Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಥೆಸಲೋನಿಕದವರಿಗೆ 5 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಸಹೋದರರೇ, ಈ ಸಂಗತಿಗಳು ನಡೆಯಬೇಕಾಗಿರುವ ಕಾಲಗಳನ್ನೂ ಗಳಿಗೆಗಳನ್ನೂ ಕುರಿತು ನಿಮಗೆ ಬರೆಯುವುದು ಅಗತ್ಯವಿಲ್ಲ.

2 ರಾತ್ರಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವುದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ.

3 “ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆಂದು” ಜನರು ಹೇಳುತ್ತಿರುವಾಗಲೇ ನಾಶನವು ಅವರ ಮೇಲೆ ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವುದು, ಅವರು ಹೇಗೂ ತಪ್ಪಿಸಿಕೊಳ್ಳಲಾರರು.

4 ಆದರೆ ಸಹೋದರರೇ, ಆ ದಿನವು ಕಳ್ಳನಂತೆ ನಿಮ್ಮ ಮೇಲೆ ಬರತಕ್ಕದ್ದಲ್ಲ, ಯಾಕೆಂದರೆ ನೀವು ಕತ್ತಲೆಯಲ್ಲಿರುವವರಲ್ಲ.

5 ನೀವೆಲ್ಲರೂ ‘ಬೆಳಕಿನ ಮಕ್ಕಳು’ ಹಾಗೂ ‘ಹಗಲಿನ ಮಕ್ಕಳು’ ಆಗಿದ್ದೀರಷ್ಟೆ, ನಾವು ರಾತ್ರಿಯವರೂ ಅಲ್ಲ, ಕತ್ತಲೆಯವರೂ ಅಲ್ಲ.

6 ಆದಕಾರಣ ನಾವು ಇತರರಂತೆ ನಿದ್ರೆಮಾಡದೆ ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿರೋಣ.

7 ನಿದ್ರೆಮಾಡುವವರು ರಾತ್ರಿಯಲ್ಲಿ ನಿದ್ರೆ ಮಾಡುತ್ತಾರೆ, ಅಮಲೇರುವವರು ರಾತ್ರಿಯಲ್ಲಿ ಅಮಲೇರುತ್ತಾರಷ್ಟೆ.

8 ನಾವಾದರೋ ಹಗಲಿನವರಾಗಿರಲಾಗಿ ನಂಬಿಕೆ ಪ್ರೀತಿಗಳೆಂಬ ಎದೆಕವಚವನ್ನೂ, ರಕ್ಷಣೆಯ ನಿರೀಕ್ಷೆಯೆಂಬ ಶಿರಸ್ತ್ರಾಣವನ್ನೂ ಧರಿಸಿಕೊಂಡು ಸ್ವಸ್ಥಚಿತ್ತರಾಗಿರೋಣ.

9 ಯಾಕೆಂದರೆ ದೇವರು ನಮ್ಮನ್ನು ತನ್ನ ಕೋಪಕ್ಕೆ ಗುರಿಯಾಗಬೇಕೆಂದು ನೇಮಿಸದೆ ನಾವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕವಾಗಿ ರಕ್ಷಣೆಯನ್ನು ಹೊಂದಿಕೊಳ್ಳಬೇಕೆಂದು ನೇಮಿಸಿದನು.

10 ನಾವು ಎಚ್ಚರವಾಗಿದ್ದರೂ ಸರಿಯೇ ಅಥವಾ ನಿದ್ರೆಯಲ್ಲಿದ್ದರೂ ಸರಿಯೇ, ತನ್ನ ಜೊತೆಯಲ್ಲಿಯೇ ಜೀವಿಸಬೇಕೆಂದು ಯೇಸು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟನು.

11 ಆದ್ದರಿಂದ ನೀವು ಈಗ ಮಾಡುತ್ತಿರುವ ಪ್ರಕಾರವೇ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ ಇರಿ.


ಕ್ರೈಸ್ತರು ಅನುಸರಿಸತಕ್ಕ ಕೆಲವು ಸೂತ್ರಗಳು

12 ಸಹೋದರರೇ, ಕರ್ತನ ಕಾರ್ಯಗಳಲ್ಲಿ ನಿಮ್ಮ ಮೇಲೆ ಮುಖ್ಯಸ್ಥರಾಗಿದ್ದು, ಪ್ರಯಾಸಪಡುತ್ತಾ ನಿಮಗೆ ಬುದ್ಧಿ ಹೇಳುತ್ತರೋ,

13 ಅವರನ್ನು ಲಕ್ಷಿಸಿ ಅವರ ಕೆಲಸದ ನಿಮಿತ್ತ ಅವರನ್ನು ಪ್ರೀತಿಯಿಂದ ಬಹಳವಾಗಿ ಗೌರವಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇವೆ. ನಿಮ್ಮ ನಿಮ್ಮೊಳಗೆ ಸಮಾಧಾನವಾಗಿರಿ.

14 ಸಹೋದರರೇ, ಮೈಗಳ್ಳರಿಗೆ ಬುದ್ಧಿಹೇಳಿರಿ, ಮನಗುಂದಿದವರನ್ನು ಧೈರ್ಯಪಡಿಸಿರಿ, ಬಲಹೀನರಿಗೆ ಆಧಾರವಾಗಿರಿ, ಎಲ್ಲರೊಂದಿಗೆ ದೀರ್ಘಶಾಂತಿಯಿಂದಿರಿ ಎಂದು ನಿಮ್ಮನ್ನು ಪ್ರಬೋಧಿಸುತ್ತೇವೆ.

15 ಯಾರೂ ಅಪಕಾರಕ್ಕೆ ಅಪಕಾರಮಾಡದಂತೆ ನೋಡಿಕೊಳ್ಳಿರಿ, ಯಾವಾಗಲೂ ನೀವು ಒಬ್ಬರಿಗೊಬ್ಬರು ಹಿತವನ್ನು ಮಾಡಿಕೊಂಡಿರುವುದಲ್ಲದೆ ಎಲ್ಲರಿಗೂ ಒಳ್ಳೆಯದನ್ನು ಮಾಡುವವರಾಗಿರಿ.

16 ಯಾವಾಗಲೂ ಸಂತೋಷಿಸಿರಿ,

17 ಎಡೆಬಿಡದೆ ಪ್ರಾರ್ಥನೆಮಾಡಿರಿ,

18 ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿಬಂದ ದೇವರ ಚಿತ್ತವಾಗಿದೆ.

19 ಪವಿತ್ರಾತ್ಮನನ್ನು ನಂದಿಸಬೇಡಿ,

20 ಪ್ರವಾದನೆಗಳನ್ನು ಹಿನೈಸಬೇಡಿರಿ.

21 ಆದರೆ ಎಲ್ಲವನ್ನೂ ಪರೀಕ್ಷಿಸಿ ಒಳ್ಳೆಯದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ.

22 ಸಕಲವಿಧವಾದ ಕೆಟ್ಟತನಕ್ಕೆ ದೂರವಾಗಿರಿ.


ಸಮಾಪ್ತಿ ವಾಕ್ಯಗಳು.

23 ಶಾಂತಿದಾಯಕನಾದ ದೇವರು ತಾನೇ ನಿಮ್ಮನ್ನು ಪರಿಪೂರ್ಣವಾಗಿ ಶುದ್ಧೀಕರಿಸಲಿ. ನಮ್ಮ ಕರ್ತನಾದ ಯೇಸು ಕ್ರಿಸ್ತನು ಹಿಂತಿರುಗಿ ಬರುವಾಗ ನಿಮ್ಮ ಆತ್ಮ, ಪ್ರಾಣ ಮತ್ತು ಶರೀರಗಳು ದೋಷವಿಲ್ಲದೆ ಪರಿಪೂರ್ಣವಾಗಿ ಕಾಣಿಸಿಕೊಳ್ಳುವಂತೆ ಕಾಪಾಡಲ್ಪಡಲಿ.

24 ನಿಮ್ಮನ್ನು ಕರೆದವನು ನಂಬಿಗಸ್ತನು, ಆತನು ತನ್ನ ಕಾರ್ಯವನ್ನು ಸಾಧಿಸುವನು.

25 ಸಹೋದರರೇ, ನಮಗೋಸ್ಕರ ಪ್ರಾರ್ಥನೆ ಮಾಡಿರಿ.

26 ಪವಿತ್ರವಾದ ಮುದ್ದಿಟ್ಟು ಸಹೋದರರೆಲ್ಲರನ್ನೂ ವಂದಿಸಿರಿ.

27 ಈ ಪತ್ರಿಕೆಯನ್ನು ಸಹೋದರರೆಲ್ಲರಿಗೂ ಓದಿ ಹೇಳಬೇಕೆಂದು ನಿಮಗೆ ಕರ್ತನಲ್ಲಿ ಆಜ್ಞಾಪಿಸುತ್ತೇನೆ.

28 ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು