1 ತಿಮೊಥೆಯನಿಗೆ 6 - ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ದಾಸತ್ವ ನೊಗದ ಅಧೀನದಲ್ಲಿರುವವರು ತಮ್ಮ ಯಜಮಾನರನ್ನು ಪೂರ್ಣ ಗೌರವಕ್ಕೂ ಯೋಗ್ಯರೆಂದೆಣಿಸಲಿ, ಇಲ್ಲದಿದ್ದರೆ ದೇವರ ನಾಮಕ್ಕೂ ನಾವು ಹೊಂದಿರುವ ಉಪದೇಶಕ್ಕೂ ನಿಂದನೆ ಉಂಟಾಗುತ್ತದೆ. 2 ಯಾರಿಗಾದರೂ ಕ್ರಿಸ್ತನನ್ನು ನಂಬುವವರಾದ ಯಜಮಾನರಿದ್ದರೆ, ಅವರು ಆ ಯಜಮಾನರನ್ನು ಸಹೋದರರೆಂದು ಉದಾಸೀನಮಾಡದೆ, ತಮ್ಮ ಸೇವೆಯ ಫಲವನ್ನು ಹೊಂದುವವರು, ನಂಬಿಗಸ್ತರು, ಪ್ರಿಯರೂ ಆಗಿದ್ದಾರೆಂದು ತಿಳಿದು ಅವರಿಗೆ ಇನ್ನು ಹೆಚ್ಚಾದ ಸಂತೋಷದಿಂದಲೇ ಸೇವೆಮಾಡಬೇಕು. ಈ ಉಪದೇಶವನ್ನು ಮಾಡಿ ಅವರನ್ನು ಎಚ್ಚರಿಸು. ತಪ್ಪಾದ ಬೋಧನೆಯೂ ನಿಜವಾದ ಐಶ್ವರ್ಯವೂ 3 ಯಾವನಾದರೂ ಭಿನ್ನವಾದ ಉಪದೇಶವನ್ನು ಮಾಡಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಸ್ವಸ್ಥವಾದ ಮಾತುಗಳಿಗೂ, ಭಕ್ತಾನುಸಾರವಾದ ಉಪದೇಶಗಳಿಗೂ ಸಮ್ಮತಿಸದೆ ಹೋದರೆ, 4 ಅವನು ಅಹಂಭಾವಿಯೂ ಅಜ್ಞಾನಿಯೂ ಆಗಿದ್ದು, ನಿಂದನೆ ವಾಗ್ವಾದಗಳನ್ನುಂಟು ಮಾಡುವ ಭ್ರಾಂತಿಯಲ್ಲಿದ್ದಾನೆ. ಇವುಗಳಿಂದ ಹೊಟ್ಟೆಕಿಚ್ಚು, ಜಗಳ, ದೂಷಣೆ, ದುಸ್ಸಂಶಯ ಮುಂತಾದವುಗಳು ಉಂಟಾಗುತ್ತವೆ. 5 ಇದಲ್ಲದೆ ಬುದ್ಧಿಗೆಟ್ಟು ಸತ್ಯವಿಹೀನರಾಗಿದ್ದು ದೇವಭಕ್ತಿಯನ್ನು ಲಾಭಸಾಧನವೆಂದೆಣಿಸುವ ಈ ಮನುಷ್ಯರಲ್ಲಿ ನಿತ್ಯವಾದ ಕಚ್ಚಾಟಗಳು ಉಂಟಾಗುತ್ತವೆ. 6 ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ. 7 ನಾವು ಲೋಕದೊಳಕ್ಕೆ ಏನೂ ತೆಗೆದುಕೊಂಡು ಬರಲಿಲ್ಲವಾದ್ದರಿಂದ, ಅದರೊಳಗಿಂದ ಏನೂ ತೆಗೆದುಕೊಂಡು ಹೋಗಲಾರೆವು. 8 ನಮಗೆ ಅನ್ನ ವಸ್ತ್ರಗಳಿದ್ದರೆ ಸಾಕು, ನಾವು ಸಂತುಷ್ಟರಾಗುತ್ತವೆ. 9 ಐಶ್ವರ್ಯವಂತರಾಗಬೇಕೆಂದು ಮನಸ್ಸುಮಾಡುವವರು ದುಷ್ಟ್ರೇರಣೆಯೆಂಬ ಬಲೆಯಲ್ಲಿ ಸಿಕ್ಕಿಕೊಂಡು, ಬುದ್ಧಿಗೆ ವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಸೆಗಳಲ್ಲಿ ಬೀಳುತ್ತಾರೆ. ಇಂಥ ಆಸೆಗಳು ಮನುಷ್ಯರನ್ನು ಸಂಹಾರ ವಿನಾಶಗಳಲ್ಲಿ ಸಿಕ್ಕಿಸುತ್ತವೆ. 10 ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು, ಅದರಿಂದ ಕ್ರಿಸ್ತ ನಂಬಿಕೆಯನ್ನು ಬಿಟ್ಟು, ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ. ವೈಯುಕ್ತಿಕ ಸಲಹೆಗಳು 11 ಎಲೈ, ದೇವರ ಮನುಷ್ಯನೇ, ನೀನಾದರೋ ಇವುಗಳಿಗೆ ದೂರವಾಗಿರು. ನೀತಿ, ಭಕ್ತಿ, ನಂಬಿಕೆ, ಪ್ರೀತಿ, ಸ್ಥಿರಚಿತ್ತ ಹಾಗೂ ಸಾತ್ವಿಕತ್ವ ಇವುಗಳನ್ನು ಸಂಪಾದಿಸುವುದಕ್ಕೆ ಪ್ರಯಾಸಪಡು. 12 ಕ್ರಿಸ್ತ ನಂಬಿಕೆಯ ಶ್ರೇಷ್ಠ ಹೋರಾಟವನ್ನು ಮಾಡು, ನಿತ್ಯಜೀವವನ್ನು ಹಿಡಿದುಕೋ. ಅದಕ್ಕಾಗಿ ನೀನು ದೇವರಿಂದ ಕರೆಯಲ್ಪಟ್ಟಿದಿ ಮತ್ತು ನೀನು ಅನೇಕ ಸಾಕ್ಷಿಗಳ ಮುಂದೆ ಒಳ್ಳೆಯ ಪ್ರತಿಜ್ಞೆಯನ್ನು ಮಾಡಿದಿಯಲ್ಲಾ. 13 ಸರ್ವ ಸೃಷ್ಟಿಗೆ ಜೀವಾಧಾರಕನಾದ ದೇವರ ಮುಂದೆಯೂ, ಪೊಂತ್ಯ ಪಿಲಾತನ ಕಾಲದಲ್ಲಿ ಶ್ರೇಷ್ಠ ಪ್ರತಿಜ್ಞೆಯನ್ನು ತಾನೇ ಸಾಕ್ಷಿಯಾಗಿದ್ದು ಸ್ಥಾಪಿಸಿದ ಕ್ರಿಸ್ತ ಯೇಸುವಿನ ಮುಂದೆಯೂ ನಾನು ನಿನಗೆ ಆಜ್ಞಾಪಿಸುವುದೇನಂದರೆ, 14 ನಮ್ಮ ಕರ್ತನಾದ ಯೇಸು ಕ್ರಿಸ್ತನ ಪ್ರತ್ಯಕ್ಷತೆಯ ತನಕ ನೀನು ಈ ಆಜ್ಞೆಯನ್ನು ನಿಷ್ಕಳಂಕವಾಗಿಯೂ ನಿಂದಾರಹಿತವಾಗಿಯೂ ಕಾಪಾಡಿಕೊಂಡಿರಬೇಕು. 15 ಭಾಗ್ಯವಂತನಾದ ಏಕಾಧಿಪತಿಯು ತಾನು ನಿಗದಿಪಡಿಸಿರುವ ಸೂಕ್ತ ಸಮಯದಲ್ಲೇ ಆತನನ್ನು ಪ್ರತ್ಯಕ್ಷಪಡಿಸುವನು. ಆ ಏಕಾಧಿಪತಿಯು, ರಾಜಾಧಿರಾಜನೂ, ಕರ್ತಾಧಿಕರ್ತನೂ, 16 ತಾನೊಬ್ಬನೇ ಅಮರತ್ವವುಳ್ಳವನೂ ಅಗಮ್ಯವಾದ ಬೆಳಕಿನಲ್ಲಿ ವಾಸಮಾಡುವವನೂ ಆಗಿದ್ದಾನೆ. ಮನುಷ್ಯರಲ್ಲಿ ಯಾರೂ ಆತನನ್ನು ಕಾಣಲಿಲ್ಲ, ಯಾರೂ ಕಾಣಲಾರರು. ಆತನಿಗೆ ಮಾನವೂ ನಿತ್ಯಾಧಿಪತ್ಯವೂ ಎಂದೆಂದಿಗೂ ಇರಲಿ. ಆಮೆನ್. 17 ಇಹಲೋಕ ವಿಷಯದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿಗಳಾಗಿರದೆ, ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ, ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಬೇಕು. 18-19 ವಾಸ್ತವವಾದ ಜೀವವನ್ನು ಹೊಂದುವುದಕ್ಕೋಸ್ಕರ ಅವರು ಒಳ್ಳೆಯದನ್ನು ಮಾಡುವವರೂ, ಸತ್ಕಾರ್ಯಗಳನ್ನು ಮಾಡುವುದರಲ್ಲಿ ಐಶ್ವರ್ಯವಂತರೂ, ಉದಾರಶೀಲರೂ, ಪರೋಪಕಾರಮಾಡುವವರೂ ಆಗಿದ್ದು, ಮುಂದಿನ ಕಾಲಕ್ಕೆ ಒಳ್ಳೆ ಅಸ್ತಿವಾರವಾಗುವಂಥವುಗಳನ್ನು ತಮಗೆ ಕೂಡಿಸಿಟ್ಟುಕೊಳ್ಳಬೇಕೆಂದು ಅವರಿಗೆ ಆಜ್ಞಾಪಿಸು. 20 ಎಲೈ ತಿಮೊಥೆಯನೇ, ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ ಬೋಧನೆಗೆ ಸಂಬಂಧಪಟ್ಟ, ಪ್ರಾಪಂಚಿಕವಾದ ಆ ಹರಟೆ ಮಾತುಗಳಿಗೂ, ವಿವಾದಗಳಿಗೂ ನೀನು ದೂರವಾಗಿದ್ದು ನಿನ್ನ ವಶಕ್ಕೆ ಕೊಟ್ಟಿರುವುದನ್ನು ಕಾಪಾಡಿಕೋ. 21 ಕೆಲವರು ಆ ಸುಳ್ಳಾದ ಜ್ಞಾನವನ್ನು ಒಪ್ಪಿಕೊಂಡು ಕ್ರಿಸ್ತ ನಂಬಿಕೆಯಿಂದ ಭ್ರಷ್ಟರಾಗಿ ಹೋದರು. ಕೃಪೆಯು ನಿಮ್ಮೊಂದಿಗಿರಲಿ. |
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.
Bridge Connectivity Solutions Pvt. Ltd.