Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಪೇತ್ರನು 3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಸತಿಪತಿಯರು

1-2 ಅದೇ ರೀತಿಯಾಗಿ ಪತ್ನಿಯರೇ, ನಿಮ್ಮ ಪತಿಯರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ, ಗೌರವದಿಂದಲೂ ನಡೆದುಕೊಳ್ಳುವುದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಪತ್ನಿಯರಾದ ನಿಮ್ಮ ಒಳ್ಳೆಯ ನಡತೆಗಳಿಂದಲೇ ಸನ್ಮಾರ್ಗಕ್ಕೆ ಬಂದಾರು.

3 ಜಡೆ ಹೆಣೆದುಕೊಳ್ಳುವುದೂ, ಚಿನ್ನದ ಒಡವೆಗಳನ್ನು ಹಾಕಿಕೊಳ್ಳುವುದೂ, ಬೆಲೆಬಾಳುವ ವಸ್ತ್ರಗಳನ್ನು ಧರಿಸಿಕೊಳ್ಳುವುದೂ ಈ ಮೊದಲಾದ ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು.

4 ಆದರೆ ದೇವರ ದೃಷ್ಟಿಯಲ್ಲಿ ಅಮೂಲ್ಯವಾದದ್ದೂ ಮತ್ತು ಶಾಶ್ವತವಾದದ್ದೂ ಆಗಿರುವ ಸಾತ್ವಿಕತೆ ಮತ್ತು ಶಾಂತಮನಸ್ಸು ಎಂಬ ಆಂತರ್ಯದ ಭೂಷಣವೇ ನಿಮ್ಮ ಅಲಂಕಾರವಾಗಿರಲಿ.

5 ಪೂರ್ವ ಕಾಲದಲ್ಲಿ ದೇವರ ಮೇಲೆ ನಿರೀಕ್ಷೆಯನ್ನಿಟ್ಟಿದ್ದ ಭಕ್ತೆಯರಾದ ಸ್ತ್ರೀಯರೂ ಸಹ ಹೀಗೆಯೇ ತಮ್ಮನ್ನು ಅಲಂಕರಿಸಿಕೊಂಡಿದ್ದರು. ಅವರು ತಮ್ಮ ತಮ್ಮ ಗಂಡಂದಿರಿಗೆ ಅಧೀನರಾಗಿದ್ದರು.

6 ಸಾರಳು ಹಾಗೆಯೇ ಅಬ್ರಹಾಮನಿಗೆ ವಿಧೇಯಳಾಗಿದ್ದು ಅವನನ್ನು ಯಜಮಾನ ಎಂದು ಕರೆದಳು. ನೀವು ಒಳ್ಳೆಯದನ್ನು ಮಾಡುತ್ತಾ ಯಾವ ಭೀತಿಗೂ ಭಯಪಡುವುದಿಲ್ಲವಾದರೆ ನೀವು ಆಕೆಯ ಕುವರಿಯರೇ ಆಗುವಿರಿ.

7 ಅದೇ ರೀತಿಯಾಗಿ ಪತಿಯರೇ, ಸ್ತ್ರೀಯು ನಿಮ್ಮಗಿಂತ ಬಲಹೀನಳೆಂಬುದನ್ನು ತಿಳಿದುಕೊಂಡು, ನಿಮ್ಮ ಪತ್ನಿಯರ ಸಂಗಡ ವಿವೇಕದಿಂದ ನಡೆದುಕೊಳ್ಳಿರಿ, ಅವರು ನಿತ್ಯಜೀವ ವರಕ್ಕೆ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಗೌರವವನ್ನು ಸಲ್ಲಿಸಿರಿ. ಹೀಗೆ ಮಾಡಿದರೆ ನಿಮ್ಮ ಪ್ರಾರ್ಥನೆಗಳಿಗೆ ಅಡಚಣೆ ಉಂಟಾಗುವುದಿಲ್ಲ.


ನೀತಿಗಾಗಿ ಬಾಧೆಯನ್ನನುಭವಿಸುವುದು

8 ಕಡೆಗೆ ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ, ಪರಸ್ಪರ ಅನುಕಂಪವುಳ್ಳವರಾಗಿರಿ, ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ, ಕರುಣೆಯೂ, ದೀನಭಾವವೂ ಉಳ್ಳವರಾಗಿರಿ.

9 ಅಪಕಾರಕ್ಕೆ ಅಪಕಾರವನ್ನು, ನಿಂದೆಗೆ ನಿಂದೆಯನ್ನು ಮಾಡದೇ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದಿದ್ದಾನಲ್ಲಾ. ಹೀಗೆ ಮಾಡುವುದಾದರೆ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿರಿ.

10 ಏಕೆಂದರೆ ಪವಿತ್ರಗ್ರಂಥದಲ್ಲಿ ಬರೆದಿರುವಂತೆ, “ಜೀವವನ್ನು ಬಯಸುತ್ತಾ ಸುದಿನಗಳನ್ನು ನೋಡುವುದಕ್ಕೆ ಕಾದಿರುವಾತನು ಕೆಟ್ಟದ್ದನ್ನು ನುಡಿಯದಂತೆ ತನ್ನ ನಾಲಿಗೆಯನ್ನು ವಂಚನೆಯ ಮಾತುಗಳನ್ನಾಡದಂತೆ ತುಟಿಗಳನ್ನು ಬಿಗಿಹಿಡಿದುಕೊಳ್ಳಲಿ.

11 ಅವನು ಕೆಟ್ಟದ್ದನ್ನು ಬಿಟ್ಟು ಒಳ್ಳೆದನ್ನು ಮಾಡಲಿ. ಸಮಾಧಾನವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನಪಡಲಿ.

12 ಏಕೆಂದರೆ ಕರ್ತನು ನೀತಿವಂತರನ್ನು ಕಟಾಕ್ಷಿಸುತ್ತಾನೆ ಮತ್ತು ಆತನು ಅವರ ವಿಜ್ಞಾಪನೆಗಳಿಗೆ ಕಿವಿಗೊಡುತ್ತಾನೆ. ಆದರೆ ಕೆಡುಕರಿಗೋ ಕರ್ತನು ವಿಮುಖನಾಗಿರುತ್ತಾನೆ.”

13 ನೀವು ಒಳ್ಳೆಯದನ್ನೇ ಮಾಡುವುದರಲ್ಲಿ ಆಸಕ್ತರಾಗಿದ್ದರೆ ನಿಮಗೆ ಕೇಡು ಮಾಡುವವರು ಯಾರಿದ್ದಾರೆ?

14 ಒಂದು ವೇಳೆ ನೀವು ನೀತಿಯ ನಿಮಿತ್ತವೇ ಬಾಧೆಪಟ್ಟರೆ ನೀವು ಧನ್ಯರೇ. ಅವರ ಬೆದರಿಕೆಗೆ ಹೆದರಬೇಡಿರಿ, ಕಳವಳಪಡಬೇಡಿರಿ.

15 ಆದರೆ ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೆನೆಂದು ಕೇಳುವವರೆಲ್ಲರಿಗೂ ಉತ್ತರ ಹೇಳುವುದಕ್ಕೆ ಯಾವಾಗಲೂ ಸಿದ್ಧರಾಗಿರಿ. ಆದರೆ ಅದನ್ನು ಸಾತ್ವಿಕತ್ವದಿಂದಲೂ ಮತ್ತು ಗೌರವದಿಂದಲೂ ಹೇಳಿರಿ.

16 ಒಳ್ಳೆಯ ಮನಸ್ಸಾಕ್ಷಿಯುಳ್ಳವರಾಗಿರಿ ಆಗ ಕ್ರಿಸ್ತನಲ್ಲಿರುವ ನಿಮ್ಮ ಒಳ್ಳೆಯ ನಡತೆಯನ್ನು ಕುರಿತು ಕೆಟ್ಟಮಾತುಗಳನ್ನಾಡುವವರು ನಿಮ್ಮನ್ನು ನಿಂದಿಸುವುದಕ್ಕೆ ನಾಚಿಕೆಪಡುವರು.

17 ಕೆಟ್ಟ ನಡತೆಯುಳ್ಳವರಾಗಿ ಬಾಧೆಪಡುವುದಕ್ಕಿಂತಲೂ ಒಳ್ಳೆ ನಡತೆಯುಳ್ಳವರಾಗಿಯೇ ದೇವರ ಚಿತ್ತದ ಪ್ರಕಾರ ಬಾಧೆಪಡುವುದು ಉತ್ತಮ.

18 ಕ್ರಿಸ್ತನು ಸಹ ನೀತಿವಂತನಾಗಿದ್ದು ಅನೀತಿವಂತರಿಗೋಸ್ಕರ ಪ್ರಾಣ ಕೊಟ್ಟು ನಮ್ಮನ್ನು ದೇವರ ಬಳಿಗೆ ಸೇರಿಸುವುದಕ್ಕಾಗಿ ಒಂದೇ ಸಾರಿ ಪಾಪನಿವಾರಣೆಗೋಸ್ಕರ ಬಾಧೆಪಟ್ಟು ಸತ್ತನು. ಆತನು ಶರೀರಸಂಬಂಧವಾಗಿ ಕೊಲ್ಲಲ್ಪಟ್ಟು, ಆತ್ಮ ಸಂಬಂಧವಾಗಿ ತಿರುಗಿ ಬದುಕುವವನಾದನು.

19 ಇದಲ್ಲದೆ ಆತನು ಆತ್ಮರೂಪನಾಗಿ ಸೆರೆಯಲ್ಲಿದ್ದ ಆತ್ಮಗಳ ಬಳಿಗೆ ಹೋಗಿ ಸುವಾರ್ತೆಯನ್ನು ಸಾರಿದನು.

20 ಅಂದರೆ ಪೂರ್ವಕಾಲದಲ್ಲಿ ನೋಹನು ನಾವೆಯನ್ನು ಕಟ್ಟುತ್ತಿರಲು ದೇವರು ದೀರ್ಘಶಾಂತಿಯಿಂದ ಕಾದಿದ್ದಾಗ ಅವರು ಆತನಿಗೆ ಅವಿಧೇಯರಾಗಿದ್ದರು. ಆ ನಾವೆಯೊಳಗೆ ಸೇರಿದ ಎಂಟು ಜನರು ಮಾತ್ರ ನೀರಿನೊಳಗಿನಿಂದ ರಕ್ಷಿಸಲ್ಪಟ್ಟರು.

21 ಆ ನೀರಿಗೆ ಅನುರೂಪವಾದ ದೀಕ್ಷಾಸ್ನಾನವು ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ. ಅದು ದೇಹದ ಮೇಲಿನ ಕೊಳೆಯನ್ನು ಹೊಗಲಾಡಿಸುವಂಥದ್ದಲ್ಲ. ಆದರೆ ಒಳ್ಳೆಯ ಮನಸ್ಸಾಕ್ಷಿ ಬೇಕೆಂದು ದೇವರಿಗೆ ವಿಜ್ಞಾಪಿಸಿಕೊಳ್ಳುವಂಥದಾಗಿದೆ.

22 ಆತನು ಪರಲೋಕಕ್ಕೆ ಹೋಗಿ ದೇವರ ಬಲಗಡೆಯಲ್ಲಿದ್ದಾನೆ, ದೇವದೂತರು, ಅಧಿಕಾರಿಗಳು ಮತ್ತು ಶಕ್ತಿಗಳೂ ಆತನ ಸ್ವಾಧೀನವಾಗಿವೆ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು