Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಪೂರ್ವಕಾಲ ವೃತ್ತಾಂತ 23 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ಲೇವಿಯರ ಕರ್ತವ್ಯಗಳು

1 ದಾವೀದನು ವಯೋವೃದ್ಧನಾಗಿ ತನ್ನ ಜೀವಮಾನದ ಕೊನೆಯ ದಿನಗಳಲ್ಲಿ ತನ್ನ ಮಗನಾದ ಸೊಲೊಮೋನನನ್ನು ಇಸ್ರಾಯೇಲರ ಅರಸನನ್ನಾಗಿ ನೇಮಿಸಿದನು.

2 ಅವನು ಇಸ್ರಾಯೇಲರ ಎಲ್ಲಾ ಅಧಿಪತಿಗಳನ್ನೂ, ಯಾಜಕರನ್ನೂ ಮತ್ತು ಲೇವಿಯರನ್ನೂ ತನ್ನ ಬಳಿಯಲ್ಲಿ ಒಟ್ಟುಗೂಡಿಸಿದನು.

3 ಮೂವತ್ತು ವರ್ಷಕ್ಕಿಂತ ಹೆಚ್ಚಾದ ವಯಸ್ಸುಳ್ಳ ಲೇವಿಯರನ್ನು ಲೆಕ್ಕಿಸಿದಾಗ ಗಂಡಸರ ಸಂಖ್ಯೆಯು ಮೂವತ್ತೆಂಟು ಸಾವಿರವಾಗಿತ್ತು.

4 ದಾವೀದನು ಯೆಹೋವನ ಆಲಯವನ್ನು ಕಟ್ಟುವವರ ಮೇಲ್ವಿಚಾರಣೆಗಾಗಿ ಇಪ್ಪತ್ತ ನಾಲ್ಕು ಸಾವಿರ ಜನರನ್ನು ನ್ಯಾಯಾಧಿಪತಿಗಳನ್ನಾಗಿ ಮತ್ತು ಅಧಿಕಾರಿಗಳನ್ನಾಗಿ ಆರು ಸಾವಿರ ಜನರನ್ನು,

5 ದ್ವಾರಪಾಲಕರನ್ನಾಗಿ, ನಾಲ್ಕು ಸಾವಿರ ಜನರನ್ನು ಮತ್ತು ತಾನು ಸಿದ್ಧಪಡಿಸಿದ ವಾದ್ಯಗಳಿಂದ ಯೆಹೋವನನ್ನು ಭಜಿಸುವುದಕ್ಕಾಗಿ ನಾಲ್ಕು ಸಾವಿರ ಜನರನ್ನೂ ನೇಮಿಸಿದನು.

6 ಇದಲ್ಲದೆ ದಾವೀದನು ಲೇವಿಯ ಸಂತಾನದವರಾದ ಗೇರ್ಷೋನ್ಯರು, ಕೆಹಾತ್ಯರು ಮತ್ತು ಮೆರಾರೀಯರು ಇವರನ್ನು ವಿವಿಧ ವರ್ಗಗಳನ್ನಾಗಿ ವಿಭಾಗಿಸಿದನು.


ಗೇರ್ಷೋನ್ಯರು

7 ಗೇರ್ಷೋನ್ಯರ ಮೂಲಪುರುಷರು ಲದ್ದಾನ್ ಮತ್ತು ಶಿಮ್ಮೀ ಎಂಬುವರು.

8 ಲದ್ದಾನನಿಗೆ ಪ್ರಧಾನನಾದ ಯೆಹೀಯೇಲ್, ಜೇತಾಮ್ ಮತ್ತು ಯೋವೇಲ್ ಎಂಬ ಮೂರು ಮಕ್ಕಳಿದ್ದರು.

9 ಶಿಮ್ಮೀಗೆ ಶೆಲೋಮೋತ್, ಹಜೀಯೇಲ್, ಹಾರಾನ್ ಎಂಬ ಮೂರು ಮಕ್ಕಳಿದ್ದರು. ಇವರು ಲದ್ದಾನ್ಯರ ಗೋತ್ರ ಪ್ರಧಾನರು.

10 ಶಿಮ್ಮೀಗೆ ಯಹತ್, ಜೀನ, ಯೆಯೂಷ್ ಮತ್ತು ಬೆರೀಯ ಎಂಬ ನಾಲ್ಕು ಮಕ್ಕಳಿದ್ದರು.

11 ಯಹತನು ಪ್ರಧಾನನು, ಜೀಜನು ಎರಡನೆಯವನಾಗಿದ್ದನು, ಯೆಯೂಷ್, ಬೆರೀಯರಿಗೆ ಹೆಚ್ಚು ಮಕ್ಕಳಿರಲಿಲ್ಲವಾದುದರಿಂದ ಅವರಿಬ್ಬರೂ ಒಂದೇ ಕುಟುಂಬವಾಗಿ ವರ್ಗವಾಗಿಯೂ ಎಣಿಸಲ್ಪಟ್ಟಿದ್ದರು.


ಕೆಹಾತ್ಯರು

12 ಕೆಹಾತನಿಗೆ ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್ ಎಂಬ ನಾಲ್ಕು ಮಕ್ಕಳಿದ್ದರು.

13 ಅಮ್ರಾಮನ ಮಕ್ಕಳು ಆರೋನ್ ಮತ್ತು ಮೋಶೆ ಎಂಬುವವರು. ಆರೋನನು ಅವನ ಸಂತಾನದವರು ಮಹಾ ಪರಿಶುದ್ಧವಾದ ವಸ್ತುಗಳನ್ನು ಪ್ರತಿಷ್ಠಿಸುವುದಕ್ಕೆ ಪ್ರತ್ಯೇಕಿಸಲ್ಪಟ್ಟರು. ಇವರು ಯೆಹೋವನ ಸನ್ನಿಧಿಯಲ್ಲಿ ಸದಾಕಾಲ ಧೂಪಹಾಕುವವರೂ, ಆತನ ಸೇವೆ ಮಾಡುವವರೂ, ಆತನ ಹೆಸರಿನಿಂದ ಜನರನ್ನು ಆಶೀರ್ವದಿಸುವವರೂ ಆಗಿದ್ದರು.

14 ದೇವರ ಮನುಷ್ಯನಾದ ಮೋಶೆಯ ಸಂತಾನದವರು ಸಾಧಾರಣ ಲೇವಿಯರೊಳಗೆ ಎಣಿಸಲ್ಪಟ್ಟರು.

15 ಮೋಶೆಯ ಮಕ್ಕಳು ಗೇರ್ಷೋಮ್ ಮತ್ತು ಎಲೀಯೆಜೆರ್ ಎಂಬುವವರು.

16 ಪ್ರಧಾನನಾದ ಶೆಬೂವೇಲನು ಗೇರ್ಷೋಮನ ಮಗನು.

17 ಪ್ರಧಾನನಾದ ರೆಹಬ್ಯ ಎಲೀಯೆಜೆರನ ಮಗನು. ಎಲೀಯೆಜೆರನಿಗೆ ಬೇರೆ ಮಕ್ಕಳಿರಲಿಲ್ಲ. ಆದರೆ ರೆಹಬ್ಯನಿಗೆ ಅನೇಕ ಮಕ್ಕಳಿದ್ದರು.

18 ಪ್ರಧಾನನಾದ ಶೆಲೋಮೋತನು ಇಚ್ಹಾರನ ಮಗ.

19 ಹೆಬ್ರೋನನ ಮಕ್ಕಳಲ್ಲಿ ಯೆರೀಯನು ಪ್ರಧಾನನು, ಅಮರ್ಯನು ಎರಡನೆಯವನು, ಯಹಜೀಯೇಲನು ಮೂರನೆಯವನು, ಯೆಕಮ್ಮಾಮ್ ನಾಲ್ಕನೆಯವನು.

20 ಉಜ್ಜೀಯೇಲನ ಮಕ್ಕಳಲ್ಲಿ ಮೀಕನು ಪ್ರಧಾನನು, ಇಷ್ಷೀಯನು ಎರಡನೆಯವನು.


ಮೆರಾರೀಯರು

21 ಮೆರಾರೀಯ ಮಕ್ಕಳು ಮಹ್ಲೀ ಮತ್ತು ಮೂಷೀ ಎಂಬುವವರು. ಮಹ್ಲೀಯ ಮಕ್ಕಳು ಎಲ್ಲಾಜಾರ್ ಮತ್ತು ಕೀಷ್.

22 ಎಲ್ಲಾಜಾರನು ಗಂಡು ಮಕ್ಕಳಿಲ್ಲದೆ ಸತ್ತನು. ಅವನಿಗೆ ಹೆಣ್ಣು ಮಕ್ಕಳು ಮಾತ್ರ ಇದ್ದರು. ಇವರು ತಮ್ಮ ಬಂಧುಗಳಾದ ಕೀಷನ ಮಕ್ಕಳನ್ನು ಮದುವೆಯಾದರು.

23 ಮೂಷೀಗೆ ಮಹ್ಲೀ, ಏದೆರ್ ಮತ್ತು ಯೆರೇಮೋತ್ ಎಂಬ ಮೂವರು ಮಕ್ಕಳಿದ್ದರು.

24 ಲೇವಿಯರ ಪಟ್ಟಿಯಲ್ಲಿ ಬರೆಯಲ್ಪಟ್ಟ ಹೆಸರುಗಳ ಪ್ರಕಾರ ಇವರೇ ಆಯಾ ಲೇವಿ ವರ್ಗಗಳ ಕುಟುಂಬದ ಪ್ರಧಾನರು. ಇವರಲ್ಲಿ ಇಪ್ಪತ್ತು ವರ್ಷಕ್ಕಿಂತ ಹೆಚ್ಚಿನ ವಯಸ್ಸುಳ್ಳವರು ಯೆಹೋವನ ಆಲಯದಲ್ಲಿ ಸೇವೆಮಾಡತಕ್ಕವರಾಗಿದ್ದರು.

25 ಇಸ್ರಾಯೇಲಿನ ದೇವರಾದ ಯೆಹೋವನು, ತನ್ನ ಪ್ರಜೆಗಳಿಗೆ ವಿಶ್ರಾಂತಿಯನ್ನು ಅನುಗ್ರಹಿಸಿ, ಆತನು ಸದಾಕಾಲವೂ ಯೆರೂಸಲೇಮಿನಲ್ಲಿ ವಾಸಿಸುವವನಾದುದರಿಂದ,

26 ಲೇವಿಯರು ಇನ್ನು ಮುಂದೆ ಆತನ ಗುಡಾರವನ್ನೂ, ಆರಾಧನಾ ಸಾಮಗ್ರಿಗಳನ್ನೂ ಹೊರುವುದು ಅವಶ್ಯವಿಲ್ಲ ಎಂದು ದಾವೀದನು ಈ ಪ್ರಕಾರ ಆಜ್ಞೆ ವಿಧಿಸಿದನು.

27 ದಾವೀದನ ಈ ಕಡೇ ಆಜ್ಞೆಯ ಮೇರೆಗೆ ಲೇವಿಯರಲ್ಲಿ ಇಪ್ಪತ್ತು ವರ್ಷಕ್ಕಿಂತ ಹೆಚ್ಚಿನ ವಯಸ್ಸುಳ್ಳವರೆಲ್ಲರೂ ಪರಿಗಣಿಸಲ್ಪಟ್ಟರು.

28 ಅವರು ಆರೋನ್ಯರ ಕೈಕೆಳಗಿದ್ದುಕೊಂಡು ಯೆಹೋವನ ಆಲಯದ ಪರಿಚಾರಿಕೆಯನ್ನು ನಡೆಸುತ್ತಿದ್ದರು. ಅವರ ಕೆಲಸಗಳು ಯಾವುದೆಂದರೆ, ಅಂಗಳಗಳ ಕೋಣೆಗಳನ್ನು ಸ್ವಚ್ಛಮಾಡಿ ನೋಡಿಕೊಳ್ಳುವುದೂ, ದೇವಾಲಯಕ್ಕೆ ಸಂಬಂಧಪಟ್ಟವುಗಳನ್ನೆಲ್ಲಾ ಶುದ್ಧಮಾಡುವುದೂ,

29 ದೇವಾಲಯದಲ್ಲಿ ಸೇವೆಮಾಡುವುದೂ, ನೈವೇದ್ಯದ ಮೀಸಲು ರೊಟ್ಟಿ, ನೈವೇದ್ಯಕ್ಕೆ ಬೇಕಾದ ಗೋದಿಹಿಟ್ಟು, ಹುಳಿಯಿಲ್ಲದ ರೊಟ್ಟಿ, ಕಬ್ಬಿಣದ ಹಂಚಿನಲ್ಲಿ ಸುಟ್ಟ ರೊಟ್ಟಿ, ಎಣ್ಣೆಯಿಂದ ನೆನೆದ ಭಕ್ಷ್ಯಗಳು ಇವುಗಳನ್ನು ಒದಗಿಸುವುದೂ, ಸೇರು, ಅಳತೆಗೋಲುಗಳನ್ನು ಪರೀಕ್ಷಿಸುವುದೂ,

30 ಪ್ರತಿದಿನ ಪ್ರಾತಃಕಾಲ ಸಾಯಂಕಾಲಗಳಲ್ಲಿ ನಿಯಮಿತ ಸಂಖ್ಯೆಗೆ ಸರಿಯಾಗಿ

31 ಸಬ್ಬತ್ ದಿನ, ಅಮಾವಾಸ್ಯೆ, ಜಾತ್ರೆ ಇವುಗಳಲ್ಲಿ ಯೆಹೋವನ ಮುಂದೆ ತಪ್ಪದೆ ನಡೆಯುವ ಸರ್ವಾಂಗಹೋಮ, ಸಮರ್ಪಣೆಯ ಹೊತ್ತಿನಲ್ಲಿ ಯೆಹೋವನಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸುವುದೂ ಇವೇ.

32 ಹೀಗೆ ಅವರು ತಮ್ಮ ಸಹೋದರನಾದ ಆರೋನನ ಸಹಾಯಕರಾಗಿದ್ದು ದೇವದರ್ಶನದ ಗುಡಾರವನ್ನೂ, ಪರಿಶುದ್ಧವಾದ ಎಲ್ಲಾ ವಸ್ತುಗಳನ್ನು ನೋಡಿಕೊಳ್ಳುವುದೇ ಯೆಹೋವನ ಆಲಯದಲ್ಲಿ ಮಾಡತಕ್ಕ ಕರ್ತವ್ಯಗಳು.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು