Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅಪೊಸ್ತಲರ ಕೃತ್ಯಗಳು 11 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಪೇತ್ರನು ಯೆರೂಸಲೇಮಿನ ಸಭೆಯಲ್ಲಿ ಪ್ರತಿವಾದ ಮಾಡಿದ್ದು

1 ಅನ್ಯಜನರು ಸಹ ದೇವರ ವಾಕ್ಯವನ್ನು ಅಂಗೀಕರಿಸಿದರೆಂಬ ಸಮಾಚಾರವನ್ನು ಅಪೊಸ್ತಲರೂ ಯೂದಾಯದಲ್ಲಿದ್ದ ಸಹೋದರರೂ ಕೇಳಿದರು.

2 ಪೇತ್ರನು ಯೆರೂಸಲೇಮಿಗೆ ಬಂದಾಗ ಸುನ್ನತಿಮಾಡಿಸಿಕೊಂಡಿದ್ದ ಯೆಹೂದ್ಯರು;

3 “ನೀನು ಸುನ್ನತಿಯಿಲ್ಲದವರಲ್ಲಿ ಸೇರಿ ಅವರ ಸಂಗಡ ಊಟಮಾಡಿದೆಯಲ್ಲಾ” ಎಂದು ಅವನ ಕೂಡ ವಾದಿಸಿದರು.

4 ಪೇತ್ರನು ನಡೆದ ಸಂಗತಿಯನ್ನು ಅವರಿಗೆ ಮೊದಲಿಂದ ಕ್ರಮವಾಗಿ ವಿವರಿಸಿ,

5 ಹೇಳಿದ್ದೇನಂದರೆ; “ನಾನು ಯೊಪ್ಪ ಎಂಬ ಪಟ್ಟಣದಲ್ಲಿ ಪ್ರಾರ್ಥನೆಮಾಡುತ್ತಾ ಧ್ಯಾನಪರವಶನಾಗಿದ್ದ ನನಗೆ ಒಂದು ದರ್ಶನವಾಯಿತು” ಅದೇನೆಂದರೆ, ಆಕಾಶದಿಂದ ನಾಲ್ಕು ಮೂಲೆಗಳನ್ನು ಹಿಡಿದು ದೊಡ್ಡ ಜೋಳಿಗೆಯಂತಿರುವ ಒಂದು ವಸ್ತುವು ನಾನಿದ್ದಲ್ಲಿಗೆ ಇಳಿದು ಬಂದಿತು.

6 ಅದೇನೆಂದು ತಿಳಿದುಕೊಳ್ಳುವುದಕ್ಕೆ ನಾನು ಅದನ್ನು ಚೆನ್ನಾಗಿ ನೋಡಿದಾಗ, ಭೂಮಿಯ ಮೇಲಿರುವ ಎಲ್ಲಾ ಪ್ರಾಣಿಗಳು, ಕಾಡುಮೃಗಳು, ಹರಿದಾಡುವ ಕ್ರಿಮಿಕೀಟಗಳನ್ನೂ, ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳನ್ನೂ ಕಂಡೆನು.

7 ಆಗ; “ಪೇತ್ರನೇ, ಎದ್ದು, ಕೊಯ್ದು ತಿನ್ನು” ಎಂದು ನನಗೆ ಹೇಳುವ ವಾಣಿಯನ್ನು ಕೇಳಿದೆನು.

8 ಅದಕ್ಕೆ ನಾನು; “ಬೇಡವೇ ಬೇಡ, ಕರ್ತನೇ, ಹೊಲೆಯಾದ ಪದಾರ್ಥವಾಗಲಿ, ಅಶುದ್ಧ ಪದಾರ್ಥವಾಗಲಿ ಎಂದೂ ನನ್ನ ಬಾಯೊಳಗೆ ಸೇರಿದ್ದಿಲ್ಲ” ಅಂದೆನು.

9 ಅದಕ್ಕೆ; “ದೇವರು ಶುದ್ಧ ಮಾಡಿದ್ದನ್ನು ನೀನು ಹೊಲೆ ಎನ್ನಬಾರದು” ಎಂಬುದಾಗಿ ಎರಡನೆಯ ಸಾರಿಯೂ ಆಕಾಶದಿಂದ ವಾಣಿಯಾಯಿತು.

10 ಹೀಗೆ ಮೂರು ಸಾರಿ ಆಯಿತು. ಅನಂತರ ಎಲ್ಲವೂ ತಿರುಗಿ ಆಕಾಶಕ್ಕೆ ಎತ್ತಲ್ಪಟ್ಟಿತು.

11 ಆ ಕ್ಷಣದಲ್ಲೇ ಮೂವರು ಪುರುಷರು ನಾವಿದ್ದ ಮನೆಯ ಮುಂದೆ ನಿಂತಿದ್ದರು. ಅವರು ಕೈಸರೈಯದಿಂದ ನನ್ನ ಹತ್ತಿರಕ್ಕೆ ಕಳುಹಿಸಲ್ಪಟ್ಟವರು.

12 ದೇವರಾತ್ಮನು, ನನಗೆ ನೀನು ಏನೂ ಭೇದಮಾಡದೆ ಅವರ ಜೊತೆಯಲ್ಲಿ ಹೋಗು ಎಂದು ಹೇಳಿದನು. ಈ ಆರು ಮಂದಿ ಸಹೋದರರು ಸಹ ನನ್ನ ಸಂಗಡ ಬಂದರು.

13 ಆ ಮನುಷ್ಯನ ಮನೆಯೊಳಗೆ ನಾವು ಸೇರಲು ಅವನು ನಮಗೆ, ಒಬ್ಬ ದೇವದೂತನು ನನ್ನ ಮನೆಯಲ್ಲಿ ನಿಂತಿರುವುದನ್ನು ಕಂಡೆನು. ಆ ದೂತನು; “ನೀನು ಯೊಪ್ಪಕ್ಕೆ ಜನರನ್ನು ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಯಿಸು.

14 ಅವನು ನಿನಗೆ ಸಂದೇಶವನ್ನು ಹೇಳುವನು, ಆ ಸಂದೇಶದಿಂದ ನಿನಗೂ ನಿನ್ನ ಮನೆಯವರೆಲ್ಲರಿಗೂ ರಕ್ಷಣೆಯಾಗುವದು” ಎಂದು ಹೇಳಿದನೆಂಬುದಾಗಿ ತಿಳಿಸಿದನು.

15 ನಾನು ಮಾತನಾಡುವುದಕ್ಕೆ ಪ್ರಾರಂಭಿಸಿದಾಗ, ಪವಿತ್ರಾತ್ಮವು ಮೊದಲು ನಮ್ಮ ಮೇಲೆ ಇಳಿದಂತೆ ಅವರ ಮೇಲೆಯೂ ಇಳಿಯಿತು.

16 ಆಗ; “ಯೋಹಾನನಾದರೋ ನೀರಿನಿಂದ ದೀಕ್ಷಾಸ್ನಾನಮಾಡಿಸಿದನು; ನಿಮಗಾದರೋ ಪವಿತ್ರಾತ್ಮನಲ್ಲಿ ಸ್ನಾನವಾಗುವುದು” ಎಂದು ಕರ್ತನು ಹೇಳಿದ ಮಾತುಗಳು ನನ್ನ ನೆನಪಿಗೆ ಬಂದಿತು.

17 ದೇವರು ಕರ್ತನಾಗಿರುವ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಮಗೆ ಕೊಟ್ಟ ವರಕ್ಕೆ ಸರಿಯಾದ ವರವನ್ನು ಅವರಿಗೂ ಕೊಟ್ಟಿರಲಾಗಿ ದೇವರನ್ನು ತಡೆಯುವುದಕ್ಕೆ ನಾನು ಶಕ್ತನೋ? ಎಂದು ಹೇಳಿದನು.

18 ಈ ಮಾತುಗಳನ್ನು ಅವರು ಕೇಳಿ ಆಕ್ಷೇಪಣೆ ಮಾಡುವುದನ್ನು ಬಿಟ್ಟು; “ಹಾಗಾದರೆ ದೇವರು ಅನ್ಯಜನರಿಗೂ ಜೀವಕೊಡಬೇಕೆಂದು ಅವರ ಮನಸ್ಸುಗಳನ್ನು ತನ್ನ ಕಡೆಗೆ ತಿರುಗಿಸಿದ್ದಾನೆ” ಎಂದು ದೇವರನ್ನು ಕೊಂಡಾಡಿದರು.


ಅಂತಿಯೋಕ್ಯ ಪಟ್ಟಣದಲ್ಲಿ ಕ್ರೈಸ್ತಸಭೆ

19 ಸ್ತೆಫನನ ವಿಷಯದಲ್ಲಿ ಉಂಟಾದ ಹಿಂಸೆಯಿಂದ ಚದರಿಹೋದವರು ಯೆಹೂದ್ಯರಿಗಲ್ಲದೇ ಮತ್ತಾರಿಗೂ ದೇವರ ವಾಕ್ಯವನ್ನು ಹೇಳದೆ ಫೊಯಿನಿಕೆ, ಕುಪ್ರ ಹಾಗೂ ಅಂತಿಯೋಕ್ಯ ಪ್ರಾಂತ್ಯಗಳವರೆಗೂ ಸಂಚರಿಸಿದರು.

20 ಅವರಲ್ಲಿ ಕುಪ್ರದ್ವೀಪದವರು ಕೆಲವರೂ, ಕುರೇನ್ಯದವರು ಕೆಲವರೂ, ಅಂತಿಯೋಕ್ಯಕ್ಕೆ ಬಂದು, ಗ್ರೀಕರೊಂದಿಗೆ ಮಾತನಾಡಿ ಕರ್ತನಾದ ಯೇಸುವಿನ ವಿಷಯವಾದ ಸುವಾರ್ತೆಯನ್ನು ಸಾರಿದರು.

21 ಕರ್ತನ ಹಸ್ತವು ಅವರೊಂದಿಗಿದ್ದ ಕಾರಣ ಬಹು ಜನರು ನಂಬಿ ಕರ್ತನ ಕಡೆಗೆ ತಿರುಗಿಕೊಂಡರು.

22 ಇವರ ವಿಷಯವಾದ ವರ್ತಮಾನವು ಯೆರೂಸಲೇಮಿನಲ್ಲಿದ್ದ ಸಭೆಯವರ ಕಿವಿಗೆ ಬಿದ್ದಾಗ, ಅವರು ಬಾರ್ನಬನನ್ನು ಅಂತಿಯೋಕ್ಯಕ್ಕೆ ಕಳುಹಿಸಿದರು.

23 ಅವನು ಒಳ್ಳೆಯವನೂ, ಪವಿತ್ರಾತ್ಮ ಭರಿತನೂ, ನಂಬಿಕೆಯಿಂದ ತುಂಬಿದವನೂ ಆಗಿದ್ದನು.

24 ಆದಕಾರಣ ಅಲ್ಲಿಗೆ ಬಂದು ದೇವರ ಕೃಪಾಕಾರ್ಯವನ್ನು ನೋಡಿದಾಗ ಸಂತೋಷಪಟ್ಟು, ನೀವು ಪೂರ್ಣಮನಸ್ಸಿನಿಂದ ಕರ್ತನಲ್ಲಿ ನೆಲೆಗೊಂಡಿರಿ ಎಂದು ಅವರಿಗೆ ಬುದ್ಧಿಹೇಳಿದನು. ಆಗ ಬಹುಮಂದಿ ಕರ್ತನೊಂದಿಗೆ ಸೇರಿಕೊಂಡರು.

25 ತರುವಾಯ ಬಾರ್ನಬನು ಸೌಲನನ್ನು ಹುಡುಕುವುದಕ್ಕಾಗಿ ತಾರ್ಸಕ್ಕೆ ಹೋಗಿ ಅವನನ್ನು ಕಂಡು ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು.

26 ಆಮೇಲೆ ಅವರು ಒಂದು ವರ್ಷ ಪೂರ್ತಿಯಾಗಿ ಸಭೆಯವರೊಂದಿಗಿದ್ದುಕೊಂಡು ಬಹು ಜನರಿಗೆ ಉಪದೇಶಮಾಡಿದರು. ಅಂತಿಯೋಕ್ಯದಲ್ಲಿಯೇ ಶಿಷ್ಯರಿಗೆ ಪ್ರಥಮಬಾರಿಗೆ ‘ಕ್ರೈಸ್ತರು’ ಎಂಬ ಹೆಸರು ಬಂದದ್ದು.


ಅಂತಿಯೋಕ್ಯ ಸಭೆಯ ಸಹಾಯ

27 ಅ ಕಾಲದಲ್ಲಿ ಪ್ರವಾದಿಗಳಾಗಿದ್ದ ಕೆಲವರು ಯೆರೂಸಲೇಮಿನಿಂದ ಅಂತಿಯೋಕ್ಯಕ್ಕೆ ಬಂದರು.

28 ಅವರಲ್ಲಿ ಅಗಬನೆಂಬ ಒಬ್ಬನು ಎದ್ದು ಲೋಕಕ್ಕೆಲ್ಲಾ ದೊಡ್ಡ ಕ್ಷಾಮ ಬರುವುದು ಎಂದು ಪವಿತ್ರಾತ್ಮನ ಪ್ರೇರಣೆಯಿಂದ ಸೂಚಿಸಿದನು. ಅದು ಕ್ಲೌದ್ಯ ಚಕ್ರವರ್ತಿಯ ಕಾಲದಲ್ಲಿ ಉಂಟಾಯಿತು.

29 ಆಗ ಆ ಶಿಷ್ಯರಲ್ಲಿ ಪ್ರತಿಯೊಬ್ಬರೂ ಯೂದಾಯ ಸೀಮೆಯಲ್ಲಿ ವಾಸವಾಗಿದ್ದ ಸಹೋದರರಿಗೆ ತಮ್ಮತಮ್ಮ ಶಕ್ತ್ಯಾನುಸಾರ ಧನಸಹಾಯ ಮಾಡಬೇಕೆಂದು ತೀರ್ಮಾನಿಸಿಕೊಂಡರು.

30 ಹಾಗೆಯೇ ಮಾಡಿ, ಅದನ್ನು ಬಾರ್ನಬನ ಮತ್ತು ಸೌಲರ ಕೈಯಿಂದ ಸಭೆಯ ಹಿರಿಯರಿಗೆ ಕಳುಹಿಸಿಕೊಟ್ಟರು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು