Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಪೂರ್ವಕಾಲ ವೃತ್ತಾಂತ 14 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಯೆಹೂದದ ಅರಸನಾದ ಆಸ

1 ಅಬೀಯನು ಮೃತನಾಗಿ ಪೂರ್ವಿಕರ ಬಳಿಗೆ ಸೇರಲು, ಅವನ ಶವವನ್ನು ದಾವೀದನಗರದಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಆಸನು ಅರಸನಾದನು. ಇವನ ಕಾಲದ ಹತ್ತು ವರ್ಷ ದೇಶದಾದ್ಯಂತ ಸಮಾಧಾನವಿತ್ತು.

2 ಆಸನು ತನ್ನ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿಯೂ ನೀತಿವಂತನಾಗಿಯೂ ನಡೆದನು.

3 ಇವನು ಅನ್ಯದೇವತೆಗಳ ಯಜ್ಞವೇದಿಗಳನ್ನೂ ಪೂಜಾಸ್ಥಳಗಳನ್ನೂ ತೆಗೆದುಹಾಕಿ ಕಲ್ಲುಕಂಬಗಳನ್ನು ಒಡೆದು ಹಾಕಿ, ಅಶೇರ ವಿಗ್ರಹ ಸ್ತಂಭಗಳನ್ನು ಕೆಡವಿ ಬಿಟ್ಟನು.

4 ಯೆಹೂದ್ಯರಿಗೆ, “ನೀವು ನಿಮ್ಮ ಪೂರ್ವಿಕರ ದೇವರಾದ ಯೆಹೋವನನ್ನೇ ಆಶ್ರಯಿಸಿಕೊಂಡು ಧರ್ಮಶಾಸ್ತ್ರದ ವಿಧಿಗಳನ್ನು ಕೈಕೊಳ್ಳಿರಿ” ಎಂದು ಆಜ್ಞಾಪಿಸಿದನು.

5 ಯೆಹೂದದ ಎಲ್ಲಾ ಪಟ್ಟಣಗಳೊಳಗಿನಿಂದ ಪೂಜಾಸ್ಥಳಗಳನ್ನೂ ಸೂರ್ಯಸ್ತಂಭಗಳನ್ನೂ ತೆಗೆದುಹಾಕಿಸಿದನು. ಇವನ ಆಳ್ವಿಕೆಯಲ್ಲಿ ರಾಜ್ಯದೊಳಗೆ ಸಮಾಧಾನವಿತ್ತು.

6 ಯೆಹೋವನ ಅನುಗ್ರಹದಿಂದ ಶತ್ರುಭಯ ತಪ್ಪಿ ಯಾವ ಯುದ್ಧವೂ ಇಲ್ಲದೆ ದೇಶದಲ್ಲಿ ಸಮಾಧಾನವಿದ್ದುದರಿಂದ ಇವನು ಯೆಹೂದದಲ್ಲಿ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ಕಟ್ಟಿಸಿದನು.

7 ಇವನು ಯೆಹೂದ್ಯರಿಗೆ, “ನಾವು ನಮ್ಮ ದೇವರಾದ ಯೆಹೋವನನ್ನು ಆಶ್ರಯಿಸಿಕೊಂಡ ಕಾರಣ ಆತನ ಅನುಗ್ರಹದಿಂದ ಸುತ್ತಣ ವೈರಿಗಳ ಭಯ ತಪ್ಪಿ ದೇಶವು ಇನ್ನೂ ನಿರಾತಂಕವಾಗಿರುತ್ತದೆ. ಆದುದರಿಂದ ನಾವು ಪಟ್ಟಣಗಳನ್ನು ಕಟ್ಟಿ, ಅವುಗಳನ್ನು ಸುತ್ತಣ ಗೋಡೆ, ಗೋಪುರ, ಬುರುಜು ಬಾಗಿಲು, ಅಗುಳಿ ಇವುಗಳಿಂದ ಭದ್ರಪಡಿಸೋಣ” ಎನ್ನಲಾಗಿ ಅವರು ಅವುಗಳನ್ನು ಚೆನ್ನಾಗಿ ಕಟ್ಟಿ ಮುಗಿಸಿದರು.

8 ಆಸನಿಗೆ ಸೈನ್ಯವಿತ್ತು; ಅದರಲ್ಲಿ ಗುರಾಣಿ ಬರ್ಜಿಗಳನ್ನು ಹಿಡಿದಿರುವ ಮೂರು ಲಕ್ಷ ಮಂದಿ ಯೆಹೂದ್ಯ ಸೈನಿಕರಿದ್ದರು. ಖೇಡ್ಯ ಹಿಡಿದವರೂ ಬಿಲ್ಲುಗಾರರೂ ಆದ ಎರಡು ಲಕ್ಷದ ಎಂಭತ್ತು ಸಾವಿರ ಮಂದಿ ಬೆನ್ಯಾಮೀನ್ ಸೈನಿಕರೂ ಇದ್ದರು. ಇವರೆಲ್ಲರೂ ಯುದ್ಧವೀರರಾಗಿದ್ದರು.

9 ಕೂಷ್ಯನಾದ ಜೆರಹನು ಹತ್ತು ಲಕ್ಷ ಸೈನ್ಯವನ್ನೂ ಮುನ್ನೂರು ರಥಗಳನ್ನೂ ತೆಗೆದುಕೊಂಡು ಇಸ್ರಾಯೇಲರಿಗೆ ವಿರುದ್ಧವಾಗಿ ಯುದ್ಧಕ್ಕೆ ಹೊರಟು ಮಾರೇಷದವರೆಗೆ ಬಂದನು.

10 ಆಸನು ಅವನಿಗೆ ವಿರುದ್ಧವಾಗಿ ಹೊರಟನು. ಮಾರೇಷದ ಬಳಿಯಲ್ಲಿರುವ ಚೆಫಾತಾ ಬಯಲಿನಲ್ಲಿ ಇಬ್ಬರೂ ವ್ಯೂಹಕಟ್ಟಿದರು.

11 ಆಸನು ತನ್ನ ದೇವರಾದ ಯೆಹೋವನಿಗೆ, “ಯೆಹೋವನೇ, ಬಲಿಷ್ಠನು ಬಲಹೀನನ ಮೇಲೆ ಬೀಳುವಲ್ಲಿ, ರಕ್ಷಿಸಲು ನಿನ್ನ ಹೊರತು ಬೇರಾರೂ ರಕ್ಷಿಸುವುದಿಲ್ಲ. ನಮ್ಮ ದೇವರಾದ ಯೆಹೋವನೇ, ನಮ್ಮನ್ನು ರಕ್ಷಿಸು. ನಿನ್ನಲ್ಲಿ ಭರವಸವಿಟ್ಟು ನಿನ್ನ ಹೆಸರಿನಲ್ಲಿ ಈ ಮಹಾಸಮೂಹಕ್ಕೆ ವಿರೋಧವಾಗಿ ಯುದ್ಧಕ್ಕೆ ಬಂದೆವಲ್ಲಾ. ಯೆಹೋವನೇ, ನಮ್ಮ ದೇವರು ನೀನು. ನರರು ನಿನ್ನೆದುರು ಗೆಲ್ಲಬಾರದು” ಎಂದು ಮೊರೆಯಿಡಲು.

12 ಯೆಹೋವನು ಕೂಷ್ಯರನ್ನು ಆಸನಿಂದಲೂ ಯೆಹೂದ್ಯರಿಂದಲೂ ಅಪಜಯ ಉಂಟಾಗುವಂತೆ ಮಾಡಿದನು.

13 ಕೂಷ್ಯರು ಸೋತು ಓಡಿಹೋದಾಗ ಆಸನೂ ಅವನ ಜನರೂ ಗೆರಾರಿನವರೆಗೂ ಅವರನ್ನು ಹಿಂದಟ್ಟಿ ಸಂಹರಿಸಿದರು; ಅವರಲ್ಲಿ ಯಾರೂ ಜೀವದಿಂದುಳಿಯಲಿಲ್ಲ. ಯೆಹೋವನ ಮತ್ತು ಆತನ ಸೈನ್ಯದ ಮುಂದೆ ನುಚ್ಚು ನೂರಾಗಿ ಹೋದರು. ಇಸ್ರಾಯೇಲರಿಗೆ ಅಪರಿಮಿತವಾದ ಕೊಳ್ಳೆ ಸಿಕ್ಕಿತು.

14 ಇದಲ್ಲದೆ ಯೆಹೋವನ ಭಯದಿಂದ ತಬ್ಬಿಬ್ಬಾದ ಗೆರಾರಿನ ಸುತ್ತಣ ಪಟ್ಟಣಗಳನ್ನು ಅವರು ವಶಪಡಿಸಿಕೊಂಡು, ಅವುಗಳನ್ನೆಲ್ಲಾ ಸುಲಿಗೆಮಾಡಿದರು. ಅವುಗಳಿಂದ ಅವರಿಗೆ ದೊಡ್ಡ ಕೊಳ್ಳೆ ಸಿಕ್ಕಿತು.

15 ದನ ಕಾಯುವವರ ಗುಡಾರಗಳ ಮೇಲೂ ದಾಳಿಮಾಡಿ ಸಾಕಷ್ಟು ಒಂಟೆ ಕುರಿಗಳನ್ನು ಯೆರೂಸಲೇಮಿಗೆ ಹೊಡೆದುಕೊಂಡು ಬಂದರು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು