2 ಅರಸುಗಳು 3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ಇಸ್ರಾಯೇಲ್ಯರಿಗೂ ಮೋವಾಬ್ಯರಿಗೂ ನಡೆದ ಯುದ್ಧ 1 ಯೆಹೂದ್ಯರ ಅರಸನಾದ ಯೆಹೋಷಾಫಾಟನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಅಹಾಬನ ಮಗನಾದ ಯೋರಾಮನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಹನ್ನೆರಡು ವರ್ಷ ಆಳಿದನು. 2 ಇವನು ತನ್ನ ತಂದೆತಾಯಿಗಳಷ್ಟು ದುಷ್ಟನಾಗಿರಲಿಲ್ಲ. ಆದರೂ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದನು. ತನ್ನ ತಂದೆ ಬಾಳನಿಗೋಸ್ಕರ ನಿಲ್ಲಿಸಿದ ಕಲ್ಲಿನ ಸ್ತಂಭ, ಸ್ಮಾರಕಗಳನ್ನು ತೆಗೆದುಹಾಕಿದನು. 3 ಆದರೂ ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡಲೇ ಇಲ್ಲ. 4 ಅನೇಕ ಕುರಿಹಿಂಡುಗಳನ್ನು ಹೊಂದಿದ್ದ ಮೋವಾಬ್ಯರ ಅರಸನಾದ ಮೇಷನೆಂಬುವನು ಇಸ್ರಾಯೇಲರ ಅರಸನಿಗೆ ಒಂದು ಲಕ್ಷ ಕುರಿಗಳ ಮತ್ತು ಒಂದು ಲಕ್ಷ ಟಗರುಗಳ ಉಣ್ಣೆಯನ್ನು ಕಪ್ಪವಾಗಿ ಕೊಡುತ್ತಿದ್ದನು. 5 ಆದರೆ ಅಹಾಬನು ಮರಣಹೊಂದಿದ ನಂತರ ಮೋವಾಬ್ಯರ ಅರಸನು ಇಸ್ರಾಯೇಲರ ಅರಸನಿಗೆ ವಿರುದ್ಧವಾಗಿ ತಿರುಗಿಬಿದ್ದನು. 6 ಆದುದರಿಂದ ಅರಸನಾದ ಯೋರಾಮನು ಕೂಡಲೆ ಇಸ್ರಾಯೇಲರನ್ನು ಸೇರಿಸಿಕೊಂಡು ಸಮಾರ್ಯದಿಂದ ಹೊರಟು ಬಂದನು. 7 ಯೆಹೂದ್ಯರ ಅರಸನಾದ ಯೆಹೋಷಾಫಾಟನಿಗೆ ದೂತರ ಮುಖಾಂತರವಾಗಿ, “ಮೋವಾಬ್ಯರ ಅರಸನು ನನ್ನ ವಿರುದ್ಧವಾಗಿ ತಿರುಗಿಬಿದ್ದಿದ್ದಾನೆ. ಮೋವಾಬ್ಯರೊಡನೆ ಯುದ್ಧಮಾಡುವುದಕ್ಕೆ ನೀನೂ ನನ್ನ ಜೊತೆಯಲ್ಲಿ ಬರುತ್ತೀಯೋ?” ಎಂದು ಹೇಳಿ ಕಳುಹಿಸಿದನು. ಅದಕ್ಕೆ ಯೆಹೋಷಾಫಾಟನು, “ಬರುತ್ತೇನೆ. ನಾನೂ ನೀನೂ, ನನ್ನ ಜನರೂ, ನಿನ್ನ ಜನರೂ, ನನ್ನ ಕುದುರೆಗಳೂ, ನಿನ್ನ ಕುದುರೆಗಳೂ ಒಂದೇ ಅಲ್ಲವೋ” ಎಂದು ಉತ್ತರಕೊಟ್ಟನು. 8 ಮತ್ತೆ ಯೆಹೋಷಾಫಾಟನು, “ಯಾವ ಮಾರ್ಗವಾಗಿ ಹೋಗಬೇಕು?” ಎಂದು ವಿಚಾರಿಸಿದಾಗ ಯೋರಾಮನು, “ಎದೋಮ್ಯರ ಅರಣ್ಯ ಮಾರ್ಗವಾಗಿ” ಎಂದನು. 9 ಆಗ ಇಸ್ರಾಯೇಲ್, ಯೆಹೂದ್ಯ, ಎದೋಮ್ ರಾಜ್ಯಗಳ ಅರಸರು ಹೊರಟು ಸುತ್ತು ಬಳಸು ದಾರಿಯಿಂದ ಏಳು ದಿನಗಳವರೆಗೆ ಪ್ರಯಾಣ ಮಾಡಿದರು. ಮಾರ್ಗದಲ್ಲಿ ಅವರ ಸೈನಿಕರಿಗೂ, ಅವರು ತಂದ ಪಶುಗಳಿಗೂ ನೀರು ಸಿಕ್ಕದೆ ಹೋಯಿತು. 10 ಇಸ್ರಾಯೇಲರ ಅರಸರು, “ಅಯ್ಯೋ, ಯೆಹೋವನು ಮೂರು ಮಂದಿ ಅರಸರಾದ ನಮ್ಮನ್ನು ಮೋವಾಬ್ಯರ ಕೈಗೆ ಒಪ್ಪಿಸುವುದಕ್ಕೋಸ್ಕರ ಇಲ್ಲಿಗೆ ಬರಮಾಡಿದ್ದಾನೆ” ಎಂದು ಗೋಳಾಡಿದರು. 11 ಆದರೆ ಯೆಹೋಷಾಫಾಟನು, “ಯೆಹೋವನ ಸನ್ನಿಧಿಯಲ್ಲಿ ನಮಗೋಸ್ಕರ ವಿಚಾರಿಸಬಲ್ಲವನಾದ ಒಬ್ಬ ಪ್ರವಾದಿಯು ಇಲ್ಲಿ ಇಲ್ಲವೇ?” ಎಂದು ಕೇಳಿದನು. ಆಗ ಇಸ್ರಾಯೇಲರ ಅರಸನ ಸೇವಕರಲ್ಲೊಬ್ಬನು ಅವನಿಗೆ, “ಶಾಫಾಟನ ಮಗನು, ಎಲೀಯನ ಕೈಗೆ ನೀರು ಕೊಡುತ್ತಿದ್ದವನೂ ಆದ ಎಲೀಷನೆಂಬ ಪ್ರವಾದಿಯು ಇಲ್ಲಿರುತ್ತಾನೆ” ಎಂದು ಉತ್ತರಕೊಟ್ಟನು. 12 ಯೆಹೋಷಾಫಾಟನು, “ಅವನು ಹೇಗೂ ಯೆಹೋವನ ಉತ್ತರವನ್ನು ತಿಳಿಸುವನು” ಅಂದನು. ಆಗ ಇಸ್ರಾಯೇಲ್, ಎದೋಮ್ ರಾಜ್ಯಗಳ ಅರಸರು ಯೆಹೋಷಾಫಾಟನೊಡನೆ ಎಲೀಷನ ಬಳಿಗೆ ಹೋದರು. 13 ಎಲೀಷನು ಇಸ್ರಾಯೇಲರ ಅರಸನಿಗೆ, “ನನಗೂ ನಿನಗೂ ಏನು ಸಂಬಂಧ? ನಿನ್ನ ತಂದೆತಾಯಿಗಳ ಪ್ರವಾದಿಗಳ ಬಳಿಗೆ ಹೋಗು” ಎಂದು ಹೇಳಿದನು. ಅದಕ್ಕೆ ಇಸ್ರಾಯೇಲರ ಅರಸನು, “ಹಾಗೆ ಹೇಳಬೇಡ, ಯೆಹೋವನು ಈ ಮೂರು ಮಂದಿ ಅರಸರಾದ ನಮ್ಮನ್ನು ಮೋವಾಬ್ಯರ ಕೈಗೆ ಒಪ್ಪಿಸುವುದಕ್ಕೋಸ್ಕರ ಇಲ್ಲಿಗೆ ಬರಮಾಡಿದನಲ್ಲವೇ?” ಎಂದನು. 14 ಆಗ ಎಲೀಷನು, “ನಾನು ಸೇವೆಮಾಡುತ್ತಿರುವ ಸೇನಾಧೀಶ್ವರನಾದ ಯೆಹೋವನಾಣೆ, ಯೆಹೂದ್ಯರ ಅರಸನಾದ ಯೆಹೋಷಾಫಾಟನು ನಿನ್ನ ಜೊತೆಯಲ್ಲಿರದಿದ್ದರೆ ನಾನು ನಿನ್ನನ್ನು ನೋಡುತ್ತಿರಲಿಲ್ಲ. ನಿನ್ನನ್ನು ಲಕ್ಷಿಸುತ್ತಲೂ ಇರಲಿಲ್ಲ. 15 ಈಗ, ಒಬ್ಬ ವಾದ್ಯಗಾರನನ್ನು ನನ್ನ ಹತ್ತಿರ ಕರೆದುಕೊಂಡು ಬನ್ನಿರಿ” ಎಂದು ಹೇಳಿದನು. ವಾದ್ಯಗಳ ಸ್ವರವನ್ನು ಕೇಳುವಾಗಲೆಲ್ಲಾ ಎಲೀಷನಲ್ಲಿ ಯೆಹೋವನ ಬಲವು ಬರುತ್ತಿತ್ತು. 16 ಅನಂತರ ಎಲೀಷನು ಇಸ್ರಾಯೇಲರ ಅರಸನಿಗೆ, ಯೆಹೋವನು ಹೀಗೆ ಹೇಳುತ್ತಾನೆ, “ಈ ಹಳ್ಳದಲ್ಲಿ ತುಂಬಾ ಗುಂಡಿಗಳನ್ನು ಮಾಡಿರಿ. 17 ‘ನೀವು ಗಾಳಿ, ಮಳೆಗಳನ್ನು ಕಾಣದಿದ್ದರೂ, ಅದು ನೀರಿನಿಂದ ತುಂಬುವುದು. ನೀವೂ, ನಿಮ್ಮ ಕುರಿದನಗಳೂ, ನೀರನ್ನು ಕುಡಿಯಬಹುದು’ ಎಂಬುದಾಗಿ ಯೆಹೋವನು ಅನ್ನುತ್ತಾನೆ. 18 “ಯೆಹೋವನ ದೃಷ್ಟಿಯಲ್ಲಿ ಈ ಕಾರ್ಯವೂ ಸುಲಭವಾಗಿರುವುದು. ಅದೇ ರೀತಿಯಾಗಿ ಯೆಹೋವನು ಮೋವಾಬ್ಯರನ್ನೂ ನಿಮ್ಮ ಕೈಗೆ ಒಪ್ಪಿಸುವನು. 19 ನೀವು ಅವರ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನೂ, ವಿಶೇಷವಾದ ಎಲ್ಲಾ ಊರುಗಳನ್ನೂ ಸ್ವಾಧೀನಮಾಡಿಕೊಂಡು, ಎಲ್ಲಾ ಹಣ್ಣಿನ ಮರಗಳನ್ನೂ ಕಡಿದುಹಾಕಿ, ಒರತೆಗಳನ್ನು ಮುಚ್ಚಿಬಿಟ್ಟು, ಹೊಲಗಳಲ್ಲಿ ಕಲ್ಲುಗಳನ್ನು ತುಂಬಿಸಿ ಹಾಳುಮಾಡುವಿರಿ” ಎಂದು ನುಡಿದನು. 20 ಮುಂಜಾನೆ ವೇಳೆಯಲ್ಲಿ ನೈವೇದ್ಯವನ್ನು ಸಮರ್ಪಿಸುವ ಹೊತ್ತಿನಲ್ಲಿ ಪಕ್ಕನೆ ಎದೋಮಿನ ಕಡೆಯಿಂದ ನೀರು ಬಂದು ದೇಶದಲ್ಲೆಲ್ಲಾ ತುಂಬಿಕೊಂಡಿತು. 21 ಅರಸರು ತಮಗೆ ವಿರುದ್ಧವಾಗಿ ಯುದ್ಧಕ್ಕೆ ಬಂದಿದ್ದಾರೆಂಬುವುದನ್ನು ಮೋವಾಬ್ಯರು ಕೇಳಿ ಆಯುಧಗಳನ್ನು ಧರಿಸಲು ಶಕ್ತರಾದ ಎಲ್ಲಾ ಯೌವನಸ್ಥರನ್ನೂ ಕೂಡಿಸಿಕೊಂಡು ತಮ್ಮ ದೇಶದ ಗಡಿಪ್ರದೇಶಕ್ಕೆ ಬಂದರು. 22 ಬೆಳಿಗ್ಗೆ ಎದ್ದು ನೋಡಲಾಗಿ, ಎದುರಿಗೆ ಇದ್ದ ನೀರು ಮೋವಾಬ್ಯರ ದೃಷ್ಟಿಗೆ ಬಿದ್ದಿತು. ಸೂರ್ಯಪ್ರಕಾಶದಿಂದ ಆ ನೀರು ರಕ್ತದಂತೆ ಕೆಂಪಾಗಿ ಕಾಣಿಸುತ್ತಿತ್ತು. 23 ಇವರು, “ಅದು ರಕ್ತ! ಅರಸರು ತಮ್ಮ ತಮ್ಮೊಳಗೆ ಜಗಳವಾಡಿ ಸಂಹಾರರಾಗಿರಬೇಕು. ಮೋವಾಬ್ಯರೇ ಏಳಿರಿ, ಸುಲಿಗೆಗೆ ಹೋಗೋಣ!” ಎಂದು ಕೂಗಿಕೊಂಡು ಇಸ್ರಾಯೇಲರ ಪಾಳೆಯಕ್ಕೆ ಹೋದರು. 24 ಆದರೆ ಇಸ್ರಾಯೇಲರು ಎದ್ದು ಮೋವಾಬ್ಯರನ್ನು ಸೋಲಿಸಿ ಓಡಿಸಿಬಿಟ್ಟರು. ಇದಲ್ಲದೆ ಅವರು ಮೋವಾಬ್ಯರನ್ನು ಸಂಹರಿಸಿದರು. 25 ಅವರು ದೇಶದೊಳಗೆ ನುಗ್ಗಿ ಎಲ್ಲಾ ಪಟ್ಟಣಗಳನ್ನು ನಾಶಮಾಡಿದ್ದರು. ಹೊಲಗಳನ್ನು ಕಲ್ಲುಗಳಿಂದ ತುಂಬಿಸಿದರು. ಒರತೆಗಳನ್ನು ಮುಚ್ಚಿ, ಹಣ್ಣಿನ ಮರಗಳನ್ನು ಕಡಿದುಹಾಕಿದರು. ಕೀರ್ಹರೆಷೆತ್ ಎಂಬ ಒಂದು ಮಾರ್ಗ ಉಳಿಯಿತು. ಕವಣೆಹೊಡೆಯುವವರು ಅದನ್ನು ಸುತ್ತಿಕೊಂಡು ಕಲ್ಲೆಸೆದರು. 26 ಮೋವಾಬ್ಯರ ಅರಸನು ತಾನು ಯುದ್ಧದಲ್ಲಿ ಗೆಲ್ಲಲಾರೆನೆಂದು ತಿಳಿದು, ಏಳು ನೂರು ಮಂದಿ ಭಟರೊಡನೆ, ಸೈನ್ಯದೊಳಗೆ ನುಗ್ಗಿ ಎದೋಮ್ಯರ ಅರಸನ ಕಡೆಗೆ ಹೋಗಲು ಪ್ರಯತ್ನಿಸಿದನು. ಆದರೆ ಆಗದೆಹೋಯಿತು. 27 ಆಗ ಅವನು ತನಗೆ ಬದಲಾಗಿ ಅರಸನಾಗತಕ್ಕ ತನ್ನ ಚೊಚ್ಚಲಮಗನನ್ನು ಹಿಡಿದು ವಧಿಸಿ ಗೋಡೆಯ ಮೇಲೆ ಸರ್ವಾಂಗಹೋಮ ಮಾಡಿದನು. ಇದರಿಂದ ಮೋವಾಬ್ಯರಿಗೆ ಇಸ್ರಾಯೇಲರ ಮೇಲೆ ಕೋಪೋದ್ರೇಕ ಉಂಟಾಗಲು ಅವರು ಅವನನ್ನು ಬಿಟ್ಟು ತಮ್ಮ ದೇಶಕ್ಕೆ ಹೊರಟುಹೋದರು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.