Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 11 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ತಬೇರದಲ್ಲಿ ಕಾಣಿಸಿಕೊಂಡ ಬೆಂಕಿ

1 ಇಸ್ರಾಯೇಲ ಜನರು ತಮಗೆ ದುರಾವಸ್ಥೆ ಉಂಟಾಯಿತೆಂದು ಯೆಹೋವನಿಗೆ ಕೇಳಿಸುವಂತೆ ಗುಣುಗುಟ್ಟುವವರಾದರು. ಅದಕ್ಕೆ ಆತನು ಕೋಪಗೊಂಡು ಅವರ ಮಧ್ಯದಲ್ಲಿ ಬೆಂಕಿಯನ್ನು ಉಂಟುಮಾಡಿದ್ದರಿಂದ ಪಾಳೆಯದ ಕಡೇ ಭಾಗದಲ್ಲಿದ್ದವರು ಸುಟ್ಟುಹೋದರು.

2 ಆಗ ಜನರು ಮೋಶೆಯ ಬಳಿಗೆ ಬಂದು ಮೊರೆಯಿಟ್ಟರು. ಮೋಶೆ ಅವರಿಗೋಸ್ಕರ ಯೆಹೋವನಿಗೆ ಪ್ರಾರ್ಥಿಸಲಾಗಿ ಆ ಬೆಂಕಿ ಆರಿಹೋಯಿತು.

3 ಯೆಹೋವನು ಉಂಟುಮಾಡಿದ ಬೆಂಕಿ ಅವರ ಮಧ್ಯದಲ್ಲಿ ಉರಿದುದರಿಂದ ಆ ಸ್ಥಳಕ್ಕೆ “ತಬೇರ” ಎಂದು ಹೆಸರಾಯಿತು.


ಎಪ್ಪತ್ತುಮಂದಿ ಮುಖ್ಯಸ್ಥರ ಆಯ್ಕೆ

4 ಅವರ ಮಧ್ಯದಲ್ಲಿದ್ದ ಇತರ ಜನರು ಮಾಂಸವನ್ನು ಆಶಿಸಿದರು. ಇಸ್ರಾಯೇಲರು ಪುನಃ ಕಣ್ಣೀರಿಡುತ್ತಾ ಅಯ್ಯೋ, “ಮಾಂಸವು ನಮಗೆ ಹೇಗೆ ಸಿಕ್ಕೀತು?

5 ಐಗುಪ್ತ ದೇಶದಲ್ಲಿ ನಾವು ಬಿಟ್ಟಿಯಾಗಿ ತಿನ್ನುತ್ತಿದ್ದ ಮೀನು, ಸೌತೆಕಾಯಿ, ಕರ್ಬೂಜ, ಈರುಳ್ಳಿ ಹಾಗೂ ಬೆಳ್ಳುಳ್ಳಿ ಇವು ನೆನಪಿಗೆ ಬರುತ್ತವೆ.

6 ಇಲ್ಲಿಯಾದರೋ ನಾವು ಬಲಹೀನರಾಗಿದ್ದೇವೆ. ಈ ಮನ್ನವೇ ಹೊರತು ನಮಗೆ ಇನ್ನೇನೂ ತಿನ್ನುವುದಕ್ಕೆ ಸಿಕ್ಕುವುದಿಲ್ಲ” ಎಂದು ನಿಷ್ಠುರವಾಗಿ ಮಾತನಾಡ ತೊಡಗಿದರು.

7 ಆ ಮನ್ನವು ಕೊತ್ತುಂಬರಿ ಬೀಜದ ಹಾಗೆ ಇತ್ತು. ಅದು ಗುಗ್ಗುಲದಂತೆ ಕಾಣಿಸುತ್ತಿತ್ತು.

8 ಜನರು ತಿರುಗಾಡುತ್ತಾ ಅದನ್ನು ಕೂಡಿಸಿಕೊಂಡು ಬೀಸುವ ಕಲ್ಲುಗಳಿಂದ ಬೀಸಿ, ಇಲ್ಲವೆ ಒರಳಿನಲ್ಲಿ ಕುಟ್ಟಿ ಪಾತ್ರೆಗಳಲ್ಲಿ ಬೇಯಿಸಿ ರೊಟ್ಟಿಗಳನ್ನು ಮಾಡಿಕೊಂಡರು. ಅದರ ರುಚಿ ಎಣ್ಣೆ ಬೆರಸಿ ಮಾಡಿದ ಭಕ್ಷ್ಯಗಳಂತಿತ್ತು.

9 ರಾತ್ರಿ ಕಾಲದಲ್ಲಿ ಮಂಜು ಪಾಳೆಯದಲ್ಲಿ ಬೀಳುತ್ತಿದ್ದಾಗ ಅದರೊಂದಿಗೆ ಮನ್ನವೂ ಬೀಳುತ್ತಿತ್ತು.

10 ಎಲ್ಲಾ ಕುಟುಂಬದವರೂ ತಮ್ಮ ತಮ್ಮ ಡೇರೆ ಬಾಗಿಲುಗಳಲ್ಲಿ ನಿಂತು ಕಣ್ಣೀರಿಟ್ಟು ಅಳುವ ಆ ಶಬ್ದವು ಮೋಶೆಗೆ ಕೇಳಿಸಿತು. ಆಗ ಯೆಹೋವನು ಬಹಳ ಕೋಪಗೊಂಡನು. ಅವರ ಗುಣುಗುಟ್ಟುವಿಕೆಯಿಂದ ಮೋಶೆಗೆ ಬೇಸರವಾಯಿತು.

11 ಆಗ ಮೋಶೆ ಯೆಹೋವನಿಗೆ, “ಈ ಜನರನ್ನು ನಡೆಸಿಕೊಂಡು ಹೋಗುವ ಹೊಣೆಯನ್ನು ನನ್ನ ಮೇಲೆ ಹೊರಿಸಿ ನೀನು ಏಕೆ ನಿನ್ನ ದಾಸನಿಗೆ ತೊಂದರೆಯನ್ನು ತಂದಿದ್ದೀ? ನಿನ್ನ ದಯೆಗೆ ನಾನು ಯಾಕೆ ಅಪಾತ್ರನಾದೆ?

12 ನಾನು ಇವರಿಗೆ ಹೆತ್ತ ತಾಯಿಯೇ? ಇವರನ್ನು ಮಗುವನ್ನು ಎತ್ತಿಕೊಂಡು ಹೋಗುವಂತೆ, ಮಡಿಲಲ್ಲಿ ಇಟ್ಟುಕೊಂಡು ಅವರ ಪೂರ್ವಿಕರಿಗೆ ಪ್ರಮಾಣಮಾಡಿದ ದೇಶಕ್ಕೆ ನಡೆಸಬೇಕು ಎಂದು ಹೇಳುತ್ತೀಯಲ್ಲಾ?

13 ಇವರು ನನ್ನ ಬಳಿಗೆ ಅಳುತ್ತಾ ಬಂದು, ‘ಮಾಂಸವನ್ನು ನಮಗೆ ತಿನ್ನಲಿಕ್ಕೆ ಕೊಡು’ ಎಂದು ಕೇಳುತ್ತಾರಲ್ಲಾ, ಇಷ್ಟು ಜನಕ್ಕೆ ಬೇಕಾದ ಮಾಂಸವು ನನಗೆ ಎಲ್ಲಿಂದ ದೊರಕೀತು?

14 ಇಷ್ಟು ಜನರ ಹೊಣೆಯನ್ನು ನಾನೊಬ್ಬನೇ ಹೊರುವುದು ಅಸಾಧ್ಯ; ಅದು ನನ್ನ ಶಕ್ತಿಗೆ ಮೀರಿದ ಕೆಲಸ.

15 ನೀನು ಹೀಗೆ ಮಾಡುವುದಕ್ಕಿಂತ ನನ್ನನ್ನು ಈಗಲೇ ಕೊಂದುಹಾಕಿಬಿಟ್ಟರೆ ಉಪಕಾರವಾಗುತ್ತದೆ; ನನಗಾಗುತ್ತಿರುವ ದುರಾವಸ್ಥೆಯನ್ನು ನಾನು ಸಹಿಸಲಾರೆ” ಎಂದನು.

16 ಆಗ ಯೆಹೋವನು ಮೋಶೆಗೆ ಹೇಳಿದ್ದೇನೇಂದರೆ, “ಇಸ್ರಾಯೇಲರಲ್ಲಿ ಹಿರಿಯರೆಂದೂ ಮತ್ತು ಅಧಿಪತಿಗಳೆಂದೂ ನೀನು ತಿಳಿದುಕೊಂಡಿರುವ ಎಪ್ಪತ್ತು ಮಂದಿಯನ್ನು ದೇವದರ್ಶನದ ಗುಡಾರದ ಬಾಗಿಲಿಗೆ ಕರೆದು ಅಲ್ಲಿ ನಿನ್ನೊಡನೆ ನಿಲ್ಲಿಸಿಕೋ.

17 ನಾನು ಅಲ್ಲಿಗೆ ಇಳಿದು ಬಂದು ನಿನ್ನ ಸಂಗಡ ಮಾತನಾಡುವೆನು. ಅದಲ್ಲದೆ ನಾನು ನಿನಗೆ ಅನುಗ್ರಹಿಸಿರುವ ಆತ್ಮದಲ್ಲಿ ಸ್ವಲ್ಪವನ್ನು ಅವರಿಗೂ ಪಾಲುಕೊಡುವೆನು. ಆಗ ನೀನೊಬ್ಬನೇ ಈ ಜನರ ಹೊಣೆಯನ್ನು ವಹಿಸಬೇಕಾಗಿರುವುದಿಲ್ಲ; ನಿನ್ನ ಜೊತೆಯಲ್ಲಿ ಇವರೂ ಜವಾಬ್ದಾರಿ ವಹಿಸುವರು.”

18 ಇದಲ್ಲದೆ ಇಸ್ರಾಯೇಲರಿಗೆ ಹೀಗೆ ಹೇಳು, “ನಾಳೆಗೆ ನಿಮ್ಮನ್ನು ಶುದ್ಧಪಡಿಸಿಕೊಳ್ಳಿರಿ; ನಾಳೆ ನಿಮಗೆ ಮಾಂಸವು ದೊರೆಯುವುದು. ನೀವು ಯೆಹೋವನಿಗೆ ಕೇಳಿಸುವಂತೆ, ‘ನಮಗೆ ಮಾಂಸವನ್ನು ಕೊಡುವವರೇ ಇಲ್ಲ; ಐಗುಪ್ತ ದೇಶದಲ್ಲಿ ಎಷ್ಟೋ ಸುಖವಾಗಿದ್ದೇವಲ್ಲಾ’ ಎಂದು ಅಳುತ್ತಾ ಹೇಳಿದ್ದರಿಂದ ಯೆಹೋವನೇ ನಿಮಗೆ ಮಾಂಸವನ್ನು ತಿನ್ನಲಿಕ್ಕೆ ಕೊಡುವನು.

19 ನೀವು ತಿನ್ನುವುದು ಒಂದು ದಿನವಲ್ಲ, ಎರಡು ದಿನವಲ್ಲ, ಐದು ದಿನವಲ್ಲ, ಹತ್ತು ದಿನವಲ್ಲ, ಇಪ್ಪತ್ತು ದಿನವೂ ಅಲ್ಲ.

20 ಆದರೆ ನೀವು ಪೂರ್ತಿಯಾಗಿ ಒಂದು ತಿಂಗಳು ಮಾಂಸವನ್ನು ಊಟಮಾಡುವಿರಿ. ಅದು ವಾಕರಿಕೆಯಾಗಿ ನಿಮ್ಮ ಮೂಗಿನಲ್ಲಿ ಹೊರಟು ನಿಮಗೆ ಅಸಹ್ಯವಾಗುವ ತನಕ ಅದನ್ನು ಊಟಮಾಡುವಿರಿ. ನಿಮ್ಮ ಮಧ್ಯದಲ್ಲಿರುವ ಯೆಹೋವನನ್ನು ನೀವು ಅಲಕ್ಷ್ಯಮಾಡಿ ಆತನ ಎದುರಿನಲ್ಲಿ ಅತ್ತು, ‘ನಾವು ಏಕೆ ಐಗುಪ್ತ ದೇಶವನ್ನು ಬಿಟ್ಟುಬಂದೆವು ಎಂದು ಹೇಳುತ್ತೀರಲ್ಲಾ’ ಎಂದು ಹೇಳು” ಎಂದನು.

21 ಅದಕ್ಕೆ ಮೋಶೆ, “ನನ್ನ ಸಂಗಡ ಇರುವ ಜನರು ಆರು ಲಕ್ಷ ಕಾಲಾಳುಗಳು, ಆದರೂ ನೀನು, ‘ಇವರಿಗೆ ಒಂದು ತಿಂಗಳು ಪೂರ್ತಿಯಾಗಿ ಮಾಂಸವನ್ನು ತಿನ್ನಲು ಕೊಡುತ್ತೇನೆ’ ಎಂದು ಹೇಳಿದ್ದೀ.

22 ಅವರಿಗೆ ಬೇಕಾದಷ್ಟು ಸಿಕ್ಕುವಂತೆ ನಾವು ಹಿಂಡಿನಿಂದ ಆಡು, ಕುರಿ, ದನಗಳನ್ನೂ ಕೊಯ್ಯಬೇಕನ್ನುತ್ತಿಯೋ? ಇಲ್ಲವೆ ಸಮುದ್ರದಲ್ಲಿರುವ ಎಲ್ಲಾ ಮೀನುಗಳನ್ನೂ ಹಿಡಿದುಕೊಳ್ಳಬೇಕೋ?” ಎಂದು ಕೇಳಿದನು.

23 ಯೆಹೋವನು ಮೋಶೆಗೆ, “ನನ್ನ ಕೈ ಮೋಟುಗೈಯೋ? ನನ್ನ ಮಾತು ನೆರವೇರುತ್ತದೋ, ಇಲ್ಲವೋ ಈಗ ನೀನು ನೋಡುವಿ” ಎಂದು ಹೇಳಿದನು.

24 ಮೋಶೆ ಹೊರಟುಹೋಗಿ ಯೆಹೋವನ ಮಾತುಗಳನ್ನು ಜನರಿಗೆ ತಿಳಿಸಿದನು ಮತ್ತು ಅವನು ಜನರ ಹಿರಿಯರಲ್ಲಿ ಎಪ್ಪತ್ತು ಮಂದಿಯನ್ನು ಕೂಡಿಸಿ ದೇವದರ್ಶನದ ಗುಡಾರದ ಸುತ್ತಲೂ ನಿಲ್ಲಿಸಿದನು.

25 ಯೆಹೋವನು ಆ ಮೇಘದಲ್ಲಿ ಇಳಿದು ಬಂದು ಅವನ ಸಂಗಡ ಮಾತನಾಡಿದನು. ಮೋಶೆಯ ಮೇಲಿರುವ ಆತ್ಮದಲ್ಲಿ ಸ್ವಲ್ಪವನ್ನು ಆ ಎಪ್ಪತ್ತು ಮಂದಿ ಹಿರಿಯರಿಗೂ ಪಾಲುಕೊಟ್ಟನು. ಆ ಆತ್ಮವು ಅವರಿಗೆ ದೊರಕಿದಾಗ ಅವರು ಪರವಶರಾಗಿ ಆ ಸಂದರ್ಭದಲ್ಲಿ ಮಾತ್ರ ಪ್ರವಾದಿಸಿದರು. ಆ ಮೇಲೆ ಅವರು ಎಂದಿಗೂ ಪ್ರವಾದಿಸಲೇ ಇಲ್ಲ.

26 ಆದರೆ ಎಲ್ದಾದ್, ಮೇದಾದ್ ಎಂಬ ಇಬ್ಬರು ಪಾಳೆಯದೊಳಗೆ ನಿಂತಿದ್ದರು. ಅವರ ಹೆಸರುಗಳು ಬರೆಯಲ್ಪಟ್ಟಿದ್ದಾಗ್ಯೂ ಅವರು ದೇವದರ್ಶನದ ಗುಡಾರಕ್ಕೆ ಹೋಗಲಿಲ್ಲ. ಆ ಆತ್ಮವು ಅವರ ಮೇಲೆ ಇಳಿದುಬಂದುದರಿಂದ ಅವರು ಪಾಳೆಯದೊಳಗೆ ಪರವಶರಾಗಿ ಪ್ರವಾದಿಸಿದರು.

27 ಪಾಳೆಯದಿಂದ ಒಬ್ಬ ಹುಡುಗನು ಮೋಶೆಯ ಬಳಿಗೆ ಓಡಿ ಬಂದು, “ಎಲ್ದಾದ್ ಮತ್ತು ಮೇದಾದರು ಪಾಳೆಯದಲ್ಲಿ ಪರವಶರಾಗಿ ಪ್ರವಾದಿಸುತ್ತಿದ್ದಾರೆ” ಎಂದು ತಿಳಿಸಿದನು.

28 ಮೋಶೆಯ ಶಿಷ್ಯನಾದ ನೂನನ ಮಗನಾದ ಯೆಹೋಶುವನು ಮೋಶೆಗೆ, “ಗುರುವೇ, ಅವರು ಪ್ರವಾದಿಸುವುದನ್ನು ನಿಲ್ಲಿಸಬೇಕು” ಎಂದು ಹೇಳಿದನು.

29 ಅದಕ್ಕೆ ಮೋಶೆ, “ನನ್ನ ನಿಮಿತ್ತವಾಗಿ ನೀನು ಹೊಟ್ಟೆಕಿಚ್ಚುಪಡುತ್ತೀಯೋ? ಯೆಹೋವನ ಅನುಗ್ರಹದಿಂದ ಆತನ ಜನರೆಲ್ಲರೂ ಆತ್ಮವನ್ನು ಹೊಂದಿದವರೂ, ಪ್ರವಾದಿಸುವವರೂ ಆದರೆ ಎಷ್ಟೋ ಒಳ್ಳೆಯದು” ಎಂದನು.

30 ತರುವಾಯ ಮೋಶೆಯೂ ಮತ್ತು ಇಸ್ರಾಯೇಲರ ಹಿರಿಯರೂ ಪಾಳೆಯದೊಳಗೆ ಬಂದು ಸೇರಿದರು.


ದೇವರು ಲಾವಕ್ಕಿಗಳನ್ನು ಕಳುಹಿಸಿದ್ದು

31 ಆಗ ಯೆಹೋವನ ಬಳಿಯಿಂದ ಗಾಳಿ ಹೊರಟು ಸಮುದ್ರದಿಂದ ಲಾವಕ್ಕಿಗಳನ್ನು ಹೊಡೆದುಕೊಂಡು ಪಾಳೆಯದ ಸುತ್ತಲೂ ಒಂದು ದಿನದ ಪ್ರಯಾಣದಷ್ಟು ದೂರದವರೆಗೆ ಭೂಮಿಗಿಂತ ಎರಡು ಮೊಳ ಎತ್ತರದಲ್ಲಿ ಹಾರುತ್ತಾ ಬರುವಂತೆಮಾಡಿತು.

32 ಇಸ್ರಾಯೇಲರು ಆ ದಿನವೆಲ್ಲಾ, ರಾತ್ರಿಯೆಲ್ಲಾ, ಮರುದಿನವೆಲ್ಲಾ ಲಾವಕ್ಕಿಗಳನ್ನು ಕೂಡಿಸಿದರು. ಯಾರು ಹತ್ತು ಹೋಮೆರಿಗಿಂತ ಕಡಿಮೆ ಕೂಡಿಸಿಕೊಳ್ಳಲಿಲ್ಲ. ಅವರು ಪಾಳೆಯದ ಸುತ್ತಲೂ ಅವುಗಳನ್ನು ಹರಡಿಕೊಂಡರು.

33 ಆದರೆ ಮಾಂಸವು ಇನ್ನೂ ಅವರ ಹಲ್ಲುಗಳ ನಡುವೆ ಇದ್ದಾಗ ಅದನ್ನು ಅಗೆಯುವುದಕ್ಕಿಂತ ಮುಂಚೆ ಜನರ ಮೇಲೆ ಯೆಹೋವನ ಕೂಪವು ಉರಿದದ್ದರಿಂದ ಆತನು ಜನರನ್ನು ಘೋರವ್ಯಾಧಿಯಿಂದ ಸಾಯಿಸಿದನು.

34 ಆಶೆಪಟ್ಟವರನ್ನು ಅಲ್ಲಿ ಹೂಳಿಟ್ಟಿದ್ದರಿಂದ ಆ ಸ್ಥಳಕ್ಕೆ “ಕಿಬ್ರೋತ್ ಹತಾವಾ” ಎಂದು ಹೆಸರಾಯಿತು.

35 ತರುವಾಯ ಜನರು ಕಿಬ್ರೋತ್ ಹತಾವದಿಂದ ಪ್ರಯಾಣಮಾಡಿ ಹಚೇರೋತಿಗೆ ಬಂದು ಅಲ್ಲಿ ಇಳಿದುಕೊಂಡರು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು