Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅಪೊಸ್ತಲರ ಕೃತ್ಯಗಳು 26 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಆಗ ಅಗ್ರಿಪ್ಪನು, ಪೌಲನಿಗೆ; “ನೀನು ನಿನ್ನ ಪರವಾಗಿ ಮಾತನಾಡಬಹುದು” ಅನ್ನಲು, ಪೌಲನು ಕೈಯೆತ್ತಿ, ಪ್ರತಿವಾದ ಮಾಡಿದ್ದೇನಂದರೆ;

2 “ಅಗ್ರಿಪ್ಪರಾಜನೇ, ಯೆಹೂದ್ಯರು ನನ್ನ ಮೇಲೆ ಆರೋಪಿಸುವ ಎಲ್ಲಾ ಆರೋಪಗಳ ವಿಷಯವಾಗಿ ನಿನ್ನ ಎದುರಿನಲ್ಲಿ ನಾನು ಈಹೊತ್ತು ಪ್ರತಿವಾದ ಮಾಡಬೇಕಾಗಿರುವುದರಿಂದ, ನನ್ನನ್ನು ಧನ್ಯನೆಂದು ಎಣಿಸಿಕೊಳ್ಳುತ್ತೇನೆ.

3 ಏಕೆಂದರೆ, ಯೆಹೂದ್ಯರಲ್ಲಿರುವ ಎಲ್ಲಾ ಆಚಾರಗಳನ್ನೂ, ವಿವಾದಗಳನ್ನೂ ನೀನು ಚೆನ್ನಾಗಿ ಬಲ್ಲವನಾಗಿರುತ್ತೀ. ನನ್ನ ಮಾತುಗಳನ್ನು ಸಹನೆಯಿಂದ ಕೇಳಬೇಕೆಂದು ಬೇಡಿಕೊಳ್ಳುತ್ತೇನೆ.

4 “ನಾನು ಚಿಕ್ಕಂದಿನಿಂದಲೂ, ಯೆರೂಸಲೇಮಿನಲ್ಲಿ ನನ್ನ ದೇಶದ ಜನರೊಳಗಿದ್ದು, ಬದುಕಿದ ರೀತಿಯು ಎಲ್ಲಾ ಯೆಹೂದ್ಯರಿಗೆ ತಿಳಿದ ವಿಷಯವಾಗಿದೆ.

5 ನಾನು, ನಮ್ಮ ಧರ್ಮದಲ್ಲಿ ಬಹು ಕಟ್ಟುನಿಟ್ಟಾಗಿ ಆಚರಿಸುವ ಫರಿಸಾಯರ ಪಂಥವನ್ನನುಸರಿಸಿ ಫರಿಸಾಯನಾಗಿ ನಡೆದುಕೊಂಡೆನೆಂಬುದನ್ನು, ಪ್ರಾರಂಭದಿಂದಲೂ ಅವರು ಬಲ್ಲರು. ಸಾಕ್ಷಿ ಹೇಳುವುದಕ್ಕೆ ಅವರಿಗೆ ಮನಸ್ಸಿದ್ದರೆ ಹೇಳಬಹುದು.

6 ಈಗಲೂ ದೇವರು ನಮ್ಮ ಪೂರ್ವಿಕರಿಗೆ, ಮಾಡಿದ ವಾಗ್ದಾನವು ನೆರವೇರುವುದೆಂಬ ನಿರೀಕ್ಷೆಯ ನಿಮಿತ್ತವೇ, ನಾನು ಇಂದು ನ್ಯಾಯವಿಚಾರಣೆಗೆ ಇಲ್ಲಿ ನಿಂತಿದ್ದೇನೆ.

7 ನಮ್ಮ ಹನ್ನೆರಡು ಕುಲದವರು ಹಗಲಿರುಳು ಆಸಕ್ತಿಯಿಂದ ದೇವರನ್ನು ಆರಾಧಿಸುತ್ತಾ, ಆ ವಾಗ್ದಾನದ ಫಲವನ್ನು ಹೊಂದುವುದಕ್ಕಾಗಿ ನಿರೀಕ್ಷಿಸುತ್ತಾ ಇದ್ದಾರೆ. ಅರಸನೇ, ಅದೇ ನಿರೀಕ್ಷೆಯ ವಿಷಯದಲ್ಲಿಯೇ ಯೆಹೂದ್ಯರು, ನನ್ನ ವಿರುದ್ಧ ದೋಷಾರೋಪಣೆಮಾಡುತ್ತಿದ್ದಾರೆ.

8 ದೇವರು ಸತ್ತವರನ್ನು ಎಬ್ಬಿಸಿದ್ದು ನಂಬಲು ಅಸಾಧ್ಯವೆಂದು ನೀವು ಏಕೆ ತೀರ್ಮಾನಿಸುತ್ತೀರಿ?

9 ಒಂದು ಕಾಲದಲ್ಲಿ ನಜರೇತಿನ ಯೇಸುವಿನ ಹೆಸರಿಗೆ ವಿರುದ್ಧವಾಗಿ ಅನೇಕ ಕಾರ್ಯಗಳನ್ನು ನಡೆಸಬೇಕೆಂದು ನಾನೂ ಯೋಚಿಸಿಕೊಂಡಿದ್ದೆನು.

10 ಯೆರೂಸಲೇಮಿನಲ್ಲಿ ಹಾಗೆಯೇ ಮಾಡಿದ್ದೆನು. ಮುಖ್ಯಯಾಜಕರಿಂದ, ಅಧಿಕಾರವನ್ನು ಪಡೆದು ದೇವಜನರಲ್ಲಿ ಅನೇಕರನ್ನು ಸೆರೆಮನೆಗಳಲ್ಲಿ ಇರಿಸಿ, ಅವರಿಗೆ ಮರಣದ ತೀರ್ಪಾದಾಗ, ನಾನು ಅದಕ್ಕೆ ಸಮ್ಮತಿಯನ್ನು ಸೂಚಿಸಿದೆನು.

11 ಎಲ್ಲಾ ಸಭಾಮಂದಿರಗಳಲ್ಲಿಯೂ, ನಾನು ಅನೇಕ ಸಾರಿ ಅವರನ್ನು ದಂಡಿಸಿ ಅವರಿಂದ ದೇವದೂಷಣೆಯ ಮಾತುಗಳನ್ನಾಡಿಸುವುದಕ್ಕೆ ಪ್ರಯತ್ನಿಸಿದೆನು. ಇದಲ್ಲದೆ ಅವರ ಮೇಲೆ ಬಹು ಕೋಪಾವೇಶವುಳ್ಳವನಾಗಿ ಬೇರೆ ಪಟ್ಟಣಗಳವರೆಗೂ ಹೋಗಿ, ಅವರನ್ನು ಹಿಂಸೆಪಡಿಸಿದೆನು.

12 ಈ ಉದ್ದೇಶದಿಂದ ನಾನು ಮುಖ್ಯಯಾಜಕರಿಂದ ಅಧಿಕಾರವನ್ನೂ, ಆದೇಶವನ್ನೂ ಹೊಂದಿ ದಮಸ್ಕಕ್ಕೆ ಹೋಗುವ ದಾರಿಯಲ್ಲಿ ರಾಜನೇ,

13 ಮಧ್ಯಾಹ್ನದ ಹೊತ್ತಿನಲ್ಲಿ ಪರಲೋಕದಿಂದ ಒಂದು ಬೆಳಕು ನನ್ನ ಸುತ್ತಲೂ ಮತ್ತು ನನ್ನ ಜೊತೆಯಲ್ಲಿ ಪ್ರಯಾಣಮಾಡುತ್ತಿದ್ದವರ ಸುತ್ತಲೂ ಸೂರ್ಯನ ಹೊಳಪಿಗಿಂತ ಹೆಚ್ಚಾಗಿ ಹೊಳೆಯುವುದನ್ನು ನಾನು ಕಂಡೆನು.

14 ನಾವೆಲ್ಲರು ನೆಲಕ್ಕೆ ಬೀಳಲು; ‘ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸೆಪಡಿಸುತ್ತೀ? ಮುಳ್ಳುಗೋಲನ್ನು ಒದೆಯುವುದರಿಂದ ನಿನಗೇ ಹಾನಿಯಲ್ಲವೇ? ಎಂದು ಇಬ್ರಿಯ ಭಾಷೆಯಿಂದ ಹೇಳುವ ವಾಣಿಯನ್ನು’ ಕೇಳಿದೆನು.

15 ಆಗ ನಾನು; ‘ಕರ್ತನೇ, ನೀನಾರು?’ ಅನ್ನಲು ಕರ್ತನು; ‘ನೀನು ಹಿಂಸೆಪಡಿಸುವ ಯೇಸುವೇ ನಾನು.

16 ನೀನು ಎದ್ದು, ನಿಂತುಕೋ. ನಿನ್ನನ್ನು ನನ್ನ ಸೇವಕನಾಗಿಯೂ, ಸಾಕ್ಷಿಯಾಗಿಯೂ ನೇಮಿಸುವುದಕ್ಕೋಸ್ಕರ ನಿನಗೆ ಕಾಣಿಸಿಕೊಂಡಿದ್ದೇನೆ. ಈಗಲೂ, ಮುಂದೆಯೂ ನಿನಗೆ ತೋರಿಸಲಿರುವ ದರ್ಶನಗಳಲ್ಲಿಯೂ, ನಿನಗೆ ಕಾಣಿಸಿಕೊಂಡದ್ದನ್ನು ಕುರಿತು ನೀನು ನನ್ನ ಸಾಕ್ಷಿಯಾಗಿರಬೇಕು.

17 ನಾನು ನಿನ್ನ ಸ್ವಂತ ಜನರಿಂದಲೂ, ಅನ್ಯಜನರಿಂದಲೂ ನಿನ್ನನ್ನು ರಕ್ಷಿಸುವೆನು.

18 ಅವರು ಕತ್ತಲೆಯಿಂದ ಬೆಳಕಿಗೂ, ಸೈತಾನನ ಅಧಿಕಾರದಿಂದ ದೇವರ ಕಡೆಗೂ ತಿರುಗಿಕೊಂಡು, ನನ್ನಲ್ಲಿ ನಂಬಿಕೆಯಿಡುವುದರಿಂದ ಪಾಪಕ್ಷಮಾಪಣೆಯನ್ನೂ, ಪರಿಶುದ್ಧರೊಂದಿಗೆ ಹಕ್ಕನ್ನೂ ಹೊಂದುವಂತೆ, ಅವರ ಕಣ್ಣುಗಳನ್ನು ತೆರೆಯಬೇಕೆಂದು ಅವರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ’ ಅಂದನು.

19 ಆದಕಾರಣ ಅಗ್ರಿಪ್ಪರಾಜನೇ, ಪರಲೋಕದಿಂದ ನನಗೆ ಉಂಟಾದ ಆ ದರ್ಶನಕ್ಕೆ ನಾನು ಅವಿಧೇಯನಾಗದೆ ಮೊದಲು ದಮಸ್ಕದವರಿಗೆ,

20 ಆಮೇಲೆ ಯೆರೂಸಲೇಮಿನಲ್ಲಿಯೂ, ಯೂದಾಯದ ಎಲ್ಲಾ ಸೀಮೆಯಲ್ಲಿಯೂ ಇರುವವರಿಗೆ ಮತ್ತು ಅನ್ಯಜನರಿಗೆ ಸಹ; ನೀವು ದೇವರ ಕಡೆಗೆ ತಿರುಗಿಕೊಳ್ಳಬೇಕೆಂತಲೂ, ಮಾನಸಾಂತರಕ್ಕೆ ಯೋಗ್ಯವಾದ ಕೃತ್ಯಗಳನ್ನು ಮಾಡಬೇಕೆಂತಲೂ ಸಾರಿದೆನು.

21 ಈ ಕಾರಣದಿಂದ ಯೆಹೂದ್ಯರು ದೇವಾಲಯದಲ್ಲಿ ನನ್ನನ್ನು ಹಿಡಿದು ಕೊಲ್ಲುವುದಕ್ಕೆ ಪ್ರಯತ್ನಿಸಿದರು.

22 ಆದರೆ ನಾನು ದೇವರಿಂದ ಸಹಾಯವನ್ನು ಪಡೆದು ಈ ದಿನದವರೆಗೂ ಸುರಕ್ಷಿತವಾಗಿದ್ದು ಚಿಕ್ಕವರಿಗೂ, ದೊಡ್ಡವರಿಗೂ ಸಾಕ್ಷಿಹೇಳುವವನಾಗಿದ್ದೇನೆ. ಪ್ರವಾದಿಗಳೂ, ಮೋಶೆಯೂ ಮುಂದೆ ಆಗುವುದನ್ನು ಕುರಿತು ತಿಳಿಸಿದ ಸಂಗತಿಗಳನ್ನೇ, ಹೊರತು ನಾನು ಇನ್ನೇನೂ ಹೇಳುವವನಲ್ಲ.

23 ಆ ಸಂಗತಿಗಳು ಏನೆಂದರೆ; ಕ್ರಿಸ್ತನು ಬಾಧೆಪಟ್ಟು ಸಾಯಬೇಕಾದವನು ಮತ್ತು ಆತನು ಸತ್ತವರೊಳಗಿಂದ ಮೊದಲನೆಯವನಾಗಿ ಎದ್ದು ಯೆಹೂದ್ಯರಿಗೂ, ಅನ್ಯಜನರಿಗೂ ಬೆಳಕನ್ನು ಪ್ರಸಿದ್ಧಿಪಡಿಸುವವನಾಗಿರುವನು” ಎಂಬುದೇ.

24 ಹೀಗೆ ಪೌಲನು ಪ್ರತಿವಾದ ಮಾಡುತ್ತಿದ್ದಾಗ, ಫೆಸ್ತನು ಮಹಾಶಬ್ದದಿಂದ; “ಪೌಲನೇ, ನಿನಗೆ ಹುಚ್ಚು ಹಿಡಿದಿದೆ; ಅಧಿಕ ಪಾಂಡಿತ್ಯ ನಿನ್ನನ್ನು ಹುಚ್ಚನನ್ನಾಗಿಸಿದೆ,” ಎಂದು ಹೇಳಿದನು.

25 ಅದಕ್ಕೆ ಪೌಲನು; “ಮಹಾ ಶ್ರೇಷ್ಠನಾದ ಫೆಸ್ತನೇ, ನಾನು ಹುಚ್ಚನಲ್ಲ; ಸ್ವಸ್ಥಬುದ್ಧಿಯುಳ್ಳವನಾಗಿ ಸತ್ಯವಾದ ಮಾತುಗಳನ್ನೇ ಹೇಳುತ್ತಿದ್ದೇನೆ.

26 ಅಗ್ರಿಪ್ಪರಾಜನು ಈ ಸಂಗತಿಗಳನ್ನೆಲ್ಲಾ ತಿಳಿದವನು; ಆದುದರಿಂದ, ಅವನ ಮುಂದೆ ಧೈರ್ಯವಾಗಿ ಮಾತನಾಡುತ್ತೇನೆ. ಇವುಗಳಲ್ಲಿ ಒಂದಾದರೂ ಅವನಿಗೆ ಮುಚ್ಚುಮರೆಯಾದುದಲ್ಲವೆಂದು ನಂಬಿದ್ದೇನೆ, ಏಕೆಂದರೆ ಇದು ಒಂದು ಮೂಲೆಯಲ್ಲಿ ನಡೆದ ಕಾರ್ಯವಲ್ಲ.

27 ಅಗ್ರಿಪ್ಪರಾಜನೇ, ಪ್ರವಾದಿಗಳಲ್ಲಿ ನಿನಗೆ ನಂಬಿಕೆಯುಂಟೋ?” ಉಂಟೆಂದು ನಾನು ಬಲ್ಲೆನು ಅಂದನು.

28 ಅದಕ್ಕೆ ಅಗ್ರಿಪ್ಪನು; “ಅಲ್ಪಪ್ರಯತ್ನದಿಂದ, ನನ್ನನ್ನು ಕ್ರೈಸ್ತನಾಗುವುದಕ್ಕೆ ಒಡಂಬಡಿಸುತ್ತೀಯಾ?” ಎಂದು ಹೇಳಲು

29 ಪೌಲನು; “ಅಲ್ಪಪ್ರಯತ್ನದಿಂದಾಗಲಿ, ಅಧಿಕ ಪ್ರಯತ್ನದಿಂದಾಗಲಿ ನೀನು ಮಾತ್ರವಲ್ಲದೆ ಈಹೊತ್ತು ನನ್ನ ಮಾತುಗಳನ್ನು ಕೇಳುವವರೆಲ್ಲರೂ, ಈ ಬೇಡಿಗಳ ಹೊರತು, ನನ್ನಂತೆ ಆಗಬೇಕೆಂದು ದೇವರನ್ನು ಪ್ರಾರ್ಥಿಸುತ್ತೇನೆ” ಅಂದನು.

30 ಆ ಮೇಲೆ ರಾಜನೂ, ದೇಶಾಧಿಪತಿಯೂ ಮತ್ತು ಬೆರ್ನಿಕೆಯೂ ಅವರ ಸಂಗಡ ಕುಳಿತಿದ್ದವರೂ, ಎದ್ದು ಹೊರಗೆ ಹೋಗಿ;

31 “ಈ ಮನುಷ್ಯನು ಮರಣದಂಡನೆಗಾಗಲಿ, ಬೇಡಿಗಾಗಲಿ ಆಧಾರವಾದದ್ದೇನೂ ಮಾಡಿದವನಲ್ಲ” ಎಂಬುದಾಗಿ ತಮ್ಮ ತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.

32 ಅಗ್ರಿಪ್ಪನು ಫೆಸ್ತನಿಗೆ; “ಈ ಮನುಷ್ಯನು ಕೈಸರನಿಗೆ ಎದುರಿನಲ್ಲಿ ಹೇಳಿಕೊಳ್ಳುತ್ತೇನೆಂದು ಹೇಳದೆ ಹೋಗಿದ್ದರೆ ಇವನನ್ನು ಬಿಡುಗಡೆ ಮಾಡಬಹುದಿತ್ತು” ಎಂದು ಹೇಳಿದನು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು