1 ಸಮುಯೇಲ 24 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ದಾವೀದನು ಸೌಲನಿಗೆ ಕೇಡುಮಾಡದೆ ಬಿಟ್ಟಿದ್ದು 1 ಸೌಲನು ಫಿಲಿಷ್ಟಿಯರನ್ನು ಓಡಿಸಿ ಹಿಂದಿರುಗಿದಾಗ ದಾವೀದನು ಏಂಗೆದಿಯ ಅರಣ್ಯದಲ್ಲಿ ಇದ್ದಾನೆಂದು ಅವನಿಗೆ ತಿಳಿದುಬಂದಿತು. 2 ಆಗ ಅವನು ಎಲ್ಲಾ ಇಸ್ರಾಯೇಲರಲ್ಲಿ ಶ್ರೇಷ್ಠರಾದ ಮೂರು ಸಾವಿರ ಮಂದಿ ಸೈನಿಕರನ್ನು ಆರಿಸಿಕೊಂಡು ಕಾಡುಗುರಿಬಂಡೆಗಳಲ್ಲಿದ್ದ ದಾವೀದನನ್ನೂ, ಅವನ ಜನರನ್ನೂ ಹುಡುಕುವುದಕ್ಕೋಸ್ಕರ ಹೊರಟನು. 3 ಅವನು ಮಾರ್ಗದಲ್ಲಿ ಕುರಿಹಟ್ಟಿಗಳ ಬಳಿಯಲ್ಲಿ ಒಂದು ಗವಿಯನ್ನು ಕಂಡು ಶೌಚಕ್ಕೋಸ್ಕರ ಅದರೊಳಗೆ ಪ್ರವೇಶಿಸಿದನು. ದಾವೀದನೂ ಅವನ ಜನರೂ ಅದೇ ಗವಿಯ ಹಿಂಭಾಗದಲ್ಲಿ ಅಡಗಿಕೊಂಡಿದ್ದರು. 4 ಜನರು ದಾವೀದನಿಗೆ “ನಿನ್ನ ಶತ್ರುವನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು, ಆಗ ನೀನು ಅವನನ್ನು ಮನಸ್ಸಿಗೆ ಬಂದಂತೆ ನಡೆಸಬಹುದು ಎಂದು ಯೆಹೋವನು ನಿನಗೆ ಹೇಳಿದ ಮಾತು ನೆರವೇರುವ ದಿನ ಇದೇ” ಅಂದಾಗ ಅವನೆದ್ದು ಮೆಲ್ಲನೆ ಹೋಗಿ ಸೌಲನ ನಿಲುವಂಗಿಯ ತುದಿಯನ್ನು ಕತ್ತರಿಸಿಕೊಂಡನು. 5 ಅನಂತರ ಸೌಲನ ನಿಲುವಂಗಿಯ ತುದಿಯನ್ನು ಕತ್ತರಿಸಿದ್ದಕ್ಕಾಗಿ ಅವನ ಮನಸ್ಸಾಕ್ಷಿಯು ಅವನನ್ನು ಚುಚ್ಚತೊಡಗಿತು. 6 ಅವನು ತನ್ನ ಜನರಿಗೆ, “ಅವನು ಯೆಹೋವನಿಂದ ಅಭಿಷೇಕಿಸಲ್ಪಟ್ಟವನೂ, ನನ್ನ ಒಡೆಯನೂ ಆಗಿದ್ದಾನೆ. ನಾನು ನಿಮ್ಮ ಮಾತು ಕೇಳಿ ಯೆಹೋವನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತದಂತೆ ಯೆಹೋವನೇ ನನಗೆ ಅಡ್ಡಿ ಮಾಡಲಿ” ಎಂದು ಹೇಳಿದನು 7 ಈ ಮಾತುಗಳಿಂದ ಅವನು ಸೌಲನಿಗೆ ವಿರೋಧವಾಗಿ ಏಳದಂತೆ ತನ್ನ ಜನರನ್ನು ತಡೆದನು. ಸೌಲನು ಗವಿಯಿಂದ ಹೊರಗೆ ಬಂದು ಸ್ವಲ್ಪ ಮುಂದೆ ಹೋದ ಮೇಲೆ 8 ದಾವೀದನೂ ಹೊರಗೆ ಬಂದು, “ಅರಸನೇ ನನ್ನ ಒಡೆಯನೇ” ಎಂದು ಅವನನ್ನು ಕೂಗಿದನು. ಸೌಲನು ಹಿಂದಿರುಗಿ ನೋಡಲು ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, 9 “ದಾವೀದನು ನಿನಗೆ ಕೇಡುಮಾಡಬೇಕೆಂದಿರುತ್ತಾನೆಂದು ಹೇಳುವವರ ಮಾತಿಗೆ ನೀನೇಕೆ ಕಿವಿಗೊಡುತ್ತೀ? 10 ಈ ಹೊತ್ತು ಯೆಹೋವನು ಗವಿಯಲ್ಲಿ ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಟ್ಟಿದ್ದಾನೆಂಬುದು ಈಗ ನಿನಗೆ ಗೊತ್ತಾಯಿತಲ್ಲವೋ? ನಿನ್ನನ್ನು ಕೊಂದುಬಿಡಬೇಕೆಂದು ಕೆಲವರು ನನಗೆ ಹೇಳಿದರು. ಆದರೆ ನಾನು ಅವರಿಗೆ, ‘ಯೆಹೋವನ ಅಭಿಷಿಕ್ತನಾದ ನನ್ನ ಒಡೆಯನ ಮೇಲೆ ಕೈಹಾಕುವುದಿಲ್ಲ’ ಎಂದು ಹೇಳಿ ನಿನ್ನನ್ನು ಉಳಿಸಿದೆನು. 11 ನನ್ನ ತಂದೆಯೇ, ಇಗೋ ನೋಡು, ನನ್ನ ಕೈಯಲ್ಲಿ ನಿನ್ನ ನಿಲುವಂಗಿಯ ತುಂಡು ಇದೆ. ನಾನು ನಿನ್ನನ್ನು ಕೊಲ್ಲದೆ, ನಿನ್ನ ನಿಲುವಂಗಿಯ ತುದಿಯನ್ನು ಕತ್ತರಿಸಿಕೊಂಡೆನಷ್ಟೇ ಇದರಿಂದ ನನ್ನಲ್ಲಿ ಯಾವ ದೋಷವೂ ಅಪರಾಧವೂ ಇರುವುದಿಲ್ಲ. ನಾನು ನಿನಗೆ ವಿರೋಧವಾಗಿ ದ್ರೋಹಮಾಡಲಿಲ್ಲ ಎಂದು ತಿಳಿದುಕೋ. ಆದರೂ ನೀನು ನನ್ನ ಪ್ರಾಣಕ್ಕೆ ಹೊಂಚು ಹಾಕುತ್ತಿರುವಿಯಲ್ಲಾ. 12 ಯೆಹೋವನೇ ನಮ್ಮಿಬ್ಬರ ಮಧ್ಯೆ ವ್ಯಾಜ್ಯವನ್ನು ತೀರಿಸಲಿ. ಆತನೇ ನನಗೋಸ್ಕರ ನಿನಗೆ ಮುಯ್ಯಿ ತೀರಿಸಲಿ. ನಾನಂತೂ ನಿನಗೆ ವಿರೋಧವಾಗಿ ಕೈಯೆತ್ತುವುದಿಲ್ಲ. 13 ‘ಕೆಟ್ಟವರಿಂದಲೇ ಕೆಡುಕು’ ಎಂಬುದಾಗಿ ಹಿರಿಯರ ಗಾದೆಯುಂಟಷ್ಟೆ. ನಾನು ನಿನಗೆ ವಿರೋಧವಾಗಿ ಕೈಯೆತ್ತುವುದಿಲ್ಲ. 14 ಇಸ್ರಾಯೇಲರ ಅರಸನೇ ಯಾರನ್ನು ಹಿಂಬಾಲಿಸಿ ಹೊರಟಿರುವೇ? ಯಾರನ್ನು ಹಿಡಿಯಬೇಕೆಂದಿರುತ್ತೀ? ಸತ್ತ ನಾಯಿಯನ್ನೋ? ಒಂದು ಬಡ ನೊಣವನ್ನೋ?. 15 ಯೆಹೋವನು ನ್ಯಾಯಾಧಿಪತಿಯಾಗಿ ನಮ್ಮಿಬ್ಬರ ವ್ಯಾಜ್ಯವನ್ನು ತೀರಿಸಲಿ. ಆತನೇ ನೋಡಿ ನನಗೋಸ್ಕರ ವಾದಿಸಿ ನನ್ನನ್ನು ನಿನ್ನ ಕೈಯಿಂದ ತಪ್ಪಿಸಲಿ” ಎಂದು ಹೇಳಿದನು. 16 ದಾವೀದನ ಮಾತುಗಳು ಮುಗಿದ ನಂತರ ಸೌಲನು, “ದಾವೀದನೇ, ನನ್ನ ಮಗನೇ, ಇದು ನಿನ್ನ ಸ್ವರವೋ?” ಅಂದು ಗಟ್ಟಿಯಾಗಿ ಅತ್ತನು. 17 ಇದಲ್ಲದೆ ಅವನು ದಾವೀದನಿಗೆ, “ನೀನು ನನಗಿಂತ ನೀತಿವಂತನೂ. ನಾನು ನಿನಗೆ ಕೇಡುಮಾಡಿದರೂ ನೀನು ನನಗೆ ಒಳ್ಳೆಯದನ್ನೇ ಮಾಡಿದಿ. 18 ಯೆಹೋವನು ನನ್ನನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟರೂ ನೀನು ನನ್ನನ್ನು ಕೊಲ್ಲಲಿಲ್ಲ. ಇದರಿಂದ ನೀನು ನನಗೆ ಹಿತವನ್ನೇ ಮಾಡುವಂಥವನೆಂಬುದು ಈ ಹೊತ್ತು ಪ್ರಕಟವಾಯಿತು. 19 ಯಾವನಾದರೂ ತನ್ನ ಕೈಗೆ ಸಿಕ್ಕಿದ ವೈರಿಯನ್ನು ಸುಕ್ಷೇಮದಿಂದ ಕಳುಹಿಸಿಬಿಡುವನೋ? ನೀನು ಈ ಹೊತ್ತು ನನಗೆ ಉಪಕಾರಮಾಡಿದ್ದಕ್ಕಾಗಿ ಯೆಹೋವನು ನಿನಗೆ ಉಪಕಾರ ಮಾಡಲಿ. 20 ಕೇಳು, ನೀನು ಹೇಗೂ ಅರಸನಾಗುವಿ ಎಂದೂ ಇಸ್ರಾಯೇಲ್ ರಾಜ್ಯವು ನಿನ್ನಿಂದ ಸ್ಥಿರವಾಗುವುದೆಂದು ಬಲ್ಲೆನು. 21 ಹೀಗಿರುವುದರಿಂದ ನೀನು ನನ್ನ ಸಂತಾನವನ್ನು ನಿರ್ಮೂಲಮಾಡುವುದಿಲ್ಲವೆಂದೂ, ನಮ್ಮ ಕುಲದಿಂದ ನನ್ನ ಹೆಸರನ್ನು ತೆಗೆದುಹಾಕುವುದಿಲ್ಲವೆಂದೂ ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡು” ಎಂದು ಬೇಡಿಕೊಂಡ ಹಾಗೆ ದಾವೀದನು ಪ್ರಮಾಣಮಾಡಿದನು. 22 ಅನಂತರ ಸೌಲನು ತನ್ನ ಮನೆಗೆ ಹೊರಟನು. ದಾವೀದನು ತನ್ನ ಜನರೊಡನೆ ಆಶ್ರಯಗಿರಿಗೆ ಹೋದನು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.