2 ಪೂರ್ವಕಾಲ ವೃತ್ತಾಂತ 27 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಯೆಹೂದದ ಅರಸನಾದ ಯೋತಾಮನು 1 ಯೋತಾಮನು ಪಟ್ಟಕ್ಕೆ ಬಂದಾಗ ಅವನು ಇಪ್ಪತ್ತೈದು ವರ್ಷದವನಾಗಿದ್ದನು. ಅವನು ಯೆರೂಸಲೇಮಿನಲ್ಲಿ ಹದಿನಾರು ವರ್ಷಗಳ ಕಾಲ ಆಳಿದನು. ಚಾದೋಕನ ಮಗಳಾದ ಯೆರೂಷ ಎಂಬಾಕೆಯು ಇವನ ತಾಯಿ. 2 ಅವನು ತನ್ನ ತಂದೆಯಾದ ಉಜ್ಜೀಯನಂತೆ ಯೆಹೋವನ ಚಿತ್ತಾನುಸಾರವಾಗಿ ನಡೆದನು. ಆದರೆ ಅವನಂತೆ ಯೆಹೋವನ ಆಲಯವನ್ನು ಪ್ರವೇಶಿಸಲಿಲ್ಲ. ಪ್ರಜೆಗಳಾದರೋ ದುರಾಚಾರಿಗಳಾಗಿಯೇ ಇದ್ದರು. 3 ಯೆಹೋವನ ಆಲಯಕ್ಕೆ ಮೇಲಣ ಹೆಬ್ಬಾಗಿಲನ್ನು ಇಡಿಸಿ, ಓಫೇಲ್ ಗೋಡೆಯ ಹೆಚ್ಚಿನ ಭಾಗವನ್ನು ಕಟ್ಟಿಸಿದವನು ಇವನೇ. 4 ಇದಲ್ಲದೆ, ಇವನು ಯೆಹೂದ ಪರ್ವತ ಪ್ರದೇಶದಲ್ಲಿ ಪಟ್ಟಣಗಳನ್ನೂ, ಕಾಡುಗಳಲ್ಲಿ ದುರ್ಗಗಳನ್ನೂ, ಗೋಪುರಗಳನ್ನೂ ಕಟ್ಟಿಸಿದನು. 5 ಅಮ್ಮೋನಿಯರ ಅರಸರೊಡನೆ ಯುದ್ಧ ಮಾಡಿ ಅವರನ್ನು ಗೆದ್ದನು. ಅಮ್ಮೋನಿಯರು ಆ ವರ್ಷದಲ್ಲಿ ಇವನಿಗೆ ನೂರು ತಲಾಂತು ಬೆಳ್ಳಿ, ಹತ್ತು ಸಾವಿರ ಕೋರ್ (ಸಾವಿರ ಮೆಟ್ರಿಕ್ ಟನ್) ಗೋದಿ, ಹತ್ತು ಸಾವಿರ ಕೋರ್ ಜವೆಗೋದಿ ಇವುಗಳನ್ನು ಕೊಡಬೇಕಾಯಿತು. ಅಮ್ಮೋನಿಯರು ಅವನಿಗೆ ಎರಡನೆಯ ಮತ್ತು ಮೂರನೆಯ ವರ್ಷಗಳಲ್ಲಿಯೂ ಹೀಗೆಯೇ ಕೊಟ್ಟರು. 6 ಯೋತಾಮನು ತನ್ನ ದೇವರಾದ ಯೆಹೋವನ ಚಿತ್ತಾನುಸಾರವಾಗಿ ನಡೆದುಕೊಂಡದ್ದರಿಂದ ಬಲವುಳ್ಳವನಾದನು. 7 ಯೋತಾಮನ ಉಳಿದ ಚರಿತ್ರೆಯೂ, ಅವನು ನಡೆಸಿದ ಯುದ್ಧಗಳು ಹಾಗೂ ಕಾರ್ಯ ಚಟುವಟಿಕೆಗಳು ಇಸ್ರಾಯೇಲರ ಮತ್ತು ಯೆಹೂದ್ಯರ ರಾಜ ಗ್ರಂಥಗಳಲ್ಲಿ ಬರೆಯಲ್ಪಟ್ಟಿದೆ. 8 ಅವನು ತನ್ನ ಇಪ್ಪತ್ತೈದನೆಯ ವರ್ಷದಲ್ಲಿ ಪಟ್ಟಕ್ಕೆ ಬಂದು ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳ್ವಿಕೆ ನಡೆಸಿದನು. 9 ಯೋತಾಮನು ತನ್ನ ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ದಾವೀದನಗರದಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಆಹಾಜನು ಅರಸನಾದನು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.