1 ಪೂರ್ವಕಾಲ ವೃತ್ತಾಂತ 18 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019ದಾವೀದನು ಸಾಧಿಸಿದ ದಿಗ್ವಿಜಯಗಳು 1 ದಾವೀದನು ಫಿಲಿಷ್ಟಿಯರನ್ನು ಮುತ್ತಿಗೆಹಾಕಿ, ಅವರನ್ನು ಸೋಲಿಸಿ, ಅವರಿಂದ ಗತ್ ಪಟ್ಟಣವನ್ನೂ ಮತ್ತು ಅದರ ಗ್ರಾಮಗಳನ್ನೂ ತೆಗೆದುಕೊಂಡನು. 2 ಇದಲ್ಲದೆ ಅವನು ಮೋವಾಬ್ಯರನ್ನು ಸೋಲಿಸಿದನು. ಅವರು ದಾವೀದನಿಗೆ ದಾಸರಾಗಿ ಕಪ್ಪಕೊಡಬೇಕಾಯಿತು. 3 ದಾವೀದನು ಯೂಫ್ರೆಟಿಸ್ ನದಿಯ ಸುತ್ತಣ ಪ್ರದೇಶದಲ್ಲಿ ತನ್ನ ರಾಜ್ಯಾಧಿಕಾರವನ್ನು ಸ್ಥಾಪಿಸುವುದಕ್ಕೆ ಹೋಗುತ್ತಿದ್ದ ಚೋಬದ ಅರಸನಾದ ಹದರೆಜರನನ್ನು ಹಮಾತಿನ ಬಳಿಯಲ್ಲಿ ಸೋಲಿಸಿದನು. 4 ದಾವೀದನು ಅವನ ಸಾವಿರ ರಥಗಳನ್ನೂ, ಏಳುಸಾವಿರ ರಾಹುತರನ್ನೂ, ಇಪ್ಪತ್ತು ಸಾವಿರ ಕಾಲಾಳುಗಳನ್ನೂ ಸೆರೆಹಿಡಿದು, ನೂರು ಕುದುರೆಗಳನ್ನಿಟ್ಟುಕೊಂಡು, ಉಳಿದ ಕುದುರೆಗಳ ಹಿಂಗಾಲಿನ ನರಗಳನ್ನು ಕತ್ತರಿಸಿ ಬಿಟ್ಟನು. 5 ದಮಸ್ಕದ ಅರಾಮ್ಯರು ಚೋಬದ ಅರಸನಾದ ಹದದೆಜರನನ್ನು ರಕ್ಷಿಸಲು ಬಂದಾಗ ದಾವೀದನು ಅವರನ್ನೂ ಸೋಲಿಸಿ, ಅವರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಕೊಂದನು. 6 ಇದಲ್ಲದೆ ಅವನು ದಮಸ್ಕದ ಅರಾಮ್ಯ ದೇಶದಲ್ಲಿ ಕಾವಲುದಂಡನ್ನು ಇರಿಸಿದನು. ಹೀಗೆ ಅರಾಮ್ಯರು ಅವನ ಸೇವಕರಾಗಿ ಅವನಿಗೆ ಕಪ್ಪ ಕೊಡುವವರಾದರು. ಯೆಹೋವನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ವಿಜಯ ದೊರಕಿತು. 7 ದಾವೀದನು ಹದರೆಜರನ ಸೇವಕರಿಗಿದ್ದ ಬಂಗಾರದ ಗುರಾಣಿಗಳನ್ನು ಕಿತ್ತುಕೊಂಡು ಯೆರೂಸಲೇಮಿಗೆ ತೆಗೆದುಕೊಂಡು ಹೋದನು. 8 ಇದಲ್ಲದೆ ದಾವೀದನು ಹದರೆಜರನ ಟಿಭತ್ ಮತ್ತು ಕೂನ್ ಎಂಬ ಪಟ್ಟಣಗಳಿಂದ ಬಹಳ ತಾಮ್ರವನ್ನು ತೆಗೆದುಕೊಂಡು ಹೋದನು. ಸೊಲೊಮೋನನು ಆ ತಾಮ್ರದಿಂದ ಕಂಚಿನ ಕಡಲೆಂಬ ಪಾತ್ರೆಯನ್ನೂ, ಕಂಬಗಳನ್ನೂ ಮತ್ತು ಬೇರೆ ಸಾಮಾನುಗಳನ್ನು ಇದೇ ತಾಮ್ರದಿಂದ ಮಾಡಿಸಿದನು. 9 ದಾವೀದನು ಚೋಬದ ಅರಸನಾದ ಹದದೆಜರನ ಸೈನ್ಯವನ್ನೆಲ್ಲಾ ಸೋಲಿಸಿದನೆಂಬ ವರ್ತಮಾನವು ಹಮಾತಿನ ಅರಸನಾದ ತೋವಿಗೆ ಮುಟ್ಟಿತು. 10 ತೋವಿಗೂ ಹದರೆಜನಿಗೂ ವಿರೋಧವಿತ್ತು. ದಾವೀದನು ಹದದೆಜರನ ವಿರುದ್ಧ ಹೋರಾಡಿ ಅವನನ್ನು ಸೋಲಿಸಿದ್ದರಿಂದ, ತೋವು ದಾವೀದನನ್ನು ವಂದಿಸುವುದಕ್ಕೂ, ಹಾರೈಸುವುದಕ್ಕೂ ತನ್ನ ಮಗನಾದ ಹದೋರಾಮನನ್ನು ಕಳುಹಿಸಿದನು. ಇವನು ಬರುವಾಗ ದಾವೀದನಿಗೋಸ್ಕರ ವಿಧವಿಧವಾದ ತಾಮ್ರ, ಬೆಳ್ಳಿ, ಬಂಗಾರಗಳ ಪಾತ್ರೆಗಳನ್ನು ತಂದನು. 11 ಅರಸನಾದ ದಾವೀದನು ಇವುಗಳನ್ನೂ ಎದೋಮ್ಯರು, ಮೋವಾಬ್ಯರು, ಅಮ್ಮೋನಿಯರು, ಫಿಲಿಷ್ಟಿಯರು ಮತ್ತು ಅಮಾಲೇಕ್ಯರು ಎಂಬೀ ಸುತ್ತಲಿನ ಜನಾಂಗಗಳಿಂದ ವಶಪಡಿಸಿಕೊಂಡ ಬೆಳ್ಳಿ ಬಂಗಾರವನ್ನು ಯೆಹೋವನಿಗೋಸ್ಕರ ಪ್ರತಿಷ್ಠಿಸಿದನು. 12 ಇದಲ್ಲದೆ ಚೆರೂಯಳ ಮಗನಾದ ಅಬ್ಷೈಯು ಉಪ್ಪಿನ ತಗ್ಗಿನಲ್ಲಿ ಎದೋಮ್ಯರ ಹದಿನೆಂಟು ಸಾವಿರ ಸೈನಿಕರನ್ನು ಸೋಲಿಸಿದನು. 13 ದಾವೀದನು ಎದೋಮಿನಲ್ಲಿ ಕಾವಲುದಂಡುಗಳನ್ನಿರಿಸಿದನು. ಎದೋಮ್ಯರೆಲ್ಲರೂ ದಾವೀದನ ದಾಸರಾದರು. ಯೆಹೋವನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ಜಯದೊರಕಿತು. ದಾವೀದನ ಸರದಾರರು 14 ದಾವೀದನು ಇಸ್ರಾಯೇಲರೆಲ್ಲರ ಅರಸನಾಗಿ ಎಲ್ಲಾ ಪ್ರಜೆಗಳಿಗೂ ಧರ್ಮತಪ್ಪದೆ ನೀತಿ ಮತ್ತು ನ್ಯಾಯದಿಂದ ಕಾರ್ಯ ನಿರ್ವಹಿಸುತ್ತಿದ್ದನು. 15 ಚೆರೂಯಳ ಮಗನಾದ ಯೋವಾಬನು ಅವನ ಸೇನಾಧಿಪತಿಯೂ, ಅಹೀಲೂದನ ಮಗನಾದ ಯೆಹೋಷಾಫಾಟನು ಮಂತ್ರಿಯೂ ಆಗಿದ್ದರು. 16 ಅಹೀಟೂಬನ ಮಗನಾದ ಚಾದೋಕನೂ ಮತ್ತು ಅಬೀಮೆಲೆಕನ ಮಗನಾದ ಎಬ್ಯಾತಾರನೂ ಅವನ ಯಾಜಕರಾಗಿದ್ದರು. ಶವ್ಷನು ಲೇಖಕನು. 17 ಯೆಹೋಯಾದನ ಮಗನಾದ ಬೆನಾಯನು, ಕೆರೇತ್ಯ ಮತ್ತು ಪೆಲೇತ್ಯ ಎಂಬ ಕಾವಲುದಂಡುಗಳ ಮುಖ್ಯಸ್ಥನಾದನು. ದಾವೀದನ ಮಕ್ಕಳು ಅರಸನ ಒಡ್ಡೋಲಗದಲ್ಲಿ ಪ್ರಧಾನರಾಗಿದ್ದರು. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.