Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅಪೊಸ್ತಲರ ಕೃತ್ಯಗಳು 23 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಆಗ ಪೌಲನು ಹಿರೀಸಭೆಯನ್ನು ದೃಷ್ಟಿಸಿ ನೋಡಿ; “ಸಹೋದರರೇ, ನಾನು ಈ ದಿನದವರೆಗೂ ಒಳ್ಳೆಯ ಮನಸ್ಸಾಕ್ಷಿಯಿಂದ ದೇವರ ಮುಂದೆ ನಡೆದುಕೊಂಡಿದ್ದೇನೆ” ಅಂದನು.

2 ಅದಕ್ಕೆ ಮಹಾಯಾಜಕನಾದ ಅನನೀಯನು; ಅವನ ಬಾಯಿಯ ಮೇಲೆ ಹೊಡೆಯಿರಿ ಎಂದು ಹತ್ತಿರದಲ್ಲಿ ನಿಂತಿದ್ದವರಿಗೆ ಅಪ್ಪಣೆ ಕೊಡಲು ಪೌಲನು ಅವನಿಗೆ;

3 “ಸುಣ್ಣ ಬಳಿದ ಗೋಡೆಯೇ, ದೇವರು ನಿನ್ನನ್ನು ಹೊಡೆಯುವನು. ನೀನು ಧರ್ಮಶಾಸ್ತ್ರನುಸಾರವಾಗಿ, ನನ್ನನ್ನು ವಿಚಾರಣೆಮಾಡುವುದಕ್ಕೆ ಕುಳಿತುಕೊಂಡು ಧರ್ಮಶಾಸ್ತ್ರದ ವಿರುದ್ಧವಾಗಿ ನನ್ನನ್ನು ಹೊಡೆಯುವುದಕ್ಕೆ ಅಪ್ಪಣೆಕೊಡುತ್ತೀಯೋ?” ಅಂದನು.

4 ಹತ್ತಿರ ನಿಂತಿದ್ದವರು; “ದೇವರು ನೇಮಿಸಿದ ಮಹಾಯಾಜಕನನ್ನು ನೀನು ಬೈಯುತ್ತೀಯಾ?” ಅನ್ನಲು,

5 ಪೌಲನು; “ಸಹೋದರರೇ, ಮಹಾಯಾಜಕನೆಂದು ನನಗೆ ತಿಳಿದಿರಲಿಲ್ಲ. ನಿನ್ನ ಜನರಲ್ಲಿ ಅಧಿಪತಿಯಾಗಿರುವವನ ವಿಷಯವಾಗಿ ಕೆಟ್ಟದ್ದೇನೂ ಆಡಬಾರದೆಂದು ಬರೆದದೆಯಷ್ಟೆ” ಅಂದನು.

6 ಸಭೆಯವರಲ್ಲಿ ಒಂದು ಪಾಲು ಸದ್ದುಕಾಯರೂ, ಒಂದು ಪಾಲು ಫರಿಸಾಯರೂ, ಇರುವುದನ್ನು ಪೌಲನು ಕಂಡು; “ಸಹೋದರರೇ, ನಾನು ಫರಿಸಾಯನು, ಫರಿಸಾಯನ ಮಗನು; ಸತ್ತವರು ಪುನರುತ್ಥಾನಹೊಂದುವರು ಎಂಬ ನಿರೀಕ್ಷೆಯ ನಿಮಿತ್ತವಾಗಿ ನಾನು ವಿಚಾರಣೆಮಾಡಲ್ಪಡುತ್ತಿದ್ದಾನೆ” ಎಂದು ಕೂಗಿದನು.

7 ಇದನ್ನು ಅವನು ಹೇಳಿದಾಗ ಫರಿಸಾಯರಿಗೂ, ಸದ್ದುಕಾಯರಿಗೂ ಜಗಳ ಹುಟ್ಟಿತು; ಸಭೆಯಲ್ಲಿ ಒಡಕುಂಟಾಯಿತು.

8 ಏಕೆಂದರೆ, ಪುನರುತ್ಥಾನವಾಗಲಿ, ದೇವದೂತನಾಗಲಿ, ದೇಹವಿಲ್ಲದ ಆತ್ಮವಾಗಲಿ ಇಲ್ಲವೆಂದು ಸದ್ದುಕಾಯರು ಹೇಳುವರು. ಆದರೆ ಇವೆರಡೂ ಉಂಟೆಂದು ಫರಿಸಾಯರು ಒಪ್ಪಿಕೊಳ್ಳುವರು.

9 ಆಗ ದೊಡ್ಡ ಕೂಗಾಟವಾಯಿತು. ಫರಿಸಾಯರ ಪಕ್ಷದವರಾದ ಶಾಸ್ತ್ರಿಗಳಲ್ಲಿ ಕೆಲವರು ಎದ್ದು; “ಈ ಮನುಷ್ಯನಲ್ಲಿ ನಮಗೆ ಕೆಟ್ಟದ್ದೇನೂ ಕಂಡುಬರುವುದಿಲ್ಲ; ಆತ್ಮವಾಗಲಿ, ದೇವದೂತನಾಗಲಿ, ಅವನ ಸಂಗಡ ಮಾತನಾಡಿದ್ದರೂ, ಮಾತನಾಡಿರಬಹುದು” ಎಂದು ವಾದಿಸಿದರು.

10 ಜಗಳವು ಅಧಿಕವಾದಾಗ ಅವರು ಪೌಲನನ್ನು ಎಳೆದಾಡಿ ಚೂರುಚೂರು ಮಾಡಾರೆಂದು ಸಹಸ್ರಾಧಿಪತಿಯು ಭಯಪಟ್ಟು ಸಿಪಾಯಿಗಳಿಗೆ; ನೀವು ಹೋಗಿ ಅವರ ಮಧ್ಯದಿಂದ ಅವನನ್ನು ಬಲವಂತವಾಗಿ ಹಿಡಿದು ಕೋಟೆಯೊಳಗೆ ತರಬೇಕೆಂದು ಅಪ್ಪಣೆ ಮಾಡಿದನು.

11 ಅಂದು ರಾತ್ರಿ ಕರ್ತನು ಪೌಲನ ಬಳಿಯಲ್ಲಿ ನಿಂತುಕೊಂಡು; “ಧೈರ್ಯದಿಂದಿರು; ನೀನು ಯೆರೂಸಲೇಮಿನಲ್ಲಿ ನನ್ನ ಸಂಗತಿಯನ್ನೆಲ್ಲಾ ಸಾಕ್ಷಿಯಾಗಿ ಹೇಳಿದಂತೆಯೇ ರೋಮಾಪುರದಲ್ಲಿಯೂ ಸಾಕ್ಷಿಹೇಳಬೇಕಾಗುವುದು” ಅಂದನು.


ಪೌಲನನ್ನು ಕೊಲ್ಲುವ ಪ್ರಯತ್ನ

12 ಬೆಳಗಾದ ಮೇಲೆ ಯೆಹೂದ್ಯರು ಒಳಸಂಚು ಮಾಡಿ; ನಾವು ಪೌಲನನ್ನು ಕೊಲ್ಲುವ ತನಕ ಅನ್ನಪಾನವೇನೂ ಮುಟ್ಟುವುದಿಲ್ಲವೆಂದು ಶಪಥಮಾಡಿಕೊಂಡರು.

13 ಹೀಗೆ ಮಾಡಿದವರು ನಲವತ್ತು ಮಂದಿಗಿಂತ ಹೆಚ್ಚಾಗಿದ್ದರು.

14 ಇವರು ಮುಖ್ಯಯಾಜಕರ ಮತ್ತು ಹಿರಿಯರ ಬಳಿಗೆ ಹೋಗಿ; “ನಾವು ಪೌಲನನ್ನು ಕೊಲ್ಲುವ ತನಕ ಬಾಯಲ್ಲಿ ಏನೂ ಹಾಕುವುದಿಲ್ಲವೆಂದು ಕಠಿಣ ಶಪಥವನ್ನು ಮಾಡಿಕೊಂಡಿದ್ದೇವೆ.

15 ಆದುದರಿಂದ ನೀವು ಸಭೆಯವರ ಸಹಿತ ಸಹಸ್ರಾಧಿಪತಿಯ ಬಳಿಗೆ ಹೋಗಿ, ಪೌಲನ ಸಂಗತಿಯನ್ನು ಇನ್ನೂ ಸೂಕ್ಷ್ಮವಾಗಿ ಪರಿಶೀಲಿಸಬೇಕೆಂದು ನೆವಹೇಳಿ ಅವನನ್ನು ಕೋಟೆಯೊಳಗೆ ನಿಮ್ಮ ಬಳಿಗೆ ಕರೆದುಕೊಂಡು ಬರುವ ಹಾಗೆ ಕೇಳಿಕೊಳ್ಳಬೇಕು. ನಾವಾದರೋ, ಅವನು ಹತ್ತಿರ ಬರುವುದಕ್ಕಿಂತ ಮೊದಲೇ ಅವನನ್ನು ಕೊಲ್ಲುವುದಕ್ಕೆ ಸಿದ್ಧವಾಗಿದ್ದೇವೆ” ಅಂದರು.

16 ಅವರು ಹೊಂಚು ಹಾಕಿಕೊಂಡಿರುವುದನ್ನು, ಪೌಲನ ಸೋದರಳಿಯನು ಕೇಳಿ ಕೋಟೆಯೊಳಗೆ ಬಂದು ಪೌಲನಿಗೆ ಆ ವಾರ್ತೆಯನ್ನು ತಿಳಿಸಿದನು.

17 ಪೌಲನು ಶತಾಧಿಪತಿಗಳಲ್ಲಿ ಒಬ್ಬನನ್ನು ಕರೆಯಿಸಿ; “ಈ ಯೌವನಸ್ಥನನ್ನು ಸಹಸ್ರಾಧಿಪತಿಯ ಬಳಿಗೆ ಕರೆದುಕೊಂಡು ಹೋಗು; ಅವನಿಗೆ ತಿಳಿಸಬೇಕಾದ ಒಂದು ಮಾತು ಇದೆ” ಎಂದು ಹೇಳಿದನು.

18 ಶತಾಧಿಪತಿ ಅವನನ್ನು ಸಹಸ್ರಾಧಿಪತಿಯ ಬಳಿಗೆ ಕರೆದುಕೊಂಡು ಹೋಗಿ; “ಸೆರೆಯವನಾದ ಪೌಲನು ನನ್ನನ್ನು ಕರೆದು ಈ ಯೌವನಸ್ಥನನ್ನು ತಮ್ಮ ಬಳಿಗೆ ಕರೆದುಕೊಂಡು ಹೋಗುವಂತೆ ಬೇಡಿಕೊಂಡನು; ತಮಗೆ ತಿಳಿಸಬೇಕಾದ ಏನೋ ಒಂದು ಮಾತು ಇದೆಯಂತೆ” ಎಂದು ಹೇಳಲು,

19 ಸಹಸ್ರಾಧಿಪತಿಯು ಅವನನ್ನು ಕೈಹಿಡಿದು ಒಂದು ಕಡೆಗೆ ಏಕಾಂತವಾಗಿ ಕರೆದುಕೊಂಡು ಹೋಗಿ; “ನೀನು ನನಗೆ ಹೇಳಬೇಕಾದದ್ದು ಏನು?” ಎಂದು ಕೇಳಿದನು.

20 ಅವನು; “ಯೆಹೂದ್ಯರು ಪೌಲನ ಸಂಗತಿಯನ್ನು ಇನ್ನೂ ಸೂಕ್ಷ್ಮವಾಗಿ ವಿಚಾರಣೆಮಾಡಬೇಕೆಂಬ ನೆವ ಹೇಳಿ ನೀವು ನಾಳೆ ಅವನನ್ನು ಹಿರೀಸಭೆಯ ಮುಂದೆ ಕರೆದು ತರಬೇಕೆಂದು ಕೇಳಿಕೊಳ್ಳುವುದಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ.

21 ನೀವು ಅವರ ಮಾತಿಗೆ ಬದ್ಧರಾಗಬೇಡಿ; ಏಕೆಂದರೆ ನಲವತ್ತಕ್ಕಿಂತ ಹೆಚ್ಚು ಮಂದಿ ಯೆಹೊದ್ಯರು ತಾವು ಅವನನ್ನು ಕೊಲ್ಲುವ ತನಕ ಅನ್ನಪಾನವೇನೂ ಮುಟ್ಟುವುದಿಲ್ಲವೆಂದು ಶಪಥವನ್ನು ಮಾಡಿಕೊಂಡು, ಅವನಿಗೋಸ್ಕರ ಹೊಂಚುಹಾಕುತ್ತಾ ಇದ್ದಾರೆ. ಈಗ ಅವರು ನಿಮ್ಮ ಒಪ್ಪಿಗೆಯನ್ನೇ ಎದುರುನೋಡುತ್ತಾ ಸಿದ್ಧವಾಗಿದ್ದಾರೆ” ಅಂದನು.

22 ಆಗ ಸಹಸ್ರಾಧಿಪತಿಯು ಆ ಯೌವನಸ್ಥನಿಗೆ; “ಈ ಸಂಗತಿಗಳನ್ನು ನನಗೆ ಸೂಚಿಸಿದ್ದನ್ನು ನೀನು ಯಾರಿಗೂ ಹೇಳಬೇಡ” ಎಂದು ಖಂಡಿತವಾಗಿ ಅಪ್ಪಣೆ ಕೊಟ್ಟು ಅವನನ್ನು ಕಳುಹಿಸಿಬಿಟ್ಟನು.


ಕೈಸರೈಯಕ್ಕೆ ಪೌಲನನ್ನು ಕಳುಹಿಸಿದ್ದು

23 ಆ ಮೇಲೆ ಅವನು ಶತಾಧಿಪತಿಗಳಲ್ಲಿ ಇಬ್ಬರನ್ನು ಕರೆಯಿಸಿ; “ರಾತ್ರಿ ಒಂಭತ್ತು ಘಂಟೆಗೆ ಕೈಸರೈಯದ ತನಕ ಹೋಗುವಂತೆ ಇನ್ನೂರು ಮಂದಿ ಸಿಪಾಯಿಗಳನ್ನೂ, ಎಪ್ಪತ್ತುಮಂದಿ ಕುದುರೆ ಸವಾರರನ್ನೂ, ಇನ್ನೂರು ಮಂದಿ ಈಟಿ ಹಿಡಿದ ಸೈನಿಕರನ್ನು ಸಿದ್ಧಮಾಡಿರಿ.”

24 ಮತ್ತು ಕುದುರೆಗಳನ್ನು ಸಿದ್ಧಮಾಡಿ, ಪೌಲನನ್ನು ಹತ್ತಿಸಿ, ದೇಶಾಧಿಪತಿಯಾದ ಫೇಲಿಕ್ಸನ ಬಳಿಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಬೇಕೆಂದು ಅಪ್ಪಣೆ ಕೊಟ್ಟನು.

25 ಇದಲ್ಲದೆ ಈ ಕೆಳಗಣ ಅಭಿಪ್ರಾಯದ ಒಂದು ಪತ್ರವನ್ನು ಬರೆದನು, ಅದೇನೆಂದರೆ;

26 “ಮಹಾರಾಜರಾಜಶ್ರೀ ದೇಶಾಧಿಪತಿಯಾದ ಫೇಲಿಕ್ಸನಿಗೆ ಕ್ಲೌದ್ಯ ಲೂಸ್ಯನು ಮಾಡುವ ವಂದನೆ.

27 ಯೆಹೂದ್ಯರು ಈ ಮನುಷ್ಯನನ್ನು ಹಿಡಿದು ಕೊಲ್ಲಬೇಕೆಂದಿದ್ದಾಗ, ನಾನು ಸಿಪಾಯಿಗಳೊಂದಿಗೆ ಹೋಗಿ ಅವನನ್ನು ರೋಮಾಪುರದ ಹಕ್ಕುದಾರನೆಂದು ತಿಳಿದು ಅವನನ್ನು ತಪ್ಪಿಸಿದೆನು.

28 ಇದಲ್ಲದೆ ಅವನ ಮೇಲೆ ತಪ್ಪು ಹೊರಿಸಿದ ಕಾರಣವನ್ನು ತಿಳಿಯಲಪೇಕ್ಷಿಸಿ, ಅವನನ್ನು ಅವರ ಹಿರೀಸಭೆಗೆ ಕರೆದುಕೊಂಡು ಹೋದೆನು.

29 ಅಲ್ಲಿ ಅವರು ತಮ್ಮ ಧರ್ಮಶಾಸ್ತ್ರ ವಿಷಯಗಳನ್ನು ಹಿಡಿದು ಅವನ ವಿರುದ್ಧ ತಪ್ಪು ಹೊರಿಸಿದರೇ ಹೊರತು ಮರಣ ದಂಡನೆಗಾಗಲಿ, ಬೇಡಿಗಾಗಲಿ ಆಧಾರವಾದ ಯಾವ ಅಪರಾಧವನ್ನೂ ಹೊರಿಸಲಿಲ್ಲವೆಂದು ನನಗೆ ಕಂಡುಬಂತು.

30 ಈ ಮನುಷ್ಯನಿಗೆ ವಿರುದ್ಧವಾಗಿ ಒಳಸಂಚು ನಡೆಯುತ್ತಿದೆ ಎಂದು ನನಗೆ ತಿಳಿದುಬಂದ್ದುದರಿಂದ ಕೂಡಲೆ, ನಾನು ಅವನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ, ಅವನ ವಿರುದ್ಧ ತಪ್ಪುಹೊರಿಸುವವರಿಗೆ ನಿನ್ನ ಮುಂದೆಯೇ ಅವನಿಗೆ ವಿರುದ್ಧವಾಗಿ ವಾದ ಮಂಡಿಸುವ ಹಾಗೆ ಅಪ್ಪಣೆ ಕೊಟ್ಟೆನು” ಎಂಬುದೇ.

31 ಸಿಪಾಯಿಗಳು ತಮಗೆ ಅಪ್ಪಣೆಯಾದಂತೆ, ರಾತ್ರಿಕಾಲದಲ್ಲಿ ಪೌಲನನ್ನು ಅಂತಿಪತ್ರಿ ಊರಿಗೆ ಕರೆದುಕೊಂಡು ಹೋದರು.

32 ಮರುದಿನ ಅವರು ಸವಾರರನ್ನು ಅವನ ಜೊತೆಯಲ್ಲಿ ಹೋಗುವಂತೆ ಮಾಡಿ, ತಾವು ಕೋಟೆಗೆ ಹಿಂತಿರುಗಿ ಬಂದರು.

33 ಸವಾರರು ಕೈಸರೈಯಕ್ಕೆ ಸೇರಿ, ದೇಶಾಧಿಪತಿಗೆ ಪತ್ರವನ್ನು ಒಪ್ಪಿಸಿ, ಪೌಲನನ್ನು ಅವನ ಮುಂದೆ ನಿಲ್ಲಿಸಿದರು.

34 ದೇಶಾಧಿಪತಿಯು ಆ ಕಾಗದವನ್ನು ಓದಿ, ಪೌಲನು ಯಾವ ಸೀಮೆಯವನು? ಎಂದು ಕೇಳಿ ಅವನು ಕಿಲಿಕ್ಯದವನೆಂದು ತಿಳಿದು;

35 “ನಿನ್ನ ಮೇಲೆ ತಪ್ಪು ಹೊರಿಸುವವರು ಬಂದ ನಂತರ, ನಿನ್ನ ಕಾರ್ಯವನ್ನು ಪೂರ್ಣವಾಗಿ ವಿಚಾರಿಸುತ್ತೇನೆ” ಎಂದು ಹೇಳಿ, ಅವನನ್ನು ಹೆರೋದನ ಅರಮನೆಯಲ್ಲಿ ಇಟ್ಟು ಕಾಯಬೇಕೆಂಬುದಾಗಿ ಅಪ್ಪಣೆಮಾಡಿದನು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು