Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಪೇತ್ರನು 1 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಪೀಠಿಕೆ

1 ಯೇಸು ಕ್ರಿಸ್ತನ ದಾಸನೂ ಅಪೊಸ್ತಲನೂ ಆಗಿರುವ ಸಿಮೆಯೋನ ಪೇತ್ರನು ನಮ್ಮ ದೇವರು ಮತ್ತು ರಕ್ಷಕನಾದ ಯೇಸು ಕ್ರಿಸ್ತನ ನೀತಿಯಿಂದ ನಮ್ಮಂತೆಯೇ ಅಮೂಲ್ಯವಾದ ನಂಬಿಕೆಯನ್ನು ಹೊಂದಿದವರಿಗೆ ಬರೆಯುವುದೇನಂದರೆ,

2 ದೇವರನ್ನು ಕುರಿತಾಗಿಯೂ, ನಮ್ಮ ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿಯೂ ಇರುವ ಪರಿಜ್ಞಾನದಲ್ಲಿ ನಿಮಗೆ ಕೃಪೆಯೂ, ಶಾಂತಿಯೂ ಹೆಚ್ಚುಹೆಚ್ಚಾಗಿ ದೊರೆಯಲಿ.


ಭಕ್ತಿವೃದ್ಧಿಗೆ ಅನುಕೂಲವಾದ ಪ್ರೇರಣೆಗಳು

3 ನಮ್ಮನ್ನು ತನ್ನ ಮಹಿಮೆಯಿಂದಲೂ, ಗುಣಾತಿಶಯದಿಂದಲೂ ಕರೆದ ದೇವರ ವಿಷಯವಾಗಿ ಯೇಸುವಿನ ದಿವ್ಯಶಕ್ತಿಯು ನಮಗೆ ದೈವಿಕ ಪರಿಜ್ಞಾನವನ್ನು ಕೊಟ್ಟಿರುವುದರ ಮೂಲಕ ಜೀವಕ್ಕೂ, ಭಕ್ತಿಗೂ ಬೇಕಾದದ್ದೆಲ್ಲವನ್ನೂ ದಾನಮಾಡಲಾಗಿದೆಯೆಂದು ನಾವು ಬಲ್ಲೆವು.

4 ನೀವು ಲೋಕದಲ್ಲಿ ದುರಾಶೆಯಿಂದುಂಟಾಗುವ ಕೆಟ್ಟತನದಿಂದ ದೂರವಾಗಿ ದೈವಸ್ವಭಾವದಲ್ಲಿ ಪಾಲನ್ನು ಹೊಂದುವವರಾಗಬೇಕೆಂಬ ಉದ್ದೇಶದಿಂದ ದೇವರು ತನ್ನ ಅತ್ಯಂತ ಮಹತ್ವವುಳ್ಳ ಮತ್ತು ಅಮೂಲ್ಯವಾದ ವಾಗ್ದಾನಗಳನ್ನು ನಮಗೆ ದಯಪಾಲಿಸಿದ್ದಾನೆ.

5 ಈ ಕಾರಣದಿಂದಲೇ ನೀವು ಪೂರ್ಣಾಸಕ್ತಿಯುಳ್ಳವರಾಗಿ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ, ಸದ್ಗುಣಕ್ಕೆ ಜ್ಞಾನವನ್ನೂ,

6 ಜ್ಞಾನಕ್ಕೆ ದಮೆಯನ್ನೂ, ದಮೆಗೆ ತಾಳ್ಮೆಯನ್ನೂ,

7 ತಾಳ್ಮೆಗೆ ಭಕ್ತಿಯನ್ನೂ, ಭಕ್ತಿಗೆ ಸಹೋದರ ಸ್ನೇಹವನ್ನೂ, ಸಹೋದರ ಸ್ನೇಹಕ್ಕೆ ಪ್ರೀತಿಯನ್ನೂ ಕೂಡಿಸಿರಿ.

8 ಇವು ನಿಮ್ಮಲ್ಲಿದ್ದು ಬೆಳೆದು ಬಂದರೆ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಕುರಿತಾದ ಪರಿಜ್ಞಾನದಲ್ಲಿ ನೀವು ನಿರುತ್ಸಾಹಿಗಳೂ, ನಿಷ್ಪ್ರಯೋಜಕರೂ ಆಗದಂತೆ ಮಾಡುತ್ತವೆ.

9 ಇವುಗಳಿಲ್ಲದವನು ಕುರುಡನಾಗಿದ್ದಾನೆ. ಅವನು ದೂರ ದೃಷ್ಟಿಯಿಲ್ಲದವನಾಗಿದ್ದು ತನ್ನ ಹಿಂದಣ ಪಾಪಗಳು ಪರಿಹಾರವಾಗಿ ತಾನು ಶುದ್ಧನಾದದ್ದನ್ನು ಮರೆತುಬಿಟ್ಟಿದ್ದಾನೆ.

10 ಆದ್ದರಿಂದ ಸಹೋದರರೇ, ದೇವರಲ್ಲಿ ನಿಮ್ಮ ಕರೆಯುವಿಕೆಯನ್ನೂ, ಆಯ್ಕೆಯನ್ನೂ ದೃಢಪಡಿಸಿಕೊಳ್ಳುವುದಕ್ಕೆ ಮತ್ತಷ್ಟು ಪ್ರಯಾಸಪಡಿರಿ. ಏಕೆಂದರೆ ನೀವು ಹೀಗೆ ಮಾಡುವುದಾದರೆ ಎಂದಿಗೂ ಎಡುವುದಿಲ್ಲ.

11 ಹೀಗಿರುವುದರಿಂದ ನಮ್ಮ ಕರ್ತನೂ, ರಕ್ಷಕನೂ ಆಗಿರುವ ಯೇಸುಕ್ರಿಸ್ತನ ನಿತ್ಯ ರಾಜ್ಯದಲ್ಲಿ ನಿಮಗೆ ಧಾರಾಳವಾಗಿ ಪ್ರವೇಶವು ದೊರೆಯುವುದು.


ಕರ್ತನಾದ ಯೇಸುಕ್ರಿಸ್ತನ ಪ್ರತ್ಯಕ್ಷತೆಯನ್ನು ಎದುರುನೋಡುವುದಕ್ಕೆ ದೃಢವಾದ ಆಧಾರ ಉಂಟು

12 ಆದ್ದರಿಂದ ನೀವು ಈ ಸಂಗತಿಗಳನ್ನು ತಿಳಿದವರಾಗಿ ನಿಮಗೆ ದೊರೆತಿರುವ ಸತ್ಯದಲ್ಲಿ ಸ್ಥಿರವಾಗಿದ್ದರೂ ಅವುಗಳನ್ನು ನಿಮಗೆ ನೆನಪಿಸಿಕೊಡುವುದಕ್ಕೆ ನಾನು ಯಾವಾಗಲೂ ಸಿದ್ಧವಾಗಿರುವೆನು.

13 ನಾನು ನನ್ನ ದೇಹವೆಂಬ ಗುಡಾರದಲ್ಲಿರುವ ತನಕ ನಿಮ್ಮನ್ನು ನೆನಪುಮಾಡಿಸಿ ಪ್ರೇರೇಪಿಸುವುದು ಯುಕ್ತವೆಂದೆಣಿಸಿದ್ದೇನೆ.

14 ಏಕೆಂದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನು ನನಗೆ ತಿಳಿಸಿದ ಪ್ರಕಾರ ನಾನು ಈ ಗುಡಾರವನ್ನು ಬಿಟ್ಟುಹೋಗುವ ಕಾಲವು ಸಮೀಪವಾಗಿದೆಯೆಂದು ಬಲ್ಲೆನು.

15 ನೀವು ನನ್ನ ಮರಣಾನಂತರ ಇವುಗಳನ್ನು ಯಾವಾಗಲೂ ಜ್ಞಾಪಕ ಮಾಡಿಕೊಳ್ಳುವುದಕ್ಕಾಗಿ ನಾನು ಆಸಕ್ತಿವಹಿಸುವೆನು.

16 ನಮ್ಮ ಕರ್ತನಾದ ಯೇಸುಕ್ರಿಸ್ತನ ಶಕ್ತಿಯನ್ನೂ, ಪ್ರತ್ಯಕ್ಷತೆಯನ್ನೂ ನಿಮಗೆ ತಿಳಿಯಪಡಿಸಿದ್ದರಲ್ಲಿ ಚಮತ್ಕಾರದಿಂದ ಕಲ್ಪಿಸಿದ ಕಟ್ಟುಕಥೆಗಳನ್ನು ನಾವು ಅನುಸರಿಸಲಿಲ್ಲ. ಆತನ ಮಹತ್ತನ್ನು ಕಣ್ಣಾರೆ ಕಂಡವರಾಗಿಯೇ ಅದನ್ನು ತಿಳಿಯಪಡಿಸಿದೆವು.

17 ಏಕೆಂದರೆ, “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ” ಎಂಬ ವಾಣಿಯು ಮಹೋನ್ನತವಾದ ಮಹಿಮೆಯಿಂದ ಆತನಿಗೆ ಉಂಟಾದದ್ದರಲ್ಲಿ ಆತನು ತಂದೆಯಾದ ದೇವರಿಂದ ಗೌರವವನ್ನೂ, ಮಹಿಮೆಯನ್ನೂ ಹೊಂದಿದನಲ್ಲವೇ.

18 ನಾವು ಪರಿಶುದ್ಧ ಪರ್ವತದ ಮೇಲೆ ಆತನ ಸಂಗಡ ಇದ್ದಾಗ ಪರಲೋಕದಿಂದ ಬಂದ ಆ ವಾಣಿಯನ್ನು ನಾವು ಕೇಳಿಸಿಕೊಂಡೆವು.

19 ಇದಲ್ಲದೆ ಪ್ರವಾದನವಾಕ್ಯವು ನಮಗೆ ಬಹುದೃಢವಾಗಿ ದೊರೆತಿದೆ. ಆ ದಿನವು ಅರುಣೋದಯವಾಗುವರೆಗೆ ಮತ್ತು ಉದಯ ನಕ್ಷತ್ರವು ನಿಮ್ಮ ಹೃದಯಗಳಲ್ಲಿ ಮೂಡುವತನಕ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪವೆಂದೆಣಿಸಿ ಅದಕ್ಕೆ ಲಕ್ಷ್ಯಕೊಟ್ಟರೆ ಒಳ್ಳೆಯದು.

20 ಯಾವ ಪ್ರವಾದನಾ ವಾಕ್ಯವೂ ಕೇವಲ ಮನುಷ್ಯನ ಸ್ವಬುದ್ಧಿಯಿಂದ ವಿವರಿಸತಕ್ಕಂಥದ್ದಲ್ಲವೆಂಬುದನ್ನು ಮುಖ್ಯವಾಗಿ ಮೊದಲು ತಿಳಿದುಕೊಳ್ಳಿರಿ.

21 ಏಕೆಂದರೆ ಯಾವ ಪ್ರವಾದನೆಯೂ ಎಂದೂ ಮನುಷ್ಯರ ಚಿತ್ತದಿಂದ ಉಂಟಾಗಲಿಲ್ಲ. ಆದರೆ ಮನುಷ್ಯರು ಪವಿತ್ರಾತ್ಮಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತನಾಡಿರುವುದು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು