2 ಪೂರ್ವಕಾಲ ವೃತ್ತಾಂತ 12 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಯೆಹೂದದ ಮೇಲೆ ಐಗುಪ್ತರ ದಾಳಿ 1 ರೆಹಬ್ಬಾಮನು ತನ್ನ ರಾಜ್ಯಾಧಿಕಾರವನ್ನು ಸ್ಥಿರಪಡಿಸಿಕೊಂಡು ಬಲಗೊಂಡ ಮೇಲೆ ಅವನೂ ಮತ್ತು ಅವನ ಪ್ರಜೆಗಳಾದ ಎಲ್ಲಾ ಇಸ್ರಾಯೇಲರೂ ಯೆಹೋವನ ಧರ್ಮೋಪದೇಶವನ್ನು ಬಿಟ್ಟುಬಿಟ್ಟರು. 2 ಅವರು ಯೆಹೋವನಿಗೆ ದ್ರೋಹಮಾಡಿದ್ದರಿಂದ ಅರಸನಾದ ರೆಹಬ್ಬಾಮನ ಆಳ್ವಿಕೆಯ ಐದನೆಯ ವರ್ಷದಲ್ಲಿ, ಐಗುಪ್ತದ ಅರಸನಾದ ಶೀಶಕನು, ಸೈನಿಕರನ್ನು ಕೂಡಿಸಿಕೊಂಡು ಯೆರೂಸಲೇಮಿಗೆ ವಿರುದ್ಧವಾಗಿ ಹೊರಟನು. 3 ಸಾವಿರದ ಇನ್ನೂರು ರಥಗಳನ್ನೂ, ಅರುವತ್ತು ಸಾವಿರ ಮಂದಿ ರಾಹುತರನ್ನೂ, ಐಗುಪ್ತದಿಂದ ಅಸಂಖ್ಯರಾದ ಲೂಬ್ಯ, ಸುಕ್ಕೀಯ, ಕೂಷ್ಯ ಸೈನಿಕರನ್ನೂ ಕೂಡಿಸಿಕೊಂಡು ಯೆರೂಸಲೇಮಿಗೆ ವಿರುದ್ಧವಾಗಿ ಹೊರಟು, 4 ಯೆಹೂದ ದೇಶದ ಕೋಟೆ ಕೊತ್ತಲುಗಳುಳ್ಳ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡ ನಂತರ ಯೆರೂಸಲೇಮನ್ನು ಸಮೀಪಿಸಿದನು. 5 ಆಗ ಪ್ರವಾದಿಯಾದ ಶೆಮಾಯನು ರೆಹಬ್ಬಾಮನ ಬಳಿಗೂ, ಶೀಶಕನಿಗೆ ಹೆದರಿ ಯೆರೂಸಲೇಮಿನಲ್ಲಿ ಸೇರಿಬಂದಿದ್ದ ಯೆಹೂದ್ಯ ನಾಯಕರ ಬಳಿಗೂ ಬಂದು ಅವರಿಗೆ, “ಯೆಹೋವನು ಹೀಗೆನ್ನುತ್ತಾನೆ, ‘ನೀವು ನನ್ನನ್ನು ಬಿಟ್ಟು ಹೋದುದರಿಂದ ನಾನು ನಿಮ್ಮನ್ನು ಶೀಶಕನ ಕೈಯಲ್ಲಿ ಒಪ್ಪಿಸಿದ್ದೇನೆ’” ಎಂದು ಹೇಳಿದನು. 6 ಆಗ ಅರಸನೂ ಮತ್ತು ಇಸ್ರಾಯೇಲರ ನಾಯಕರೂ ಯೆಹೋವನು ನೀತಿವಂತನೆಂದು ಒಪ್ಪಿ ತಮ್ಮನ್ನು ತಾವೇ ತಗ್ಗಿಸಿಕೊಂಡರು. 7 ಯೆಹೋವನ ವಾಕ್ಯವು ಶೆಮಾಯನಿಗೆ, “ಇವರು ತಮ್ಮನ್ನು ತಗ್ಗಿಸಿಕೊಂಡಿದ್ದರಿಂದ ಇವರನ್ನು ಸಂಹರಿಸುವುದಿಲ್ಲ; ಸ್ವಲ್ಪ ಕಾಲದಲ್ಲಿಯೇ ಇವರಿಗೆ ರಕ್ಷಣೆಯನ್ನು ಅನುಗ್ರಹಿಸುವೆನು; ಶೀಶಕನ ಮುಖಾಂತರವಾಗಿ ನನ್ನ ರೌದ್ರವನ್ನು ಯೆರೂಸಲೇಮಿನ ಮೇಲೆ ಸುರಿದು ಬಿಡುವುದಿಲ್ಲ. 8 ಆದರೂ ಅವರು ನನ್ನ ಸೇವೆಗೂ ಅನ್ಯರಾಜ್ಯಗಳ ಸೇವೆಗೂ ಇರುವ ವ್ಯತ್ಯಾಸವು ಗೊತ್ತಾಗುವಂತೆ ಇವರು ಶೀಶಕನಿಗೆ ದಾಸರಾಗಬೇಕು” ಎಂದು ಹೇಳಿದನು. 9 ಹೀಗೆ ಯೆರೂಸಲೇಮಿಗೆ ವಿರೋಧವಾಗಿ ಬಂದು ಐಗುಪ್ತ್ಯ ರಾಜನಾದ ಶೀಶಕನು ಯೆಹೋವನ ಆಲಯದ ಮತ್ತು ಅರಮನೆಯ ಎಲ್ಲಾ ದ್ರವ್ಯವನ್ನೂ ಸೊಲೊಮೋನನು ಮಾಡಿಸಿದ ಬಂಗಾರದ ಗುರಾಣಿಗಳನ್ನೂ ತೆಗೆದುಕೊಂಡು ಹೋದನು. 10 ಅರಸನಾದ ರೆಹಬ್ಬಾಮನು ಅವುಗಳಿಗೆ ಬದಲಾಗಿ ತಾಮ್ರದ ಗುರಾಣಿಗಳನ್ನು ಮಾಡಿಸಿ ಅವುಗಳನ್ನು ಅರಮನೆಯ ದ್ವಾರಪಾಲಕರಾಗಿದ್ದ ಮೈಗಾವಲಿನವರ ದಳಪತಿಗೆ ಒಪ್ಪಿಸಿದನು. 11 ಅರಸನು ಯೆಹೋವನ ಅಲಯಕ್ಕೆ ಹೋಗುವಾಗಲೆಲ್ಲಾ ಮೈಗಾವಲಿನವರು ಅವುಗಳನ್ನು ಹಿಡಿದುಕೊಂಡು ಹೋಗುವರು; ಅಲ್ಲಿಂದ ಹಿಂತಿರುಗಿ ಬಂದ ಮೇಲೆ ಅವುಗಳನ್ನು ತಮ್ಮ ಕೋಣೆಗಳಲ್ಲಿಡುವರು. 12 ರೆಹಬ್ಬಾಮನು ತನ್ನನ್ನು ತಗ್ಗಿಸಿ ಕೊಂಡದ್ದರಿಂದಲೂ ಯೆಹೂದ್ಯರಲ್ಲಿ ಕೆಲವು ಸುಲಕ್ಷಣಗಳು ತೋರಿ ಬಂದಿದ್ದರಿಂದಲೂ ಯೆಹೋವನು ರೆಹಬ್ಬಾಮನ ಮೇಲಣ ಕೋಪವನ್ನು ಬಿಟ್ಟನು; ಅವನನ್ನು ಪೂರ್ಣವಾಗಿ ಹಾಳುಮಾಡಲಿಲ್ಲ. 13 ಅರಸನಾದ ರೆಹಬ್ಬಾಮನು ಯೆರೂಸಲೇಮಿನಲ್ಲಿ ತನ್ನ ರಾಜ್ಯಾಧಿಕಾರವನ್ನು ಸ್ಥಿರಪಡಿಸಿಕೊಂಡು ಆಳುವವನಾದನು. ಅವನು ತನ್ನ ನಲ್ವತ್ತೊಂದನೆಯ ವರ್ಷ ತುಂಬಿದ ಮೇಲೆ ಪಟ್ಟಕ್ಕೆ ಬಂದು ಯೆಹೋವನು ತನ್ನ ಹೆಸರಿಗೋಸ್ಕರ ಇಸ್ರಾಯೇಲರ ಎಲ್ಲಾ ಕುಲಗಳಿಂದ ಆರಿಸಿಕೊಂಡ ಯೆರೂಸಲೇಮ್ ಪಟ್ಟಣದಲ್ಲಿ ಹದಿನೇಳು ವರ್ಷ ಆಳಿದನು. ಅಮ್ಮೋನಿಯಳಾದ ನಯಮಾ ಎಂಬಾಕೆಯು ಅವನ ತಾಯಿ. 14 ಅವನು ಯೆಹೋವನನ್ನು ಅನುಸರಿಸುವುದಕ್ಕೆ ಮನಸ್ಸುಮಾಡದೆ ದ್ರೋಹಿಯಾದನು. 15 ರೆಹಬ್ಬಾಮನ ಪೂರ್ವೋತ್ತರ ಕೃತ್ಯಗಳು ಪ್ರವಾದಿಯಾದ ಶೆಮಾಯ, ದರ್ಶಕನಾದ ಇದ್ದೋ ಎಂಬುವರ ಚರಿತ್ರೆಗಳ ವಂಶಾವಳಿ ಭಾಗದಲ್ಲಿ ಬರೆದಿರುತ್ತವೆ. ರೆಹಬ್ಬಾಮನಿಗೂ ಯಾರೊಬ್ಬಾಮನಿಗೂ ಯಾವಾಗಲೂ ಯುದ್ಧನಡೆಯುತ್ತಿತ್ತು. 16 ರೆಹಬ್ಬಾಮನು ತನ್ನ ಪೂರ್ವಿಕರ ಬಳಿಗೆ ಸೇರಲು, ಅವನ ಶವವನ್ನು ದಾವೀದನಗರದಲ್ಲಿ ಸಮಾಧಿಮಾಡಲಾಯಿತು. ಅವನ ಮಗನಾದ ಅಬೀಯನು ಅವನ ನಂತರ ಅರಸನಾದನು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.