Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಪೂರ್ವಕಾಲ ವೃತ್ತಾಂತ 19 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಯೆಹೋಷಾಫಾಟನ ಖಂಡನೆ

1 ಯೆಹೂದದ ಅರಸನಾದ ಯೆಹೋಷಾಫಾಟನು ಸುರಕ್ಷಿತವಾಗಿ ಯೆರೂಸಲೇಮಿಗೆ ಹಿಂದಿರುಗಿದನು.

2 ಯೆಹೋಷಾಫಾಟನು ಯೆರೂಸಲೇಮಿಗೆ ಬಂದಾಗ ಹನಾನೀಯನ ಮಗನಾದ ಯೇಹೂ ಎಂಬ ದರ್ಶಕನು ಅರಸನನ್ನು ಎದುರುಗೊಂಡು ಅವನಿಗೆ, “ನೀನು ದುಷ್ಟರಿಗೆ ಸಹಾಯ ಮಾಡಬಹುದೇ? ಯೆಹೋವನ ಹಗೆಗಾರರನ್ನು ಪ್ರೀತಿಸಬಹುದೇ? ನೀನು ಹೀಗೆ ಮಾಡಿದ್ದರಿಂದ ಯೆಹೋವನ ಕೋಪವು ನಿನ್ನ ಮೇಲಿರುತ್ತದೆ.

3 ಆದರೂ, ನೀನು ದೇಶದೊಳಗಿನಿಂದ ಅಶೇರ ವಿಗ್ರಹಸ್ತಂಭಗಳನ್ನು ತೆಗೆದು ಹಾಕಿ, ಯೆಹೋವನ ಭಕ್ತಿಯಲ್ಲಿ ಮನಸ್ಸಿಟ್ಟಿದ್ದರಿಂದ ನಿನ್ನಲ್ಲಿ ಒಳ್ಳೆಯದು ಉಂಟೆಂದು ತಿಳಿದು ಬಂದಿದೆ” ಎಂಬುದಾಗಿ ಹೇಳಿದನು.


ನ್ಯಾಯಾಲಯಗಳ ಸ್ಥಾಪನೆ

4 ಯೆಹೋಷಾಫಾಟನು ಯೆರೂಸಲೇಮಿನಲ್ಲಿ ವಾಸವಾಗಿದ್ದು, ಮತ್ತೊಮ್ಮೆ ಬೇರ್ಷೆಬದಿಂದ ಎಫ್ರಾಯೀಮ್ ಪರ್ವತದ ವರೆಗೂ ಸಂಚರಿಸಿ, ತನ್ನ ಪ್ರಜೆಗಳನ್ನು ಅವರ ಪೂರ್ವಿಕರ ದೇವರಾದ ಯೆಹೋವನ ಕಡೆಗೆ ತಿರುಗಿಸಿದನು.

5 ಅವನು ಯೆಹೂದ ದೇಶದ ಪ್ರತಿಯೊಂದು ಕೋಟೆಕೊತ್ತಲಗಳುಳ್ಳ ಪಟ್ಟಣದಲ್ಲಿ ನ್ಯಾಯಾಧಿಪತಿಗಳನ್ನು ನೇಮಿಸಿದನು.

6 ಅವನು ಅವರಿಗೆ, “ನೀವು ಹೇಗೆ ಕೆಲಸ ನಿರ್ವಹಿಸುತ್ತೀರಿ ಎಂಬುದರ ಬಗ್ಗೆ ಎಚ್ಚರಿಕೆಯಿಂದಿರಿ. ನೀವು ನ್ಯಾಯತೀರಿಸುವುದು ಮನುಷ್ಯರಿಗಾಗಿ ಅಲ್ಲ, ಯೆಹೋವನಿಗಾಗಿ. ನ್ಯಾಯವಿಚಾರಣೆ ಮಾಡುವಾಗ ಆತನು ನಿಮ್ಮ ಮಧ್ಯದಲ್ಲಿ ಇರುತ್ತಾನೆ.

7 ಹೀಗಿರುವಲ್ಲಿ, ನಿಮಗೆ ಯೆಹೋವನ ಭಯವಿರಲಿ. ನಿಮ್ಮ ದೇವರಾದ ಯೆಹೋವನಲ್ಲಿ ಅನ್ಯಾಯವೂ, ಮುಖದಾಕ್ಷಿಣ್ಯವೂ ಇಲ್ಲದಿರುವುದರಿಂದ ಜಾಗರೂಕತೆಯಿಂದ ಕಾರ್ಯನಿರ್ವಹಿಸಿರಿ” ಎಂದು ಎಚ್ಚರಿಸಿದನು.

8 ಇದಲ್ಲದೆ, ಯೆಹೋಷಾಫಾಟನು ತನ್ನ ಪರಿವಾರದವರೊಡನೆ ಯೆರೂಸಲೇಮಿಗೆ ಹಿಂತಿರುಗಿ ಬಂದು ಲೇವಿಯರಿಂದಲೂ, ಯಾಜಕರಿಂದಲೂ, ಇಸ್ರಾಯೇಲ್ ಗೋತ್ರ ಪ್ರಧಾನರಿಂದಲೂ, ಕೆಲವರನ್ನು ಆರಿಸಿ ಯೆಹೋವನ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ, ಕಲಹಗಳನ್ನೂ ಬೇರೆ ವ್ಯಾಜ್ಯಗಳನ್ನೂ ವಿಚಾರಿಸಿ ತೀರಿಸುವುದಕ್ಕಾಗಿ ಅವರನ್ನು ಯೆರೂಸಲೇಮಿನಲ್ಲೇ ಇರಿಸಿದನು.

9 ಅವರಿಗೆ, “ನೀವು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ನಂಬಿಕೆಯಿಂದಲೂ ಯಥಾರ್ಥಮನಸ್ಸಿನಿಂದಲೂ ಮಾಡತಕ್ಕ ಕೆಲಸಗಳು ಯಾವುದೆಂದರೆ,

10 ಯೆಹೂದ ಪಟ್ಟಣಗಳಲ್ಲಿ ವಾಸಿಸುವ ನಿಮ್ಮ ಸಹೋದರರೊಳಗೆ ಜೀವಹತ್ಯ ಸಂಬಂಧದಲ್ಲಿಯಾಗಲಿ, ಧರ್ಮಶಾಸ್ತ್ರದ ಆಯಾ ಆಜ್ಞಾವಿಧಿ ನ್ಯಾಯಗಳ ಸಂಬಂಧದಲ್ಲಿಯಾಗಲಿ ವ್ಯಾಜ್ಯವುಂಟಾಗಿ, ಅದು ನಿಮ್ಮ ಮುಂದೆ ವಿಚಾರಣೆಗೆ ಬಂದರೆ, ನಿಮ್ಮ ಸಹೋದರರು ಯೆಹೋವನ ದೃಷ್ಟಿಯಲ್ಲಿ ಅಪರಾಧಿಗಳಾಗದಂತೆ ನೀವು ಅವರೊಂದಿಗೆ ದೇವರ ಕೋಪಕ್ಕೆ ಗುರಿಯಾಗದಂತೆ ಅವರನ್ನು ಎಚ್ಚರಿಸಿರಿ. ಹೀಗೆ ಮಾಡುವುದಾದರೆ ನೀವು ನಿರ್ದೋಷಿಗಳಾಗಿರುವಿರಿ.

11 ಇಗೋ, ಯೆಹೋವನ ಆಜ್ಞಾಸಂಬಂಧವಾದ ಎಲ್ಲಾ ವಿಚಾರಣೆಗಳಲ್ಲಿಯೂ ಮಹಾಯಾಜಕನಾದ ಅಮರ್ಯನು ನಿಮ್ಮ ನಾಯಕನು; ರಾಜಕೀಯ ಕಾರ್ಯಸಂಬಂಧವಾದ ಎಲ್ಲಾ ವಿಚಾರಣೆಗಳಲ್ಲಿಯೂ ಇಷ್ಮಾಯೇಲನ ಮಗನೂ ಯೆಹೂದ ಕುಲದ ಪ್ರಮುಖನೂ ಆದ ಜೆಬದ್ಯನು ಅಧ್ಯಕ್ಷನು; ಲೇವಿಯರು ನ್ಯಾಯಸ್ಥಾನದ ಉದ್ಯೋಗಸ್ಥರಾಗಿ ನಿಮ್ಮೊಂದಿಗಿದ್ದಾರೆ; ಧ್ಯೆರ್ಯದಿಂದ ಕಾರ್ಯಪ್ರವೃತ್ತರಾಗಿರಿ, ಯೆಹೋವನು ಸಜ್ಜನರ ಸಹಾಯಕನು” ಎಂದು ಹೇಳಿದನು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು