Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಕೊರಿಂಥದವರಿಗೆ 3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಹೊಸ ಒಡಂಬಡಿಕೆಯ ಸೇವಕರು

1 ನಮ್ಮನ್ನು ನಾವೇ ಮತ್ತೆ ಹೊಗಳಿಕೊಳ್ಳುವುದಕ್ಕೆ ಪ್ರಾರಂಭಿಸುತ್ತೇವೋ? ಇಲ್ಲವೆ ಕೆಲವರಿಗೆ ಬೇಕಾಗಿರುವ ಪ್ರಕಾರ ನಿಮಗೆ ತೋರಿಸತಕ್ಕ ಯೋಗ್ಯತಾ ಪತ್ರಗಳು ನಮಗೆ ಅಗತ್ಯವೋ? ಅಥವಾ ಅಂಥ ಪತ್ರಗಳನ್ನು ನಿಮ್ಮಿಂದ ಪಡೆದುಕೊಳ್ಳಬೇಕೋ?

2 ಸ್ವತಃ “ನೀವೇ ನಮ್ಮ ಯೋಗ್ಯತಾ ಪತ್ರ” ಅದು ನಮ್ಮ ಹೃದಯಗಳಲ್ಲೇ ಬರೆದಿದೆ ಆ ಪತ್ರವನ್ನು ಎಲ್ಲರೂ ಬಲ್ಲರು. ಎಲ್ಲರೂ ಓದುತ್ತಾರೆ.

3 ನೀವು, ನಮ್ಮ ಸೇವೆಯ ಫಲವಾಗಿ, ಕ್ರಿಸ್ತನು ನಮ್ಮ ಕೈಯಿಂದ ಬರೆಸಿಕೊಟ್ಟ ಪತ್ರವಾಗಿದ್ದೀರೆಂಬದು ಪ್ರತ್ಯಕ್ಷಪಡಿಸಿದ್ದೀರಿ. ಅದು ಮಸಿಯಿಂದ ಬರೆದದ್ದಲ್ಲ. ಜೀವವುಳ್ಳ ದೇವರ ಆತ್ಮನಿಂದಲೇ ಬರೆದದ್ದು. ಕಲ್ಲಿನ ಹಲಿಗೆಯ ಮೇಲಲ್ಲಾ, ಮನುಷ್ಯನ ಹೃದಯಗಳೆಂಬ ಹಲಿಗೆಗಳ ಮೇಲೆ ಬರೆದದ್ದು.

4 ನಮಗೆ ಇಂಥ ಭರವಸೆಯು ಕ್ರಿಸ್ತನ ಮೂಲಕವೇ ದೇವರಲ್ಲಿದೆ.

5 ನಮ್ಮಿಂದಲೇ ಏನಾದರೂ ಉಂಟಾಯಿತೆಂದು ತೀರ್ಮಾನಿಸಿಕೊಳ್ಳುವುದಕ್ಕೆ ನಮಗೆ ನಾವೇ ಯೋಗ್ಯರಲ್ಲ ನಮಗಿರುವ ಯೋಗ್ಯತೆಯೂ ದೇವರಿಂದಲೇ ಬಂದದ್ದು.

6 ಆತನು ಹೊಸ ಒಡಂಬಡಿಕೆಗೆ ಸೇವಕರಾಗಿರುವ ಸಾಮರ್ಥ್ಯವನ್ನು ನಮಗೆ ಅನುಗ್ರಹಿಸಿದ್ದಾನೆ. ಈ ಒಡಂಬಡಿಕೆಯು ಲಿಖಿತರೂಪವಾಗಿರದೆ ದೇವರಾತ್ಮ ಸಂಬಂಧವಾದದ್ದು ಆಗಿದೆ. ಲಿಖಿತ ರೂಪವಾದ ಒಡಂಬಡಿಕೆಯು ಮರಣವನ್ನುಂಟು ಮಾಡುತ್ತದೆ. ದೇವರಾತ್ಮ ಸಂಬಂಧವಾದದ್ದು ಜೀವವನ್ನುಂಟುಮಾಡುತ್ತದೆ.

7 ಕಲ್ಲಿನ ಮೇಲೆ ಕೊರೆಯಲಾದ ಮೃತ್ಯುಕಾರಕವಾದ ಈ ಶಾಸನ ಅಷ್ಟು ಮಹಿಮೆಯಿಂದ ಕೂಡಿದ್ದಾಗಿತ್ತು. ಆ ಮಹಿಮೆಯಿಂದ ಮೋಶೆಯ ಮುಖವನ್ನು ಆವರಿಸಿದ್ದ ಮಹಿಮೆಯೂ ಕುಂದಿಹೋಗುವಂಥದ್ದಾಗಿದ್ದರೂ ಆ ಮಹಿಮೆಯಿಂದಾಗಿ ಆತನ ಮುಖವನ್ನು ದಿಟ್ಟಿಸಿ ನೋಡಲು ಇಸ್ರಾಯೇಲರಿಗೆ ಆಗಲಿಲ್ಲ.

8 ಹೀಗಿದ್ದ ಮೇಲೆ ದೇವರಾತ್ಮಸಂಬಂಧವಾದ ಈ ಸೇವೆಯು ಇನ್ನೆಷ್ಟು ಮಹಿಮೆಯಿಂದ ಇರಬೇಕಲ್ಲವೇ?

9 ಅಪರಾಧ ನಿರ್ಣಯಕ್ಕೆ ಸಾಧನವಾಗಿರುವ ಸೇವೆಯು ಮಹಿಮೆಹೊಂದಿರಲಾಗಿ, ನೀತಿಗೆ ಸಾಧನವಾಗಿರುವ ಸೇವೆಯು ಇನ್ನೆಷ್ಟೋ ಅಧಿಕ ಮಹಿಮೆಯುಳ್ಳದ್ದಾಗಿ ಇರತ್ತದಲ್ಲವೋ?

10 ಅಧಿಕವಾದ ಮಹಿಮೆಯುಳ್ಳದ್ದು ಬಂದದ್ದರಿಂದ ಮೊದಲಿದ್ದ ಮಹಿಮೆಯು ಅದರ ಎದುರು ಮಹಿಮೆಯಿಲ್ಲದಂತಾಯಿತು.

11 ಅಳಿದು ಹೋಗುವಂಥದ್ದೇ, ಅಷ್ಟು ಪ್ರಭಾವವುಳ್ಳದ್ದಾಗಿದ್ದರೆ ಶಾಶ್ವತವಾಗಿ ಉಳಿಯುವಂಥದ್ದು ಮತ್ತೆಷ್ಟು ಹೆಚ್ಚಾದ ಪ್ರಭಾವವುಳ್ಳದ್ದಾಗಿರಬೇಕಲ್ಲವೋ?

12 ನಮಗೆ ಇಂಥ ಭರವಸೆ ಇರುವುದರಿಂದಲೇ ನಾವು ಇಷ್ಟು ಧೈರ್ಯದಿಂದ ಇದ್ದೇವೆ.

13 ಕುಂದಿಹೋಗುವಂಥ ಮಹಿಮೆಯು ಕುಂದಿಹೋಗುವುದನ್ನು ಇಸ್ರಾಯೇಲರು ಕಾಣದಂತೆ ಮೋಶೆಯು ತನ್ನ ಮುಖಕ್ಕೆ ಮುಸುಕು ಹಾಕಿಕೊಳ್ಳುತ್ತಿದ್ದನು. ನಾವು ಮೋಶೆಯಂತೆ ಮಾಡುವುದಿಲ್ಲ.

14 ಆದರೆ ಆ ಜನರ ಬುದ್ಧಿಗೆ ಮಂಕು ಕವಿದಿತ್ತು. ಈ ದಿನದವರೆಗೂ ಹಳೇ ಒಡಂಬಡಿಕೆಯು ಓದುವಾಗೆಲ್ಲಾ ಅದೇ ಮಂಕಿನ ಮುಸುಕು ಕವಿದಿದೆ. ಅದನ್ನು ಕ್ರಿಸ್ತ ಯೇಸುವಿನ ಮುಖಾಂತರವೇ ತೆರೆಯಲು ಸಾಧ್ಯ.

15 ಈ ದಿನದವರೆಗೂ ಮೋಶೆಯ ಧರ್ಮಶಾಸ್ತ್ರವು ಓದುವಾಗೆಲ್ಲಾ ಮುಸುಕು ಅವರ ಹೃದಯವನ್ನು ಮುಚ್ಚಿರುತ್ತದೆ.

16 ಅವರ ಹೃದಯವು ಕರ್ತನ ಕಡೆಗೆ ತಿರುಗಿಕೊಂಡಾಗಲೇ ಆ ಮುಸುಕು ತೆಗೆಯಲ್ಪಡುವುದು.

17 ಆ ಕರ್ತನು ದೇವರಾತ್ಮನೇ. ಕರ್ತನ ಆತ್ಮನು ಇರುವಲ್ಲಿ ಸ್ವಾತಂತ್ರ್ಯವಿರುತ್ತದೆ.

18 ನಾವೆಲ್ಲರೂ ಮುಸುಕು ತೆಗೆದಿರುವ ಮುಖದಿಂದ ಕರ್ತನ ಪ್ರಭಾವವನ್ನು ದರ್ಪಣದಲ್ಲಿ ಕಾಣಿಸುತ್ತದೋ ಎಂಬಂತೆ ದೃಷ್ಟಿಸುವವರಾಗಿದ್ದು ನಾವೆಲ್ಲರೂ ಕರ್ತನ ದಾನವಾಗಿರುವ ಆತ್ಮದ ಮಹಿಮೆಯಿಂದ ಅಧಿಕ ಮಹಿಮೆಗೆ ಹೋಗುತ್ತಾ, ಆ ಮಹಿಮೆಯ ಸಾರೂಪ್ಯವುಳ್ಳವರೇ ಆಗುತ್ತೇವೆ. ಇದು ಆತ್ಮನಾಗಿರುವ ಕರ್ತನ ಕಾರ್ಯವೇ ಸರಿ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು