Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಪೂರ್ವಕಾಲ ವೃತ್ತಾಂತ 15 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಆಸನಿಂದ ಧಾರ್ಮಿಕ ಸುಧಾರಣೆ

1 ಆಗ ಓದೇದನ ಮಗನಾದ ಅಜರ್ಯನ ಮೇಲೆ ದೇವರ ಆತ್ಮವು ಬಂದಿತು.

2 ಅವನು ಆಸನನ್ನು ಎದುರುಗೊಳ್ಳುವುದಕ್ಕೆ ಹೋಗಿ ಅವನಿಗೆ, “ಆಸನೇ, ಎಲ್ಲಾ ಯೆಹೂದ ಬೆನ್ಯಾಮೀನ ಕುಲಗಳವರೇ, ಕಿವಿಗೊಡಿರಿ, ನೀವು ಯೆಹೋವನನ್ನು ಹೊಂದಿಕೊಂಡಿರುವ ತನಕ ಆತನೂ ನಿಮ್ಮೊಂದಿಗಿರುವನು; ನೀವು ಆತನನ್ನು ಹುಡುಕಿದರೆ ಆತನು ನಿಮಗೆ ಸಿಕ್ಕುವನು; ಆತನನ್ನು ಬಿಟ್ಟರೆ ಆತನೂ ನಿಮ್ಮನ್ನು ಬಿಟ್ಟುಬಿಡುವನು.

3 ಆಗ ಇಸ್ರಾಯೇಲರಿಗೆ ಬಹುಕಾಲದಿಂದ ಸತ್ಯವಾದ ದೇವರೂ, ಬೋಧಿಸುವ ಯಾಜಕರೂ ಹಾಗೂ ಧರ್ಮಶಾಸ್ತ್ರವೂ ಇರಲಿಲ್ಲ.

4 ಅವರು ತಮ್ಮ ಇಕ್ಕಟ್ಟಿನಲ್ಲಿ ಇಸ್ರಾಯೇಲಿನ ದೇವರಾದ ಯೆಹೋವನ ಕಡೆಗೆ ತಿರುಗಿಕೊಂಡರು. ಅವರು ಆತನನ್ನು ಹುಡುಕಿದಾಗ ಆತನು ಅವರಿಗೆ ಸಿಕ್ಕಿದನು.

5 ಆ ಕಾಲದಲ್ಲಿ ಯಾರಿಗೂ ಸಮಾಧಾನವಾಗಿ ತಿರುಗಾಡುವುದಕ್ಕೆ ಸಾಧ್ಯವಾಗುತ್ತಾ ಇರಲಿಲ್ಲ; ದೇಶ ನಿವಾಸಿಗಳೆಲ್ಲರೂ ಕಳವಳಗೊಂಡಿದ್ದರು.

6 ಒಂದು ಜನಾಂಗವು ಇನ್ನೊಂದು ಜನಾಂಗವನ್ನೂ, ಒಂದು ಪಟ್ಟಣದವರು ಇನ್ನೊಂದು ಪಟ್ಟಣದವರನ್ನೂ ಹಾಳು ಮಾಡುತ್ತಿದ್ದರು. ದೇವರು ಎಲ್ಲಾ ತರಹ ಕಷ್ಟದಿಂದಲೂ ಅವರನ್ನು ತಳಮಳಗೊಳಿಸಿದ್ದನು.

7 ನೀವಾದರೋ ಸ್ಥಿರಚಿತ್ತರಾಗಿರಿ; ನಿಮ್ಮ ಕೈಗಳು ಜೋಲು ಬೀಳದಿರಲಿ. ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ಸಿಕ್ಕುವುದು” ಎಂದು ಹೇಳಿದನು.

8 ಆಸನು ಓದೇದನ ಮಗನಾದ ಅಜರ್ಯ ಪ್ರವಾದಿಯ ಈ ಮಾತುಗಳನ್ನು ಕೇಳಿದಾಗ ಧೈರ್ಯಗೊಂಡನು. ಯೆಹೂದ, ಬೆನ್ಯಾಮೀನ್ ಪ್ರಾಂತ್ಯಗಳಲ್ಲಿಯೂ ತಾನು ಸ್ವಾಧೀನಮಾಡಿಕೊಂಡ ಎಫ್ರಾಯೀಮ್ ಪರ್ವತ ಪ್ರದೇಶದ ಪಟ್ಟಣಗಳಲ್ಲಿಯೂ ಇದ್ದ ಅಸಹ್ಯ ಪ್ರತಿಮೆಗಳನ್ನು ತೆಗೆದು ಹಾಕಿಸಿದನು. ಯೆಹೋವನ ಆಲಯಕ್ಕೆ ಸೇರಿದ ಮಂಟಪದ ಎದುರಿಗಿದ್ದ ಯೆಹೋವನ ಯಜ್ಞವೇದಿಯನ್ನು ಜೀರ್ಣೋದ್ಧಾರ ಮಾಡಿಸಿದನು.

9 ಆ ಮೇಲೆ ಆಸನು ಎಲ್ಲಾ ಯೆಹೂದ ಬೆನ್ಯಾಮೀನ ಕುಲಗಳವರನ್ನೂ ತನ್ನ ದೇವರಾದ ಯೆಹೋವನು ತನ್ನ ಸಂಗಡ ಇರುವುದನ್ನು ನೋಡಿ ಇಸ್ರಾಯೇಲರೊಡನೆ ತನ್ನೊಡನೆ ಗುಂಪುಗುಂಪಾಗಿ ಕೂಡಿಕೊಂಡು ಯೆಹೂದ ದೇಶದಲ್ಲಿ ನೆಲಸಿದ್ದ ಎಫ್ರಾಯೀಮ್, ಮನಸ್ಸೆ ಹಾಗೂ ಸಿಮೆಯೋನ್ ಕುಲಗಳವರನ್ನೂ ಕರೆಸಿಕೊಂಡನು.

10 ಅವರು ಆಸನ ಆಳ್ವಿಕೆಯ ಹದಿನೈದನೆಯ ವರ್ಷದ ಮೂರನೆಯ ತಿಂಗಳಿನಲ್ಲಿ ಯೆರೂಸಲೇಮಿಗೆ ಒಟ್ಟಾಗಿ ಕೂಡಿ ಬಂದರು.

11 ಯೆಹೋವನಿಗಾಗಿ ಆ ದಿನ ತಾವು ತಂದ ಕೊಳ್ಳೆಯಿಂದ ಏಳು ನೂರು ಹೋರಿಗಳನ್ನೂ, ಏಳು ಸಾವಿರ ಕುರಿಗಳನ್ನೂ ಯಜ್ಞಮಾಡಿದರು.

12 ಅವರು ತಾವು ಪೂರ್ಣ ಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ತಮ್ಮ ಪೂರ್ವಿಕರ ದೇವರಾದ ಯೆಹೋವನ ಭಕ್ತರಾಗಿರುವೆವೆಂದೂ ಒಡಂಬಡಿಕೆ ಮಾಡಿದರು.

13 ಇದಲ್ಲದೆ, ತಮ್ಮಲ್ಲಿ ಇಸ್ರಾಯೇಲ್ ದೇವರಾದ ಯೆಹೋವನ ಭಕ್ತಿಯನ್ನು ಬಿಟ್ಟವರು ಚಿಕ್ಕವರಾಗಲಿ, ದೊಡ್ಡವರಾಗಲಿ, ಗಂಡಸರಾಗಲಿ ಹೆಂಗಸರಾಗಲಿ, ಅವರೆಲ್ಲರನ್ನೂ ಕೊಲ್ಲಲಾಗುವುದು ಎಂದು

14 ತುತ್ತೂರಿ ಕೊಂಬುಗಳನ್ನೂ ಊದಿಸಿ ದೊಡ್ಡ ಅರ್ಭಟದೊಡನೆ ಯೆಹೋವನಿಗೆ ಪ್ರಮಾಣಮಾಡಿದರು.

15 ಈ ಪ್ರಮಾಣದ ನಿಮಿತ್ತವಾಗಿ ಯೆಹೂದ್ಯರೆಲ್ಲರಿಗೂ ಸಂತೋಷವಾಯಿತು. ಅವರು ಪೂರ್ಣಮನಸ್ಸಿನಿಂದ ಪ್ರಮಾಣಮಾಡಿ ತುಂಬಾ ಸಂತೋಷದಿಂದ ಯೆಹೋವನನ್ನು ಬಯಸಿದ ಕಾರಣ ಆತನು ಅವರಿಗೆ ಪ್ರಸನ್ನನಾಗಿ ಎಲ್ಲಾ ಕಡೆಗಳಿಂದಲೂ ಅವರಿಗೆ ಸಮಾಧಾನವನ್ನು ಅನುಗ್ರಹಿಸಿದನು.

16 ಅರಸನಾದ ಆಸನ ಅಜ್ಜಿಯಾದ ಮಾಕಳು ಅಶೇರ ದೇವತೆಯ ಒಂದು ಅಸಹ್ಯ ಮೂರ್ತಿಯನ್ನು ಮಾಡಿಸಿಕೊಂಡಿದ್ದಳು. ಆದುದರಿಂದ ಅವನು ಆಕೆಯನ್ನು ರಾಜಮಾತೆಯ ಸ್ಥಾನದಿಂದ ತೆಗೆದುಹಾಕಿದನು. ಅಲ್ಲದೆ ಆ ಮೂರ್ತಿಯನ್ನು ತೆಗೆದು ಕಿದ್ರೋನ್ ಹಳ್ಳದ ಬಳಿಯಲ್ಲಿ ಚೂರು ಚೂರು ಮಾಡಿ ಸುಟ್ಟುಹಾಕಿಸಿದನು.

17 ಅವನು ಇಸ್ರಾಯೇಲ್ ಪ್ರಾಂತ್ಯದಲ್ಲಿದ್ದ ಪೂಜಾಸ್ಥಳಗಳನ್ನು ಹಾಳು ಮಾಡದೆ ಇದ್ದರೂ ಆಸನು ತನ್ನ ಜೀವಮಾನದಲ್ಲೆಲ್ಲಾ ಯೆಹೋವನಿಗೆ ಯಥಾರ್ಥಚಿತ್ತನಾಗಿ ನಡೆದುಕೊಂಡನು.

18 ತನ್ನ ತಂದೆಯೂ ತಾನೂ ದೇವರಿಗೆ ಪ್ರತಿಷ್ಠಿಸಿದ್ದ ಬೆಳ್ಳಿಬಂಗಾರವನ್ನೂ, ಪಾತ್ರೆಗಳನ್ನೂ ದೇವಾಲಯದಲ್ಲಿ ತಂದಿಟ್ಟನು.

19 ಆಸನ ಆಳ್ವಿಕೆಯ ಮೂವತ್ತೈದನೆಯ ವರ್ಷದವರೆಗೂ ಯುದ್ಧವಿರಲಿಲ್ಲ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು