2 ಕೊರಿಂಥದವರಿಗೆ 7 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಪ್ರಿಯರೇ, ಈ ವಾಗ್ದಾನಗಳು ನಮಗಿರುವುದರಿಂದ, ನಾವು ದೇಹಾತ್ಮಗಳ ಕಲ್ಮಷವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತೆಯ ಸಂಪೂರ್ಣತೆಗೆ ಪ್ರಯತ್ನಿಸೋಣ. ಪೌಲನು ತಾನು ಮೊದಲು ಬರೆದ ಪತ್ರಿಕೆಯಿಂದ ಒಳ್ಳೆಯ ಫಲವುಂಟಾಯಿತೆಂದು ಸಂತೋಷಪಟ್ಟಿದ್ದು 2 ನಿಮ್ಮ ಹೃದಯಗಳಲ್ಲಿ ನಮಗೆ ಸ್ಥಳ ಕೊಡಿರಿ; ನಿಮ್ಮಲ್ಲಿ ಯಾರಿಗೂ ನಾವು ಅನ್ಯಾಯ ಮಾಡಲಿಲ್ಲ, ಯಾರಿಗೂ ಹಾನಿಯುಂಟುಮಾಡಿಲ್ಲ, ಯಾರನ್ನೂ ವಂಚಿಸಲಿಲ್ಲ. 3 ನಿಮ್ಮ ಮೇಲೆ ತಪ್ಪುಹೊರಿಸಬೇಕೆಂದು ನಾನು ಇದನ್ನು ಹೇಳುತ್ತಿಲ್ಲ; ನಿಮ್ಮ ಜೊತೆ ಸಾಯುವುದಕ್ಕೂ, ಬದುಕುವುದಕ್ಕೂ ಎನ್ನುವಷ್ಟರ ಮಟ್ಟಿಗೆ ನೀವು ನಮ್ಮ ಹೃದಯದಲ್ಲಿದ್ದೀರೆಂದು ನಾನು ಮೊದಲೇ ಹೇಳಿದ್ದೆನಲ್ಲಾ. 4 ನಿಮ್ಮಲ್ಲಿ ನನಗೆ ಬಹಳ ಭರವಸೆ ಉಂಟು, ಗಾಢವಾದ ಅಭಿಮಾನವುಂಟು. ನಾನು ಎಲ್ಲಾ ಸಂಕಟಗಳಲ್ಲಿಯೂ ಎದೆಗುಂದದೆ ಆನಂದಭರಿತನಾಗಿದ್ದೇನೆ. 5 ನಾವು ಮಕೆದೋನ್ಯಕ್ಕೆ ಬಂದ ಮೇಲೂ ನಮ್ಮ ದೇಹಕ್ಕೆ ನೆಮ್ಮದಿ ಇರಲಿಲ್ಲ, ಬದಲಾಗಿ ಎಲ್ಲಾ ವಿಷಯಗಳಲ್ಲಿಯೂ ನಮಗೆ ತೊಂದರೆಗಳಿದ್ದವು. ಹೊರಗೆ ಜಗಳ, ಒಳಗೆ ಭಯ 6 ಆದರೆ ದೀನಾವಸ್ಥೆಯಲ್ಲಿರುವವರನ್ನು ಸಂತೈಸುವ ದೇವರು ತೀತನನ್ನು ಕಳುಹಿಸುವ ಮೂಲಕ ನಮ್ಮನ್ನು ಸಂತೈಸಿದನು. 7 ಅವನ ಬರುವಿಕೆಯಿಂದ ಮಾತ್ರವಲ್ಲದೆ ನಿಮ್ಮಿಂದ ಅವನು ಬಹಳ ಸಮಾಧಾನವನ್ನು ಹೊಂದಿದೆನೆಂದೂ, ನಿಮ್ಮ ಹಂಬಲ, ನಿಮ್ಮ ದುಃಖ, ನನ್ನ ಮೇಲಿರುವ ನಿಮ್ಮ ಕಾಳಜಿ; ಇವುಗಳನ್ನು ನಮಗೆ ತಿಳಿಸಿದಾಗ ನಾನು ಇನ್ನೂ ಹೆಚ್ಚಾಗಿ ಸಂತೋಷಪಟ್ಟೆನು. 8 ನಾನು ಬರೆದ ಪತ್ರದಿಂದ ನಿಮಗೆ ದುಃಖವಾಗಿದ್ದರೂ ನನಗೆ ವಿಷಾದವಿಲ್ಲ, ಅದು ನಿಮ್ಮನ್ನು ಸ್ವಲ್ಪ ಸಮಯ ದುಃಖಪಡಿಸಿತೆಂದು ನಾನು ಮೊದಲು ಪಶ್ಚಾತ್ತಾಪ ಪಟ್ಟಿದ್ದರೂ ಈಗ ಸಂತೋಷಪಡುತ್ತೇನೆ. 9 ನಿಮಗೆ ಯಾತನೆಯಾಯಿತೆಂದು ನಾನು ಈಗ ಸಂತೋಷಪಡದೆ ನೀವು ದುಃಖಪಟ್ಟು ಪಶ್ಚಾತ್ತಾಪಪಟ್ಟು ಮಾನಸಾಂತರ ಹೊಂದಿದ್ದಕ್ಕಾಗಿ ಸಂತೋಷಪಡುತ್ತೇನೆ. ನೀವು ದೇವರ ಚಿತ್ತಾನುಸಾರವಾಗಿ ದುಃಖಿಸಿದ್ದರಿಂದ ನಮ್ಮಿಂದಾಗಿ ಯಾವುದರಲ್ಲಿಯೂ ನಿಮಗೆ ನಷ್ಟವಾಗಲಿಲ್ಲವಲ್ಲಾ. 10 ದೇವರ ಚಿತ್ತಾನುಸಾರವಾಗಿರುವ ದುಃಖವು ರಕ್ಷಣೆಗೆ ಕಾರಣವಾಗುವ ಮಾನಸಾಂತರವನ್ನುಂಟು ಮಾಡುತ್ತದೆ, ಆ ಮಾನಸಾಂತರದಲ್ಲಿ ಪಶ್ಚಾತ್ತಾಪಕ್ಕೆ ಆಸ್ಪದವಿಲ್ಲ; ಆದರೆ ಲೋಕದವರಿಗಿರುವಂಥ ದುಃಖವು ಮರಣವನ್ನುಂಟುಮಾಡುತ್ತದೆ. 11 ನೀವು ದೇವರ ಚಿತ್ತಾನುಸಾರವಾಗಿ ಪಟ್ಟ ದುಃಖವು ನಿಮ್ಮಲ್ಲಿ ಎಂಥ ಶ್ರದ್ದೆಯನ್ನು ಉಂಟುಮಾಡಿತು ನೋಡಿರಿ. ನೀವು ನಿರ್ದೋಷಿಗಳೆಂದು ಸಾಬೀತುಪಡಿಸುವುದಕ್ಕೆ ಎಂಥ ಪ್ರಯಾಸ, ಎಂಥ ರೋಷ; ಎಂಥ ಭಯ; ಎಂಥ ಹಂಬಲ; ಎಂಥ ಉತ್ಸಾಹ; ತಪ್ಪಿತಸ್ಥರನ್ನು ಶಿಕ್ಷಿಸಲು ಎಂಥ ಬಯಕೆ. ನೀವು ಆ ಕಾರ್ಯದಲ್ಲಿ ನಿರ್ದೋಷಿಗಳೆಂದು ಎಲ್ಲಾ ವಿಧದಲ್ಲಿಯೂ ತೋರಿಸಿದ್ದೀರಿ. 12 ನಾನು ನಿಮಗೆ ಬರೆದದ್ದು ತಪ್ಪುಮಾಡಿದವನಿಗೆ ದಂಡನೆಯಾಗಲಿ ಎಂದಲ್ಲ, ಆ ತಪ್ಪಿನಿಂದ ನೊಂದವನಿಗೆ ನ್ಯಾಯ ದೊರಕಲೆಂದೂ ಅಲ್ಲ; ನಮ್ಮ ಬಗ್ಗೆ ನಿಮಗಿರುವ ಅಕ್ಕರೆ, ಆಸಕ್ತಿಗಳು ದೇವರ ಸನ್ನಿಧಿಯಲ್ಲಿ ನಿಮಗೆ ವ್ಯಕ್ತವಾಗಲೆಂದೇ ಬರೆದೆನು. ಆದ್ದರಿಂದಲೇ ನಮ್ಮ ಮನಸ್ಸಿಗೆ ನೆಮ್ಮದಿ ಉಂಟಾಗಿದೆ. 13 ಅಷ್ಟೇ ಅಲ್ಲ, ನೀವೆಲ್ಲರೂ ತೀತನ ಮನಸ್ಸನ್ನು ತಣಿಸಿದ್ದರಿಂದ ಆತನ ಸಂತೋಷವನ್ನು ಕಂಡು ನಾವು ಮತ್ತಷ್ಟು ತೃಪ್ತರಾಗಿದ್ದೇವೆ. 14 ಯಾಕೆಂದರೆ ನಾನು ಅವನ ಮುಂದೆ ನಿಮ್ಮನ್ನು ಹೊಗಳಿದ್ದಕ್ಕಾಗಿ ನಾನು ನಾಚಿಕೆಪಡಬೇಕಾಗಿ ಬರಲಿಲ್ಲ. ಬದಲಾಗಿ ನಾವು ನಿಮಗೆ ಹೇಳಿದ ಎಲ್ಲಾ ಮಾತುಗಳು ಹೇಗೆ ಸತ್ಯವಾಗಿದ್ದವೋ ಹಾಗೆಯೇ ನಾವು ತೀತನ ಮುಂದೆ ಆಡಿದ ಹೊಗಳಿಕೆಯ ಮಾತುಗಳೆಲ್ಲವೂ ಸತ್ಯವೆಂದು ಕಂಡುಬಂದವು. 15 ನೀವು ವಿಧೇಯತೆಯಲ್ಲಿ ಭಯಭಕ್ತಿಯಿಂದ ಅವನನ್ನು ಸ್ವೀಕರಿಸಿಕೊಂಡಿದ್ದನ್ನು ಜ್ಞಾಪಕಮಾಡಿಕೊಳ್ಳುವಾಗ ನಿಮ್ಮ ಮೇಲೆ ಅವನಿಗಿರುವ ಪ್ರೀತಿ ಹೆಚ್ಚಾಗಿದೆ. 16 ನಿಮ್ಮ ಮೇಲೆ ನನಗೆ ಎಲ್ಲಾ ವಿಧಗಳಲ್ಲಿಯೂ ಪೂರ್ಣ ಭರವಸೆ ಇರುವುದರಿಂದ ನಾನು ಸಂತೋಷಪಡುತ್ತೇನೆ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.