Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಪೇತ್ರನು 2 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಪವಿತ್ರ ಜನಾಂಗ ಮತ್ತು ಸಜೀವ ಕಲ್ಲು

1 ಆದಕಾರಣ ಎಲ್ಲಾ ಕೆಟ್ಟತನವನ್ನೂ, ಎಲ್ಲಾ ವಂಚನೆಯನ್ನೂ, ಕಪಟವನ್ನೂ, ಹೊಟ್ಟೆಕಿಚ್ಚನ್ನೂ, ಎಲ್ಲಾ ತರದ ದೂಷಣೆಯನ್ನು ವಿಸರ್ಜಿಸಿರಿ.

2 ಹೊಸದಾಗಿ ಹುಟ್ಟಿದ ಶಿಶುಗಳಂತೆ ನೀವು ದೇವರ ವಾಕ್ಯವೆಂಬ ಶುದ್ಧವಾದ ಆತ್ಮೀಕ ಹಾಲನ್ನು ಬಯಸಿರಿ. ಆದರಿಂದ ರಕ್ಷಣೆಯಲ್ಲಿ ಬೆಳೆಯುವಿರಿ.

3 ಏಕೆಂದರೆ ಕರ್ತನು ದಯಾಪರನೆಂದು ನೀವು ಅನುಭವಿಸಿ ತಿಳಿದಿದ್ದೀರಿ.

4 ನೀವು ಜೀವವುಳ್ಳ ಕಲ್ಲಾಗಿರುವಾತನ ಬಳಿಗೆ ಬಂದಿದ್ದೀರಿ. ಆ ಕಲ್ಲನ್ನು ಜನರು ನಿರಾಕರಿಸಿದರು ಆದರೆ ಅದು ದೇವರಿಂದ ಆರಿಸಿಕೊಳ್ಳಲ್ಪಟ್ಟದು ಮತ್ತು ಆತನಿಗೆ ಅಮೂಲ್ಯವಾದದ್ದು ಆಗಿದೆ.

5 ನೀವು ಸಹ ಜೀವವುಳ್ಳ ಕಲ್ಲುಗಳಾಗಿದ್ದು ಆತ್ಮೀಕವಾದ ಮಂದಿರವಾಗುವುದಕ್ಕೆ ಕಟ್ಟಲ್ಪಡುತ್ತಾ ಇದ್ದೀರಿ. ಯೇಸು ಕ್ರಿಸ್ತನ ಮೂಲಕ ದೇವರಿಗೆ ಸಮರ್ಪಕವಾದ ಆತ್ಮೀಕ ಯಜ್ಞಗಳನ್ನು ಸಮರ್ಪಿಸುವುದಕ್ಕೆ ಪವಿತ್ರ ಯಾಜಕ ವರ್ಗದವರಾಗಿದ್ದೀರಿ.

6 “ಇಗೋ, ಚೀಯೋನಿನಲ್ಲಿ ಮೂಲೆಗಲ್ಲನ್ನು ಇಡುತ್ತೇನೆ. ಅದು ಆರಿಸಿಕೊಳ್ಳಲ್ಪಟ್ಟದ್ದೂ ಮತ್ತು ಅತ್ಯಮೂಲ್ಯವಾದದ್ದೂ. ಆತನ ಮೇಲೆ ನಂಬಿಕೆಯಿಡುವವನು ಅವಮಾನಪಡುವುದೇ ಇಲ್ಲ” ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.

7 ಆದ್ದರಿಂದ ನಂಬುವವರಾದ ನಿಮಗೇ ಈ ಕಲ್ಲು ಅತ್ಯಮೂಲ್ಯವಾದುದು. ಆದರೆ ನಂಬದೆಯಿರುವವರಿಗೆ, “ಮನೆಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು”

8 ಮತ್ತು ಪವಿತ್ರಗ್ರಂಥದಲ್ಲಿ ಇನ್ನೊಂದೆಡೆ ಬರೆದಿರುವುದೇನಂದರೆ, “ಅದು ಜನರು ಎಡವುವ ಕಲ್ಲು ಮುಗ್ಗರಿಸುವ ಬಂಡೆ.” ಅವರು ದೇವರ ವಾಕ್ಯಕ್ಕೆ ಅವಿಧೇಯರಾದ್ದರಿಂದ ಎಡವಿ ಬೀಳುತ್ತಾರೆ. ಅದಕ್ಕಾಗಿಯೇ ಅವರನ್ನು ನೇಮಿಸಲಾಗಿದೆ.

9 ನಿಮ್ಮನ್ನು ಕತ್ತಲೆಯೊಳಗಿನಿಂದ ತನ್ನ ಆಶ್ಚರ್ಯಕರವಾದ ಬೆಳಕಿಗೆ ಕರೆದಾತನ ಅದ್ಭುತಕಾರ್ಯಗಳನ್ನು ಪ್ರಚಾರಮಾಡುವವರಾಗುವಂತೆ ನೀವು ದೇವರಿಂದ ಆರಿಸಿಕೊಳ್ಳಲ್ಪಟ್ಟ ಜನಾಂಗವೂ, ರಾಜವಂಶಸ್ಥರಾದ ಯಾಜಕರೂ, ಪರಿಶುದ್ಧ ಜನಾಂಗವೂ, ದೇವರ ಸ್ವಕೀಯ ಜನರೂ ಆಗಿದ್ದೀರಿ.

10 ಮೊದಲು ನೀವು ಪ್ರಜೆಯಾಗಿರಲಿಲ್ಲ. ಈಗಲಾದರೂ ದೇವರ ಸ್ವಕೀಯಪ್ರಜೆಯಾಗಿದ್ದೀರಿ. ಮೊದಲು ನೀವು ಕರುಣೆ ಹೊಂದಿದವರಾಗಿರಲಿಲ್ಲ. ಈಗಲಾದರೂ ಕರುಣೆ ಹೊಂದಿದವರಾಗಿದ್ದೀರಿ.


ದೇವರ ದಾಸರು

11 ಪ್ರಿಯರೇ, ಪ್ರವಾಸಿಗಳು ಮತ್ತು ಪರದೇಶಸ್ಥರು ಆಗಿರುವ ನೀವು ನಿಮ್ಮ ಆತ್ಮದ ವಿರುದ್ಧವಾಗಿ ಯುದ್ಧ ಮಾಡುವ ಶಾರೀರಿಕ ದುರಾಶೆಗಳಿಗೆ ದೂರವಾಗಿರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

12 ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ, ಆಗ ಅವರು ಯಾವ ಸಂಗತಿಗಳನ್ನು ಕುರಿತಾಗಿ ನಿಮ್ಮನ್ನು ಕೆಟ್ಟವರೆಂದು ನಿಂದಿಸುತ್ತಾರೋ ಆ ನಿಮ್ಮ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ಆತನ ಬರೋಣದ ದಿನದಲ್ಲಿ ಅವರು ದೇವರನ್ನು ಕೊಂಡಾಡುವರು.

13 ಮನುಷ್ಯರು ನೇಮಿಸಿರುವ ಪ್ರತಿಯೊಂದು ಅಧಿಕಾರಕ್ಕೂ ಕರ್ತನ ನಿಮಿತ್ತ ನೀವು ಅಧೀನರಾಗಿರಿ. ಸರ್ವಾಧಿಕಾರಿಯಾಗಿರುವ ಅರಸನಿಗಾಗಲಿ

14 ಅಥವಾ ಅರಸನಿಂದ ಕೆಟ್ಟ ನಡತೆಯುಳ್ಳವರನ್ನು ದಂಡಿಸುವುದಕ್ಕೂ ಒಳ್ಳೆ ನಡತೆಯುಳ್ಳವರನ್ನು ಪ್ರೋತ್ಸಾಹಪಡಿಸುವುದಕ್ಕೂ ಕಳುಹಿಸಲ್ಪಟ್ಟಂಥ ಅಧಿಪತಿಗಳಿಗಾಗಲಿ ನೀವು ಅಧೀನರಾಗಿರಿ.

15 ತಿಳಿವಳಿಕೆಯಿಲ್ಲದೆ ಮಾತನಾಡುವ ಮೂಢ ಜನರ ಬಾಯನ್ನು ನೀವು ಒಳ್ಳೆ ನಡತೆಯಿಂದ ಮುಚ್ಚಿಸಬೇಕೆಂಬುದು ದೇವರ ಚಿತ್ತ.

16 ಸ್ವತಂತ್ರರಂತೆ ನಡೆದುಕೊಳ್ಳಿರಿ, ಆದರೆ ಕೆಟ್ಟತನವನ್ನು ಮರೆಮಾಡುವುದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಬಳಸಿಕೊಳ್ಳಬೇಡಿರಿ, ಆದರೆ ನೀವು ದೇವರ ದಾಸರಂತೆ ನಡೆದುಕೊಳ್ಳಿರಿ.

17 ಎಲ್ಲರನ್ನೂ ಸನ್ಮಾನಿಸಿರಿ. ಸಹೋದರರನ್ನು ಪ್ರೀತಿಸಿರಿ. ದೇವರಿಗೆ ಭಯಪಡಿರಿ. ಅರಸನನ್ನು ಗೌರವಿಸಿರಿ.


ಕ್ರಿಸ್ತನ ಶ್ರಮೆಗಳ ಆದರ್ಶ

18 ಸೇವಕರೇ, ನಿಮ್ಮ ಯಜಮಾನರಿಗೆ ಪೂರ್ಣ ಗೌರವದಿಂದ ಅಧೀನರಾಗಿರಿ. ಒಳ್ಳೆಯವರೂ ಸಾತ್ವಿಕರೂ ಆಗಿರುವವರಿಗೆ ಮಾತ್ರವಲ್ಲದೆ ವಕ್ರಬುದ್ಧಿಯುಳ್ಳವರಿಗೂ ವಿಧೇಯರಾಗಿರಿ.

19 ಒಬ್ಬನು ಅನ್ಯಾಯವಾಗಿ ಬಾಧೆಪಡುವವನಾಗಿದ್ದು ದೇವರು ನೋಡುತ್ತಾನೆಂದು ಅರಿತು ಆ ಕಷ್ಟವನ್ನು ಸಹಿಸಿಕೊಂಡರೆ ಅದು ಶ್ಲಾಘ್ಯವಾಗಿದೆ.

20 ತಪ್ಪುಮಾಡಿ ಗುದ್ದು ತಿನ್ನುವುದರಲ್ಲಿ ನೀವು ಸಹಿಸಿಕೊಂಡರೆ ಅದರಿಂದೇನು ಕೀರ್ತಿ? ಆದರೆ ಒಳ್ಳೆಯದನ್ನು ಮಾಡಿ ಬಾಧೆಪಡುವುದರಲ್ಲಿ ನೀವು ಸಹಿಸಿಕೊಂಡರೆ ಅದು ದೇವರ ಮುಂದೆ ಶ್ಲಾಘ್ಯವಾಗಿದೆ.

21 ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿದ್ದೀರಿ. ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ಆತನ ಹೆಜ್ಜೆಯ ಜಾಡಿಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು.

22 ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ.

23 ಬಯ್ಯುವವರನ್ನು ಆತನು ಪ್ರತಿಯಾಗಿ ಬಯ್ಯಲಿಲ್ಲ, ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ, ನ್ಯಾಯವಾಗಿ ತೀರ್ಪು ಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು.

24 ನಾವು ಪಾಪದ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಶಿಲುಬೆಯನ್ನು ಏರಿ ಮರಣ ಹೊಂದಿದನು. ಆತನ ಬಾಸುಂಡೆಗಳಿಂದ ನಮಗೆ ಗುಣವಾಯಿತು.

25 ನೀವು ದಾರಿತಪ್ಪಿದ ಕುರಿಗಳಂತೆ ಇದ್ದವರು. ಆದರೆ ಈಗ ನೀವು ತಿರುಗಿಕೊಂಡು ನಿಮ್ಮ ಆತ್ಮಗಳ ಕುರುಬನೂ ಪಾಲಕನೂ ಆಗಿರುವಾತನ ಬಳಿಗೆ ಬಂದಿದ್ದೀರಿ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು