1 ಥೆಸಲೋನಿಕದವರಿಗೆ 3 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಆದುದರಿಂದ ನಾನು ಇನ್ನು ತಾಳಲಾರದೆ ಅಥೇನೆಯಲ್ಲಿ ಒಬ್ಬಂಟಿಗನಾಗಿಯೇ ಇರುವುದು ಒಳ್ಳೆಯದೆಂದು ಯೋಚಿಸಿ, 2 ನಿಮ್ಮ ಮೇಲೆ ಬಂದಿರುವ ಸಂಕಟಗಳಲ್ಲಿ ಒಬ್ಬರೂ ಚಂಚಲರಾಗದಂತೆ ನಿಮ್ಮನ್ನು ದೃಢಪಡಿಸುವುದಕ್ಕೂ ನಿಮ್ಮ ನಂಬಿಕೆಯ ವಿಷಯವಾಗಿ ಉತ್ತೇಜನಪಡಿಸುವುದಕ್ಕೂ ನಮ್ಮ ಸಹೋದರನೂ, ಕ್ರಿಸ್ತನ ಸುವಾರ್ತೆಯ ಕಾರ್ಯದಲ್ಲಿ ದೇವರ ಸೇವಕನೂ ಆಗಿರುವ ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿದೆವು. 3 ಸಂಕಟಗಳನ್ನು ಅನುಭವಿಸುವುದಕ್ಕಾಗಿಯೇ ನಾವು ನೇಮಿಸಲ್ಪಟ್ಟವರೆಂದು ನೀವೇ ಬಲ್ಲಿರಷ್ಟೆ. 4 ನಾವು ನಿಮ್ಮ ಬಳಿಯಲ್ಲಿದ್ದಾಗ ಸಂಕಟವನ್ನು ಅನುಭವಿಸಲೇಬೇಕೆಂದು ಈ ಮೊದಲೇ ಹೇಳಿದ್ದೆವಲ್ಲಾ. ಅದರಂತೆಯೇ ಆಯಿತು, ಅದು ನಿಮ್ಮ ಅನುಭವಕ್ಕೂ ಬಂದಿತು. 5 ಆದ್ದರಿಂದ ಇನ್ನು ತಡೆಯಲಾರದೆ ಒಂದು ವೇಳೆ ಶೋಧಕನು ನಿಮ್ಮನ್ನು ಶೋಧಿಸಿದ್ದರಿಂದ ನಮ್ಮ ಪ್ರಯಾಸವು ವ್ಯರ್ಥವಾಯಿತೋ ಏನೋ ಎಂದು ನಿಮ್ಮ ನಂಬಿಕೆಯನ್ನು ಕುರಿತು ನಾನು ತಿಳಿದುಕೊಳ್ಳುವುದಕ್ಕಾಗಿ ಅವನನ್ನು ನಿಮ್ಮ ಬಳಿಗೆ ಕಳುಹಿಸಿದೆನು. 6 ಆದರೆ ತಿಮೊಥೆಯನು ನಿಮ್ಮ ಬಳಿಯಿಂದ ಬಂದು ನಿಮ್ಮ ನಂಬಿಕೆ ಮತ್ತು ಪ್ರೀತಿಯ ಕುರಿತಾಗಿ ಶುಭವರ್ತಮಾನವನ್ನು ಹೇಳಿ, ನೀವು ನಮ್ಮನ್ನು ಯಾವಾಗಲೂ ಪ್ರೀತಿಪೂರ್ವಕವಾಗಿ ನೆನಪುಮಾಡಿಕೊಂಡು ನಾವು ನಿಮ್ಮನ್ನು ಹೇಗೋ ಹಾಗೆಯೇ ನೀವೂ ಸಹ ನಮ್ಮನ್ನು ನೋಡುವುದಕ್ಕಾಗಿ ಅಪೇಕ್ಷಿಸುತ್ತಿದ್ದೀರೆಂಬುದನ್ನು ತಿಳಿಸಿದ್ದಾನೆ. 7 ಸಹೋದರರೇ, ಈ ವಾರ್ತೆಯನ್ನು ಕೇಳಿ ನಮ್ಮ ಎಲ್ಲಾ ಕಷ್ಟದಲ್ಲಿಯೂ ಸಂಕಟದಲ್ಲಿಯೂ ನಿಮ್ಮ ನಂಬಿಕೆಯ ಮುಖಾಂತರ ನಮಗೆ ಸಮಾಧಾನವಾಯಿತು. 8 ನೀವು ಕರ್ತನಲ್ಲಿ ದೃಢವಾಗಿ ನಿಂತಿದ್ದರೆ ನಮಗೆ ಜೀವಕಳೆ. 9 ನಿಮ್ಮ ನಿಮಿತ್ತ ನಮ್ಮ ದೇವರ ಮುಂದೆ ನಮಗಿರುವ ಎಲ್ಲಾ ಸಂತೋಷಗಳಿಗಾಗಿ ದೇವರಿಗೆ ಅಷ್ಟೊಂದು ಸ್ತೋತ್ರ ಮಾಡುವುದು ನಮ್ಮಿಂದಾದಿತೇ? 10 ನಿಮ್ಮ ಮುಖವನ್ನು ನೋಡುವುದಕ್ಕೂ ನಿಮ್ಮ ನಂಬಿಕೆಯ ಕೊರತೆಗಳನ್ನು ನೀಗುವುದಕ್ಕೂ ನಾವು ಹಗಲಿರುಳು ದೇವರನ್ನು ತುಂಬಾ ಕಳಕಳಿಯಿಂದ ಬೇಡುವವರಾಗಿದ್ದೇವೆ. 11 ನಮ್ಮ ತಂದೆಯಾದ ದೇವರೂ ನಮ್ಮ ಕರ್ತನಾದ ಯೇಸು, ನಾವು ನಿಮ್ಮ ಬಳಿಗೆ ಬರುವುದಕ್ಕೆ ಮಾರ್ಗವನ್ನು ಸರಾಗಮಾಡಿಕೊಡಲಿ. 12 ನಿಮ್ಮಲ್ಲಿ ನಮ್ಮ ಪ್ರೀತಿಯು ಹೆಚ್ಚಾದ ಹಾಗೆಯೇ ನಿಮ್ಮ ಪ್ರೀತಿಯು ಒಬ್ಬರಿಂದೊಬ್ಬರಿಗೆ ಹರಡಿ ಎಲ್ಲಾ ಮನುಷ್ಯರ ಮೇಲೆಯೂ ಅಭಿವೃದ್ಧಿ ಹೊಂದಿ ಅತ್ಯಧಿಕವಾಗುವಂತೆ ಕರ್ತನು ಆಶೀರ್ವದಿಸಲಿ. 13 ನಮ್ಮ ಕರ್ತನಾದ ಯೇಸು ತನ್ನ ಪರಿಶುದ್ಧ ಪರಿವಾರ ಸಮೇತ ಪುನರಾಗಮಿಸುವಾಗ ತಂದೆಯಾದ ದೇವರ ಸಮಕ್ಷಮದಲ್ಲಿ ನೀವು ಪರಿಶುದ್ಧರೂ, ನಿರ್ದೋಷಿಗಳೂ ಆಗಿರುವಂತೆ ನಿಮ್ಮ ಹೃದಯಗಳನ್ನು ದೃಢಪಡಿಸಲಿ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.