Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

2 ಅರಸುಗಳು 2 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಎಲೀಯನ ಸ್ವರ್ಗಾರೋಹಣ

1 ಯೆಹೋವನು ಎಲೀಯನನ್ನು ಸುಂಟರಗಾಳಿಯ ಮುಖಾಂತರವಾಗಿ ಪರಲೋಕಕ್ಕೆ ಸೇರಿಸಿಕೊಳ್ಳುವ ಸಮಯ ಬಂದಾಗ ಎಲೀಯನು ಎಲೀಷನೊಡನೆ ಗಿಲ್ಗಾಲನ್ನು ಬಿಟ್ಟು ಹೊರಟನು.

2 ಆಗ ಎಲೀಯನು ಎಲೀಷನಿಗೆ, “ನೀನು ಇಲ್ಲೇ ಇರು, ಯೆಹೋವನು ನನಗೆ ಬೇತೇಲಿಗೆ ಹೋಗಬೇಕೆಂದು” ಆಜ್ಞಾಪಿಸಿದ್ದಾನೆ ಎನ್ನಲು, ಎಲೀಷನು, “ಯೆಹೋವನಾಣೆ, ನಿನ್ನ ಜೀವದಾಣೆ, ನಾನು ನಿನ್ನನ್ನು ಬಿಟ್ಟು ಹೋಗುವುದಿಲ್ಲ” ಎಂದು ಉತ್ತರಕೊಟ್ಟನು. ತರುವಾಯ ಅವರಿಬ್ಬರೂ ಬೇತೇಲಿಗೆ ಹೋದರು.

3 ಬೇತೇಲಿನ ಪ್ರವಾದಿ ಮಂಡಳಿಯವರು ಎಲೀಷನನ್ನು ಎದುರುಗೊಂಡು ಅವನನ್ನು, “ಯೆಹೋವನು ಈ ಹೊತ್ತು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ತೆಗೆದುಕೊಳ್ಳುವನೆಂಬುದು ನಿನಗೆ ಗೊತ್ತುಂಟೋ?” ಎಂದು ಕೇಳಿದರು. ಅದಕ್ಕೆ ಅವನು, “ಗೊತ್ತಿದೆ ನೀವು ಸುಮ್ಮನಿರಿ” ಎಂದನು.

4 ಆಗ ಎಲೀಯನು ಎಲೀಷನಿಗೆ, “ನೀನು ಇಲ್ಲೇ ಇರು, ಯೆಹೋವನು ನನಗೆ ಯೆರಿಕೋವಿಗೆ ಹೋಗಬೇಕೆಂದು ಆಜ್ಞಾಪಿಸಿದ್ದಾನೆ” ಎಂದು ಹೇಳಿದನು. ಆದರೆ ಎಲೀಷನು, “ಯೆಹೋವನಾಣೆ, ನಿನ್ನ ಜೀವದಾಣೆ ನಾನು ನಿನ್ನನ್ನು ಬಿಟ್ಟು ಹೋಗುವುದಿಲ್ಲ” ಎಂದು ಉತ್ತರ ಕೊಟ್ಟನು. ಎಲೀಷನು ಅವನ ಜೊತೆಯಲ್ಲಿ ಯೆರಿಕೋವಿಗೆ ಹೋದನು.

5 ಯೆರಿಕೋವಿನಲ್ಲಿದ್ದ ಪ್ರವಾದಿ ಮಂಡಳಿಯವರು ಎಲೀಷನನ್ನು ಎದುರುಗೊಂಡು ಅವನಿಗೆ, “ಯೆಹೋವನು ಈ ಹೊತ್ತು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ಮೇಲಕ್ಕೆ ತೆಗೆದುಕೊಳ್ಳುವನೆಂಬುದು ನಿನಗೆ ಗೊತ್ತುಂಟೋ?” ಎಂದು ಕೇಳಿದರು. ಅದಕ್ಕೆ ಅವನು, ನನಗೆ “ಗೊತ್ತುಂಟು ನೀವು ಸುಮ್ಮನಿರಿ” ಎಂದು ಉತ್ತರ ಕೊಟ್ಟನು.

6 ಎಲೀಯನು ತಿರುಗಿ ಅವನಿಗೆ, “ನೀನು ಇಲ್ಲೇ ಇರು. ಯೆಹೋವನು ನನಗೆ ಯೊರ್ದನಿಗೆ ಹೋಗಬೇಕೆಂದು ಆಜ್ಞಾಪಿಸಿದ್ದಾನೆ” ಎಂದು ಹೇಳಿದನು. ಅದಕ್ಕೆ ಎಲೀಷನು, “ಯೆಹೋವನಾಣೆ, ನಿನ್ನ ಜೀವದಾಣೆ, ನಾನು ನಿನ್ನನ್ನು ಬಿಟ್ಟು ಹೋಗುವುದಿಲ್ಲ” ಎಂದು ಉತ್ತರ ಕೊಟ್ಟನು. ಅನಂತರ ಅವರಿಬ್ಬರೂ ಹೊರಟು ಯೊರ್ದನ್ ಹೊಳೆಯ ದಡಕ್ಕೆ ಬಂದರು.

7 ಪ್ರವಾದಿ ಮಂಡಳಿಯವರಲ್ಲಿ ಐವತ್ತು ಜನರು ಇವರ ಹಿಂದಿನಿಂದಲೇ ಬಂದು ಯೊರ್ದನಿಗೆ ಸ್ವಲ್ಪ ದೂರದಲ್ಲಿಯೇ ನಿಂತುಕೊಂಡರು.

8 ಅನಂತರ ಎಲೀಯನು ತನ್ನ ಕಂಬಳಿಯನ್ನು ಮಡಚಿ ಅದರಿಂದ ನೀರನ್ನು ಹೊಡೆಯಲು ನೀರು ಎರಡು ಭಾಗವಾಯಿತು. ಇಬ್ಬರೂ ಒಣನೆಲದ ಮೇಲೆ ನಡೆದುಕೊಂಡು ಯೊರ್ದನನ್ನು ದಾಟಿದರು.

9 ಅವರು ಆಚೆ ದಡಕ್ಕೆ ಸೇರಿದ ಮೇಲೆ ಎಲೀಯನು ಎಲೀಷನನ್ನು, “ನಿನ್ನನ್ನು ಬಿಟ್ಟು ಹೋಗುವ ಮೊದಲು, ನಾನು ನಿನಗೋಸ್ಕರ ಏನು ಮಾಡಬೇಕೆನ್ನುತ್ತೀ ಹೇಳು” ಎಂದು ಕೇಳಿದನು. ಅದಕ್ಕೆ ಎಲೀಷನು, “ನಿನಗಿರುವ ಆತ್ಮದಲ್ಲಿ ನನಗೆ ಎರಡರಷ್ಟು ಪಾಲನ್ನು ಅನುಗ್ರಹಿಸು” ಎಂದು ಬೇಡಿಕೊಂಡನು.

10 ಆಗ ಎಲೀಯನು ಅವನಿಗೆ, “ನೀನು ಕಷ್ಟಕರವಾದುದ್ದನ್ನು ಕೇಳಿಕೊಂಡಿರುವೆ. ಆದರೂ ನಾನು ನಿನ್ನ ಬಳಿಯಿಂದ ತೆಗೆಯಲ್ಪಡುವಾಗ ನೀನು ನನ್ನನ್ನು ನೋಡುವುದಾದರೆ ಅದು ನಿನಗೆ ದೊರಕುವುದು. ಇಲ್ಲವಾದರೆ ದೊರಕುವುದಿಲ್ಲ” ಎಂದನು.

11 ಅವರು ಮಾತನಾಡುತ್ತಾ ಮುಂದೆ ಹೋಗುತ್ತಿರುವಾಗ, ಪಕ್ಕನೆ ಅಗ್ನಿಮಯವಾದ ರಥಗಳು ನಡುವೆ ಬಂದು ಅವರಿಬ್ಬರನ್ನು ಬೇರ್ಪಡಿಸಿದವು. ಎಲೀಯನು ಸುಂಟರಗಾಳಿಯ ಮುಖಾಂತರವಾಗಿ ಪರಲೋಕಕ್ಕೆ ಏರಿ ಹೋದನು.

12 ಎಲೀಷನು ಅದನ್ನು ನೋಡುತ್ತಾ, “ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲರಿಗೆ ರಥಾರಥಾಶ್ವಗಳಾಗಿದ್ದವನೇ” ಎಂದು ಕೂಗಿಕೊಂಡನು. ಎಲೀಯನು ತನಗೆ ಕಾಣಿಸದೆ ಹೋದ ಮೇಲೆ ತನ್ನ ಬಟ್ಟೆಗಳನ್ನು ಹರಿದು ಎರಡು ತುಂಡುಮಾಡಿದನು.

13 ಅನಂತರ ಅವನು ಮೇಲಿನಿಂದ ಬಿದ್ದ ಎಲೀಯನ ಕಂಬಳಿಯನ್ನು ತೆಗೆದುಕೊಂಡು ಯೊರ್ದನ್ ನದಿ ತೀರಕ್ಕೆ ಬಂದು,

14 “ಎಲೀಯನ ದೇವರಾದ ಯೆಹೋವನೆಲ್ಲಿ?” ಎಂದು ಅಂದುಕೊಂಡು, ಆ ಕಂಬಳಿಯಿಂದ ನೀರನ್ನು ಹೊಡೆಯಲು ಅದು ಎರಡು ಭಾಗವಾಯಿತು. ಎಲೀಷನು ಹೊಳೆಯನ್ನು ದಾಟಿಹೋದನು.

15 ದೂರದಲ್ಲಿ ನಿಂತಿದ್ದ ಯೆರಿಕೋವಿನ ಪ್ರವಾದಿ ಮಂಡಳಿಯವರು ಇದನ್ನು ಕಂಡು, “ಎಲೀಯನಿಗಿದ್ದ ಆತ್ಮವು ಎಲೀಷನ ಮೇಲೆ ಬಂದಿದೆ” ಎಂದು ತಿಳಿದುಕೊಂಡು ಅವನನ್ನು ಎದುರುಗೊಂಡು, ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು.

16 ಅನಂತರ ಅವರು ಅವನಿಗೆ, “ನಿನ್ನ ಸೇವಕರಾದ ನಮ್ಮಲ್ಲಿ ಐವತ್ತು ಮಂದಿ ಬಲಿಷ್ಠಜನರಿದ್ದಾರೆ. ನಿನ್ನ ಯಜಮಾನನ್ನು ಹುಡುಕುವುದಕ್ಕೆ ಅವರಿಗೆ ಅಪ್ಪಣೆಯಾಗಲಿ ಯೆಹೋವನ ಆತ್ಮವು ಅವನನ್ನು ಎತ್ತಿಕೊಂಡು ಹೋಗಿ ಒಂದು ಬೆಟ್ಟದ ಮೇಲಾಗಲಿ ತಗ್ಗಿನಲ್ಲಾಗಲಿ ಇಟ್ಟಿರಬಹುದು” ಎಂದು ಹೇಳಿದರು. ಅವನು ಅವರಿಗೆ, “ನೀವು ಅವರನ್ನು ಕಳುಹಿಸಬೇಡಿರಿ” ಎಂದನು.

17 ಆದರೆ ಅವರು ಅವನನ್ನು ಒತ್ತಾಯಪಡಿಸಿದ್ದರಿಂದ ಅವನು ಬೇಸರಗೊಂಡು, “ಅವರನ್ನು ಕಳುಹಿಸಿರಿ” ಎಂದು ಅಪ್ಪಣೆ ಕೊಟ್ಟನು. ಅವರು ಐವತ್ತು ಮಂದಿಯನ್ನು ಕಳುಹಿಸಿದರು. ಇವರು ಮೂರು ದಿನ ಹುಡುಕಿದರೂ ಎಲೀಯನನ್ನು ಕಾಣಲಿಲ್ಲ.

18 ಇನ್ನೂ ಯೆರಿಕೋವಿನಲ್ಲೇ ಇದ್ದ ಎಲೀಷನ ಬಳಿಗೆ ಬಂದರು. ಎಲೀಷನು ಅವರಿಗೆ, ಹೋಗಬೇಡಿರಿ ಎಂದು ನಾನು ಹೇಳಲಿಲ್ಲವೋ? ಎಂದನು.


ಎಲೀಷನು ನೀರಿನಲ್ಲಿದ್ದ ದೋಷವನ್ನು ಪರಿಹರಿಸಿದ್ದು

19 ಯೆರಿಕೋವಿನ ಜನರು ಎಲೀಷನಿಗೆ, “ನಮ್ಮ ಒಡೆಯನಾದ ನಿನಗೆ ಗೊತ್ತಿರುವಂತೆ, ಈ ಊರು ಕಟ್ಟಲ್ಪಟ್ಟಿರುವ ಸ್ಥಳವು ಒಳ್ಳೆಯದಾಗಿದೆ. ಆದರೆ ನೀರು ಕೆಟ್ಟದ್ದಾಗಿರುವುದರಿಂದ ಬಂಜೆತನ ಉಂಟಾಗಿದೆ” ಎಂದು ಹೇಳಿದರು.

20 ಆಗ ಎಲೀಷನು ಅವರಿಗೆ, “ಒಂದು ಹೊಸ ಮಡಿಕೆಯಲ್ಲಿ ಉಪ್ಪು ಹಾಕಿ ಅದನ್ನು ತಂದು ಕೊಡಿರಿ” ಎಂದು ಹೇಳಿದಾಗ, ಅವರು ತಂದುಕೊಟ್ಟರು.

21 ಅವನು ಬುಗ್ಗೆಗೆ ಹೋಗಿ ಆ ನೀರಿನಲ್ಲಿ ಉಪ್ಪು ಹಾಕಿ, “ಇನ್ನು ಮುಂದೆ ಈ ನೀರಿನಿಂದ ಮರಣವೂ ಬಂಜೆತನವೂ ಉಂಟಾಗದಂತೆ ಇದರಲ್ಲಿದ್ದ ದೋಷವನ್ನೆಲ್ಲಾ ಪರಿಹರಿಸಿದ್ದೇನೆ ಎಂಬುದಾಗಿ ಯೆಹೋವನು ಅನ್ನುತ್ತಾನೆ” ಎಂದು ಹೇಳಿದನು.

22 ಕೂಡಲೆ ನೀರಿನಲ್ಲಿದ್ದ ದೋಷವೆಲ್ಲಾ ಪರಿಹಾರವಾಯಿತು, ಎಲೀಷನ ವಾಕ್ಯಬಲದಿಂದ ಅದು ಇಂದಿನವರೆಗೂ ಹಾಗೆಯೇ ಇರುತ್ತದೆ.


ಎಲೀಷನು ಪರಿಹಾಸ್ಯ ಮಾಡಿದ ಹುಡುಗರನ್ನು ಶಪಿಸಿದ್ದು

23 ಎಲೀಷನು ಅಲ್ಲಿಂದ ಬೇತೇಲಿಗೆ ಹೊರಟು ಅಲ್ಲಿನ ಗುಡ್ಡವನ್ನು ಹತ್ತುತ್ತಿರುವಾಗ, ಆ ಊರಿನ ಹುಡುಗರು ಹೊರಗೆ ಬಂದು, “ಬೋಳು ಮಂಡೆಯವನೇ ಏರಿ ಬಾ, ಬೋಳು ಮಂಡೆಯವನೇ ಏರಿ ಬಾ” ಎಂದು ಕೂಗಿ ಅವನನ್ನು ಪರಿಹಾಸ್ಯ ಮಾಡಿದರು.

24 ಅವನು ಅವರ ಕಡೆಗೆ ತಿರುಗಿಕೊಂಡು ಯೆಹೋವನ ಹೆಸರಿನಲ್ಲಿ ಅವರನ್ನು ಶಪಿಸಿದನು. ಕೂಡಲೆ ಕಾಡಿನಿಂದ ಎರಡು ಹೆಣ್ಣು ಕರಡಿಗಳು ಬಂದು ಆ ಹುಡುಗರಲ್ಲಿ ನಲ್ವತ್ತೆರಡು ಮಂದಿಯನ್ನು ಹರಿದುಬಿಟ್ಟವು.

25 ಎಲೀಷನು ಅಲ್ಲಿಂದ ಕರ್ಮೆಲ್ ಬೆಟ್ಟಕ್ಕೆ ಹೋಗಿ ಅನಂತರ ಸಮಾರ್ಯಕ್ಕೆ ಹಿಂದಿರುಗಿದನು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು