Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಯೋಹಾನನು 3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ದೇವರ ಮಕ್ಕಳೂ ಮತ್ತು ಸೈತಾನನ ಮಕ್ಕಳನ್ನು ಕುರಿತದ್ದು

1 ಇಗೋ, ನಾವು ದೇವರ ಮಕ್ಕಳೆಂದು ಕರೆಯಲ್ಪಡುವುದರಲ್ಲಿ ತಂದೆಯು ಎಂಥಾ ಪ್ರೀತಿಯನ್ನು ನಮ್ಮ ಮೇಲೆ ಇಟ್ಟಿದ್ದಾನಲ್ಲಾ! ನಾವು ಆತನ ಮಕ್ಕಳಾಗಿದ್ದೇವೆ. ಲೋಕವು ಆತನನ್ನು ಅರ್ಥಮಾಡಿಕೊಳ್ಳದೆ ಇರುವುದರಿಂದ ನಮ್ಮನ್ನೂ ಅರ್ಥಮಾಡಿಕೊಳ್ಳುವುದಿಲ್ಲ.

2 ಪ್ರಿಯರೇ, ನಾವು ಈಗ ದೇವರ ಮಕ್ಕಳಾಗಿದ್ದೇವೆ. ಮುಂದೆ ನಾವು ಎಂಥವರಾಗಿರುತ್ತೆವೋ ಎಂಬುದು ಇನ್ನೂ ತಿಳಿದಿಲ್ಲ. ಆದರೆ ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಾವು ಆತನ ಹಾಗಿರುವೆವೆಂದು ಬಲ್ಲೆವು. ಏಕೆಂದರೆ ಆತನಿರುವ ಪ್ರಕಾರವೇ ಆತನನ್ನು ನೋಡುವೆವು.

3 ಆತನ ಮೇಲೆ ಈ ನಿರೀಕ್ಷೆಯನ್ನು ಇಟ್ಟಿರುವ ಪ್ರತಿಯೊಬ್ಬನು ಆತನು ಶುದ್ಧನಾಗಿರುವಂತೆಯೇ ತನ್ನನ್ನು ತಾನು ಶುದ್ಧಿಮಾಡಿಕೊಳ್ಳುತ್ತಾನೆ.

4 ಪಾಪಮಾಡುವ ಪ್ರತಿಯೊಬ್ಬನೂ ಅಧರ್ಮವನ್ನು ಮಾಡುವವನಾಗಿದ್ದಾನೆ; ಪಾಪವು ಅಧರ್ಮವೇ.

5 ಪಾಪಗಳನ್ನು ನಿವಾರಣೆ ಮಾಡುವುದಕ್ಕಾಗಿ ಕ್ರಿಸ್ತನು ಪ್ರತ್ಯಕ್ಷನಾದನೆಂಬುದು ಮತ್ತು ಆತನಲ್ಲಿ ಪಾಪವಿಲ್ಲವೆಂಬುದು ನಿಮಗೆ ಗೊತ್ತು.

6 ಆತನಲ್ಲಿ ನೆಲೆಗೊಂಡಿರುವವನು ಪಾಪವನ್ನುಮಾಡುವುದಿಲ್ಲ; ಪಾಪಮಾಡುವವನು ಆತನನ್ನು ನೋಡಿಲ್ಲ, ತಿಳಿದೂ ಇಲ್ಲ;

7 ಪ್ರಿಯರಾದ ಮಕ್ಕಳೇ, ಯಾರೂ ನಿಮ್ಮನ್ನು ಮೋಸಗೊಳಿಸದಿರಲಿ. ಕ್ರಿಸ್ತನು ಹೇಗೆ ನೀತಿವಂತನಾಗಿದ್ದನೋ ಹಾಗೆಯೇ ನೀತಿಯನ್ನನುಸರಿಸುವವನು ನೀತಿವಂತನಾಗಿದ್ದಾನೆ.

8 ಪಾಪಮಾಡುವವನು ಸೈತಾನನಿಗೆ ಸಂಬಂಧಪಟ್ಟವನಾಗಿದ್ದಾನೆ. ಏಕೆಂದರೆ ಆದಿಯಿಂದಲೂ ಸೈತಾನನು ಪಾಪಮಾಡುವವನಾಗಿದ್ದಾನೆ. ಆದ್ದರಿಂದ ಸೈತಾನನ ಕೆಲಸಗಳನ್ನು ನಾಶಮಾಡುವುದಕ್ಕೋಸ್ಕರ ದೇವಕುಮಾರನು ಪ್ರತ್ಯಕ್ಷನಾದನು.

9 ದೇವರಿಂದ ಹುಟ್ಟಿದವನು ಪಾಪಮಾಡುವುದಿಲ್ಲ. ಏಕೆಂದರೆ ದೇವರ ಸ್ವಭಾವವು ಅವನಲ್ಲಿ ನೆಲೆಗೊಂಡಿದೆ. ಅವನು ದೇವರಿಂದ ಹುಟ್ಟಿದ ಕಾರಣ ಪಾಪಮಾಡಲಾರನು.

10 ಆದ್ದರಿಂದ ದೇವರ ಮಕ್ಕಳು ಯಾರೆಂಬುದು ಹಾಗೂ ಸೈತಾನನ ಮಕ್ಕಳು ಯಾರೆಂಬುದು ಇದರಿಂದ ತಿಳಿದುಬರುತ್ತದೆ. ನೀತಿಯನ್ನು ಅನುಸರಿಸದವರೂ ತನ್ನ ಸಹೋದರನನ್ನು ಪ್ರೀತಿಸದವರೂ ದೇವರಿಗೆ ಸಂಬಂಧಪಟ್ಟವರಲ್ಲ.

11 ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನೀವು ಮೊದಲಿನಿಂದಲೂ ಕೇಳಿದ ಸಂದೇಶವಾಗಿದೆ.

12 ಕೆಡುಕುನಾಗಿದ್ದು ತನ್ನ ತಮ್ಮನನ್ನು ಕೊಂದುಹಾಕಿದ ಕಾಯಿನನಂತೆ ನಾವು ಇರಬಾರದು. ಅವನು ಯಾಕೆ ತಮ್ಮನನ್ನು ಕೊಂದು ಹಾಕಿದನು? ತನ್ನ ಕೃತ್ಯಗಳು ಕೆಟ್ಟದ್ದು ಮತ್ತು ತನ್ನ ತಮ್ಮನ ಕೃತ್ಯಗಳು ನೀತಿಯುಳ್ಳವುಗಳೂ ಆಗಿದ್ದುದರಿಂದಲೇ.


ನಿತ್ಯಜೀವದಲ್ಲಿ ಸೇರಿರುವವರಿಗೆ ಪರರ ಪ್ರೀತಿಯಿರುವುದು

13 ನನ್ನ ಸಹೋದರರೇ, ಲೋಕವು ನಿಮ್ಮನ್ನು ದ್ವೇಷಿಸಿದರೆ ಆಶ್ಚರ್ಯಪಡಬೇಡಿರಿ.

14 ನಾವಂತೂ ಕ್ರೈಸ್ತಸಹೋದರರನ್ನು ಪ್ರೀತಿಸುವವರಾಗಿರುವುದರಿಂದ ಮರಣದಿಂದ ಪಾರಾಗಿ ನಿತ್ಯಜೀವದಲ್ಲಿ ಸೇರಿದ್ದೇವೆಂಬುದು ನಮಗೆ ಗೊತ್ತಾಗಿದೆ. ತನ್ನ ಸಹೋದರನನ್ನು ಪ್ರೀತಿಸದೆ ಇರುವವನು ಮರಣದಲ್ಲೇ ಇದ್ದಾನೆ.

15 ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ. ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯಜೀವವು ಇರುವುದಿಲ್ಲವೆಂಬುದು ನಿಮಗೆ ಗೊತ್ತಾಗಿದೆ.

16 ಕ್ರಿಸ್ತನು ನಮಗೋಸ್ಕರ ತನ್ನ ಪ್ರಾಣವನ್ನು ಅರ್ಪಿಸಿದ್ದರಿಂದ ದೇವರ ಪ್ರೀತಿ ಇಂಥದ್ದೆಂದು ನಮಗೆ ತಿಳಿದು ಬಂದಿದೆ. ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ.

17 ಆದರೆ ಈ ಲೋಕದ ಸಂಪತ್ತುಳ್ಳ ಯಾರಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿ ಕನಿಕರಪಡದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರಲು ಸಾಧ್ಯವೇ?

18 ನನ್ನ ಪ್ರಿಯ ಮಕ್ಕಳೇ, ನೀವು ಬರೀ ಮಾತಿನಿಂದಾಗಲಿ, ಬಾಯುಪಚಾರದಿಂದಾಗಲಿ, ಪ್ರೀತಿಸುವವರಾಗಿರದೆ ಕ್ರಿಯೆಗಳಿಂದಲೂ ಮತ್ತು ನಿಜ ಪ್ರೀತಿಯಿಂದ ಪ್ರೀತಿಸುವವರಾಗಿರಬೇಕು.


ಯೇಸುವಿನಲ್ಲಿ ನಂಬಿಕೆಯಿಟ್ಟು ಪ್ರೀತಿಯಲ್ಲಿ ನಡೆದರೆ ಮನಸ್ಸಿಗೆ ಸಮಾಧಾನ ಉಂಟಾಗುವುದಲ್ಲದೆ ನಾವು ಮಾಡುವ ಪ್ರಾರ್ಥನೆ ಸಫಲವಾಗುವುದು

19 ನಾವು ಸತ್ಯಕ್ಕೆ ಸೇರಿದವರೆಂಬುದು ಇದರಿಂದಲೇ ನಮಗೆ ತಿಳಿಯುತ್ತದೆ, ನಮ್ಮ ಹೃದಯವು ದೇವರ ಸಮಕ್ಷಮದಲ್ಲಿ ದೋಷರಹಿತವಾಗಿರುತ್ತದೆ.

20 ಏಕೆಂದರೆ ನಮ್ಮ ಹೃದಯವು ಯಾವ ವಿಷಯದಲ್ಲಾದರು ನಮ್ಮನ್ನು ದೋಷಿಗಳೆಂದು ನಿರ್ಣಯಿಸಿದರೆ, ದೇವರು ನಮ್ಮ ಹೃದಯವನ್ನು ಬಲ್ಲವನಾಗಿರುವುದರಿಂದ ನಮ್ಮ ಹೃದಯವನ್ನು ಆತನಲ್ಲಿ ದೃಢಪಡಿಸಬಹುದು.

21 ಪ್ರಿಯರೇ, ನಮ್ಮ ಹೃದಯವು ನಮ್ಮನ್ನು ದೋಷಿಗಳೆಂದು ಖಂಡಿಸಿ ನಡೆದರೆ ದೇವರ ಸನ್ನಿಧಿಯಲ್ಲಿ ನಮಗೆ ಭರವಸೆ ದೊರೆಯುತ್ತದೆ.

22 ಆತನ ಆಜ್ಞೆಗಳನ್ನು ಕೈಕೊಂಡು ಆತನಿಗೆ ಮೆಚ್ಚಿಕೆಯಾಗುವ ಕಾರ್ಯಗಳನ್ನು ಮಾಡುವವರಾದರೆ ನಾವು ಏನು ಬೇಡಿಕೊಂಡರೂ ಆತನಿಂದ ಹೊಂದುವೆವು.

23 ದೇವರ ಆಜ್ಞೆ ಯಾವುದೆಂದರೆ ನಾವು ಆತನ ಮಗನಾದ ಯೇಸು ಕ್ರಿಸ್ತನನ್ನು ನಂಬಿ ಆತನು ನಮಗೆ ಕೊಟ್ಟಿರುವ ಆಜ್ಞೆಗಳ ಪ್ರಕಾರ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ.

24 ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವವನು ಆತನಲ್ಲಿ ನೆಲೆಗೊಂಡಿರುತ್ತಾನೆ ಮತ್ತು ದೇವರು ಆತನಲ್ಲಿ ನೆಲೆಗೊಂಡಿರುತ್ತಾನೆ. ಆತನು ಅವನಲ್ಲಿ ನೆಲೆಗೊಂಡಿರುತ್ತಾನೆ. ನಮ್ಮಲ್ಲಿ ನೆಲೆಗೊಂಡಿದ್ದಾನೆಂದು ಆತನು ನಮಗೆ ಅನುಗ್ರಹಿಸಿರುವ ಆತ್ಮನಿಂದ ನಾವು ಬಲ್ಲವರಾಗಿದ್ದೇವೆ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು