರು ಹೋರ್ ಬೆಟ್ಟದಿಂದ ಹೊರಟು ಎದೋಮ್ಯರ ದೇಶವನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪು ಸಮುದ್ರದ ಮಾರ್ಗವಾಗಿ ಪ್ರಯಾಣಮಾಡುವಾಗ, ದಾರಿಯಲ್ಲಿ ಆಯಾಸದಿಂದ ಅವರಿಗೆ ಬೇಸರವಾಯಿತು.

5 ಆಗ ಅವರು ದೇವರಿಗೂ ಮತ್ತು ಮೋಶೆಗೂ ವಿರುದ್ಧವಾಗಿ ಮಾತನಾಡಿ, “ನೀವು ನಮ್ಮನ್ನು ಈ ಮರಳುಗಾಡಿನಲ್ಲಿ ಕೊಲ್ಲಬೇಕೆಂದು ಐಗುಪ್ತ ದೇಶದಿಂದ ಕರೆದುಕೊಂಡು ಬಂದಿರೋ? ಇಲ್ಲಿ ಆಹಾರವೂ ಇಲ್ಲ, ನೀರೂ ಇಲ್ಲ. ಈ ರುಚಿ ಇಲ್ಲದ ಆಹಾರವನ್ನು ತಿಂದು ನಮಗೆ ಬೇಸರವಾಯಿತು” ಎಂದು ಹೇಳಿದರು.

6 ಅದಕ್ಕೆ ಯೆಹೋವನು ವಿಷಸರ್ಪಗಳನ್ನು ಇಸ್ರಾಯೇಲ್ ಜನರೊಳಗೆ ಬರಮಾಡಿದನು. ಅವು ಜನರನ್ನು ಕಚ್ಚಿದ್ದರಿಂದ ಬಹಳಜನರು ಸತ್ತುಹೋದರು.

7 ಆದುದರಿಂದ ಜನರು ಮೋಶೆಯ ಬಳಿಗೆ ಬಂದು, “ನಾವು ನಿನಗೂ ಮತ್ತು ಯೆಹೋವನಿಗೂ ವಿರುದ್ಧವಾಗಿ ಮಾತನಾಡಿ ದ್ರೋಹಿಗಳಾದೆವು. ಈ ಸರ್ಪಗಳು ನಮ್ಮ ಬಳಿಯಿಂದ ತೊಲಗಿಹೋಗುವಂತೆ ನೀನು ಯೆಹೋವನಿಗೆ ಪ್ರಾರ್ಥನೆಮಾಡಬೇಕು” ಎಂದು ಬೇಡಿಕೊಂಡರು.

8 ಮೋಶೆ ಜನರಿಗೋಸ್ಕರ ಪ್ರಾರ್ಥಿಸಲಾಗಿ ಯೆಹೋವನು ಅವನಿಗೆ, “ನೀನು ತಾಮ್ರದಿಂದ ವಿಷಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸಬೇಕು. ಸರ್ಪಗಳಿಂದ ಗಾಯಪಟ್ಟವರು ಅದನ್ನು ನೋಡಿ ಬದುಕಿಕೊಳ್ಳುವರು” ಎಂದು ಆಜ್ಞಾಪಿಸಿದನು.

9 ಆದಕಾರಣ ಮೋಶೆ ತಾಮ್ರದಿಂದ ಸರ್ಪವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಇಟ್ಟನು. ಸರ್ಪದಿಂದ ಗಾಯಪಟ್ಟವರಲ್ಲಿ ಯಾರು ಆ ತಾಮ್ರದ ಸರ್ಪವನ್ನು ಲಕ್ಷ್ಯವಿಟ್ಟು ನೋಡಿದರೋ ಅವರೆಲ್ಲರೂ ಬದುಕಿಕೊಂಡರು.


ಮೋವಾಬ್ ಕಡೆಗೆ ಪ್ರಯಾಣ

10 ತರುವಾಯ ಇಸ್ರಾಯೇಲರು ಅಲ್ಲಿಂದ ಹೊರಟು ಓಬೋತಿನಲ್ಲಿ ಇಳಿದುಕೊಂಡರು.

11 ಓಬೋತಿನಿಂದ ಹೊರಟು ಮೋವಾಬ್ ದೇಶದ ಮೂಡಲ ದಿಕ್ಕಿನ ಅರಣ್ಯದಲ್ಲಿರುವ ಇಯ್ಯೇ ಅಬಾರೀಮಿನಲ್ಲಿ ಇಳಿದುಕೊಂಡರು.

12 ಅಲ್ಲಿಂದ ಹೊರಟು ಜೆರೆದ್ ತಗ್ಗಿನಲ್ಲಿ ಇಳಿದುಕೊಂಡರು.

13 ಅಲ್ಲಿಂದ ಹೊರಟು ಅರ್ನೋನ್ ನದಿಯ ಆಚೆ ಕಡೆಯಲ್ಲಿ ಇಳಿದುಕೊಂಡರು. ಅರ್ನೋನ್ ನದಿಯು ಅಮೋರಿಯರ ಪ್ರದೇಶದಿಂದಾಚೆ ಇರುವ ಅರಣ್ಯದಲ್ಲಿ ಮೋವಾಬ್ಯರಿಗೂ, ಅಮೋರಿಯರಿಗೂ ನಡುವೆ ಇದ್ದು ಮೋವಾಬ್ಯರ ಗಡಿಯಾಗಿದೆ.

14 ಅದಕ್ಕೆ ಅನುಗುಣವಾಗಿ ಯೆಹೋವವಿಜಯ ಎಂಬ ಗ್ರಂಥದಲ್ಲಿ, “ಸೂಫಕ್ಕೆ ಸೇರಿದ ವಾಹೇಬನ್ನೂ, ಮತ್ತು ಅರ್ನೋನ್ ನದಿಗೆ ಕೂಡುವ ಹಳ್ಳಗಳನ್ನೂ,

15 ಆರ್ ಪಟ್ಟಣದ ತನಕ ಮೋವಾಬಿನ ಮೇರೆಯಾಗಿರುವ ಕೊರಕಲನ್ನೂ ದಾಟಿದ್ದಾಯಿತು” ಎಂದು ಬರೆದದೆ.

16 ಅಲ್ಲಿಂದ ಅವರು ಬೇರ್ ಸ್ಥಳಕ್ಕೆ ಬಂದರು. ಯೆಹೋವನು ಮೋಶೆಗೆ ಹೇಳಿದ ಮಾತು ಇಲ್ಲಿನ ಬಾವಿಯ ವಿಷಯವೇ. ಯೆಹೋವನು ಮೋಶೆಗೆ, “ಜನರನ್ನು ಸೇರಿಸು. ನಾನು ಅವರಿಗೆ ನೀರನ್ನು ಕೊಡುವೆನು” ಅಂದನು.

17 ಆಗ ಇಸ್ರಾಯೇಲರು ಈ ಹಾಡನ್ನು ಗಾನಮಾಡಿದರು; “ಬಾವಿಯೇ, ಉಕ್ಕುತ್ತಾ ಬಾ! ಜನರೇ, ಉಲ್ಲಾಸದಿಂದ ಗಾನಮಾಡಿರಿ

18 ಇದು ಪ್ರಧಾನರು ಕೋಲುಗಳಿಂದ ತೋಡಿದ ಬಾವಿ, ಇದು ಜನಾಧಿಪತಿಗಳು ಕೋಲುಗಳಿಂದ ಅಗೆದ ಬಾವಿ” ಎಂಬುವುದೇ. ಅವರು ಅರಣ್ಯವನ್ನು ಬಿಟ್ಟು ಮತ್ತಾನಕ್ಕೂ,

19 ಮತ್ತಾನದಿಂದ ನಹಲೀಯೇಲಿಗೂ, ನಹಲೀಯೇಲಿನಿಂದ ಬಾಮೋತಿಗೂ ಬಂದರು.

20 ಬಾಮೋತಿನಿಂದ ಮೋವಾಬ್ಯರ ಬಯಲಿನಲ್ಲಿರುವ ತಗ್ಗಿನಿಂದ ಪಿಸ್ಗಾ ಎಂಬ ಬೆಟ್ಟದ ತುದಿಗೆ ಬಂದರು. ಅಲ್ಲಿಂದ ಯೆಷೀಮೋನ್ ಮರಳುಗಾಡು ಕಾಣಿಸುತ್ತದೆ.


ಸೀಹೋನ್, ಓಗ್ ಅರಸರ ಸೋಲು

21 ಇಸ್ರಾಯೇಲರು ಅಮೋರಿಯರ ಅರಸನಾದ ಸೀಹೋನನ ಬಳಿಗೆ ದೂತರನ್ನು ಕಳುಹಿಸಿ,

22 “ನಿನ್ನ ದೇಶವನ್ನು ದಾಟಿಹೋಗುವುದಕ್ಕೆ ನಮಗೆ ಅಪ್ಪಣೆಯಾಗಬೇಕು. ನಾವು ಹೊಲಗಳಲ್ಲಿಯಾಗಲಿ, ದ್ರಾಕ್ಷಿತೋಟಗಳಲ್ಲಿಯಾಗಲಿ ಹೋಗುವುದಿಲ್ಲ. ಬಾವಿಗಳ ನೀರನ್ನು ಕುಡಿಯುವುದಿಲ್ಲ. ನಿನ್ನ ದೇಶವನ್ನು ದಾಟುವವರೆಗೂ ರಾಜಮಾರ್ಗದಲ್ಲಿಯೇ ನಡೆದು ಹೋಗುವೆವು” ಎಂದು ಹೇಳಿದರು.

23 ಆದರೆ ತನ್ನ ಸೀಮೆಯನ್ನು ದಾಟಿಹೋಗುವುದಕ್ಕೆ ಸೀಹೋನನು ಇಸ್ರಾಯೇಲರಿಗೆ ಅಪ್ಪಣೆಕೊಡದೆ ತನ್ನ ಜನರೆಲ್ಲರನ್ನೂ ಕೂಡಿಸಿಕೊಂಡು ಅವರನ್ನು ಎದುರಿಸುವುದಕ್ಕೆ ಮರುಭೂಮಿಗೆ ಹೊರಟರು. ಅವನು ಯಹಚಕ್ಕೆ ಬಂದು ಅವರೊಡನೆ ಯುದ್ಧಮಾಡಿದನು.

24 ಇಸ್ರಾಯೇಲರು ಅವನ ಜನರನ್ನು ಸೋಲಿಸಿ, ಕತ್ತಿಯಿಂದ ಸಂಹರಿಸಿ ಅರ್ನೋನ್ ನದಿ ಮೊದಲುಗೊಂಡು ಯಬ್ಬೋಕ್ ನದಿಯವರೆಗೂ, ಅಮ್ಮೋನಿಯರ ಗಡಿಯವರೆಗೂ ಸೀಹೋನನ ದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡರು. ಏಕೆಂದರೆ ಅಮ್ಮೋನಿಯರ ಮಕ್ಕಳ ಗಡಿಯು ಬಲವುಳ್ಳದ್ದಾಗಿತ್ತು.

25 ಇಸ್ರಾಯೇಲರು ಈ ಪಟ್ಟಣಗಳನ್ನೆಲ್ಲಾ ವಶಮಾಡಿಕೊಂಡರು. ಅವರು ಹೆಷ್ಬೋನಿನಲ್ಲಿಯೂ, ಅದಕ್ಕೆ ಸೇರಿದ ಗ್ರಾಮಗಳಲ್ಲಿಯೂ, ಅಮೋರಿಯರ ಬೇರೆ ಎಲ್ಲಾ ಊರುಗಳಲ್ಲಿಯೂ ವಾಸಿಸಿದರು.

26 ಹೆಷ್ಬೋನ್ ಪಟ್ಟಣವು ಅಮೋರಿಯರ ಅರಸನಾದ ಸೀಹೋನನ ರಾಜಧಾನಿ. ಅವನು ಮೋವಾಬ್ಯರ ಪೂರ್ವದ ಅರಸನ ಮೇಲೆ ಯುದ್ಧಮಾಡಿ ಅರ್ನೋನ್ ನದಿಯ ವರೆಗೂ ಅವನ ದೇಶವನ್ನೆಲ್ಲಾ ಸ್ವಾಧೀನ ಮಾಡಿಕೊಂಡಿದ್ದನು.

27 ಕವಿಗಳು ಹೇಳಿದ ಪದ್ಯವು ಇದರ ವಿಷಯವಾಗಿಯೇ; “ಹೆಷ್ಬೋನಿಗೆ ಬನ್ನಿರಿ. ಅದನ್ನು ಹೊಸದಾಗಿ ಕಟ್ಟಬೇಕು, ಸೀಹೋನನ ಪಟ್ಟಣವನ್ನು ಪುನಃಸ್ಥಾಪನೆಮಾಡಬೇಕು.

28 ಸೀಹೋನನ ಪಟ್ಟಣವಾದ ಹೆಷ್ಬೋನಿನಿಂದ ಅಗ್ನಿ ಜ್ವಾಲೆಹೊರಟು, ಮೋವಾಬ್ಯರ ರಾಜಧಾನಿಯಾದ ಆರ್ ಎಂಬ ಪಟ್ಟಣವನ್ನೂ ಅರ್ನೋನ್ ಬೆಟ್ಟದ ಮೇಲಿರುವ ಪ್ರಭುಗಳನ್ನು ದಹಿಸಿಬಿಟ್ಟಿತು.

29 ಮೋವಾಬ್ಯರೇ, ನಿಮ್ಮ ಗತಿಯೇನೆಂದು ಹೇಳಲಿ! ಕೆಮೋಷಿನ ಭಕ್ತರೇ, ನಿಮಗೆ ದುರ್ಗತಿಯುಂಟಾಯಿತು. ಆತನು ತನ್ನ ಗಂಡುಮಕ್ಕಳನ್ನು ದೇಶಭ್ರಷ್ಟರನ್ನಾಗಿ ಮಾಡಿದನು. ನಿನ್ನ ಹೆಣ್ಣುಮಕ್ಕಳನ್ನು ಸೆರೆಯವರನ್ನಾಗಿಯೂ ಮಾಡಿದ್ದಾನಲ್ಲಾ. ಅಮೋರಿಯರ ಅರಸನಾದ ಸೀಹೋನನಿಗೆ ಸೆರೆಯವರಾದರು.

30 ನಾವು ಅವರನ್ನು ಬಾಣದಿಂದ ಹೊಡೆದೆವು; ಹೆಷ್ಬೋನಿನಿಂದ ದೀಬೋನಿವರೆಗೂ ಎಲ್ಲಾ ನಾಶವಾಯಿತು. ಮೇದೆಬಾ ಊರಿನ ನೆರೆಯಲ್ಲಿರುವ ನೋಫಹದ ತನಕ ಹಾಳುಮಾಡಿ ಬಿಟ್ಟೆವು.”

31 ಹೀಗೆ ಇಸ್ರಾಯೇಲರು ಅಮ್ಮೋರಿಯರ ದೇಶದಲ್ಲಿ ವಾಸಮಾಡುವಂತಾಯಿತು.

32 ಅದಲ್ಲದೆ ಮೋಶೆ ಗೂಢಚಾರರ ಮೂಲಕ ಯಗ್ಜೇರನ್ನು ಪರೀಕ್ಷಿಸಿದ ಮೇಲೆ ಇಸ್ರಾಯೇಲರು ಅದರ ಗ್ರಾಮಗಳನ್ನು ವಶಪಡಿಸಿಕೊಂಡು, ಅಲ್ಲಿದ್ದ ಅಮೋರಿಯರನ್ನು ಹೊರಡಿಸಿಬಿಟ್ಟರು.

33 ಇಸ್ರಾಯೇಲರು ಹಿಂದಿರುಗಿ ಬಾಷಾನಿನ ಮಾರ್ಗವಾಗಿ ಹತ್ತಿಹೋಗಲಾಗಿ ಬಾಷಾನಿನ ಅರಸನಾದ ಓಗನು ತನ್ನ ಜನರೆಲ್ಲರೊಡನೆ ಅವರಿಗೆ ವಿರುದ್ಧವಾಗಿ ಯುದ್ಧಮಾಡುವುದಕ್ಕೆ ಎದ್ರೈವೂರಿಗೆ ಹೊರಟುಬಂದನು.

34 ಯೆಹೋವನು ಮೋಶೆಗೆ, “ಅವನಿಗೆ ಭಯಪಡಬೇಡ, ನಾನು ಅವನನ್ನು ಮತ್ತು ಅವನ ಸಮಸ್ತ ಜನರನ್ನೂ ಅವನ ದೇಶವನ್ನೂ ನಿನ್ನ ಕೈಗೆ ಕೊಟ್ಟಿದ್ದೇನೆ. ನೀನು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸನಾದ ಸೀಹೋನನಿಗೆ ಮಾಡಿದ ಪ್ರಕಾರವೇ ಇವರಿಗೂ ಮಾಡಬೇಕು” ಎಂದು ಹೇಳಿದನು.

35 ಆದಕಾರಣ ಇಸ್ರಾಯೇಲರು, ಅವರಲ್ಲಿ ಒಬ್ಬನೂ ಉಳಿಯದಂತೆ ಅವನನ್ನೂ, ಅವನ ಮಕ್ಕಳನ್ನೂ, ಅವನ ಜನರನ್ನೆಲ್ಲಾ ನಾಶಮಾಡಿ ಅವನ ದೇಶವನ್ನು ಸ್ವಾಧೀನಪಡಿಸಿಕೊಂಡರು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು