Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಕೊರಿಂಥದವರಿಗೆ 10 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ತನಗೆ ಅಧಿಕಾರವಿಲ್ಲವೆಂದು ವಿರೋಧಿಗಳು ಹೇಳಿದ ಮಾತಿಗೆ ಪೌಲನು ಕೊಡುವ ಉತ್ತರ

1 ಪೌಲನು ನಮ್ಮೆದುರಿನಲ್ಲಿರುವಾಗ ದೀನನಾಗಿ ನಡೆದುಕೊಳ್ಳುವನೂ ದೂರದಲ್ಲಿರುವಾಗ ನಮ್ಮನ್ನು ಕುರಿತು ದಿಟ್ಟತನ ತೋರಿಸುವವನೂ ಆಗಿದ್ದಾನೆ ಎಂದು ಹೇಳಲ್ಪಡುವ ಆ ಪೌಲನೆಂಬ ನಾನು ಕ್ರಿಸ್ತನ ಶಾಂತ ಮನಸ್ಸನ್ನೂ ಸಾತ್ವಿಕತ್ವವನ್ನೂ ನೆನಪಿಗೆ ತಂದುಕೊಂಡು ನಿಮಗೆ ಖಂಡಿತವಾಗಿ ಹೇಳುವುದೇನಂದರೆ,

2 ಯಾರು ನಮ್ಮನ್ನು ಲೋಕ ರೀತಿಯಾಗಿ ಜೀವಿಸುವವರೆಂದು ಎಣಿಸುತ್ತಾರೋ ಅವರೊಂದಿಗೆ ದಿಟ್ಟತನದಿಂದಲೇ ಇರಬೇಕೆಂದು ಅಂದುಕೊಂಡಿದೇನೆ. ನಾವು ನಿಮ್ಮೊಂದಿಗಿರುವಾಗ ಅಂಥ ದಿಟ್ಟತನವನ್ನು ತೋರಿಸುವುದಕ್ಕೆ ಅವಕಾಶವುಂಟಾಗಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

3 ನಾವು ಲೋಕದಲ್ಲಿದ್ದರೂ ಲೋಕಾನುಸಾರವಾಗಿ ಯುದ್ಧಮಾಡುವವರಲ್ಲ.

4 ನಾವು ಉಪಯೋಗಿಸುವ ಆಯುಧಗಳು ಲೋಕದ ಆಯುಧಗಳಲ್ಲ. ಅವು ದೇವರ ಎಣಿಕೆಯಲ್ಲಿ ಬಲವಾಗಿದ್ದು ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ.

5 ನಾವು ದೇವಜ್ಞಾನಕ್ಕೆ ವಿರೋಧವಾಗಿ ಏಳುವ ಅಹಂಭಾವಗಳನ್ನು ಧ್ವಂಸಮಾಡಿ, ಪ್ರತಿಯೊಂದು ಆಲೋಚನೆಗಳನ್ನೂ ಕ್ರಿಸ್ತನಿಗೆ ವಿಧೇಯರಾಗುವಂತೆ ಸೆರೆಹಿಡಿದು,

6 ನಿಮ್ಮ ವಿಧೇಯತ್ವವು ಪರಿಪೂರ್ಣವಾದ ಮೇಲೆ ಎಲ್ಲಾ ಅವಿಧೇಯತ್ವಕ್ಕೆ ಪ್ರತಿಕಾರವನ್ನು ನೀಡುವುದಕ್ಕೆ ಸಿದ್ಧರಾಗಿದ್ದೇವೆ.

7 ನೀವು ಬಾಹ್ಯವಾದುದ್ದುನ್ನು ಮಾತ್ರ ನೋಡುತ್ತೀರಿ. ಯಾವನಾದರೂ ತನ್ನನ್ನು ಕ್ರಿಸ್ತನವನೆಂದು ಒಪ್ಪಿಕೊಂಡರೆ ಅವನು ಆಲೋಚನೆಮಾಡಿಕೊಂಡು ತಾನು ಹೇಗೆ ಕ್ರಿಸ್ತನವನೋ ಹಾಗೆ ನಾವೂ ಕ್ರಿಸ್ತನವರೆಂದು ತಿಳಿದುಕೊಳ್ಳಲಿ.

8 ನಮಗಿರುವ ಅಧಿಕಾರವನ್ನು ಕುರಿತು ನಾವು ಒಂದು ವೇಳೆ ಹೆಚ್ಚಾಗಿ ಹೊಗಳಿಕೊಂಡರೂ ಹಾಗೆ ಹೊಗಳಿಕೊಳ್ಳುವುದರಲ್ಲಿ ನಾಚಿಕೆಪಡಬೇಕಾಗಿರುವುದಿಲ್ಲ. ಆದರೆ ನಿಮ್ಮನ್ನು ಕೆಡವಿಹಾಕುವುದಕ್ಕಲ್ಲ ಕಟ್ಟುವುದಕ್ಕಾಗಿಯೇ ಕರ್ತನು ಈ ಅಧಿಕಾರವನ್ನು ನಮಗೆ ಕೊಟ್ಟಿರುವವನು.

9 ನಾನು ಪತ್ರಿಕೆಗಳಿಂದ ನಿಮ್ಮನ್ನು ಹೆದರಿಸುತ್ತಿದ್ದೆನೆಂದು ತಿಳಿದುಕೊಳ್ಳಬೇಡಿರಿ.

10 “ಅವನಿಂದ ಬಂದ ಪತ್ರಿಕೆಗಳು ಕಠೋರವಾದವುಗಳೂ, ಪ್ರಬಲವಾದವುಗಳೂ ಆಗಿವೆ. ಆದರೆ ದೈಹಿಕವಾಗಿ ಅವನು ದುರ್ಬಲನು ಅವನ ಮಾತುಗಳು ನಿಂದಾತ್ಮಕವಾದವುಗಳೆಂದು ಕೆಲವರು ಹೇಳುತ್ತಾರಲ್ಲಾ.”

11 ಅಂಥವರು, ನಾವು ದೂರದಲ್ಲಿರುವಾಗ ಪತ್ರಿಕೆಗಳ ಮೂಲಕ ಮಾತಿನಲ್ಲಿ ಎಂಥವರಾಗಿದ್ದೇವೋ ಹತ್ತಿರದಲ್ಲಿರುವಾಗ ಕಾರ್ಯದಲ್ಲಿಯೂ ಅಂಥವರಾಗಿಯೇ ಇದ್ದೇವೆಂದು ತಿಳಿದುಕೊಳ್ಳಲಿ.


ಮತ್ತೊಬ್ಬರು ಸುವಾರ್ತೆ ಸಾರಿದ ಕಡೆಯಲ್ಲಿ ತಾನು ಸಾರುವವನಲ್ಲವೆಂದು ಪೌಲನು ಹೇಳುವುದು

12 ತಮ್ಮನ್ನು ತಾವೇ ಹೊಗಳಿಕೊಳ್ಳುವ ಕೆಲವರಲ್ಲಿ ನಮ್ಮನ್ನು ಸೇರಿಸಿಕೊಳ್ಳುವುದಕ್ಕಾಗಲಿ ಅವರೊಂದಿಗೆ ಹೋಲಿಸುವುದಕ್ಕಾಗಲಿ ನಾನು ಇಷ್ಟಪಡುವುದಿಲ್ಲ. ಅವರಂತೂ ತಮ್ಮತಮ್ಮೊಳಗೆ ತಮ್ಮನ್ನು ಅಳತೆಮಾಡಿಕೊಂಡು ತಮ್ಮನ್ನು ತಮಗೇ ಹೋಲಿಸಿಕೊಂಡು ವಿವೇಕವಿಲ್ಲದವರಾಗಿದ್ದಾರೆ.

13 ನಾವಾದರೋ ನಮ್ಮ ಯೋಗ್ಯತೆಗೆ ಮೀರಿ ಹೊಗಳಿಕೊಳ್ಳದೇ ದೇವರು ನಮಗೆ ನೇಮಿಸಿರುವಂಥ ಮೇರೆಯೊಳಗಿದ್ದು ಹೊಗಳಿಕೊಳ್ಳುತ್ತೇವೆ. ಈ ಮೇರೆಯೊಳಗಿದ್ದು ನಿಮ್ಮ ತನಕ ಬಂದಿದ್ದೇವೆ.

14 ನಾವು ಕ್ರಿಸ್ತನ ಸುವಾರ್ತೆಯನ್ನು ಸಾರುತ್ತಾ ಇತರರಿಗಿಂತ ಮೊದಲು ನಿಮ್ಮ ಬಳಿಗೆ ಬಂದದ್ದರಿಂದ ನಿಮ್ಮ ಮೇಲೆ ಅಧಿಕಾರವಿಲ್ಲದವರಂತೆ ಮೇರೆಯನ್ನು ಅತಿಕ್ರಮಿಸಿಹೋಗುತ್ತಿಲ್ಲ.

15 ನಾವು ಮಿತಿಗಳನ್ನು ಮೀರಿ ಮತ್ತೊಬ್ಬರ ಪ್ರಯಾಸದ ಫಲಗಳನ್ನು ತೆಗೆದುಕೊಂಡು, ಇವು ನಮ್ಮವು ಎಂದು ಹಿಗ್ಗುವವರಲ್ಲ. ಆದರೆ ನಿಮ್ಮ ನಂಬಿಕೆಯು ಹೆಚ್ಚಿದಾಗೆಲ್ಲಾ ನಿಮ್ಮ ಮೂಲಕ ನಮ್ಮ ಮಿತಿಯು ಇನ್ನೂ ವಿಸ್ತರಿಸಿತು.

16 ನಿಮಗೆ ಆಚೆಯಿರುವ ಸೀಮೆಗಳಲ್ಲಿಯೂ ಸುವಾರ್ತೆಯನ್ನು ಸಾರುವೆವೆಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದೆವಷ್ಟೇ. ಮತ್ತೊಬ್ಬರ ಜಾಗದಲ್ಲಿ ಸಿದ್ಧವಾಗಿ ನಮಗೆ ಸಿಕ್ಕಿದ ಫಲವನ್ನು ಕುರಿತು ನಾವು ಹೆಚ್ಚಳಪಡುವುದಿಲ್ಲ.

17 “ಹೆಚ್ಚಳಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ.”

18 ತನ್ನನ್ನು ತಾನೇ ಹೊಗಳಿಕೊಳ್ಳುವವನು ಯೋಗ್ಯನಲ್ಲ. ಕರ್ತನು ಯಾರನ್ನು ಹೊಗಳುತ್ತಾನೋ ಅವನೇ ಯೋಗ್ಯನು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು