Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಪೇತ್ರನು 4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಪರಿವರ್ತನೆಗೊಂಡ ಜೀವಿತಗಳು

1 ಕ್ರಿಸ್ತನು ನಮಗೋಸ್ಕರ ತನ್ನ ಶರೀರದಲ್ಲಿ ಬಾಧೆಪಟ್ಟದ್ದರಿಂದ ನೀವು ಸಹ ಅದೇ ಮನೋಭಾವವುಳ್ಳವರಾಗಿದ್ದು ಬಾಧೆಪಡಲು ಸಿದ್ಧರಾಗಿರಿ. ಏಕೆಂದರೆ ಶರೀರದಲ್ಲಿ ಬಾಧೆಪಟ್ಟವನು ಪಾಪ ಮಾಡುವುದನ್ನು ನಿಲ್ಲಿಸಿದವನಾಗಿದ್ದಾನೆ.

2 ಆದ್ದರಿಂದ ಉಳಿದಿರುವ ತನ್ನ ಜೀವಮಾನ ಕಾಲದಲ್ಲಿ ಇನ್ನೂ ಮನುಷ್ಯರ ಅಭಿಲಾಷೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ ಬದುಕುವುದಕ್ಕೆ ಪ್ರಯತ್ನಮಾಡುವನು.

3 ನೀವು ಬಂಡುತನ, ದುರಾಶೆ, ಕುಡುಕತನ, ದುಂದೌತಣ, ಮದ್ಯಪಾನ ಗೋಷ್ಠಿ, ಅಸಹ್ಯವಾದ ವಿಗ್ರಹಾರಾಧನೆ, ಈ ಮೊದಲಾದವುಗಳನ್ನು ನಡಿಸುವುದರಲ್ಲಿಯೂ ಅನ್ಯಜನರಿಗೆ ಇಷ್ಟವಾದ ದುಷ್ಕೃತ್ಯಗಳನ್ನು ಮಾಡುವುದರಲ್ಲಿಯೂ ಕಾಲಕಳೆದದ್ದು ಸಾಕು.

4 ಅವರು ಮಾಡುವ ಅಪರಿಮಿತವಾದ ಪಟಿಂಗತನದಲ್ಲಿ ನೀವು ಸೇರದೆ ಇದ್ದದ್ದಕ್ಕೆ ಅವರು ಆಶ್ಚರ್ಯಪಟ್ಟು ನಿಮ್ಮನ್ನು ದೂಷಿಸುತ್ತಾರೆ.

5 ಅವರು ಬದುಕಿರುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕೆ ಸಿದ್ಧವಾಗಿರುವಾತನಿಗೆ ಉತ್ತರ ಕೊಡಬೇಕು.

6 ಸತ್ತಿರುವವರು ಮನುಷ್ಯ ಜಾತಿಗೆ ಬರುವ ಮರಣವೆಂಬ ತೀರ್ಪನ್ನು ಶರೀರಗಳಲ್ಲಿದ್ದಾಗ ಹೊಂದಿದರು. ಅವರು ಆತ್ಮ ಸಂಬಂಧವಾಗಿ ದೇವರಂತೆ ಜೀವಿಸಲೆಂದು ಅವರಿಗೂ ಸುವಾರ್ತೆಯು ತಿಳಿಸಲ್ಪಟ್ಟಿತು.


ದೇವರ ವರಗಳ ಒಳ್ಳೆಯ ನಿರ್ವಾಹಕನು

7 ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ. ಆದ್ದರಿಂದ ನೀವು ಜಿತೇಂದ್ರಿಯರಾಗಿಯೂ ಯಾವಾಗಲೂ ಪ್ರಾರ್ಥನೆಗೆ ಸಿದ್ಧವಾಗಿರುವಂತೆ ಸ್ವಸ್ಥಚಿತ್ತರಾಗಿಯೂ ಇರಿ.

8 ಮೊಟ್ಟಮೊದಲು ನಿಮ್ಮ ನಿಮ್ಮೊಳಗೆ ಪ್ರಾಮಾಣಿಕವಾದ ಪ್ರೀತಿಯಿರಲಿ. ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.

9 ಗುಣಗುಟ್ಟದೆ ಒಬ್ಬರಿಗೊಬ್ಬರು ಅತಿಥಿ ಸತ್ಕಾರ ಮಾಡಿರಿ.

10 ನೀವೆಲ್ಲರು ದೇವರ ವಿವಿಧ ವರಗಳ ವಿಷಯದಲ್ಲಿ ಒಳ್ಳೆಯ ನಿರ್ವಾಹಕರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿದ ಕೃಪಾವರವನ್ನು ಎಲ್ಲರ ಸೇವೆಗಾಗಿ ಉಪಯೋಗಿಸಕೊಳ್ಳಲಿ.

11 ಒಬ್ಬನು ಬೋಧಿಸುವವನಾದರೆ ದೈವೋಕ್ತಿಗಳನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರು ಕೊಡುವ ಶಕ್ತಿಗನುಗುಣವಾಗಿ ಮಾಡಲಿ. ಇವೆಲ್ಲವುಗಳಿಂದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ ಉಂಟಾಗುವುದು. ಯೇಸು ಕ್ರಿಸ್ತನಿಗೆ ಅಧಿಪತ್ಯವೂ ಮತ್ತು ಘನವೂ ಯುಗಯುಗಾಂತರಗಳಲ್ಲಿಯೂ ಇರುವವು ಆಮೆನ್.


ಕ್ರೈಸ್ತನಾಗಿ ಬಾಧೆಯನ್ನನುಭವಿಸುವುದು

12 ಪ್ರಿಯರೇ, ನಿಮ್ಮನ್ನು ಪರಿಶೋಧಿಸುವುದಕ್ಕಾಗಿ ಅಗ್ನಿ ಪರೀಕ್ಷೆ ಬರುವಾಗ ನೀವು ಆಶ್ಚರ್ಯಪಡಬೇಡಿರಿ. ವಿಪರೀತವಾದ ಸಂಗತಿ ಸಂಭವಿಸಿತೆಂದು ಯೋಚಿಸಬೇಡಿರಿ.

13 ಆದರೆ ನೀವು ಎಷ್ಟರ ಮಟ್ಟಿಗೆ ಕ್ರಿಸ್ತನ ಬಾಧೆಗಳಲ್ಲಿ ಪಾಲುಗಾರರಾಗಿದ್ದೀರೋ ಅಷ್ಟರ ಮಟ್ಟಿಗೆ ಸಂತೋಷಪಡಿರಿ. ಆದ್ದರಿಂದ ಆತನ ಮಹಿಮೆಯ ಪ್ರತ್ಯಕ್ಷತೆಯಲ್ಲಿಯೂ ನೀವು ಸಂತೋಷಪಟ್ಟು ಉಲ್ಲಾಸಗೊಳ್ಳುವಿರಿ

14 ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಧನ್ಯರು. ಮಹಿಮೆಯ ಆತ್ಮನಾಗಿರುವ ದೇವರಾತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನಲ್ಲಾ.

15 ನಿಮ್ಮಲ್ಲಿ ಯಾವನಾದರು ಕೊಲೆಗಾರನು, ಕಳ್ಳನು, ದುಷ್ಟನು, ಪರರ ಕಾರ್ಯಗಳಲ್ಲಿ ತಲೆಹಾಕುವವನು ಆಗಿದ್ದು ಶಿಕ್ಷಾಪಾತ್ರನಾಗಬಾರದು.

16 ಆದರೆ ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆ ಪಡದೆ ಆ ಹೆಸರಿನಿಂದಲೇ ದೇವರನ್ನು ಘನಪಡಿಸಲಿ.

17 ನ್ಯಾಯವಿಚಾರಣೆಯ ಸಮಯ ಬಂದಿದೆ. ಆ ವಿಚಾರಣೆಯು ದೇವರ ಮನೆಯಲ್ಲಿಯೇ ಪ್ರಾರಂಭವಾಗಿದೆಯಲ್ಲಾ. ಅದು ನಮ್ಮಲ್ಲಿ ಪ್ರಾರಂಭವಾಗುವುದಾದರೆ, ದೇವರ ಸುವಾರ್ತೆಯನ್ನು ನಂಬಲೊಲ್ಲದವರ ಅಂತ್ಯ ಹೇಗಿರಬಹುದು?

18 ನೀತಿವಂತನೇ ರಕ್ಷಣೆ ಹೊಂದುವುದು ಕಷ್ಟವಾದರೆ, ಭಕ್ತಿಹೀನನೂ ಮತ್ತು ಪಾಪಿಷ್ಠನೂ ರಕ್ಷಣೆ ಹೊಂದುವುದು ಹೇಗೆ?

19 ಹೀಗಿರಲಾಗಿ ದೇವರ ಚಿತ್ತಾನುಸಾರ ಬಾಧೆಪಡುವವರು ಒಳ್ಳೆದನ್ನು ಮಾಡುವವರಾಗಿದ್ದು ತಮ್ಮ ಆತ್ಮಗಳನ್ನು ನಂಬಿಗಸ್ತನಾದ ಸೃಷ್ಟಿ ಕರ್ತನಿಗೆ ಒಪ್ಪಿಸಲಿ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು