Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಪೇತ್ರನು 2 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ದುರ್ಮಾರ್ಗತನವನ್ನು ಬೋಧಿಸುವವರ ವಿಷಯದಲ್ಲಿ ಎಚ್ಚರಿಕೆ (ಯೂದ 1-19)

1 ಆದರೆ ಇಸ್ರಾಯೇಲ್ ಜನರೊಂದಿಗೆ ಸುಳ್ಳುಪ್ರವಾದಿಗಳೂ ಸಹ ಇದ್ದರು. ಅದೇ ಪ್ರಕಾರ ನಿಮ್ಮಲ್ಲಿಯೂ ಸುಳ್ಳುಬೋಧಕರು ಇರುವರು. ಅವರು ಹಾನಿಕರವಾದ ದುರ್ಬೋಧನೆಗಳನ್ನು ರಹಸ್ಯವಾಗಿ ಒಳಗೆತರುವವರೂ ತಮ್ಮನ್ನು ಕೊಂಡುಕೊಂಡ ಒಡೆಯನನ್ನೂ ಕೂಡ ಅಲ್ಲಗಳೆಯುವವರೂ ಆಗಿದ್ದು ಫಕ್ಕನೆ ತಮ್ಮ ಮೇಲೆ ನಾಶನವನ್ನು ಬರಮಾಡಿಕೊಳ್ಳುವರು.

2 ಅವರ ದುಷ್ಕರ್ಮಗಳ ಮಾರ್ಗವನ್ನು ಅನೇಕರು ಅನುಸರಿಸುವರು. ಅವರ ನಿಮಿತ್ತ ಸತ್ಯಮಾರ್ಗಕ್ಕೆ ದೂಷಣೆ ಉಂಟಾಗುವುದು.

3 ಅವರು ದ್ರವ್ಯಾಶೆಯುಳ್ಳವರಾಗಿ ಕಲ್ಪಿತ ಮಾತುಗಳನ್ನಾಡುತ್ತಾ ನಿಮ್ಮನ್ನು ಮಾರಾಟಮಾಡಿ ಲಾಭವನ್ನು ಸಂಪಾದಿಸಬೇಕೆಂದಿರುವರು. ಧೀರ್ಘಕಾಲದಿಂದ ಅಂಥವರಿಗಿರುವಂಥ ದಂಡನೆಯ ತೀರ್ಪು ತಪ್ಪದೆ ಬರುತ್ತಿರುವುದು. ಅವರಿಗೆ ಬರುವ ನಾಶವು ತೂಕಡಿಸುವುದಿಲ್ಲ.

4 ಹೇಗೆಂದರೆ ದೇವದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ ದೊಬ್ಬಿ ನ್ಯಾಯತೀರ್ಪನ್ನು ಹೊಂದುವುದಕ್ಕಾಗಿ ಸಂಕೋಲೆಗಳಿಂದ ಬಂಧಿಸಿ ಕತ್ತಲೆಯ ಕೂಪಕ್ಕೆ ಒಪ್ಪಿಸಿದನು.

5 ಆತನು ಭಕ್ತಿಹೀನರಾದ ಪುರಾತನ ಲೋಕವನ್ನು ಸುಮ್ಮನೆ ಬಿಡದೆ ಅವರ ಮೇಲೆ ಜಲಪ್ರಳಯವನ್ನು ಬರಮಾಡಿದನು. ಆದರೆ ಸುನೀತಿಯನ್ನು ಸಾರುತ್ತಿದ್ದ ನೋಹನನ್ನೂ ಮತ್ತು ಅವನೊಂದಿಗಿದ್ದ ಇತರ ಏಳು ಜನರನ್ನು ಮಾತ್ರ ಉಳಿಸಿದನು.

6 ಆತನು ಸೊದೋಮ್ ಗೊಮೋರ ಪಟ್ಟಣಗಳನ್ನು ಸುಟ್ಟು ಬೂದಿಮಾಡಿ ಇನ್ನು ಮೇಲೆ ಭಕ್ತಿಹೀನರಾಗಿ ಬದುಕುವವರಿಗೆ ಬರುವ ದುರ್ಗತಿಯನ್ನು ಸೂಚಿಸುವುದಕ್ಕಾಗಿ ದೃಷ್ಟಾಂತವಾಗಿ ಅವುಗಳಿಗೆ ದಂಡನೆಯನ್ನು ವಿಧಿಸಿದನು.

7 ಆದರೆ ದೇವರು ಆ ದುಷ್ಟರ ಅನೈತಿಕ ನಡತೆಗೆ ನೊಂದುಕೊಂಡಿದ್ದ ನೀತಿವಂತನಾದ ಲೋಟನನ್ನು ಕಾಪಾಡಿದನು.

8 ಏಕೆಂದರೆ ಆ ನೀತಿವಂತನು ಅವರ ಮಧ್ಯದಲ್ಲಿ ಇದ್ದುಕೊಂಡು ಅವರ ಅನ್ಯಾಯ ಕೃತ್ಯಗಳನ್ನು ನೋಡುತ್ತಾ ಕೇಳುತ್ತಾ ಅವುಗಳ ನಿಮಿತ್ತ ದಿನೇ ದಿನೇ ತನ್ನ ನೀತಿಯುಳ್ಳ ಆತ್ಮದಲ್ಲಿ ಬಹಳವಾಗಿ ನೊಂದುಕೊಂಡನು.

9 ಕರ್ತನು ಭಕ್ತರನ್ನು ಕಷ್ಟಗಳಿಂದ ರಕ್ಷಿಸುವುದಕ್ಕೂ ಅನೀತಿವಂತರನ್ನು ಶಿಕ್ಷಿಸುವುದಕ್ಕಾಗಿ ನ್ಯಾಯತೀರ್ಪಿನ ದಿನದ ತನಕ ಇಡುವುದಕ್ಕೂ ಬಲ್ಲವನಾಗಿದ್ದಾನೆ.

10 ಮುಖ್ಯವಾಗಿ ಶಾರೀರಿಕ ಬಂಡುತನದ ದುರಾಶೆಗಳಲ್ಲಿ ನಡೆದು ಪ್ರಭುತ್ವವನ್ನು ತಿರಸ್ಕಾರ ಮಾಡುವವರನ್ನು ಹೀಗೆ ಶಿಕ್ಷಿಸುವನು. ಇವರು ಯಾರಿಗೂ ಹೆದರದೇ ಸ್ವೇಚ್ಛಾಪರರಾಗಿದ್ದಾರೆ. ಮಹಿಮಾಪದವಿಯವರನ್ನು ನಿರ್ಭಯವಾಗಿ ದೂಷಿಸುವರು.

11 ದೇವದೂತರು ಬಲದಲ್ಲಿಯೂ ಮಹತ್ತಿನಲ್ಲಿಯೂ ಶ್ರೇಷ್ಠರಾಗಿದ್ದರೂ ಕರ್ತನ ಮುಂದೆ ಅವರಿಗೆ ವಿರೋಧವಾಗಿ ದೂಷಣೆಯನ್ನು, ನಿಂದೆಯನ್ನು ಹೇಳದಿರಲು, ಆ ಗರ್ವಿಷ್ಠರು ಮಹಿಮಾಪದವಿಗಳನ್ನು ದೂಷಿಸಲು ಹಿಂಜರಿಯುವುದಿಲ್ಲ.

12 ಸ್ವಾಭಾವಿಕವಾಗಿ ಸೆರೆಹಿಡಿಯಲ್ಪಟ್ಟು ನಾಶವಾಗುವುದಕ್ಕೆ ಹುಟ್ಟಿರುವ ವಿವೇಕಶೂನ್ಯ ಪ್ರಾಣಿಗಳಂತಿರುವ ಈ ದುರ್ಬೋಧಕರು ತಮಗೆ ತಿಳಿಯದವುಗಳ ವಿಷಯವಾಗಿ ದೂಷಿಸುವವರಾಗಿದ್ದಾರೆ. ಇವರು ತಮ್ಮ ಕೆಟ್ಟತನದಿಂದ ತಾವೇ ಸಂಪೂರ್ಣ ನಾಶವಾಗುವರು.

13 ತಮ್ಮ ದುರ್ನೀತಿಗೆ ಸರಿಯಾದ ದುಷ್ಫಲವನ್ನು ಹೊಂದುವರು. ದುಂದುಗಾರಿಕೆಯಲ್ಲಿ ಹಗಲನ್ನು ಕಳೆಯುವುದೇ ಸುಖವೆಂದೆಣಿಸುತ್ತಾರೆ. ಇವರು ನಿಮ್ಮೊಂದಿಗೆ ಔತಣ ಮಾಡುತ್ತಿರುವಾಗ ವಂಚಕರಾಗಿದ್ದು ಉಂಡು ಕುಡಿದು ಕಳಂಕಕ್ಕೂ, ಅವಮಾನಕ್ಕೂ ಕಾರಣರಾಗಿದ್ದಾರೆ.

14 ಇವರು ವ್ಯಭಿಚಾರಿಣಿಯನ್ನು ಕಂಡು ಆನಂದಿಸುವವರೂ, ಪಾಪವನ್ನು ಕಂಡು ತೃಪ್ತಿಹೊಂದದ ಕಣ್ಣುಳ್ಳವರೂ, ಚಂಚಲತೆ ಮನಸ್ಸುವುಳ್ಳವರನ್ನು ಮರುಳುಗೊಳಿಸುವವರೂ, ಹಣದಾಸೆಯಲ್ಲಿ ಪರಿಣಿತಿ ಪಡೆದ ಹೃದಯವುಳ್ಳವರೂ, ಶಾಪಗ್ರಸ್ತ ಮಕ್ಕಳೂ ಆಗಿದ್ದಾರೆ.

15 ಇವರು ಸನ್ಮಾರ್ಗವನ್ನು ಬಿಟ್ಟವರು. ಹಾದಿ ತಪ್ಪಿದವರು ಮತ್ತು ಬೇಯೋರಿನ ಮಗನಾದ ಬಿಳಾಮನ ಮಾರ್ಗವನ್ನು ಹಿಡಿದವರಾಗಿದ್ದಾರೆ. ಈ ಬಿಳಾಮನು ಅನೀತಿಯಿಂದ ದೊರಕುವ ಸಂಭಾವನೆಯನ್ನು ಪ್ರೀತಿಸಿದನು.

16 ಆದರೆ ಅವನ ದುಷ್ಟ ಕೃತ್ಯಕ್ಕೆ ಖಂಡನೆಯಾಯಿತು. ಮೂಕ ಪ್ರಾಣಿಯಾದ ಕತ್ತೆಯು ಮನುಷ್ಯಸ್ವರದಿಂದ ಮಾತನಾಡಿ ಆ ಪ್ರವಾದಿಯ ಹುಚ್ಚುತನವನ್ನು ಅಡ್ಡಿ ಮಾಡಿತು.

17 ಇವರು ನೀರಿಲ್ಲದ ಹಾಳು ಬಾವಿಗಳೂ, ಬಿರುಗಾಳಿಯಿಂದ ಬಡಿಸಿಕೊಂಡು ಹಾರಿಹೋಗುವ ಮೋಡಗಳೂ ಆಗಿದ್ದಾರೆ. ಇಂಥವರಿಗಾಗಿ ಕಗ್ಗತ್ತಲೆಯನ್ನು ಸಂಗ್ರಹಿಸಿ ಇಡಲಾಗಿದೆ.

18 ಕೇಡುಕಿನ ಮಾರ್ಗದಲ್ಲಿ ನಡೆಯುವವರ ಸಹವಾಸದಿಂದ ಹೊಸದಾಗಿ ತಪ್ಪಿಸಿಕೊಂಡವರ ಸಂಗಡ ಇವರು ಹುರುಳಿಲ್ಲದ ಪೊಳ್ಳು ಮಾತುಗಳನ್ನಾಡಿ ಕೆಟ್ಟ ಕಾಮಾಭಿಲಾಷೆ ಹುಟ್ಟಿಸಿ ಅತಿಯಾದ ಬಂಡುತನದಿಂದ ಅವರನ್ನು ಮರುಳುಗೊಳಿಸುತ್ತಾರೆ.

19 ಇಂಥವರು ಸ್ವಾತಂತ್ರ್ಯ ಕೊಡುತ್ತೇವೆಂದು ಅವರಿಗೆ ವಾಗ್ದಾನಮಾಡುತ್ತಾರೆ. ಆದರೆ ತಾವೇ ಕೆಟ್ಟತನಕ್ಕೆ ದಾಸರಾಗಿದ್ದಾರೆ. ಒಬ್ಬನು ಯಾವುದಕ್ಕೆ ಸೋಲುವನೋ ಅವನು ಅದರ ದಾಸನಾಗಿದ್ದಾನಷ್ಟೇ.

20 ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನನ್ನು ಕುರಿತಾದ ಪರಿಜ್ಞಾನಹೊಂದಿ ಲೋಕದ ಮಲಿನತ್ವಗಳಿಗೆ ತಪ್ಪಿಸಿಕೊಂಡವರು ತಿರುಗಿ ಅವುಗಳಲ್ಲಿ ಸಿಕ್ಕಿಕೊಂಡು ಸೋತುಹೋದರೆ ಅವರ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವುದು.

21 ಅವರು ನೀತಿಮಾರ್ಗವನ್ನು ತಿಳಿದು ತಮಗೆ ಕೊಡಲ್ಪಟ್ಟ ಪರಿಶುದ್ಧ ಆಜ್ಞೆಯನ್ನು ಬಿಟ್ಟು ದೂರ ಹೋಗುವುದಕ್ಕಿಂತ ಆ ಮಾರ್ಗವನ್ನು ತಿಳಿಯದೆ ಹೋಗಿದ್ದರೆ ಚೆನ್ನಾಗಿತ್ತು.

22 “ನಾಯಿ ತಾನು ಕಕ್ಕಿದ್ದನ್ನು ನೆಕ್ಕುವುದಕ್ಕೆ ತಿರುಗಿಕೊಂಡಿತು. ಮತ್ತು ಮೈತೊಳೆದ ಹಂದಿ ಕೆಸರಿನಲ್ಲಿ ಹೊರಳಾಡುವುದಕ್ಕೆ ಹೋಯಿತು.” ಎಂಬ ಗಾದೆ ಅವರಿಗೆ ಸರಿಯಾಗಿ ಅನ್ವಯಿಸುತ್ತದೆ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು