Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಥೆಸಲೋನಿಕದವರಿಗೆ 4 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019


ದೇವರಿಗೆ ಮೆಚ್ಚಿಕೆಯಾದ ಜೀವನ

1 ಕಡೆಯದಾಗಿ, ಸಹೋದರರೇ, ನಾವು ಕರ್ತನಾದ ಯೇಸುವಿನ ಮುಖಾಂತರ ನಿಮಗೆ ಕೊಟ್ಟಿರುವ ಆಜ್ಞೆಗಳನ್ನು ತಿಳಿದಿದ್ದೀರಷ್ಟೆ.

2 ಅದುದರಿಂದ ನೀವು ಹೇಗೆ ನಡೆದು ದೇವರನ್ನು ಮೆಚ್ಚಿಸಬೇಕಾಗಿದೆಯೋ ಆ ಆಜ್ಞೆಗಳನ್ನು ನಮ್ಮಿಂದ ಕಲಿತುಕೊಂಡು ಅದರಂತೆ ನಡೆಯುತ್ತಲೇ ಇದ್ದಿರಿ. ನೀವು ಹಾಗೆಯೇ ಇನ್ನೂ ಹೆಚ್ಚಾಗಿ ನಡೆಯಬೇಕೆಂದು ನಿಮ್ಮನ್ನು ಯೇಸು ಕರ್ತನಲ್ಲಿ ಬೇಡಿಕೊಳ್ಳುತ್ತೇವೆ ಹಾಗೂ ಪ್ರಬೋಧಿಸುತ್ತೇವೆ.

3 ದೇವರ ಚಿತ್ತವೇನಂದರೆ ನೀವು ಶುದ್ಧರಾಗಬೇಕೆಂಬುದೇ. ಆದ್ದರಿಂದ ಹಾದರಕ್ಕೆ ದೂರವಾಗಿರಬೇಕು.

4-5 ದೇವರನ್ನರಿಯದ ಅನ್ಯಜನರಂತೆ ಕಾಮಾಭಿಲಾಷೆಗಳಿಗೆ ಒಳಗಾಗದೆ, ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರವಾದ ಮನಸ್ಸಿನಿಂದಲೂ ಘನತೆಯಿಂದಲೂ ಪತ್ನಿಯನ್ನು ಸಂಪಾದಿಸಿಕೊಳ್ಳಲು ತಿಳಿಯಬೇಕು.

6 ಈ ವಿಷಯದಲ್ಲಿ ಯಾರೂ ತನ್ನ ಸಹೋದರನನ್ನು ವಂಚಿಸಿ ಕೇಡು ಮಾಡಬಾರದು. ನಾವು ಮೊದಲೇ ತಿಳಿಸಿ, ನಿಮಗೆ ಖಂಡಿತವಾಗಿ ಹೇಳಿದ ಪ್ರಕಾರ ಇವೆಲ್ಲವುಗಳ ವಿಷಯದಲ್ಲಿ ಕರ್ತನು ಪ್ರತಿಕಾರ ಮಾಡುವವನಾಗಿದ್ದಾನೆ.

7 ದೇವರು ನಮ್ಮನ್ನು ಅಶುದ್ಧತೆಗೆ ಕರೆಯದೆ ಶುದ್ಧರಾಗಿರುವುದಕ್ಕೆ ಕರೆದನು.

8 ಹೀಗಿರಲು ಈ ಮಾತನ್ನು ತಿರಸ್ಕರಿಸುವವನು ಮನುಷ್ಯರನ್ನು ಮಾತ್ರವಲ್ಲದೆ, ನಿಮಗೆ ಪವಿತ್ರಾತ್ಮವರವನ್ನು ದಯಪಾಲಿಸುವ ದೇವರನ್ನೂ ತಿರಸ್ಕರಿಸುವವನಾಗಿದ್ದಾನೆ.

9 ಸಹೋದರ ಸ್ನೇಹದ ವಿಷಯದಲ್ಲಿ ನಿಮಗೆ ಬರೆಯುವ ಅವಶ್ಯಕತೆಯಿಲ್ಲ, ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಉಪದೇಶವನ್ನು ನೀವೇ ದೇವರಿಂದ ಹೊಂದಿದವರಾಗಿದ್ದೀರಿ.

10 ಮಕೆದೋನ್ಯದಲ್ಲಿ ವಾಸಿಸುವ ಎಲ್ಲ ಸಹೋದರರನ್ನೂ ಪ್ರೀತಿಸುತ್ತಿರುವುದೇನೋ ನಿಜವೇ. ಆದರೂ ಸಹೋದರರೇ, ನೀವು ಪ್ರೀತಿಯಲ್ಲಿ ಇನ್ನೂ ಹೆಚ್ಚುತ್ತಾ ಬರಬೇಕೆಂದು ನಿಮ್ಮನ್ನು ಉತ್ತೇಜಿಸುತ್ತೇವೆ.

11 ಇದಲ್ಲದೆ ನಾವು ನಿಮಗೆ ಆಜ್ಞೆ ಕೊಟ್ಟಿರುವ ಪ್ರಕಾರ ನೀವು ಮತ್ತೊಬ್ಬರ ವಿಷಯದಲ್ಲಿ ತಲೆಹಾಕದೆ ಸುಮ್ಮಗಿದ್ದು, ಸ್ವಂತ ಕಾರ್ಯಗಳನ್ನೇ ನೋಡಿಕೊಳ್ಳುತ್ತಾ, ಕೈಯಾರೆ ಕೆಲಸಮಾಡಿ ದುಡಿಯಿರಿ.

12 ಹೀಗಿದ್ದರೆ ನೀವು ಹೊರಗಿನವರ ದೃಷ್ಟಿಯಲ್ಲಿ ಸಜ್ಜನರಾಗಿರುವುದೇ ಅಲ್ಲದೆ ನಿಮಗೆ ಯಾವುದಕ್ಕೂ ಕೊರತೆಯಿರುವುದಿಲ್ಲ.


ಯೇಸು ಕರ್ತನು ಪುನರಾಗಮನ

13 ಸಹೋದರರೇ, ನಿದ್ರೆಹೋಗುವವರ ಗತಿ ಏನೆಂದು ನೀವು ತಿಳಿಯದೆ ಇದ್ದು, ನಿರೀಕ್ಷೆಯಿಲ್ಲದವರಾಗಿರುವ ಇತರರಂತೆ ದುಃಖಿಸಬಾರದು ಎಂಬುದೇ ನಮ್ಮ ಬಯಕೆ.

14 ಯೇಸು ಸತ್ತು ಜೀವಿತನಾಗಿ ಎದ್ದನೆಂದು ನಾವು ನಂಬುತ್ತೇವೆ ಹಾಗೆಯೇ ಯೇಸುವಿನಲ್ಲಿದ್ದು ನಿದ್ರೆಹೋದವರನ್ನು ಸಹ ದೇವರು ಆತನೊಡನೆ ಎಬ್ಬಿಸಿ ಕರೆದುಕೊಂಡು ಬರುವನೆಂದು ನಂಬಬೇಕಲ್ಲವೇ.

15 ನಾವು ಕರ್ತನ ಮಾತಿನ ಆಧಾರದ ಮೇಲೆ ನಿಮಗೆ ಹೇಳುವುದೇನಂದರೆ, ಕರ್ತನು ಪುನರಾಗಮಿಸುವವರೆಗೆ ಜೀವದಿಂದುಳಿದಿರುವ ನಾವು ಮರಣ ಹೊಂದಿದವರಿಗಿಂತ ಮುಂದಾಗುವುದಿಲ್ಲ.

16 ಯಾಕೆಂದರೆ ಕರ್ತನು ತಾನೇ ಆಜ್ಞಾಘೋಷದೊಡನೆಯೂ, ಪ್ರಧಾನದೂತನ ಶಬ್ದದೊಡನೆಯೂ, ದೇವರ ತುತ್ತೂರಿ ಧ್ವನಿಯೊಡನೆಯೂ ಆಕಾಶದಿಂದ ಇಳಿದುಬರುವನು. ಆಗ ಕ್ರಿಸ್ತನಲ್ಲಿ ಸತ್ತವರು ಮೊದಲು ಎದ್ದು ಬರುವರು.

17 ಆ ಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವುದಕ್ಕಾಗಿ ಅವರೊಂದಿಗೆ ಮೇಘಗಳಲ್ಲಿ ಫಕ್ಕನೆ ಒಯ್ಯಲ್ಪಡುವೆವು. ಹೀಗಾಗಿ ನಾವು ಸದಾಕಾಲವೂ ಕರ್ತನ ಜೊತೆಯಲ್ಲಿರುವೆವು.

18 ಆದಕಾರಣ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿಕೊಳ್ಳಿರಿ.

KAN-IRV

Creative Commons License

Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.

Bridge Connectivity Solutions Pvt. Ltd.
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು