Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಸಮುಯೇಲ 1 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಸೌಲನ ಯೋನಾತನರ ಮರಣದ ಸುದ್ದಿಯು ದಾವೀದನಿಗೆ ಮುಟ್ಟಿದ್ದು

1 ಸೌಲನು ಸತ್ತನಂತರ, ದಾವೀದನು ಅಮಾಲೇಕ್ಯರನ್ನು ಸಂಹರಿಸಿ ಚಿಕ್ಲಗ್ ಪಟ್ಟಣದಲ್ಲಿ ಎರಡು ದಿನ ಇದ್ದನು.

2 ಮೂರನೆಯ ದಿನದಲ್ಲಿ ಸೌಲನ ಠಾಣ್ಯದಿಂದ ಒಬ್ಬ ಮನುಷ್ಯನು ದಾವೀದನ ಬಳಿಗೆ ಬಂದು ನೆಲದ ಮಟ್ಟಿಗೆ ಬಾಗಿ ನಮಸ್ಕರಿಸಿದನು. ಅವನು ವಸ್ತ್ರಗಳನ್ನು ಹರಿದುಕೊಂಡು ತಲೆಯ ಮೇಲೆ ಮಣ್ಣು ಹಾಕಿಕೊಂಡಿದ್ದನು.

3 ದಾವೀದನು ಅವನನ್ನು, “ನೀನು ಎಲ್ಲಿಂದ ಬಂದಿ” ಎಂದು ಕೇಳಲು ಅವನು, “ನಾನು ಇಸ್ರಾಯೇಲರ ಠಾಣ್ಯದಿಂದ ತಪ್ಪಿಸಿಕೊಂಡು ಬಂದೆನು” ಎಂದು ಉತ್ತರಕೊಟ್ಟನು.

4 ಆಗ ದಾವೀದನು, “ದಯವಿಟ್ಟು ಕಾರ್ಯವೇನಾಯಿತೆಂದು ತಿಳಿಸು” ಅನ್ನಲು ಆ ಮನುಷ್ಯನು, “ಇಸ್ರಾಯೇಲರು ರಣರಂಗದಿಂದ ಓಡಿಹೋದರು. ಅನೇಕರು ಗಾಯಗೊಂಡು ಸತ್ತುಹೋದರು. ಸೌಲನೂ ಅವನ ಮಗನಾದ ಯೋನಾತಾನನೂ ಮರಣಹೊಂದಿದರು” ಎಂದು ತಿಳಿಸಿದನು.

5 ದಾವೀದನು ಈ ವರ್ತಮಾನ ತಂದ ಆ ಪ್ರಾಯಸ್ಥನಿಗೆ “ಸೌಲನೂ ಅವನ ಮಗನಾದ ಯೋನಾತಾನನೂ ಸತ್ತಿರುವುದು ನಿನಗೆ ಹೇಗೆ ಗೊತ್ತಾಯಿತು” ಎಂದು ಪ್ರಶ್ನಿಸಲು ಅವನು,

6 “ನಾನು ಆಕಸ್ಮಿಕವಾಗಿ ಗಿಲ್ಬೋವ ಪರ್ವತಪ್ರದೇಶಕ್ಕೆ ಬಂದಾಗ ಸೌಲನು ತನ್ನ ಬರ್ಜಿಯನ್ನೂರಿಕೊಂಡು ನಿಂತಿರುವುದನ್ನೂ ರಥಗಳು ಮತ್ತು ರಾಹುತರು ಅವನನ್ನು ಹಿಂದಟ್ಟಿ ಬರುತ್ತಿರುವುದನ್ನೂ ಕಂಡೆನು.

7 ಅವನು ತಿರುಗಿಕೊಂಡು ನನ್ನನ್ನು ನೋಡಿ ಕರೆದನು.

8 ನಾನು, ‘ಇಗೋ ಬಂದೆನು’ ಎಂದು ಹೇಳಿ ಹೋದಾಗ ಅವನು ‘ನೀನಾರು?’ ಎಂದು ಕೇಳಿದ್ದಕ್ಕೆ, ‘ನಾನು ಅಮಾಲೇಕ್ಯನು’ ಎಂದು ಉತ್ತರಕೊಟ್ಟೆನು.

9 ಆಗ ಅವನು ನನಗೆ, ‘ನೀನು ದಯೆಮಾಡಿ ಹತ್ತಿರ ಬಂದು ನನ್ನನ್ನು ಕೊಂದು ಹಾಕು. ಯಾಕೆಂದರೆ ನನ್ನಲ್ಲಿ ಜೀವವು ಇನ್ನೂ ಪೂರ್ಣವಾಗಿರುವುದರಿಂದ ನನಗೆ ಸಂಕಟ ಹಿಡಿದದೆ’ ಎಂದು ಹೇಳಿದನು.

10 ನಾನು ಹತ್ತಿರ ಹೋಗಿ ಅವನು ಬಿದ್ದನಂತರ ಬದುಕಲಾರನೆಂದು ನೆನಸಿ, ಅವನನ್ನು ಕೊಂದು ಹಾಕಿ, ಅವನ ತಲೆಯ ಮೇಲಣ ಕಿರೀಟವನ್ನೂ ತೋಳಿನಲ್ಲಿದ್ದ ಬಳೆಯನ್ನೂ ತೆಗೆದುಕೊಂಡು ಅವುಗಳನ್ನು ನನ್ನ ಒಡೆಯನಾದ ನಿನಗೆ ತಂದಿದ್ದೇನೆ” ಅಂದನು.

11 ಸೌಲನೂ ಅವನ ಮಗನಾದ ಯೋನಾತಾನನೂ, ಯೆಹೋವನ ಪ್ರಜೆಗಳಾದ ಇಸ್ರಾಯೇಲರೂ ಕತ್ತಿಯಿಂದ ಸಂಹೃತರಾದದ್ದಕ್ಕಾಗಿ ದಾವೀದನೂ ಅವನ ಜನರೂ

12 ತಮ್ಮ ಬಟ್ಟೆಗಳನ್ನು ಹರಿದುಕೊಂಡು, ಗೋಳಾಡಿ, ಅತ್ತು ಸಾಯಂಕಾಲದವರೆಗೆ ಉಪವಾಸ ಮಾಡಿದರು.

13 ದಾವೀದನು ವರ್ತಮಾನ ತಂದ ಯುವಕನನ್ನು, “ನೀನು ಎಲ್ಲಿಯವನು?” ಎಂದು ಕೇಳಿದನು. ಅವನು, “ನಾನು ಇಸ್ರಾಯೇಲರಲ್ಲಿ ಪ್ರವಾಸಿಯಾಗಿರುವ ಅಮಾಲೇಕ್ಯನು” ಎಂದು ಉತ್ತರಕೊಟ್ಟನು.

14 ದಾವೀದನು ಅವನಿಗೆ, “ನೀನು ಕೈಯೆತ್ತಿ ಯೆಹೋವನ ಅಭಿಷಿಕ್ತನನ್ನು ಕೊಲ್ಲುವುದಕ್ಕೆ ಏಕೆ ಭಯಪಡಲಿಲ್ಲ?” ಎಂದು ಹೇಳಿ

15 ತನ್ನ ಆಳುಗಳಲ್ಲಿ ಒಬ್ಬನನ್ನು ಕರೆದು, “ಹೋಗಿ ಇವನನ್ನು ಕೊಂದುಹಾಕು” ಎಂದು ಆಜ್ಞಾಪಿಸಲು ಅವನು ಅಮಾಲೇಕ್ಯನನ್ನು ಹೊಡೆದು ಕೊಂದನು.

16 ದಾವೀದನು, “ಈ ರಕ್ತಾಪರಾಧವು ನಿನ್ನ ತಲೆಯ ಮೇಲೆಯೇ ಇರಲಿ. ಯೆಹೋವನ ಅಭಿಷಿಕ್ತನನ್ನು ಕೊಂದುಹಾಕಿದೆನೆಂದು ನಿನ್ನ ಬಾಯೇ ನಿನಗೆ ವಿರೋಧವಾಗಿ ಸಾಕ್ಷಿ ಹೇಳಿತು” ಅಂದನು.


ದಾವೀದನು ಸೌಲಯೋನಾತಾನರನ್ನು ಕುರಿತು ರಚಿಸಿದ ಶೋಕಗೀತೆ

17 ದಾವೀದನು ಸೌಲ ಯೋನಾತನರ ಕುರಿತು ಒಂದು ಶೋಕಗೀತೆಯನ್ನು ರಚಿಸಿ,

18 ಬಿಲ್ಲೆ ಎಂಬ ಈ ಗೀತೆಯನ್ನು ಯೆಹೂದ್ಯರಿಗೆ ಕಲಿಸಬೇಕೆಂದು ಆಜ್ಞಾಪಿಸಿದನು. ಆ ಗೀತವು ಯಾಷಾರ್ ಗ್ರಂಥದಲ್ಲಿ ಬರೆದಿರುತ್ತದೆ.

19 “ಇಸ್ರಾಯೇಲರೇ, ನಿಮ್ಮ ವೈಭವವು ನಿಮ್ಮ ಗುಡ್ಡಗಳಲ್ಲಿ ಮಣ್ಣು ಪಾಲಾಗಿ ಹೋಯಿತು. ಅಯ್ಯೋ ಪರಾಕ್ರಮಶಾಲಿಗಳೇ, ನೀವು ಹೇಗೆ ಹತರಾದಿರಿ.

20 ಈ ಸಂಗತಿಯನ್ನು ಗತ್ ಊರಿನಲ್ಲಿ ತಿಳಿಸಬೇಡಿರಿ. ಅಷ್ಕೆಲೋನಿನ ಬೀದಿಗಳಲ್ಲಿ ಸಾರಬೇಡಿರಿ. ಫಿಲಿಷ್ಟಿಯರ ಹೆಂಗಸರು ಸಂತೋಷಿಸಾರು. ಸುನ್ನತಿಯಿಲ್ಲದವರ ಸ್ತ್ರೀಯರು ಉಲ್ಲಾಸಪಟ್ಟಾರು.

21 ಗಿಲ್ಬೋವ ಗುಡ್ಡಗಳೇ, ನಿಮ್ಮ ಮೇಲೆ ಮಂಜು, ಮಳೆಯು, ನೈವೇದ್ಯಕ್ಕಾಗಿ ಫಲಿಸುವ ಹೊಲಗಳೂ ಇಲ್ಲದೆ ಹೋಗಲಿ. ಅಲ್ಲಿ ಪರಾಕ್ರಮಶಾಲಿಗಳ ಗುರಾಣಿಗಳು ಬಿದ್ದಿರುತ್ತವೆ. ಸೌಲನ ಗುರಾಣಿಯೂ ಅಭಿಷಿಕ್ತನಲ್ಲದವನ ಗುರಾಣಿಯಂತೆ ಬಿದ್ದಿದೆ.

22 ಯೋನಾತಾನನ ಬಿಲ್ಲು ಹತರಾದವರ ರಕ್ತವನ್ನು ಹೀರದೆಯೂ ಪರಾಕ್ರಮಶಾಲಿಗಳ ಕೊಬ್ಬನ್ನು ರುಚಿಸದೆಯೂ ಬರುತ್ತಿರಲಿಲ್ಲ. ಸೌಲನ ಕತ್ತಿಯು ವ್ಯರ್ಥವಾಗಿ ಹಿಂದಿರುಗುತ್ತಿರಲಿಲ್ಲ.

23 ಸೌಲಯೋನಾತಾನರು ಪ್ರಿಯರೂ ಮನೋಹರರೂ ಆಗಿದ್ದರು. ಅವರು ಜೀವಿಸುವಾಗಲೂ ಸಾಯುವಾಗಲೂ ಅಗಲಿದವರಲ್ಲ. ಅವರು ಹದ್ದುಗಳಿಗಿಂತಲೂ ವೇಗವುಳ್ಳವರು, ಸಿಂಹಗಳಿಗಿಂತಲೂ ಬಲವುಳ್ಳವರು.

24 ಇಸ್ರಾಯೇಲ್ ಸ್ತ್ರೀಯರೇ, ಸೌಲನಿಗಾಗಿ ಗೋಳಾಡಿರಿ, ನಿಮಗೆ ಉಲ್ಲಾಸಕರವಾದ ರಕ್ತಾಂಬರಗಳನ್ನು ಉಡಿಸಿ, ಅವುಗಳ ಮೇಲೆ ಸುವರ್ಣಾಭರಣಗಳನ್ನು ತೊಡಿಸಿದವನು ಆತನೇ ಅಲ್ಲವೋ?

25 ಅಯ್ಯೋ ಪರಾಕ್ರಮಶಾಲಿಗಳೇ, ಯುದ್ಧದಲ್ಲಿ ಹೇಗೆ ಮರಣ ಹೊಂದಿದಿರಿ. ಯೋನಾತಾನನು ನಿಮ್ಮ ಬೆಟ್ಟದಲ್ಲಿ ಹತನಾಗಿ ಬಿದ್ದನಲ್ಲಾ

26 ಯೋನಾತಾನನೇ, ನನ್ನ ಸಹೋದರನೇ ನಿನಗೋಸ್ಕರ ನನ್ನಲ್ಲಿ ಬಹು ಸಂಕಟವುಂಟಾಗಿದೆ. ನೀನು ನನಗೆ ಮನೋಹರನಾಗಿದ್ದಿ. ನನ್ನ ಮೇಲಿನ ನಿನ್ನ ಪ್ರೀತಿಯು ಆಶ್ಚರ್ಯಕರವಾದದ್ದು. ಅದು ಸತಿ ಪ್ರೇಮಕ್ಕಿಂತ ಶ್ರೇಷ್ಠವಾದದ್ದು.

27 ಅಯ್ಯೋ ಪರಾಕ್ರಮಶಾಲಿಗಳು ಹೇಗೆ ಹತರಾದರು, ಯುದ್ಧದ ಆಯುಧಗಳು ಹೇಗೆ ಹಾಳಾದವು.”

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು