Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 1 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಮೊದಲನೆಯ ಜನಗಣತಿ

1 ಇಸ್ರಾಯೇಲರು ಐಗುಪ್ತ ದೇಶದಿಂದ ಹೊರಟ ಎರಡನೆಯ ವರ್ಷದ ಎರಡನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಸೀನಾಯಿ ಅರಣ್ಯದಲ್ಲಿ ದೇವದರ್ಶನದ ಗುಡಾರದೊಳಗೆ ಯೆಹೋವನು ಮೋಶೆಯ ಸಂಗಡ ಹೀಗೆ ಮಾತನಾಡಿದನು,

2 “ಇಸ್ರಾಯೇಲರ ಸರ್ವಸಮೂಹದ ಗಂಡಸರನ್ನು ಗೋತ್ರದ ಕುಟುಂಬಗಳ ಪ್ರಕಾರ ಹೆಸರು ಹಿಡಿದು ಒಬ್ಬೊಬ್ಬರನ್ನಾಗಿ ಲೆಕ್ಕಿಸಬೇಕು.

3 ಇಸ್ರಾಯೇಲರಲ್ಲಿ ಸೈನಿಕರಾಗಿ ಹೊರಡತಕ್ಕವರನ್ನು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರೆಲ್ಲರನ್ನು ಸೈನ್ಯಸೈನ್ಯವಾಗಿ ನೀನೂ ಆರೋನನೂ ಲೆಕ್ಕಹಾಕಬೇಕು.

4 ಈ ಕೆಲಸಕ್ಕಾಗಿ ಕುಲದಲ್ಲಿ ಆಯಾ ಕುಲದ ಒಂದೊಂದು ಮುಖ್ಯಸ್ಥನಾಗಿರುವ ಒಬ್ಬೊಬ್ಬ ಸಹಾಯಕನಿರಬೇಕು ಹಾಗೂ ತನ್ನ ಕುಲಕ್ಕಾಗಿ ಹೋರಾಡುವ ಜನರನ್ನು ಮುಖ್ಯಸ್ಥನು ಮುನ್ನಡೆಸಬೇಕು.

5 ನಿಮಗೆ ಸಹಾಯಮಾಡಬೇಕಾದ ಪುರುಷರು ಯಾರಾರೆಂದರೆ: ರೂಬೇನ್ ಕುಲದಿಂದ ಶೆದೇಯೂರನ ಮಗನಾದ ಎಲೀಚೂರ್,

6 ಸಿಮೆಯೋನ್ ಕುಲದಿಂದ ಚೂರೀಷದ್ದೈಯ ಮಗನಾದ ಶೆಲುಮೀಯೇಲ್,

7 ಯೆಹೂದ ಕುಲದಿಂದ ಅಮ್ಮೀನಾದಾಬನ ಮಗನಾದ ನಹಶೋನ್,

8 ಇಸ್ಸಾಕಾರ್ ಕುಲದಿಂದ ಚೂವಾರನ ಮಗನಾದ ನೆತನೇಲ್,

9 ಜೆಬುಲೂನ್ ಕುಲದಿಂದ ಹೇಲೋನನ ಮಗನಾದ ಎಲೀಯಾಬ್,

10 ಯೋಸೇಫನ ವಂಶದವರಲ್ಲಿ: ಎಫ್ರಾಯೀಮ್ ಕುಲದಿಂದ ಅಮ್ಮೀಹೂದನ ಮಗನಾದ ಎಲೀಷಾಮಾ, ಮನಸ್ಸೆ ಕುಲದಿಂದ ಪೆದಾಚೂರನ ಮಗನಾದ ಗಮ್ಲೀಯೇಲ್,

11 ಬೆನ್ಯಾಮೀನ್ ಕುಲದಿಂದ ಗಿದ್ಯೋನಿಯ ಮಗನಾದ ಅಬೀದಾನ್,

12 ದಾನ್ ಕುಲದಿಂದ ಅಮ್ಮೀಷದ್ದೈಯ ಮಗನಾದ ಅಹೀಗೆಜೆರ್,

13 ಆಶೇರ್ ಕುಲದಿಂದ ಒಕ್ರಾನನ ಮಗನಾದ ಪಗೀಯೇಲ್,

14 ಗಾದ್ ಕುಲದಿಂದ ರೆಗೂವೇಲನ ಮಗನಾದ ಎಲ್ಯಾಸಾಫ್,

15 ನಫ್ತಾಲಿ ಕುಲದಿಂದ ಏನಾನನ ಮಗನಾದ ಅಹೀರ.”

16 ಇವರು ಸರ್ವಸಮೂಹದೊಳಗಿಂದ ಆಯ್ದುಕೊಂಡು ನೇಮಕವಾದವರು. ಇವರು ತಮ್ಮ ಕುಲಗಳಲ್ಲಿ ಪ್ರಧಾನಪುರುಷರು ಹಾಗೂ ಇಸ್ರಾಯೇಲಿನ ಕುಲಗಳ ಪ್ರಮುಖರು.

17 ಹೆಸರಿನಿಂದ ಸೂಚಿತರಾದ ಈ ಪುರುಷರನ್ನು ಮೋಶೆಯು ಮತ್ತು ಆರೋನನು ಆರಿಸಿಕೊಂಡರು.

18 ಅವರು ಎರಡನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಸಮಸ್ತ ಪುರುಷರನ್ನೂ ಸಮೂಹದವರೆಲ್ಲರನ್ನೂ ಕೂಡಿಸಿದರು. ಇಪ್ಪತ್ತು ವರ್ಷ ಹಾಗೂ ಮೇಲ್ಪಟ್ಟ ವಯಸ್ಸುಳ್ಳವರೆಲ್ಲರೂ ಒಬ್ಬೊಬ್ಬರಾಗಿ ಗೋತ್ರ ಕುಟುಂಬಗಳ ಪ್ರಕಾರ ತಮ್ಮತಮ್ಮ ವಂಶಾವಳಿಯನ್ನು ಬರೆಯಿಸಿಕೊಂಡರು.

19 ಹೀಗೆ ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಮೋಶೆ ಸೀನಾಯಿ ಅರಣ್ಯದಲ್ಲಿ ಅವರನ್ನು ಲೆಕ್ಕಮಾಡಿ ಮೊಟ್ಟಮೊದಲು ಜನಗಣತಿ ಪ್ರಾರಂಭಿಸಿದನು.

20 ಇಸ್ರಾಯೇಲಿನ ಚೊಚ್ಚಲ ಮಗನಾದ ರೂಬೇನನ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಲೆಕ್ಕಮಾಡಲ್ಪಟ್ಟರು.

21 ರೂಬೇನನ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟ ಗಂಡಸರು - 46,500 ಮಂದಿ.

22 ಸಿಮೆಯೋನನ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷಕ್ಕೆ ಮೇಲ್ಪಟ್ಟ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರು ಹಿಡಿದು ಲೆಕ್ಕಿಸಲ್ಪಟ್ಟರು.

23 ಸಿಮೆಯೋನನ ಗೋತ್ರದಲ್ಲಿ ಎಣಿಕೆಯಾದ ಗಂಡಸರು - 59,300 ಮಂದಿ.

24 ಗಾದ್ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಲೆಕ್ಕಮಾಡಲ್ಪಟ್ಟರು.

25 ಗಾದ್ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟ ಗಂಡಸರು - 45,650 ಮಂದಿ.

26 ಯೆಹೂದ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರು ಹಿಡಿದು ಲೆಕ್ಕಿಸಲ್ಪಟ್ಟರು.

27 ಯೆಹೂದ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟ ಗಂಡಸರು - 74,600 ಮಂದಿ.

28 ಇಸ್ಸಾಕಾರ್ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರು ಹಿಡಿದು ಲೆಕ್ಕಿಸಲ್ಪಟ್ಟರು.

29 ಇಸ್ಸಾಕಾರ್ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟ ಗಂಡಸರು - 54,400 ಮಂದಿ.

30 ಜೆಬುಲೂನ್ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರು ಹಿಡಿದು ಲೆಕ್ಕಿಸಲ್ಪಟ್ಟರು.

31 ಜೆಬುಲೂನ್ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟ ಗಂಡಸರು - 57,400 ಮಂದಿ.

32 ಯೋಸೇಫನಿಂದ ಹುಟ್ಟಿದವರೊಳಗೆ ಎಫ್ರಾಯೀಮ್ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರು ಹಿಡಿದು ಲೆಕ್ಕಿಸಲ್ಪಟ್ಟರು.

33 ಎಫ್ರಾಯೀಮ್ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟ ಗಂಡಸರು - 40,500 ಮಂದಿ.

34 ಮನಸ್ಸೆ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರು ಹಿಡಿದು ಲೆಕ್ಕಿಸಲ್ಪಟ್ಟರು.

35 ಮನಸ್ಸೆ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟ ಗಂಡಸರು - 32,200 ಮಂದಿ.

36 ಬೆನ್ಯಾಮೀನ್ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರು ಹಿಡಿದು ಲೆಕ್ಕಿಸಲ್ಪಟ್ಟರು.

37 ಬೆನ್ಯಾಮೀನ್ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟ ಗಂಡಸರು - 35,400 ಮಂದಿ.

38 ದಾನ್ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರು ಹಿಡಿದು ಲೆಕ್ಕಿಸಲ್ಪಟ್ಟರು.

39 ದಾನ್ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟ ಗಂಡಸರು - 62,700 ಮಂದಿ.

40 ಆಶೇರ್ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರು ಹಿಡಿದು ಲೆಕ್ಕಿಸಲ್ಪಟ್ಟರು.

41 ಆಶೇರ್ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟ ಗಂಡಸರು - 41,500 ಮಂದಿ.

42 ನಫ್ತಾಲಿ ವಂಶದವರಲ್ಲಿ ಸೈನಿಕರಾಗಿ ಹೊರಡತಕ್ಕವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಗೋತ್ರಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರು ಹಿಡಿದು ಲೆಕ್ಕಿಸಲ್ಪಟ್ಟರು.

43 ನಫ್ತಾಲಿ ಗೋತ್ರದಲ್ಲಿ ಲೆಕ್ಕಿಸಲ್ಪಟ್ಟ ಗಂಡಸರು - 53,400 ಮಂದಿ.

44 ಮೋಶೆ, ಆರೋನನೂ ಮತ್ತು ಇಸ್ರಾಯೇಲಿನ ಹನ್ನೆರಡು ಕುಲಗಳ ನಾಯಕರು ಲೆಕ್ಕಮಾಡಿದ ಇಸ್ರಾಯೇಲರ ಜನರು ಇವರೇ.

45 ಇಸ್ರಾಯೇಲರಲ್ಲಿ ಲೆಕ್ಕಿಸಲ್ಪಟ್ಟವರು ಅಂದರೆ ಇಪ್ಪತ್ತು ವರ್ಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರಾಗಿದ್ದು ಸೈನಿಕರಾಗಿ ಹೊರಡತಕ್ಕವರನ್ನು ಲೆಕ್ಕಿಸಿದರು.

46 ಗಂಡಸರ ಒಟ್ಟು ಸಂಖ್ಯೆ - 6,03,550 ಮಂದಿ.

47 ಆದರೆ ಅವರೊಡನೆ ಲೇವಿ ಕುಲದ ಕುಟುಂಬಗಳು ಲೆಕ್ಕಿಸಲ್ಪಡಲಿಲ್ಲ.

48 ಏಕೆಂದರೆ ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನೆಂದರೆ,

49 “ನೀನು ಇಸ್ರಾಯೇಲರನ್ನು ಎಣಿಸುವಾಗ ಲೇವಿ ಕುಲದವರನ್ನು ಎಣಿಸಬಾರದು.

50 ಆಜ್ಞಾಶಾಸನಗಳಿರುವ ಗುಡಾರವನ್ನೂ ಅದರ ಸಾಮಾನು, ಉಪಕರಣ ಇವುಗಳನ್ನೂ ನೋಡಿಕೊಳ್ಳುವುದಕ್ಕಾಗಿ ಲೇವಿಯರನ್ನು ನೇಮಿಸಬೇಕು. ಅವರು ಆ ಗುಡಾರವನ್ನೂ ಮತ್ತು ಅದರ ಸಾಮಾನುಗಳನ್ನೂ ಹೊರುವುದಕ್ಕಾಗಿ ಇರಬೇಕು. ಅವರು ಅದರ ಸೇವೆಯನ್ನು ಮಾಡುವವರಾಗಿ ಅದರ ಸುತ್ತಲೂ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು.

51 ಗುಡಾರವು ಹೊರಡುವಾಗ ಲೇವಿಯರೇ ಅದನ್ನು ಬಿಚ್ಚಬೇಕು; ಇಳಿದುಕೊಳ್ಳುವಾಗ ಲೇವಿಯರೇ ಅದನ್ನು ಹಾಕಬೇಕು. ಇತರರು ಹತ್ತಿರಕ್ಕೆ ಬಂದರೆ ಅವರಿಗೆ ಮರಣಶಿಕ್ಷೆಯಾಗಬೇಕು.

52 ಇಸ್ರಾಯೇಲರ ಆಯಾ ಸೈನ್ಯಗಳು ತಮ್ಮ ಡೇರೆಗಳನ್ನು ತಮ್ಮತಮ್ಮ ದಂಡಿನ ಧ್ವಜದ ಹತ್ತಿರ ಹಾಕಿಕೊಳ್ಳಬೇಕು.

53 ಆದರೆ ಲೇವಿಯರು ಮಾತ್ರ ತಮ್ಮ ಡೇರೆಗಳನ್ನು ದೇವದರ್ಶನದ ಗುಡಾರದ ಸುತ್ತಲೂ ಹಾಕಿಕೊಳ್ಳಬೇಕು. ಹೀಗಾದರೆ ಯೆಹೋವನ ಕೋಪವು ಇಸ್ರಾಯೇಲರ ಮೇಲೆ ಬರುವುದಕ್ಕೆ ಆಸ್ಪದವಿರುವುದಿಲ್ಲ. ಲೇವಿಯರು ದೇವದರ್ಶನದ ಗುಡಾರವನ್ನು ಕಾಯುವವರಾಗಿರಬೇಕು.”

54 ಇಸ್ರಾಯೇಲರು ಯೆಹೋವನು ಮೋಶೆಗೆ ಆಜ್ಞಾಪಿಸಿದ ಪ್ರಕಾರವೇ ಎಲ್ಲವನ್ನು ಮಾಡಿದರು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು