Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ತಿಮೊಥೆಯನಿಗೆ 4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ನಾನು ದೇವರ ಸಮಕ್ಷಮದಲ್ಲಿ ಮತ್ತು ಜೀವಿಸುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕೆ ಬರುವ ಕ್ರಿಸ್ತ ಯೇಸುವಿನ ಪ್ರತ್ಯಕ್ಷತೆಯನ್ನೂ, ಆತನ ರಾಜ್ಯವನ್ನೂ ಮುಂದಿಟ್ಟು ನಿನಗೆ ಖಂಡಿತವಾಗಿ ಹೇಳುವುದೇನಂದರೆ,

2 ದೇವರ ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರು. ಪೂರ್ಣ ದೀರ್ಘಶಾಂತಿಯಿಂದ ಉಪದೇಶಿಸುತ್ತಾ ಖಂಡಿಸು, ಗದರಿಸು, ಎಚ್ಚರಿಸು.

3 ಯಾಕೆಂದರೆ ಜನರು ಸ್ವಸ್ಥಬೋಧನೆಯನ್ನು ಒಪ್ಪಲಾರದ ಕಾಲವು ಬರುತ್ತದೆ. ಅದರಲ್ಲಿ ಅವರು ಕಿವಿಗೆ ಇಂಪಾಗುವ ಹಾಗೆ ತಮ್ಮ ದುರಾಶೆಗಳಿಗೆ ಅನುಕೂಲವಾದ ಉಪದೇಶಗಳನ್ನು ನೀಡುವ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು.

4 ಅವರು ಸತ್ಯ ಬೋಧನೆಗೆ ಕಿವಿಗೊಡದೆ ಕಟ್ಟುಕಥೆಗಳನ್ನು ಕೇಳುವುದಕ್ಕೆ ಇಚ್ಛಿಸುವರು.

5 ಆದರೆ ನೀನು ಎಲ್ಲಾ ವಿಷಯಗಳಲ್ಲಿಯೂ ಸ್ವಸ್ಥಚಿತ್ತನಾಗಿರು, ಹಿಂಸೆಯನ್ನು ತಾಳಿಕೋ, ಸುವಾರ್ತಿಕನ ಕೆಲಸವನ್ನು ಮಾಡು, ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ಮಾಡು.

6 ಯಾಕೆಂದರೆ ನಾನಂತೂ ಈಗಲೇ ಪಾನದ್ರವ್ಯವಾಗಿ ಅರ್ಪಿತನಾಗುತ್ತಾ ಇದ್ದೇನೆ. ನನ್ನ ನಿರ್ಗಮನದ ಸಮಯವು ಸಮೀಪವಾಗುತ್ತಾ ಬಂದಿದೆ.

7 ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಓಡಿಮುಗಿಸಿದ್ದೇನೆ, ಕ್ರಿಸ್ತ ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ.

8 ನೀತಿವಂತರಿಗೆ ದೊರಕುವ ಜಯಮಾಲೆಯು ಮುಂದೆ ನನಗಾಗಿ ಸಿದ್ಧವಾಗಿದೆ, ಅದನ್ನು ನೀತಿವಂತನಾದ ನ್ಯಾಯಾಧಿಪತಿಯಾಗಿರುವ ಕರ್ತನು ಆ ದಿನದಲ್ಲಿ ನನಗೆ ಕೊಡುವನು, ನನಗೆ ಮಾತ್ರವಲ್ಲದೆ ತನ್ನ ಪ್ರತ್ಯಕ್ಷತೆಯನ್ನು ಪ್ರೀತಿಸುವವರೆಲ್ಲರಿಗೂ ಕೊಡುವನು.


ಪೌಲನ ವೈಯುಕ್ತಿಕ ಆದೇಶಗಳು

9 ನೀನು ನನ್ನ ಬಳಿಗೆ ಬೇಗನೇ ಬರುವುದಕ್ಕೆ ಪ್ರಯತ್ನಪಡು,

10 ಯಾಕೆಂದರೆ ದೇಮನು ಇಹಲೋಕವನ್ನು ಪ್ರೀತಿಸಿ, ನನ್ನನ್ನು ಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೂ ತೀತನು ದಲ್ಮಾತ್ಯಕ್ಕೂ ಹೋದರು.

11 ಲೂಕನು ಮಾತ್ರ ನನ್ನ ಜೊತೆಯಲ್ಲಿದ್ದಾನೆ. ಮಾರ್ಕನನ್ನು ನಿನ್ನ ಸಂಗಡ ಕರೆದುಕೊಂಡು ಬಾ, ಅವನು ನನಗೆ ಸೇವೆಯಲ್ಲಿ ಉಪಯುಕ್ತನಾಗಿದ್ದಾನೆ.

12-13 ತುಖಿಕನನ್ನು ಎಫೆಸಕ್ಕೆ ಕಳುಹಿಸಿದೆನು. ತ್ರೋವದಲ್ಲಿ ನಾನು ಕರ್ಪನ ಬಳಿಯಲ್ಲಿ ಬಿಟ್ಟು ಬಂದ ಮೇಲಂಗಿಯನ್ನೂ, ಪುಸ್ತಕಗಳನ್ನೂ, ಮುಖ್ಯವಾಗಿ ಚರ್ಮದ ಕಾಗದಗಳನ್ನೂ ನೀನು ಬರುವಾಗ ತೆಗೆದುಕೊಂಡು ಬಾ.

14 ಕಂಚುಗಾರನಾದ ಅಲೆಕ್ಸಾಂದ್ರನು ನನಗೆ ಬಹಳ ಕೇಡುಮಾಡಿದನು. ಕರ್ತನು ಅವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಅವನಿಗೆ ಕೊಡುವನು.

15 ನೀನು ಸಹ ಅವನ ವಿಷಯದಲ್ಲಿ ಎಚ್ಚರಿಕೆಯಾಗಿರು, ಅವನು ನಮ್ಮ ಮಾತುಗಳನ್ನು ಬಹಳವಾಗಿ ಎದುರಿಸಿದನು.

16 ನಾನು ಮೊದಲನೆ ಸಾರಿ ಪ್ರತಿವಾದ ಮಾಡಿದಾಗ ಯಾರೂ ನನ್ನ ಸಂಗಡ ಇರಲಿಲ್ಲ, ಎಲ್ಲರೂ ನನ್ನನ್ನು ಕೈಬಿಟ್ಟರು. ಇದು ಅವರಿಗೆ ದೋಷವಾಗಿ ಎಣಿಸಲ್ಪಡದೆ ಇರಲಿ.

17 ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸುವಾರ್ತೆಯು ಸಂಪೂರ್ಣವಾಗಿ ಸಾರಲ್ಪಡುವಂತೆಯೂ, ಅನ್ಯ ಜನರೆಲ್ಲರೂ ಅದನ್ನು ಕೇಳುವಂತೆಯೂ ಮಾಡಿದನು. ಇದಲ್ಲದೆ ಆತನು ನನ್ನನ್ನು ಸಿಂಹದ ಬಾಯೊಳಗಿಂದ ತಪ್ಪಿಸಿದನು.

18 ಪ್ರತಿಯೊಂದು ದುಷ್ಕೃತ್ಯದಿಂದ ಕರ್ತನು ನನ್ನನ್ನು ಕಾಪಾಡಿ ತನ್ನೊಂದಿಗೆ ಪರಲೋಕ ರಾಜ್ಯಕ್ಕೆ ಸೇರಿಸುವನು. ಯುಗಯುಗಾಂತರಗಳಲ್ಲಿಯೂ ಆತನಿಗೆ ಸ್ತೋತ್ರ. ಆಮೆನ್.


ಅಂತಿಮ ವಂದನೆಗಳು

19 ಪ್ರಿಸ್ಕಿಲ್ಲಳಿಗೂ, ಅಕ್ವಿಲ್ಲನಿಗೂ, ಒನೇಸಿಪೊರನ ಮನೆಯವರಿಗೂ ವಂದನೆಹೇಳು.

20 ಎರಸ್ತನು ಕೊರಿಂಥದಲ್ಲಿ ನಿಂತನು. ತ್ರೊಫಿಮನು ಅಸ್ವಸ್ಥನಾಗಿದ್ದುದರಿಂದ ಅವನನ್ನು ಮಿಲೇತದಲ್ಲಿ ಬಿಟ್ಟೆನು.

21 ಚಳಿಗಾಲಕ್ಕೆ ಮುಂಚೆಯೇ ಬರುವುದಕ್ಕೆ ಪ್ರಯತ್ನಿಸು. ಯುಬೂಲನು, ಪೊದೆಯನೂ, ಲೀನನೂ, ಕ್ಲೌದ್ಯಳೂ ಉಳಿದ ಸಹೋದರರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ.

22 ಕರ್ತನು ನಿನ್ನ ಆತ್ಮದೊಂದಿಗೆ ಇರಲಿ. ಆತನ ಕೃಪೆಯು ನಿಮ್ಮೊಂದಿಗಿರಲಿ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು