2 ಕೊರಿಂಥದವರಿಗೆ 4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಮಣ್ಣಿನ ಪಾತ್ರೆಯಲ್ಲಿ ಇರುವ ನಿಕ್ಷೇಪ 1 ಆದ್ದರಿಂದ ದೇವರ ಕರುಣೆಯಿಂದ ಈ ಸೇವೆಯನ್ನು ಹೊಂದಿದವರಾದ ನಾವು ಧೈರ್ಯಗೆಟ್ಟು ಹಿಂಜರಿಯುವುದಿಲ್ಲ. 2 ನಾಚಿಕೆಪಡುವಂತಹ ಗುಪ್ತಕಾರ್ಯಗಳನ್ನು ಬಿಟ್ಟು ಕುತಂತ್ರದಲ್ಲಿ ನಡೆಯದೆ ದೇವರ ವಾಕ್ಯವನ್ನು ಬೆರಕೆ ಮಾಡದೆ, ಸತ್ಯವನ್ನು ಪ್ರಾಮಾಣಿಕವಾಗಿ ಬೋಧಿಸುತ್ತಾ ನಾವು ನೀತಿವಂತರೆಂದು ಪ್ರತಿ ಮನುಷ್ಯನ ಮನಸ್ಸಾಕ್ಷಿಯು ದೇವರ ಮುಂದೆ ಒಪ್ಪಬೇಕಾದ ರೀತಿಯಲ್ಲಿ ನಡೆಯುತ್ತೇವೆ. 3 ನಾವು ಸಾರುವ ಸುವಾರ್ತೆಯು ಕೆಲವರಿಗೆ ಮರೆಯಾಗಿರುವುದಾದರೆ ನಾಶಮಾರ್ಗದಲ್ಲಿರುವವರಿಗೇ ಅದು ಮರೆಯಾಗಿರುವುದು. 4 ಇವರಲ್ಲಿ ದೇವರ ಪ್ರತಿರೂಪವಾಗಿರುವ ಕ್ರಿಸ್ತನ ತೇಜಸ್ಸನ್ನು ತೋರಿಸುವ ಸುವಾರ್ತೆಯ ಬೆಳಕನ್ನು ನೋಡಬಾರದೆಂದು ಈ ಲೋಕದ ದೇವರು ನಂಬಿಕೆಯಿಲ್ಲದವರ ಮನಸ್ಸನ್ನು ಕುರುಡು ಮಾಡಿದ್ದಾನೆ. 5 ನಮ್ಮನ್ನೇ ನಾವು ಪ್ರಚಾರಮಾಡಿಕೊಳ್ಳದೆ ನಮ್ಮನ್ನು ಯೇಸುವಿನ ನಿಮಿತ್ತ ನಿಮ್ಮ ದಾಸರೆಂತಲೂ ಕ್ರಿಸ್ತೇಸುವನ್ನೇ ಕರ್ತನೆಂತಲೂ ಘೋಷಿಸುತ್ತೇವೆ. 6 ಯಾಕೆಂದರೆ “ಕತ್ತಲೆಯೊಳಗಿನಿಂದ ಬೆಳಕು ಪ್ರಕಾಶಿಸಲಿ” ಎಂದು ಹೇಳಿದ ದೇವರು ತಾನೇ ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಮಹಿಮೆಯ ಜ್ಞಾನವೆಂಬ ಪ್ರಕಾಶವು ಅನೇಕರಿಗೆ ಉಂಟಾಗುವುದಕ್ಕಾಗಿ ನಮ್ಮ ಹೃದಯಗಳಲ್ಲಿ ಪ್ರಕಾಶಿಸಿದನು. 7 ಮಣ್ಣಿನ ಮಡಿಕೆಯಂತಿರುವ ನಮ್ಮಲ್ಲಿ ಈ ನಿಕ್ಷೇಪವನ್ನು ಇಡಲ್ಪಟ್ಟಿರುವುದರಿಂದ ಇಂತಹ ಮಹಾಶಕ್ತಿಯು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂಬುದು ಸ್ಪಷ್ಟವಾಗಿದೆ. 8 ಎಲ್ಲಾದರಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಸಂಕಟಪಡುವವರಲ್ಲ. ನಾವು ಗೊಂದಲಕ್ಕೀಡಾಗಿದ್ದರೂ ಹತಾಶರಾಗುವವರಲ್ಲ. 9 ಹಿಂಸೆಪಡುವವರಾಗಿದ್ದರೂ ಕೈಬಿಡಲ್ಪಟ್ಟವರಲ್ಲ. ಕೆಡವಲ್ಪಟ್ಟವರಾಗಿದ್ದರೂ ನಶಿಸಿಹೊಗುವವರಲ್ಲ. 10 ಯೇಸುವಿನ ಜೀವವು ನಮ್ಮ ದೇಹದಲ್ಲಿ ಉಂಟೆಂದು ಪ್ರಕಟಪಡಿಸುವುದಕ್ಕಾಗಿ ಯೇಸುವಿನ ಮರಣಾವಸ್ಥೆಯನ್ನು ನಾವು ಯಾವಾಗಲೂ ದೇಹದಲ್ಲಿ ಅನುಭವಿಸುವವರಾಗಿದ್ದೇವೆ. 11 ಯೇಸುವಿನ ಜೀವವು ನಮ್ಮ ಮರ್ತ್ಯ ಶರೀರದಲ್ಲಿ ಉಂಟೆಂದು ತೋರಿಬರುವುದಕ್ಕಾಗಿ ಬದುಕಿರುವ ನಾವು ಯೇಸುವಿನ ನಿಮಿತ್ತ ಯಾವಾಗಲೂ ಮರಣಕ್ಕೆ ಒಪ್ಪಿಸಲ್ಪಡುತ್ತಾ ಇದ್ದೇವೆ. 12 ಹೀಗೆ ನಮ್ಮಲ್ಲಿ ಮರಣವು ನಿಮ್ಮಲ್ಲಿ ಜೀವವು ವ್ಯಾಪಿಸುತ್ತಿದೆ. 13 “ನಾನು ನಂಬಿದೆನು. ಆದ್ದರಿಂದ ಮಾತನಾಡಿದೆನು.” ಎಂಬ ಶಾಸ್ತ್ರೋಕ್ತಿಯಲ್ಲಿ ಕಾಣುವಹಾಗೆ ನಂಬಿಕೆಯ ಅದೇ ಆತ್ಮನು ನಮ್ಮಲ್ಲಿರುವುದರಿಂದ ನಾವು ನಂಬಿದವರಾಗಿ ಮಾತನಾಡುತ್ತೇವೆ. 14 ಕರ್ತನಾದ ಯೇಸುವನ್ನು ಎಬ್ಬಿಸಿದಾತನು ನಮ್ಮನ್ನು ಸಹ ಯೇಸುವಿನೊಂದಿಗೆ ಎಬ್ಬಿಸಿ ನಿಮ್ಮ ಜೊತೆಯಲ್ಲಿ ತನ್ನ ಮುಂದೆ ನಿಲ್ಲಿಸುವನೆಂದು ತಿಳಿದವರಾಗಿದ್ದೇವೆ. 15 ಆ ಬಾಧೆಗಳೆಲ್ಲಾ ನಿಮ್ಮ ಹಿತಕ್ಕಾಗಿಯೇ ನಮಗೆ ಸಂಭವಿಸುತ್ತವೆ. ಅವುಗಳಲ್ಲಿ ಅಧಿಕವಾಗಿ ದೊರಕುವ ದೈವಕೃಪೆಯು ಬಹು ಜನರೊಳಗೆ ಕೃತಜ್ಞತೆಯನ್ನು ಹುಟ್ಟಿಸುವುದರಿಂದ ದೇವರ ಮಹಿಮೆಗೆ ಅಧಿಕವಾದ ಸ್ತುತಿ ಸ್ತೋತ್ರಗಳು ಉಂಟಾಗುವುದು. ಪರಲೋಕ ಭಾಗ್ಯವನ್ನು ಆಲೋಚಿಸುವಾಗ ಕ್ರಿಸ್ತನಲ್ಲಿರುವವರಿಗೆ ಧೈರ್ಯವಾಗುತ್ತದೆ ಎಂಬುದು 16 ಆದ್ದರಿಂದ ನಾವು ಧೈರ್ಯಗೆಡುವುದಿಲ್ಲ. ನಮ್ಮ ದೇಹವು ನಾಶವಾಗುತ್ತಾ ಇದ್ದರೂ ನಮ್ಮ ಅಂತರಂಗವು ದಿನೇ ದಿನೇ ಹೊಸದಾಗುತ್ತಾ ಬರುತ್ತದೆ. 17 ಹೇಗೆಂದರೆ ಕ್ಷಣಮಾತ್ರವಿರುವ ನಮ್ಮ ಈ ಸ್ವಲ್ಪ ಸಂಕಟವು ಅತ್ಯಂತಾಧಿಕವಾಗಿ ಪ್ರತಿಫಲವನ್ನು ಉಂಟುಮಾಡಿ ನಮಗೆ ನಿರಂತರವಾಗಿರುವ ಅತಿಶ್ರೇಷ್ಟ ತೇಜಸ್ಸನ್ನು ದೊರಕಿಸುತ್ತದೆ. 18 ನಾವು ಕಾಣುವಂಥದ್ದನ್ನು ಲಕ್ಷಿಸದೇ ಕಾಣದಿರುವಂಥದ್ದನ್ನು ಲಕ್ಷಿಸುವವರಾಗಿದ್ದೇವೆ. ಕಾಣುವಂಥದ್ದು ಸ್ವಲ್ಪ ಕಾಲ ಮಾತ್ರ ಇರುವುದು ಕಾಣದಿರುವಂಥದ್ದು ಸದಾಕಾಲವೂ ಇರುವುದು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.